ಬಿಗ್ ಬಾಸ್ ಕನ್ನಡ ಸೀಸನ್ ಮುಗಿದರೂ ‘Gilli’ ಹವಾ ಮಾತ್ರ ಕಮ್ಮಿಯಾಗಿಲ್ಲ. ಎಲ್ಲಿ ನೋಡಿದರೂ ಗಿಲ್ಲಿ ಗಿಲ್ಲಿ ಅನ್ನೋ ಸೌಂಡು! ಆದರೆ, ಬಿಗ್ ಬಾಸ್ ಮನೆಯಲ್ಲಿ ವ್ಯಕ್ತಿತ್ವದ ಆಟವಾಡಿ ಕಪ್ ಗೆದ್ದ ಗಿಲ್ಲಿ, ಈಗ ಹೊರಗಡೆ ಹೊಸದೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಹೌದು, ಅನ್ನ ಕೊಟ್ಟ ನಿರ್ಮಾಪಕರನ್ನೇ ಗಿಲ್ಲಿ ಮರೆತಿದ್ದಾರಾ? ಎಂಬ ಪ್ರಶ್ನೆ ಈಗ ಗಾಂಧಿನಗರದಲ್ಲಿ ಜೋರಾಗಿ ಕೇಳಿಬರುತ್ತಿದೆ.
ನಿರ್ಮಾಪಕರ ನಿದ್ದೆಗೆಡಿಸಿದ Gilli ವರ್ತನೆ!
Gilli ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ‘ಸರ್ಕಾರಿ ಶಾಲೆ ಎಚ್8’ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಈಗ ಆ ಸಿನಿಮಾ ರಿಲೀಸ್ ಆಗಿ ಚಿತ್ರಮಂದಿರಗಳಲ್ಲಿದೆ. ಯಾವುದೇ ಸಿನಿಮಾ ಗೆಲ್ಲಬೇಕಾದರೆ ಅದರ ಪ್ರಚಾರ (Promotion) ಬಹಳ ಮುಖ್ಯ. ಆದರೆ, ಚಿತ್ರದ ಹೀರೋ ಗಿಲ್ಲಿ ಮಾತ್ರ ಪ್ರಚಾರದ ಕಡೆ ತಲೆ ಹಾಕುತ್ತಿಲ್ಲವಂತೆ! ಇದರಿಂದ ನೊಂದ ಚಿತ್ರದ ನಿರ್ಮಾಪಕ **ತೇಜಸ್ವಿ ಎಸ್**, ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Film Chamber) ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: Jogi Prem: ಹಿರಿಯ ನಿರ್ಮಾಪಕನ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ‘ಶೋಮ್ಯಾನ್’!
ಸ್ಟಾರ್ಗಳ ಭೇಟಿಯಲ್ಲಿ ಬ್ಯುಸಿ.. ಸಿನಿಮಾ ಪ್ರಚಾರಕ್ಕೆ ನೋ ಎಂಟ್ರಿ!
ಬಿಗ್ ಬಾಸ್ ಗೆದ್ದ ಮೇಲೆ ಗಿಲ್ಲಿಗೆ ಬೇಡಿಕೆ ಕುದುರಿದೆ ನಿಜ. ಸುದೀಪ್, ಶಿವಣ್ಣ, ದುನಿಯಾ ವಿಜಯ್ ಅಂತಹ ದೊಡ್ಡ ನಟರ ಮನೆಗಳಿಗೆ ಹೋಗಿ ಹಾರ-ತುರಾಯಿ ಹಾಕಿಸಿಕೊಳ್ಳುತ್ತಿರುವ ಗಿಲ್ಲಿ, ತಮ್ಮದೇ ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವುದು ಚಿತ್ರತಂಡದ ಆರೋಪ. “ಸಂಭಾವನೆಯನ್ನೇನೋ ಸರಿಯಾಗಿ ಪಡೆದಿದ್ದಾರೆ, ಆದರೆ ಕಷ್ಟಪಟ್ಟು ಬಂಡವಾಳ ಹೂಡಿ ಸಿನಿಮಾ ಮಾಡಿರುವ ನಿರ್ಮಾಪಕರಿಗೆ ಬೆಂಬಲ ನೀಡುತ್ತಿಲ್ಲ” ಎಂದು ಚಿತ್ರತಂಡ ಕಿಡಿಕಾರಿದೆ.
ಅನ್ನ ಕೊಟ್ಟ ಮನೆಗೆ ಎರಡಬಾರದು!
ಸ್ಯಾಂಡಲ್ವುಡ್ನಲ್ಲಿ ಒಂದು ಮಾತಿದೆ, ‘ಅನ್ನ ಕೊಟ್ಟ ನಿರ್ಮಾಪಕನನ್ನು ಮರೆಯಬಾರದು’. ಗಿಲ್ಲಿ ಈಗ ಖಾಸಗಿ ಕಾರ್ಯಕ್ರಮಗಳು, ಉದ್ಘಾಟನೆಗಳು ಮತ್ತು ಸ್ಟಾರ್ಗಳ ಭೇಟಿಯಲ್ಲೇ ಮಗ್ನವಾಗಿದ್ದು, ಸದ್ದಿಲ್ಲದೆ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ‘ಸರ್ಕಾರಿ ಶಾಲೆ ಎಚ್8’ ಸಿನಿಮಾವನ್ನು ಕೈಬಿಟ್ಟರಾ? ಎಂಬ ಚರ್ಚೆ ಶುರುವಾಗಿದೆ. ಬಿಗ್ ಬಾಸ್ ನೀಡಿದ ಜನಪ್ರಿಯತೆಯನ್ನು ಸಿನಿಮಾದ ಗೆಲುವಿಗೆ ಬಳಸಿಕೊಳ್ಳುವ ಬದಲು, ಗಿಲ್ಲಿ ಈ ರೀತಿ ನಡೆದುಕೊಳ್ಳುತ್ತಿರುವುದು ಚಿತ್ರರಂಗದ ಹಿರಿಯರಿಗೂ ಅಚ್ಚರಿ ತಂದಿದೆ.
ಫಿಲ್ಮ್ ಚೇಂಬರ್ ಈಗ ಈ ದೂರನ್ನು ಹೇಗೆ ಪರಿಹರಿಸುತ್ತದೆ? ಗಿಲ್ಲಿ ತಮ್ಮ ತಪ್ಪನ್ನು ತಿದ್ದಿಕೊಂಡು ಸಿನಿಮಾ ಪ್ರಚಾರಕ್ಕೆ ಬರುತ್ತಾರಾ? ಅಥವಾ ಈ ವಿವಾದ ಮತ್ತಷ್ಟು ದೊಡ್ಡದಾಗುತ್ತಾ? ಕಾದು ನೋಡಬೇಕಿದೆ.

