ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ದಾವಣಗೆರೆ ಯಾವಾಗಲೂ ಒಂದು ವಿಶಿಷ್ಟ ಪ್ರಯೋಗಶಾಲೆ. ಆದರೆ ಇಂದಿನ ‘Davanagere ದಂಗಲ್’ ಕೇವಲ ಎರಡು ಪಕ್ಷಗಳ ನಡುವಿನ ಕದನವಾಗಿ ಉಳಿದಿಲ್ಲ. ಇದು ಕಾಂಗ್ರೆಸ್ ಪ್ರತಿಪಾದಿಸುವ ‘ಜಾತ್ಯತೀತತೆ’ ಮತ್ತು ತೆರೆಯ ಮರೆಯಲ್ಲಿ ಅದು ಪೋಷಿಸುತ್ತಿರುವ ‘ವಂಶಪಾರಂಪರ್ಯ ರಾಜಪ್ರಭುತ್ವ’ದ ನಡುವಿನ ನೈತಿಕ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಅಲ್ಪಸಂಖ್ಯಾತ ಮತಬ್ಯಾಂಕ್ ಅನ್ನು ಕೇವಲ ಅಧಿಕಾರದ ಏಣಿಯಾಗಿ ಬಳಸಿಕೊಳ್ಳುವ ಹಳೆಯ ತಂತ್ರಗಾರಿಕೆ ಈಗ ಹೊಸ ಸ್ವರೂಪ ಪಡೆದುಕೊಂಡಿದೆ.
ಬದ್ಧತೆಯೋ ಅಥವಾ ‘ಬಿಸಿನೆಸ್’ ಡೀಲ್?
ದಾವಣಗೆರೆ ಉಪಚುನಾವಣೆಯ ಟಿಕೆಟ್ ಹಂಚಿಕೆಯ ಪ್ರಕ್ರಿಯೆ ಒಂದು ಹಂತದಲ್ಲಿ ಪ್ರಹಸನದಂತೆ (Davanagere ದಂಗಲ್) ಭಾಸವಾಯಿತು. ಆರಂಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ತೋರಿದ ರೋಷಾವೇಶ, ಸಂಘಟಿತ ಹೋರಾಟದ ಮಾತುಗಳು ಮತ್ತು “ಸಮರ್ಥ್ಗೆ ಟಿಕೆಟ್ ನೀಡಿದರೆ ಬಂಡಾಯ ಖಚಿತ” ಎಂಬ ಎಚ್ಚರಿಕೆಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು ನಿಜ. ಆದರೆ, ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಈ ಗುಡುಗುಗಳು ಮೌನಕ್ಕೆ ಶರಣಾಗುತ್ತಿರುವುದು ಸಮುದಾಯದ ರಾಜಕೀಯ ಪ್ರಜ್ಞೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಒಬ್ಬ ಪತ್ರಕರ್ತನಾಗಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಿನ್ನೆವರೆಗೆ ಸಮುದಾಯದ ಅಸ್ತಿತ್ವದ ಬಗ್ಗೆ ಮಾತನಾಡುತ್ತಿದ್ದವರು ಇಂದು ‘ಅನಿವಾರ್ಯತೆ’ಯ ಜಪ ಮಾಡುತ್ತಿದ್ದಾರೆ. 2028ರ ಚುನಾವಣೆಯಲ್ಲಿ ನ್ಯಾಯ ಕೊಡಿಸುವ ಭರವಸೆಯ ಮೇಲೆ ಇಂದಿನ ಅನ್ಯಾಯವನ್ನು ಒಪ್ಪಿಕೊಳ್ಳುವುದು ರಾಜಕೀಯ ಮುತ್ಸದ್ದಿತನವಲ್ಲ, ಬದಲಾಗಿ ಅದೊಂದು ‘ಪ್ಯಾಕೇಜ್ ಡೀಲ್’ ಎಂಬ ಸಂಶಯಕ್ಕೆ ಪುಷ್ಟಿ ನೀಡುತ್ತದೆ. ಈ ರೀತಿಯ ಕ್ಷಣಿಕ ಲಾಭದ ಡೀಲ್ಗಳು ಸಮುದಾಯದ ದೂರಗಾಮಿ ಹಿತಾಸಕ್ತಿಯನ್ನು ಬಲಿ ಕೊಡುತ್ತಿವೆ.
ಇದನ್ನೂ ಓದಿ: Davanagere By-Election: ಸಾಬ್ರಿಗೆ ಕಾಂಗ್ರೆಸ್ ಟೋಪಿ? ಜಾತ್ಯತೀತದ ಅಸಲಿ ಮುಖವಾಡ ಬಯಲು!
‘ಬಿಜೆಪಿ ಭಯ’ ಎಂಬ ಶಾಶ್ವತ ಬಂಡವಾಳ
ಕಾಂಗ್ರೆಸ್ ಪಕ್ಷದ ಚುನಾವಣಾ ಇಂಜಿನಿಯರಿಂಗ್ ನಿಂತಿರುವುದೇ ‘ಬಿಜೆಪಿ’ ಎಂಬ ಭೂತದ ಮೇಲೆ. “ನೀವು ನಮಗೆ ಮತ ಹಾಕದಿದ್ದರೆ ಬಿಜೆಪಿ ನಿಮ್ಮನ್ನು ನಾಶ ಮಾಡುತ್ತದೆ” ಎಂಬ ಭಯ ಬಿತ್ತುವ ಮೂಲಕ ಮುಸ್ಲಿಂ ಮತದಾರರನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವಲ್ಲಿ ಹಸ್ತ ಪಾಳಯ ಯಶಸ್ವಿಯಾಗಿದೆ. ಆದರೆ, ಸಂವಿಧಾನಬದ್ಧವಾದ ದೇಶದಲ್ಲಿ ಒಬ್ಬ ಪ್ರಧಾನಿ ಅಥವಾ ಮುಖ್ಯಮಂತ್ರಿ ಅಷ್ಟು ಸುಲಭವಾಗಿ ಯಾವುದೇ ಸಮುದಾಯವನ್ನು ಹೊರಹಾಕಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಜನರು ಅರಿಯಬೇಕಿದೆ.
ರಾಜಪ್ರಭುತ್ವದ ನೆರಳಿನಲ್ಲಿ ಬೆಳೆಯುತ್ತಿರುವ ಈ ‘ವಂಶ ರಾಜಕಾರಣ’ಕ್ಕೆ ಅಹಿಂದ ವರ್ಗಗಳು ಕೇವಲ ಸಂಖ್ಯೆಗಳಾಗಿ ಬಳಕೆಯಾಗುತ್ತಿವೆ. ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ಹಿಡಿತ ಎಷ್ಟಿದೆಯೆಂದರೆ, ಅಲ್ಲಿ ಕಾಂಗ್ರೆಸ್ ಸಿದ್ಧಾಂತಕ್ಕಿಂತ ವ್ಯಕ್ತಿ ಆರಾಧನೆಯೇ ಮೇಲುಗೈ ಸಾಧಿಸಿದೆ. ಪಕ್ಷದ ವೋಟ್ ಬೇಸ್ಗಿಂತ ಒಬ್ಬ ವ್ಯಕ್ತಿಯ ಪ್ರಭಾವವೇ ನಿರ್ಣಾಯಕ ಎನ್ನುವುದಾದರೆ, ಅಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆಯೇ ಅಥವಾ ಕೇವಲ ‘ಅನುಕೂಲಸಿಂಧು ರಾಜಕಾರಣ’ ನಡೆಯುತ್ತಿದೆಯೇ?.
ಪ್ರಜ್ಞಾವಂತ ಮತದಾರ ಮತ್ತು ಅತಂತ್ರ ನಾಯಕತ್ವ
ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಇಂದು ಮಂತ್ರಿಗಿರಿ ಅಥವಾ ನಿಗಮ ಮಂಡಳಿಗಳ ಆಸೆಗೆ ಬಿದ್ದು ಸಮುದಾಯದ ಧ್ವನಿಯನ್ನು ಅಡವಿಡುತ್ತಿದ್ದಾರೆ ಎಂಬ ಆರೋಪ ಗಂಭೀರವಾದುದು. ಯಾರಾದರೂ ಮುಖಂಡರು “ಈ ಸಲ ಸಮರ್ಥನನ್ನೇ ಗೆಲ್ಲಿಸೋಣ, ಮುಂದೆ ನೋಡೋಣ” ಎಂಬ ದಾಟಿಯಲ್ಲಿ ಮಾತನಾಡಿದರೆ, ಅವರು ಸಿದ್ಧಾಂತಕ್ಕಿಂತ ಹೆಚ್ಚಾಗಿ ವೈಯಕ್ತಿಕ ‘ಫೀಡ್’ ಅಥವಾ ಲಾಭಕ್ಕೆ ಶರಣಾಗಿದ್ದಾರೆ ಎಂದೇ ಅರ್ಥ.
ಇದು ಕೇವಲ ದಾವಣಗೆರೆಗೆ ಸೀಮಿತವಾದ ವಿಚಾರವಲ್ಲ. ಇಡೀ ರಾಜ್ಯದ ಮುಸ್ಲಿಂ ಮತದಾರರು ಆಲೋಚಿಸಬೇಕಾದ ಸಂಗತಿಯೆಂದರೆ, ತಮ್ಮ ರಾಜಕೀಯ ಚೌಕಾಶಿಯ ಶಕ್ತಿ (Bargaining Power) ಕುಸಿಯುತ್ತಿರುವುದು ಏಕೆ? ಯಾವಾಗ ಒಂದು ಸಮುದಾಯ ಗೆಲುವಿನಷ್ಟೇ ಸೋಲನ್ನೂ ನಿರ್ಧರಿಸುವ ತಾಕತ್ತು ಹೊಂದಿದೆ ಎಂಬ ಸಂದೇಶ ರವಾನಿಸುತ್ತದೆಯೋ, ಆಗ ಮಾತ್ರ ರಾಜಕೀಯ ಪಕ್ಷಗಳು ಅವರನ್ನು ಗಂಭೀರವಾಗಿ ಪರಿಗಣಿಸುತ್ತವೆ.
ಇದನ್ನೂ ಓದಿ: Inside Story: ನಾಮಕಾವಸ್ಥೆ MLA ಪ್ಲ್ಯಾನ್ ಉಲ್ಟಾ! ಆಪ್ತನ ಆಟಾಟೋಪಕ್ಕೆ ಹೈಕಮಾಂಡ್ ಬ್ರೇಕ್; ಉಮೇಶ್ ಮೇಟಿ ‘ಕೈ’ ಹಿಡಿದ ಅದೃಷ್ಟ
ಬದಲಾಗಬೇಕಿದೆ ಹಾದಿ
ದಾವಣಗೆರೆಯ ಈ ಉಪಚುನಾವಣೆ ಕಾಂಗ್ರೆಸ್ಗೆ ಒಂದು ಎಚ್ಚರಿಕೆಯ ಗಂಟೆಯಾಗಬೇಕು. ಸಿದ್ಧಾಂತದ ಹೆಸರಿನಲ್ಲಿ ವಂಚನೆಯನ್ನೇ ವೃತ್ತಿ ಮಾಡಿಕೊಂಡರೆ, ಮತದಾರರು ಪರ್ಯಾಯ ಹಾದಿ ಹುಡುಕುವುದು ಅನಿವಾರ್ಯವಾಗುತ್ತದೆ. ‘ರಾಜಪ್ರಭುತ್ವ’ದ ಅಟ್ಟಹಾಸಕ್ಕೆ ತಡೆ ಒಡ್ಡಲು ಮತ್ತು ಅಪ್ಪಟ ಪ್ರಜಾಪ್ರಭುತ್ವವನ್ನು ಉಳಿಸಲು ಪ್ರತಿಯೊಬ್ಬ ಮತದಾರನೂ ತನ್ನ ಸ್ವಾರ್ಥಿ ಮುಖಂಡರ ಮಾತನ್ನು ಮೀರಿ ಆಲೋಚಿಸಬೇಕಿದೆ.
ವಂಚನೆಯನ್ನು ಸಹಿಸಿಕೊಳ್ಳುವುದು ಸಮುದಾಯದ ದೌರ್ಬಲ್ಯವಲ್ಲ, ಆದರೆ ಆ ವಂಚನೆಯನ್ನೇ ಅಭ್ಯಾಸ ಮಾಡಿಕೊಳ್ಳುವುದು ಪ್ರಜಾಪ್ರಭುತ್ವದ ದುರಂತ. ದಾವಣಗೆರೆಯ ಮತದಾರರು ಈ ಬಾರಿ ಬಿಸ್ಕೆಟ್ ತಿಂದು ಬಾಲ ಅಲ್ಲಾಡಿಸುವ ಮುಖಂಡರ ಮಾತು ಕೇಳುತ್ತಾರೋ ಅಥವಾ ತಮ್ಮ ಸ್ವಾಭಿಮಾನದ ಮತ ಚಲಾಯಿಸುತ್ತಾರೋ ಕಾದು ನೋಡಬೇಕಿದೆ.

