ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ (Davanagere By-Election) ಕಣ ಈಗ ಕೇವಲ ಒಂದು ಕ್ಷೇತ್ರದ ಚುನಾವಣೆಯಾಗಿ ಉಳಿದಿಲ್ಲ; ಇದು ಕಾಂಗ್ರೆಸ್‌ನ “ಜಾತ್ಯತೀತ” ಬಣ್ಣದ ಅಸಲಿ ಮುಖವನ್ನು ಬಯಲು ಮಾಡುವ ವೇದಿಕೆಯಾಗಿದೆ. ದಶಕಗಳಿಂದ ಕಾಂಗ್ರೆಸ್‌ನ ಕೈ ಹಿಡಿದು ನಡೆಸಿದ ಮುಸ್ಲಿಂ ಸಮುದಾಯಕ್ಕೆ ಸತತವಾಗಿ ಅನ್ಯಾಯವಾಗುತ್ತಿರುವುದು ಈಗ ಅಂಕಿ-ಅಂಶಗಳ ಸಮೇತ ಸಾಬೀತಾಗಿದೆ.
ಜಾತಿವಾರು ಲೆಕ್ಕಾಚಾರ: ಅರ್ಹತೆ ಇದ್ದರೂ ಅವಕಾಶವಿಲ್ಲ ಏಕೆ?
ದಾವಣಗೆರೆ ದಕ್ಷಿಣ ಕ್ಷೇತ್ರವು ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಭದ್ರಕೋಟೆ. ಇಲ್ಲಿನ ಮತದಾರರ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ:
- ಒಟ್ಟು ಮತದಾರರು: ಸರಿಸುಮಾರು 2,10,000.
- ಮುಸ್ಲಿಂ ಮತದಾರರು: ಸುಮಾರು 75,000 ರಿಂದ 80,000 (ಕ್ಷೇತ್ರದ ಅತಿದೊಡ್ಡ ಮತಬ್ಯಾಂಕ್).
- ಲಿಂಗಾಯತ ಮತದಾರರು: ಸುಮಾರು 45,000 ರಿಂದ 50,000.
- ಕುರುಬ ಮತ್ತು ಇತರೆ ಹಿಂದುಳಿದ ವರ್ಗಗಳು: ಸುಮಾರು 40,000.
ಒಟ್ಟು ಮತದಾನದ ಸುಮಾರು 38% ಪಾಲನ್ನು ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲು ಮೀನಾಮೇಷ ಎಣಿಸುತ್ತಿರುವ ಕಾಂಗ್ರೆಸ್, ಕೇವಲ 22% ಇರುವ ಸಮುದಾಯದ “ಒಂದೇ ಕುಟುಂಬಕ್ಕೆ” ಮಣೆ ಹಾಕುತ್ತಿರುವುದು ಯಾವ ನ್ಯಾಯ?
ಇದನ್ನೂ ಓದಿ: By-Election: ಬಾಗಲಕೋಟೆ, ದಾವಣಗೆರೆ ʻಕೈʼ ಅಭ್ಯರ್ಥಿಗಳ ಪಟ್ಟಿ ಸಿದ್ಧ; ಕೆಲವೇ ಕ್ಷಣಗಳಲ್ಲಿ ಬಿ-ಫಾರಂ ಹಂಚಿಕೆ!
ಶಾಮನೂರು ಸಾಮ್ರಾಜ್ಯದ ‘ಕುಟುಂಬ ಹಿತಾಸಕ್ತಿ’
ದಿ. ಶಾಮನೂರು ಶಿವಶಂಕ್ರಪ್ಪ ಅವರ ನಿಧನದ ನಂತರ ಈ ಕ್ಷೇತ್ರದಲ್ಲಿ ಸ್ಥಳೀಯ ಮುಸ್ಲಿಂ ನಾಯಕರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಸಮರ್ಥ್ ಎಂಬ 25-26 ವರ್ಷದ ಯುವಕನಿಗೆ ಪಟ್ಟ ಕಟ್ಟಲು ಹೊರಟಿದೆ.
ಒಂದೇ ಕುಟುಂಬದ ಹತ್ತು ದಿಕ್ಕು: ತಂದೆ ಎಸ್‌ಎಸ್ ಮಲ್ಲಿಕಾರ್ಜುನ ಸಚಿವರು, ತಾಯಿ ಡಾ. ಪ್ರಭಾ ಎಂಪಿ, ಈಗ ಮಗ ಸಮರ್ಥಗೆ ಎಂಎಲ್ಎ ಟಿಕೆಟ್! ಇದು ಪ್ರಜಾಪ್ರಭುತ್ವವೋ ಅಥವಾ ಶಾಮನೂರು ಕುಟುಂಬದ “ಜಹಗೀರು” ಆಡಳಿತವೋ? ಎಂಬ ತೀಕ್ಷ್ಣ ಪ್ರಶ್ನೆಗಳು ಈಗ ಬೀದಿಬದಿಯಲ್ಲಿ ಕೇಳಿಬರುತ್ತಿವೆ.
ಕಡೆಗಣಿಸಲ್ಪಟ್ಟ ಸಮರ್ಥ ಮುಸ್ಲಿಂ ನಾಯಕರು
ಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟಲು ಬೆವರು ಸುರಿಸಿದ ಮುಸ್ಲಿಂ ಆಕಾಂಕ್ಷಿಗಳನ್ನು ಸದ್ದಿಲ್ಲದೆ ಮೂಲೆಗುಂಪು ಮಾಡಲಾಗಿದೆ. ಸಮುದಾಯದ ಪ್ರಬಲ ನಾಯಕರಾದ ಅಬ್ದುಲ್ ಜಬ್ಬಾರ್, ಸೈಯದ್ ಸೈಫುಲ್ಲಾ ಅಂತಹವರ ಧ್ವನಿಯನ್ನು ಕುಟುಂಬ ರಾಜಕಾರಣದ ಅಬ್ಬರದಲ್ಲಿ ಅಡಗಿಸಲಾಗಿದೆ. “ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಪರ” ಎಂದು ಹೇಳಿಕೊಳ್ಳುತ್ತಾರಾದರೂ, ದಾವಣಗೆರೆ ದಕ್ಷಿಣದ ವಿಷಯದಲ್ಲಿ ಅವರು ಶಾಮನೂರು ಕುಟುಂಬದ ಒತ್ತಡಕ್ಕೆ ಮಣಿದಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ವೋಟ್ ಬ್ಯಾಂಕ್ ರಾಜಕಾರಣದ ಪರಾಕಾಷ್ಠೆ
ಕಾಂಗ್ರೆಸ್‌ಗೆ ಮುಸ್ಲಿಮರು ಎಂದರೆ ಕೇವಲ “ಬಿಜೆಪಿ ವಿರೋಧಿ ವೋಟುಗಳು” ಮಾತ್ರ. “ಅವರು ನಮ್ಮನ್ನು ಬಿಟ್ಟು ಎಲ್ಲಿಗೆ ಹೋಗುತ್ತಾರೆ?” ಎಂಬ ಅಹಂಕಾರದ ಪರಮಾವಧಿ ಈ ಟಿಕೆಟ್ ಹಂಚಿಕೆ. ಸಾಚಾರ್ ವರದಿ ಹೇಳುವಂತೆ ಮುಸ್ಲಿಮರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹೈರಾಣಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಸಮುದಾಯಕ್ಕೆ ರಾಜಕೀಯ ಅಧಿಕಾರ ನೀಡಿ ಲೀಡರ್‌ಗಳನ್ನು ಸೃಷ್ಟಿಸುವ ಬದಲು, ಕಾಂಗ್ರೆಸ್ ಅವರನ್ನು ಕೇವಲ ‘ಜಿಂದಾಬಾದ್’ ಕೂಗುವ ಗುಂಪನ್ನಾಗಿ ಉಳಿಸಿಕೊಳ್ಳಲು ಸಂಚು ಹೂಡಿದೆ.
ಇದನ್ನೂ ಓದಿ: Davanagere South: ಕೈ ನಾಯಕರಿಗೆ ಮುಸ್ಲಿಂ ಸಮುದಾಯದ ಶಾಕ್! ರಣಕಣಕ್ಕೆ ಪತ್ರಕರ್ತೆ ನಾಝಿಯಾ ಕೌಸರ್ ಎಂಟ್ರಿ?
ಮುಸ್ಲಿಂ ಮತದಾರರೇ, ಎಚ್ಚರ!
ರಾಮನಗರದಲ್ಲಿ ಸಿಎಂ ಮಗನನ್ನೇ ಸೋಲಿಸಿ ಅಲ್ಪಸಂಖ್ಯಾತ ನಾಯಕನನ್ನು ಗೆಲ್ಲಿಸಿದ ಇತಿಹಾಸ ನಮ್ಮ ಕಣ್ಣಮುಂದಿದೆ. ದಾವಣಗೆರೆ ದಕ್ಷಿಣದ ಮುಸ್ಲಿಮರು ಈ ಬಾರಿ “ಟೋಪಿ” ಹಾಕಿಸಿಕೊಳ್ಳುತ್ತಾರೋ ಅಥವಾ ತಮ್ಮ “ಪವರ್” ತೋರಿಸುತ್ತಾರೋ ಎಂಬುದು ಕಾದು ನೋಡಬೇಕಿದೆ. ಅಸಲಿ ಸುದ್ದಿ ಕೇಳುವ ಕಾಲ ಬಂದಿದೆ; ಕುಟುಂಬ ರಾಜಕಾರಣದ ಕಪಿಮುಷ್ಠಿಯಿಂದ ಕ್ಷೇತ್ರವನ್ನು ಬಿಡಿಸುವ ಹೊಣೆ ಮತದಾರರ ಮೇಲಿದೆ.

