Homeಸುದ್ದಿಗಳುCongress Family Politics: ಕಾಂಗ್ರೆಸ್ ‘ಕೈ’ಲಿ ವಂಶವೃಕ್ಷ: ಅಲ್ಪಸಂಖ್ಯಾತರು ಕೇವಲ ವೋಟ್ ಬ್ಯಾಂಕೇ?

Congress Family Politics: ಕಾಂಗ್ರೆಸ್ ‘ಕೈ’ಲಿ ವಂಶವೃಕ್ಷ: ಅಲ್ಪಸಂಖ್ಯಾತರು ಕೇವಲ ವೋಟ್ ಬ್ಯಾಂಕೇ?

Congress Family Politics: “ಮತ ಹಾಕಲು ಮುಸ್ಲಿಮರು ಬೇಕು, ಮಜಾ ಮಾಡಲು ಮಹಾರಾಜರು ಬೇಕು!” – ಇದು ಇಂದಿನ ಕಾಂಗ್ರೆಸ್ ಪಕ್ಷದ ಅಸಲಿ ಸಿದ್ಧಾಂತದಂತಿದೆ. ರಾಜ್ಯದ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಉಪಚುನಾವಣೆಗಳ ಟಿಕೆಟ್ ಹಂಚಿಕೆ ಪ್ರಕ್ರಿಯೆಯನ್ನು ಗಮನಿಸಿದರೆ, ಅಲ್ಲಿ ಪ್ರಜಾಪ್ರಭುತ್ವಕ್ಕಿಂತ ಹೆಚ್ಚಾಗಿ ‘ವಂಶಪ್ರಭುತ್ವ’ ಅಟ್ಟಹಾಸಗೈಯುತ್ತಿರುವುದು ಎದ್ದು ಕಾಣುತ್ತಿದೆ. ಕಾಂಗ್ರೆಸ್ ಪಾಲಿಗೆ ಅಧಿಕಾರ ಎನ್ನುವುದು ಜನಸೇವೆಯ ಸಾಧನವಲ್ಲ, ಅದು ಕೇವಲ ತಮ್ಮ ಮನೆಯ ‘ಆಸ್ತಿ’ಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಉಯಿಲು ಪತ್ರವಾಗಿ ಬದಲಾಗಿದೆ.

ಕುಟುಂಬದ ಕುಡಿಗಳಿಗೆ ಪಟ್ಟ; ಕಾರ್ಯಕರ್ತರು ಬರಿ ನೆಟ್ಟ!

ದಾವಣಗೆರೆ ದಕ್ಷಿಣ ಕ್ಷೇತ್ರದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ, ಅವರ ಕುಟುಂಬದ ಮೂರನೇ ತಲೆಮಾರಿನ “ಚಿಗುರು ಮೀಸೆ”ಯ ಮೊಮ್ಮಗನಿಗೆ ಟಿಕೆಟ್ ನೀಡಲು (Congress Family Politics) ಹೈಕಮಾಂಡ್ ತಯಾರಿ ನಡೆಸುತ್ತಿದೆ. ಅಜ್ಜ ಶಾಸಕ, ಮಗ ಸಚಿವ, ಸೊಸೆ ಸಂಸದೆ – ಈಗ ಮೊಮ್ಮಗನಿಗೂ ಅದೇ ಗದ್ದುಗೆ ಬೇಕು!

ಇಲ್ಲಿ ಪ್ರಶ್ನೆ ಉದ್ಭವಿಸುವುದು ಏನೆಂದರೆ, ಕಾಂಗ್ರೆಸ್ ಪಕ್ಷಕ್ಕಾಗಿ ದಶಕಗಳಿಂದ ಚಪ್ಪಲಿ ಸವೆಸಿದ, ಲಾಠಿ ಏಟು ತಿಂದ ಸಾಮಾನ್ಯ ಕಾರ್ಯಕರ್ತರ ಗತಿ ಏನು? ಕಾಂಗ್ರೆಸ್ ಎಂದರೆ ಕೇವಲ ಕೆಲವು ಪ್ರಭಾವಿ ಕುಟುಂಬಗಳ ಖಾಸಗಿ ಲಿಮಿಟೆಡ್ ಕಂಪನಿಯೇ? ಬಾಗಲಕೋಟೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಅಧಿಕಾರದ ಕೇಕ್ ಕತ್ತರಿಸುವಾಗ ಅರ್ಹತೆಗಿಂತ ‘DNA’ಗೆ ಹೆಚ್ಚಿನ ಬೆಲೆ ಸಿಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಬಗೆಯುತ್ತಿರುವ ದ್ರೋಹ.

ಇದನ್ನೂ ಓದಿ: ಬಡವರ ಪಾಲಿನ ಕುಬೇರ; ಸೋಷಿಯಲ್ ಮೀಡಿಯಾ ದಾನಿಯ ಅಸಲಿ ಹಿನ್ನೆಲೆ ಏನು?

ಮುಸ್ಲಿಂ ಸಮುದಾಯಕ್ಕೆ ‘ಬಿರಿಯಾನಿ’ ಭಾಗ್ಯ, ನಾಯಕರಿಗೆ ‘ಅಧಿಕಾರ’ ಭಾಗ್ಯ!

ಕಾಂಗ್ರೆಸ್ ಪಕ್ಷದ ದ್ವಂದ್ವ ನೀತಿಯು ಅಲ್ಪಸಂಖ್ಯಾತ ಸಮುದಾಯದ ವಿಷಯದಲ್ಲಿ ಅಸಹ್ಯ ಹುಟ್ಟಿಸುವಂತಿದೆ. ದಾವಣಗೆರೆ ದಕ್ಷಿಣದಂತಹ 80,000ಕ್ಕೂ ಹೆಚ್ಚು ಮುಸ್ಲಿಂ ಮತಗಳಿರುವ ಕ್ಷೇತ್ರದಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲು ಪಕ್ಷಕ್ಕೆ ಮನಸ್ಸಿಲ್ಲ. ಸ್ವತಃ ಶಾಮನೂರು ಅವರೇ ಹಿಂದೆ “ನನ್ನ ನಂತರ ಇಲ್ಲಿ ಮುಸ್ಲಿಂ ಅಭ್ಯರ್ಥಿ ನಿಲ್ಲಲಿ” ಎಂದು ಆಸೆ ವ್ಯಕ್ತಪಡಿಸಿದ್ದರು. ಆದರೆ, ಇಂದು ಆ ಮಾತನ್ನು ಗಾಳಿಗೆ ತೂರಿ ಮತ್ತೆ ಕುಟುಂಬದವರಿಗೇ ಪಟ್ಟ ಕಟ್ಟಲಾಗುತ್ತಿದೆ.

ಮುಸ್ಲಿಮರನ್ನು ಕೇವಲ ಬಿಜೆಪಿಯನ್ನು ಸೋಲಿಸುವ ‘ಅಸ್ತ್ರ’ವಾಗಿ ಬಳಸಿಕೊಳ್ಳುವ ಕಾಂಗ್ರೆಸ್, ಅವರಿಗೆ ಅಧಿಕಾರ ನೀಡುವ ಮಾತು ಬಂದಾಗ ‘ಗೆಲುವಿನ ಸಾಮರ್ಥ್ಯ’ದ ನೆಪ ಹೇಳಿ ಮೂಲೆಗುಂಪು ಮಾಡುತ್ತದೆ. ಮುಸ್ಲಿಂ ಸಮುದಾಯದ ಹೆಗಲ ಮೇಲೆ ಸವಾರಿ ಮಾಡಿ ಅಧಿಕಾರ ಹಿಡಿಯುವ ಕಾಂಗ್ರೆಸ್ ನಾಯಕರು, ಅವರಿಗೆ ನೀಡುತ್ತಿರುವುದು ಕೇವಲ ಇಫ್ತಿಯಾರ್ ಕೂಟದ ಟೋಪಿ ಮತ್ತು ಬಿರಿಯಾನಿ ಮಾತ್ರ! ಅಧಿಕಾರದಲ್ಲಿ ಪಾಲು ಕೇಳಿದರೆ ಅವರಿಗೆ ‘ಕೋಮುವಾದಿ’ ಪಟ್ಟ ಕಟ್ಟುವ ಹುನ್ನಾರ ನಡೆಯುತ್ತಿದೆ.

ಖರ್ಗೆಯವರೇ, ‘ಪರೇಷಾನಿ’ ಇರುವುದು ಸ್ವಾರ್ಥದಿಂದ!

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ತಿನ ಹೊರಗೆ ನಿಂತು ‘ಬಿರಿಯಾನಿ, ಶೇರ್ವಾನಿ, ಪರೇಷಾನಿ’ ಎಂದು ಪ್ರಾಸಬದ್ಧವಾಗಿ ಟೀಕಿಸುತ್ತಾರೆ. ಆದರೆ ಖರ್ಗೆಯವರೇ, ಮುಸ್ಲಿಂ ಸಮುದಾಯ ಇಂದು ‘ಪರೇಷಾನ್’ ಆಗಿರುವುದು ನಿಮ್ಮ ಈ ವಂಶವಾಹಿ ರಾಜಕಾರಣದಿಂದ. ನೀವು ಅಲ್ಪಸಂಖ್ಯಾತರನ್ನು ಕೇವಲ ‘ರಕ್ಷಣಾ ಕವಚ’ವನ್ನಾಗಿ ಬಳಸಿಕೊಳ್ಳುತ್ತಿದ್ದೀರೇ ಹೊರತು, ಅವರಿಗೆ ಹಕ್ಕಿನ ಅಧಿಕಾರವನ್ನು ನೀಡಲು ನಿಮಗೆ ಮನಸ್ಸಿಲ್ಲ. ಸಿದ್ಧಾಂತದ ಮಾತಾಡುವ ನೀವು, ನಿಮ್ಮ ಕುಟುಂಬದ ಹಿತಾಸಕ್ತಿಯನ್ನು ಮೀರಿ ಸಾಮಾನ್ಯ ಮುಸ್ಲಿಂ ಅಥವಾ ದಲಿತ ಯುವಕನಿಗೆ ಯಾಕೆ ನಾಯಕತ್ವ ಬಿಟ್ಟುಕೊಡುತ್ತಿಲ್ಲ?

ಇದನ್ನೂ ಓದಿ: KSRTC Workers Protest: ಇಂದು ಬಸ್ ಇರುತ್ತಾ? ಇಲ್ವಾ? ಇಲ್ಲಿದೆ ಪೂರ್ಣ ಮಾಹಿತಿ!

‘ಅಹಿಂದ’ ಮಂತ್ರ ಮತ್ತು ಹಳಸಲು ರಾಜಕಾರಣ

ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ‘ಅಹಿಂದ’ ಎಂದು ಬೊಬ್ಬೆ ಹೊಡೆಯುತ್ತದೆ. ಆದರೆ ಟಿಕೆಟ್ ನೀಡುವಾಗ ಕೇವಲ ಬಲಿಷ್ಠ ಜಾತಿಗಳು ಮತ್ತು ಕೋಟ್ಯಧಿಪತಿಗಳ ಮನೆತನಗಳಿಗಷ್ಟೇ ಮಣೆ ಹಾಕಲಾಗುತ್ತದೆ. ಬಾಗಲಕೋಟೆ ಅಥವಾ ದಾವಣಗೆರೆಯಂತಹ ಕ್ಷೇತ್ರಗಳಲ್ಲಿ ಒಬ್ಬ ಸಾಮಾನ್ಯ ಹಿಂದುಳಿದ ವರ್ಗದ ಅಥವಾ ಅಲ್ಪಸಂಖ್ಯಾತ ವರ್ಗದ ಅರ್ಹ ಕಾರ್ಯಕರ್ತನಿಗೆ ಟಿಕೆಟ್ ನೀಡಲು ಸಾಧ್ಯವಾಗದಿದ್ದರೆ, ನಿಮ್ಮ ಅಹಿಂದ ಸಿದ್ಧಾಂತಕ್ಕೆ ಬೆಲೆ ಎಲ್ಲಿದೆ? ಇದು ಅಹಿಂದ ಅಲ್ಲ, ಬದಲಾಗಿ “ಅಪ್ಪ-ಹಿರಿಯರ ಇಷ್ಟದ ನಮ್ಮ ದರ್ಬಾರು” ಎಂಬಂತಾಗಿದೆ.

ಜಾಗೃತಗೊಳ್ಳದಿದ್ದರೆ ಸರ್ವನಾಶ ಖಚಿತ!

ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಯನ್ನು ನೋಡಿದರೆ, ಅದು ತನ್ನ ಶವಪೆಟ್ಟಿಗೆಗೆ ತಾನೇ ಮೊಳೆ ಹೊಡೆದುಕೊಳ್ಳುತ್ತಿದೆ ಎನ್ನಿಸುತ್ತದೆ. ಇಂದಿನ ಯುವ ಪೀಳಿಗೆಯು ಹಳೇ ಕಾಲದ ‘ವಂಶಾವಳಿ ಗುಲಾಮಗಿರಿ’ಯನ್ನು ಒಪ್ಪುವುದಿಲ್ಲ. ಜನರು ಜಾಗೃತರಾಗುತ್ತಿದ್ದಾರೆ, ವಿಶೇಷವಾಗಿ ಮುಸ್ಲಿಂ ಸಮುದಾಯವು ತನ್ನ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದೆ. ಕೇವಲ ‘ಬಿಜೆಪಿ ಭಯ’ ತೋರಿಸಿ ಮತ ಪಡೆಯುವ ಕಾಲ ಈಗ ಮುಗಿದಿದೆ.

ಕೊನೆಯದಾಗಿ, ಕಾಂಗ್ರೆಸ್ ಪಕ್ಷವು ಈ ‘ಘರಾನಾ ಪಾಲಿಟಿಕ್ಸ್’ನಿಂದ ಹೊರಬರದಿದ್ದರೆ, ಮುಂಬರುವ ದಿನಗಳಲ್ಲಿ ಇತಿಹಾಸದ ಪುಟಗಳಲ್ಲಿ ಕೇವಲ ಒಂದು ಕುಟುಂಬದ ಡೈರಿಯಾಗಿ ಉಳಿಯಬೇಕಾಗುತ್ತದೆ. ಉಪಚುನಾವಣೆಯ ಈ ಕಣದಲ್ಲಿ ಮತದಾರರು ಕಾಂಗ್ರೆಸ್‌ನ ಅಹಂಕಾರಕ್ಕೆ ಚಾಟಿಯೇಟು ಕೊಡ್ತಾರಾ ಕಾದುನೋಡಬೇಕಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments