BJP Crisis: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಎಂದರೆ ನೆನಪಾಗುವುದೇ ‘ಶಿಸ್ತು’. ‘ಪಾರ್ಟಿ ವಿತ್ ಎ ಡಿಫರೆನ್ಸ್’ ಎಂಬ ಹಣೆಪಟ್ಟಿ ಹೊತ್ತಿರುವ ಈ ಪಕ್ಷದಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ಸಂಘಟನಾತ್ಮಕ ಶಿಸ್ತಿಗೇ ಆದ್ಯತೆ ಎಂಬುದು ದಶಕಗಳ ನಂಬಿಕೆ. ಆದರೆ, ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ, ಈ ಶಿಸ್ತಿನ ಮಂತ್ರ ಕೇವಲ ಬಾಯಿಚಪಲಕ್ಕೆ ಸೀಮಿತವಾಗಿದೆಯೇ ಎನ್ನುವ ಬಲವಾದ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ಕೇಳಿಬರುತ್ತಿರುವ ಹೇಳಿಕೆಗಳು ಬಿಜೆಪಿ ಒಳಗೆ ನಡೆಯುತ್ತಿರುವ ‘ನಾಯಕತ್ವದ ಸಂಘರ್ಷ’ ಮತ್ತು ‘ತತ್ವ ಸಿದ್ಧಾಂತಗಳ ಅಧಃಪತನ’ಕ್ಕೆ ಹಿಡಿದ ಕನ್ನಡಿಯಂತಿದೆ.
ಉಚ್ಚಾಟಿತ ನಾಯಕನೇ ‘ನಮ್ಮ ನಾಯಕ’: ರಾಮುಲು ಹೇಳಿಕೆಯ ಮರ್ಮವೇನು?
ಇಂದು ಬಾಗಲಕೋಟೆಯಲ್ಲಿ ಮಾಧ್ಯಮದವರ ಮುಂದೆ ಮಾತನಾಡಿದ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿಯಿಂದ ಅಧಿಕೃತವಾಗಿ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕುರಿತು ಮಾತನಾಡುತ್ತಾ, “ಬಸನಗೌಡ ಪಾಟೀಲ್ ಯತ್ನಾಳ್ ಅವರು ನಮ್ಮ ನಾಯಕರು, ಅವರನ್ನು ನಾವು ಒಪ್ಪಿಕೊಂಡಿದ್ದೇವೆ” ಎಂದು ಘಂಟಾಘೋಷವಾಗಿ ಸಾರಿದ್ದಾರೆ. ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ಪಕ್ಷದ ವಿರೋಧಿ ಚಟುವಟಿಕೆಗಾಗಿ ಉಚ್ಚಾಟಿತಗೊಂಡ ವ್ಯಕ್ತಿಯನ್ನು ಒಬ್ಬ ಜವಾಬ್ದಾರಿಯುತ ಮಾಜಿ ಸಚಿವ ‘ನಮ್ಮ ನಾಯಕ’ ಎನ್ನಲು ಹೇಗೆ ಸಾಧ್ಯ?
ಯಾವುದೇ ಒಂದು ರಾಷ್ಟ್ರೀಯ ಪಕ್ಷದಲ್ಲಿ ಶಿಸ್ತು ಕ್ರಮ ಎದುರಿಸಿ ಹೊರಬಿದ್ದವರನ್ನು ಸಮರ್ಥಿಸಿಕೊಳ್ಳುವುದು ಆ ಪಕ್ಷದ ಅಧಿಕೃತ ನಾಯಕತ್ವಕ್ಕೆ ಮಾಡುವ ಅವಮಾನವಲ್ಲವೇ? ಒಂದು ವೇಳೆ ಯತ್ನಾಳ್ ಅವರೇ ನಾಯಕರಾದರೆ, ಪಕ್ಷದ ವರಿಷ್ಠರು ನೇಮಿಸಿದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸ್ಥಾನಮಾನವೇನು? ಬಿಜೆಪಿಯ ಅಸಲಿ ನಾಯಕ ವಿಜಯೇಂದ್ರನೋ ಅಥವಾ ಉಚ್ಚಾಟಿತ ಯತ್ನಾಳ್ ಅವರೋ ಎನ್ನುವ ಗೊಂದಲ ಇದೀಗ ಕಾರ್ಯಕರ್ತರನ್ನು ಕಾಡತೊಡಗಿದೆ.
ಯತ್ನಾಳ್ ಅಬ್ಬರ ಮತ್ತು ಹೈಕಮಾಂಡ್ ಮೌನ
ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಳೆದ ಹಲವು ತಿಂಗಳಿಂದ ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ವಿರುದ್ಧ ಅತ್ಯಂತ ಹೀನಾಯವಾಗಿ ಮಾತನಾಡುತ್ತಲೇ ಬಂದಿದ್ದಾರೆ. ಸ್ವತಃ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದಾಗ “ಮಂತ್ರಿಗಿರಿಗೆ ರೇಟ್ ಫಿಕ್ಸ್ ಮಾಡಲಾಗಿದೆ” ಎಂಬ ಗಂಭೀರ ಆರೋಪ ಮಾಡಿ ರೇಟ್ ಕಾರ್ಡ್ ಬಿಡುಗಡೆ ಮಾಡಿದ್ದ ಯತ್ನಾಳ್ ಅವರ ನಡೆ ಪಕ್ಷದ ಘನತೆಗೆ ಚ್ಯುತಿ ತಂದಿತ್ತು. ಅದಷ್ಟೇ ಅಲ್ಲದೇ ಅಸಮಧಾನಿತರ ಗುಂಪು ಎಂದು ತಂಡ ಕಟ್ಟಿಕೊಂಡು ಅಲ್ಲಲ್ಲಿ ಸಭೆ ನಡೆಸುವುದು, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಹೈಕಮಾಂಡ್ಗೆ ದೂರು ನೀಡುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದರು. ಅದೇ ಕಾರಣಕ್ಕೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆದರೆ, ಈಗ ಅದೇ ಉಚ್ಚಾಟಿತ ನಾಯಕನ ಕಾಲಿಗೆ ಬೀಳಲು ಬಿಜೆಪಿ ನಾಯಕರು ಮುಂದಾಗಿರುವುದು ಅಚ್ಚರಿಯ ಸಂಗತಿ.
ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನಿರಂತರವಾಗಿ ಯತ್ನಾಳ್ ಪ್ರಚಾರಕ್ಕೆ ಬರಲಿ ಎಂದು ಆಶಿಸುತ್ತಿದ್ದಾರೆ. ಶ್ರೀರಾಮುಲು ಒಂದು ಹೆಜ್ಜೆ ಮುಂದೆ ಹೋಗಿ ಅವರ ನಾಯಕತ್ವವನ್ನೇ ಶ್ಲಾಘಿಸುತ್ತಿದ್ದಾರೆ. ಇವೆಲ್ಲವೂ ನೋಡುತ್ತಿದ್ದರೆ, ಬಿಜೆಪಿಗೆ ಗೆಲುವಿಗಾಗಿ ತತ್ವ ಸಿದ್ಧಾಂತಗಳಿಗಿಂತ ‘ಅನಿವಾರ್ಯತೆ’ಯೇ ದೊಡ್ಡದಾಯಿತೇ ಎಂಬ ಪ್ರಶ್ನೆ ಮೂಡುತ್ತದೆ.
ಇದನ್ನೂ ಓದಿ: Bagalkot: ಜಾರಕಿಹೊಳಿ ಅಪ್ಪ-ಮಗನ ‘ಜುಗಲ್ಬಂದಿ’ಗೆ ಕಮಲ ಪಾಳಯ ತತ್ತರ!? ಅಹಿಂದ ಸುನಾಮಿಗೆ ಸಜ್ಜಾದ ಸಿದ್ದು-ಸತೀಶ್ ರಣತಂತ್ರ!
ಬಾಗಲಕೋಟೆ ಚುನಾವಣೆ: ಯತ್ನಾಳ್ ಏಕೆ ಅನಿವಾರ್ಯ?
ಬಾಗಲಕೋಟೆ ಕ್ಷೇತ್ರದಲ್ಲಿ ಯತ್ನಾಳ್ ಅವರಿಗೆ ತನ್ನದೇ ಆದ ಯುವಪಡೆ ಮತ್ತು ಹಿಂದುತ್ವದ ಮತಬ್ಯಾಂಕ್ ಇದೆ ಎಂಬುದು ಸತ್ಯ. ಉಪಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಬಿಜೆಪಿ ನಾಯಕರು, ಉಚ್ಚಾಟನೆಯನ್ನೂ ಮರೆತು ಯತ್ನಾಳ್ ಬೆಂಬಲ ಕೋರುತ್ತಿದ್ದಾರೆ. ಆದರೆ, ಇದು ಕೇವಲ ಮತ ಗಳಿಕೆಯ ತಂತ್ರವೇ?
ಜನರನ್ನು ಹಿಂದುತ್ವದ ಹೆಸರಿನಲ್ಲಿ ಭಾವೋದ್ರಿಕ್ತಗೊಳಿಸಿ, ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಯತ್ನಾಳ್ ಅವರನ್ನು ಮತ್ತೆ ಕಡೆಗಣಿಸುವ ‘ಬಳಸಿ ಬಿಸಾಡುವ’ (Use and Throw) ಮನಸ್ಥಿತಿ ಬಿಜೆಪಿಯ ಕೆಲವು ನಾಯಕರಲ್ಲಿದೆಯೇ ಎನ್ನುವ ಸಂಶಯವೂ ಇದೆ. ಯತ್ನಾಳ್ ಅವರನ್ನು ಚುನಾವಣಾ ಪ್ರಚಾರಕ್ಕೆ ‘ವೋಟ್ ಪ್ಯಾಕೆಟ್’ ನಂತೆ ಬಳಸಿಕೊಳ್ಳಲು ಮುಂದಾಗಿರುವ ಈ ನಾಯಕರು, ಅಸಲಿಗೆ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಯಾಕೆ ಸೇರಿಸಿಕೊಳ್ಳುತ್ತಿಲ್ಲ? ಒಂದು ವೇಳೆ ಅವರ ನಾಯಕತ್ವದ ಮೇಲೆ ಅಷ್ಟೊಂದು ವಿಶ್ವಾಸವಿದ್ದರೆ, ಉಚ್ಚಾಟನೆಯನ್ನು ಹಿಂಪಡೆದು ಗೌರವಯುತವಾಗಿ ಕರೆತರಬಹುದಿತ್ತಲ್ಲವೇ?
ಯತ್ನಾಳ್ ರಾಜಕೀಯ ಭವಿಷ್ಯದ ಮೇಲೆ ಕಂಟಕದ ನೆರಳು
ಬಿಜೆಪಿ ನಾಯಕರ ಈ ದ್ವಂದ್ವ ನಿಲುವು ಯತ್ನಾಳ್ ಅವರಿಗೆ ಗೌರವ ತರುತ್ತದೆಯೇ ಅಥವಾ ಅವರ ರಾಜಕೀಯ ಭವಿಷ್ಯಕ್ಕೆ ಮುಳುವಾಗುತ್ತದೆಯೇ ಎಂಬುದು ಈಗಿನ ಚರ್ಚೆ. ಯತ್ನಾಳ್ ಅವರು ಈ ರಾಜಕೀಯ ತಂತ್ರವನ್ನು ಅರಿಯದಿದ್ದರೆ, ಅವರು ಕೇವಲ ಚುನಾವಣಾ ಕಾಲದ ‘ಪದಾತಿ’ಯಾಗಿ ಉಳಿಯುವ ಅಪಾಯವಿದೆ. ಒಬ್ಬ ಹಿರಿಯ ನಾಯಕನಾಗಿ ಯತ್ನಾಳ್ ಅವರು ತಮಗೆ ಸಿಗಬೇಕಾದ ಅಧಿಕೃತ ಸ್ಥಾನಮಾನದ ಬಗ್ಗೆ ಯೋಚಿಸಬೇಕಿದೆ.
ಇದನ್ನೂ ಓದಿ: Caste Politics: ಕುರ್ಚಿ ಸಿದ್ದರಾಮಯ್ಯನವರದ್ದು, ಉರಿ ಸೂರ್ಯನದ್ದು! ಸಿಎಂ ವಿರುದ್ಧದ ‘ಸಂಘಿ ಸಂಚು’ ಬಯಲು!
ಅಸಲಿ ನಾಯಕತ್ವದ ಹುಡುಕಾಟ
ಒಟ್ಟಾರೆಯಾಗಿ ಹೇಳುವುದಾದರೆ, ಬಿಜೆಪಿಯಲ್ಲಿ ಈಗ ಅಶಿಸ್ತೇ ಶಿಸ್ತಿನಂತಾಗಿದೆ. ಶ್ರೀರಾಮುಲು ಅವರಂತಹ ಪ್ರಭಾವಿ ನಾಯಕರು ಉಚ್ಚಾಟಿತ ವ್ಯಕ್ತಿಯನ್ನು ನಾಯಕ ಎಂದು ಒಪ್ಪಿಕೊಳ್ಳುವ ಮೂಲಕ ಪರೋಕ್ಷವಾಗಿ ಪಕ್ಷದ ಹೈಕಮಾಂಡ್ ನಿರ್ಧಾರವನ್ನೇ ಪ್ರಶ್ನಿಸುತ್ತಿದ್ದಾರೆ. ಬಾಗಲಕೋಟೆ ಉಪಚುನಾವಣೆಯ ಫಲಿತಾಂಶ ಏನೇ ಇರಲಿ, ಈ ಬೆಳವಣಿಗೆಗಳು ಮಾತ್ರ ಬಿಜೆಪಿಯ ಆಂತರಿಕ ಶಿಥಿಲತೆಯನ್ನು ಜಗಜ್ಜಾಹೀರು ಮಾಡಿವೆ. ಅಧಿಕಾರಕ್ಕಾಗಿ ಯಾರನ್ನೂ ಬೇಕಾದರೂ ‘ನಾಯಕ’ ಎಂದು ಕರೆಯುವ, ಸಿದ್ಧಾಂತಗಳನ್ನು ಬದಿಗಿಡುವ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ.
ಬಿಜೆಪಿ ಈಗಲಾದರೂ ಎಚ್ಚೆತ್ತುಕೊಂಡು, ತನ್ನ ‘ಅಸಲಿ ನಾಯಕ’ ಯಾರು ಮತ್ತು ತನ್ನ ‘ಶಿಸ್ತು’ ಎಂತಹುದ್ದು ಎಂಬುದನ್ನು ಸ್ಪಷ್ಟಪಡಿಸಬೇಕಿದೆ. ಇಲ್ಲದಿದ್ದರೆ ಕಾರ್ಯಕರ್ತರ ಗೊಂದಲ ಚುನಾವಣಾ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

