Homeವಿಶ್ಲೇಷಣೆBanu Mushtaq Controversy: ಪಾದರಕ್ಷೆ ಸಂಘರ್ಷ; ಇದು ವೈಚಾರಿಕತೆಯೇ ಅಥವಾ ವೈಯಕ್ತಿಕ ಅಹಂಕಾರದ ಎಡವಟ್ಟೇ?

Banu Mushtaq Controversy: ಪಾದರಕ್ಷೆ ಸಂಘರ್ಷ; ಇದು ವೈಚಾರಿಕತೆಯೇ ಅಥವಾ ವೈಯಕ್ತಿಕ ಅಹಂಕಾರದ ಎಡವಟ್ಟೇ?

Banu Mushtaq Controversy: ಮಂಡ್ಯದ ಮಣ್ಣಿನಲ್ಲಿ ಇತ್ತೀಚೆಗೆ ನಡೆದ ಸಮಾವೇಶವೊಂದು ಈಗ ರಾಜ್ಯಮಟ್ಟದ ತೀಕ್ಷ್ಣ ಚರ್ಚೆಗೆ ವೇದಿಕೆಯಾಗಿದೆ. ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪಾದರಕ್ಷೆ ಧರಿಸಿಯೇ ಪುಷ್ಪಾರ್ಚನೆ ಮಾಡಿದ್ದು ಒಂದು ವರ್ಗದ ಆಕ್ರೋಶಕ್ಕೆ ಕಾರಣವಾದರೆ, ವೈಚಾರಿಕ ಲೋಕ ಇದನ್ನು ಶ್ರಮ ಸಂಸ್ಕೃತಿಯ ಸಂಕೇತವಾಗಿ ವಿಶ್ಲೇಷಿಸುತ್ತಿದೆ. ಆದರೆ, ಈ ವಿವಾದದ ಆಳದಲ್ಲಿರುವುದು ಕೇವಲ ಚಪ್ಪಲಿಯಲ್ಲ, ಬದಲಾಗಿ ನಾವು ಆಚರಿಸಿಕೊಂಡು ಬಂದಿರುವ ‘ಮಡಿ-ಮೈಲಿಗೆ’ಯ ವೈದಿಕ ಮನಸ್ಥಿತಿ ಮತ್ತು ಸಾರ್ವಜನಿಕ ವ್ಯಕ್ತಿಗಳ ಜವಾಬ್ದಾರಿಯುತ ನಡವಳಿಕೆಯ ಪ್ರಶ್ನೆ.

ವೈಚಾರಿಕ ತರ್ಕ: ಚಪ್ಪಲಿ ಬಿಡುವುದು ಯಾರ ಗೌರವಕ್ಕಾಗಿ?

ಬಾನು ಮುಷ್ತಾಕ್ ಆಗಲಿ ಅಥವಾ ಇನ್ಯಾವುದೇ ವೈಚಾರಿಕ ಮನೋಭಾವದ ವ್ಯಕ್ತಿಗಳಾಗಲಿ, ಭಾವಚಿತ್ರಗಳಿಗೆ ನಮನ ಸಲ್ಲಿಸುವಾಗ ಪಾದರಕ್ಷೆ ಬಿಚ್ಚದಿರುವುದಕ್ಕೆ ಒಂದು ಬಲವಾದ ತರ್ಕವಿದೆ. ಪುಷ್ಪಾರ್ಚನೆ ಮಾಡುವ ಮುನ್ನ ಮತ್ತು ಮಾಡಿದ ಬಳಿಕ ಅದೇ ವೇದಿಕೆಯಲ್ಲಿ, ಅದೇ ಫೋಟೋದ ಪಕ್ಕದಲ್ಲೇ ಗಂಟೆಗಟ್ಟಲೆ ಚಪ್ಪಲಿ ಧರಿಸಿ ಕುಳಿತುಕೊಳ್ಳುವ ನಾಯಕರು ಅಥವಾ ಸಾಹಿತಿಗಳು, ಕೇವಲ ಹೂವು ಹಾಕುವ ಆ ಹತ್ತು ಸೆಕೆಂಡುಗಳ ಕಾಲ ಚಪ್ಪಲಿ ಕಳಚುವುದರಲ್ಲಿ ಯಾವ ಅರ್ಥವಿದೆ? ವೇದಿಕೆಯ ಮೇಲೆ ಕುಳಿತಾಗ ಆಗದ ‘ಅವಮಾನ’ ಪುಷ್ಪಾರ್ಚನೆ ಮಾಡುವಾಗ ಮಾತ್ರ ಹೇಗೆ ಸಂಭವಿಸುತ್ತದೆ? ಇದು ಕೇವಲ ಪ್ರದರ್ಶನಾತ್ಮಕ ಗೌರವವಲ್ಲವೇ ಎನ್ನುವುದು ವೈಚಾರಿಕ ಲೋಕದ ಪ್ರಶ್ನೆ.

ಈ ಕುರಿತು ಲೇಖಕ ಹಾಗೂ ಹೋರಾಟಗಾರ ಡಾ. ವಡ್ಡಗೆರೆ ನಾಗರಾಜಯ್ಯ ಅವರು ಫೇಸ್‌ಬುಕ್‌ನಲ್ಲಿ ಅತ್ಯಂತ ಆಳವಾದ ವಿಶ್ಲೇಷಣೆ ನೀಡಿದ್ದಾರೆ. “ಚಪ್ಪಲಿಗಳು ಶ್ರಮಜೀವಿಗಳ ಆತ್ಮಗೌರವದ ಪ್ರತೀಕ. ಬಸವಣ್ಣನವರು ಸಮಗಾರ ಹರಳಯ್ಯ ನೀಡಿದ ಚಪ್ಪಲಿಗಳನ್ನು ನೆತ್ತಿಯ ಮೇಲೆ ಹೊತ್ತುಕೊಂಡು ಗೌರವಿಸಿದ್ದಾರೆ. ಮಂಟೇಸ್ವಾಮಿ, ಮಲೆಮಹದೇಶ್ವರ ಮತ್ತು ಶರಣ ತಿಂಥಣಿ ಮೋನಪ್ಪಯ್ಯ ಅವರ ಜೀವನದ ಮೌಖಿಕ ಕಾವ್ಯಗಳಲ್ಲಿ ಚಮ್ಮಾವುಗೆಗಳಿಗೆ ಅಗ್ರ ಸ್ಥಾನವಿದೆ. ವಾಲ್ಮೀಕಿ ರಾಮಾಯಣದಲ್ಲಿ ಭರತನು ರಾಮನ ಪಾದುಕೆಗಳನ್ನೇ ಸಿಂಹಾಸನದ ಮೇಲಿರಿಸಿ ರಾಜ್ಯಭಾರ ಮಾಡಿದ್ದಾನೆ. ಹೀಗಿರುವಾಗ ಅಂಬೇಡ್ಕರ್ ಅವರಿಗೆ ಪಾದರಕ್ಷೆ ಧರಿಸಿ ನಮನ ಸಲ್ಲಿಸುವುದು ಅವಮರ್ಯಾದೆ ಎಂದು ಭಾವಿಸುವುದು ಮೂರ್ಖತನ,” ಎಂದು ಅವರು ಪ್ರತಿಪಾದಿಸಿದ್ದಾರೆ.

ಶ್ರಮಿಕನ ಬೆವರಿನ ಉತ್ಪನ್ನ ಕೀಳಲ್ಲ: ಯೋಗೇಶ್ ಮಾಸ್ಟರ್ ಅಭಿಪ್ರಾಯ

ಈ ಬಗ್ಗೆ ‘ಅಸಲಿ ಸುದ್ದಿ’ಯೊಂದಿಗೆ ಮಾತನಾಡಿದ ಖ್ಯಾತ ಲೇಖಕ ಯೋಗೇಶ್ ಮಾಸ್ಟರ್ ಅವರು ವಿವಾದವನ್ನು ಖಂಡಿಸುತ್ತಾ, “ಚಪ್ಪಲಿ ಎಂಬುದು ಶ್ರಮಿಕನ ಶ್ರಮದಿಂದ ಉತ್ಪನ್ನವಾಗುವ ವಸ್ತು. ಅದನ್ನು ಕೀಳು ಎಂದು ಭಾವಿಸುವುದೇ ಮಾನಸಿಕ ದಾರಿದ್ರ್ಯ. ನಾನು ಕೂಡ ಬಹಳ ಹಿಂದಿನಿಂದಲೂ ಪಾದರಕ್ಷೆ ಧರಿಸಿಯೇ ಪುಷ್ಪಾರ್ಚನೆ ಮಾಡುತ್ತಿದ್ದೇನೆ. ದೇವಸ್ಥಾನ ಅಥವಾ ಮನೆಯೊಳಗೆ ಹೋಗುವಾಗ ಪಾದರಕ್ಷೆ ಹೊರಗೆಬಿಡುವುದು ಮಡಿ-ಮೈಲಿಗೆಗಾಗಿ ಅಲ್ಲ, ಹೊರಗಿನ ಧೂಳಿನಿಂದ ಜಾಗ ಗಲೀಜಾಗಬಾರದು ಎಂಬ ಕಾರಣಕ್ಕೆ ಅಷ್ಟೇ. ಆದರೆ ಭಾವಚಿತ್ರಗಳ ಮುಂದೆ ಚಪ್ಪಲಿ ಬಿಡಬೇಕು ಎನ್ನುವುದು ವೈದಿಕ ಆಚರಣೆಗಳ ಭಾಗ,” ಎಂದು ಹೇಳಿದರು.

ಇದನ್ನೂ ಓದಿ: Jnanpith Controversy: ಕಾವ್ಯದ ಮುಖವಾಡವೋ? ಕಾಮದ ವಿಕಾರವೋ? ವೈರಮುತ್ತು ‘ಜ್ಞಾನಪೀಠ’ಕ್ಕೆ ವಿರೋಧವೇಕೆ?

ಅಸಲಿ ಸುದ್ದಿಯ ವಿಶ್ಲೇಷಣೆ:

ಸಂವೇದನಾಶೀಲತೆ ಕೇವಲ ಬರಹಕ್ಕಷ್ಟೇ ಸೀಮಿತವೇ?

ಇಲ್ಲಿ ಚಪ್ಪಲಿ ಧರಿಸಿ ಪುಷ್ಪಾರ್ಚನೆ ಮಾಡಿರುವುದು ವಿವಾದವೇ ಅಲ್ಲ. ಅಂಬೇಡ್ಕರ್ ಅವರು ಮಡಿ-ಮೈಲಿಗೆಯ ಇಂತಹ ವೈದಿಕ ಕಟ್ಟುಪಾಡುಗಳ ವಿರುದ್ಧವೇ ಬದುಕು ಸವೆಸಿದವರು. ಚಪ್ಪಲಿ ಕಳಚಿ ನಮನ ಸಲ್ಲಿಸುವುದು ಎಂದರೆ ಆ ಚಪ್ಪಲಿಯನ್ನು ಹೊಲಿದ ಶ್ರಮಜೀವಿಗೇ ಮಾಡುವ ಅವಮಾನ ಎಂಬ ವೈಚಾರಿಕ ನಿಲುವು ಒಪ್ಪುವಂತದ್ದೇ. ಆದರೆ, ಈ ಇಡೀ ಪ್ರಸಂಗದಲ್ಲಿ ಬಾನು ಮುಷ್ತಾಕ್ ಅವರ ವರ್ತನೆ ಮಾತ್ರ ಪ್ರಶ್ನಾರ್ಹವಾಗಿದೆ.

ಬಾನು ಮುಷ್ತಾಕ್ ಅವರು ಇತ್ತೀಚೆಗೆ ಬೂಕರ್ ಪ್ರಶಸ್ತಿ ಪಡೆದಿರುವುದರಿಂದ ಅವರು ಮಾಧ್ಯಮಗಳ ಕೇಂದ್ರಬಿಂದುವಾಗಿದ್ದಾರೆ. ಬಾನು ಮುಷ್ತಾಕ್ ಅವರನ್ನು ಸಾಹಿತ್ಯ ವಲಯದಲ್ಲಿ ‘ಸಂವೇದನಾಶೀಲ ಲೇಖಕಿ’ ಎಂದು ಕರೆಯಲಾಗುತ್ತದೆ. ಸಮಾಜದ ನೋವು, ಸಾವು ಮತ್ತು ಸೂಕ್ಷ್ಮಗಳಿಗೆ ಮಿಡಿಯುವ ಲೇಖಕಿಗೆ ಇರಬೇಕಾದ ಕನಿಷ್ಠ ಸಂವಹನ ಕಲೆ ಮತ್ತು ಸಂವೇದನೆ ಅವರ ಇತ್ತೀಚಿನ ವರ್ತನೆಯಲ್ಲಿ ಮರೀಚಿಕೆಯಾದಂತೆ ಕಾಣುತ್ತಿದೆ. ಪತ್ರಿಕೆಗಳಲ್ಲಿ “ಚಪ್ಪಲಿ ನಮ್ಮ ಮನೆ ದೇವರು” ಎಂದು ಅವರು ಹೇಳಿದ್ದಾರೆಂಬ ವರದಿ ಬಂದಾಗ, ಅದು ಸಾರ್ವಜನಿಕರಲ್ಲಿ ಉದ್ಧಟತನದಂತೆ ಕಂಡಿದೆ. ಒಬ್ಬ ಸಂವೇದನಾಶೀಲ ಲೇಖಕಿ ತನ್ನ ಮಾತು ತಪ್ಪಾಗಿ ಅರ್ಥೈಸಲ್ಪಟ್ಟಾಗ ಅದನ್ನು ಸಮಾಧಾನದಿಂದ ಸರಿಪಡಿಸಬೇಕಿತ್ತು.

ಒಂದು ವೇಳೆ ಅವರು ಆ ಮಾತು ಹೇಳಿಲ್ಲ ಎಂದಾದರೆ, ಒಬ್ಬ ಜವಾಬ್ದಾರಿಯುತ ಸಾಹಿತಿಯಾಗಿ ಅವರು ತಕ್ಷಣವೇ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಬೇಕಿತ್ತು. ಬದಲಾಗಿ, ಕೇವಲ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿ, ನಾವು (ಮಾಧ್ಯಮದವರು) ಪ್ರತಿಕ್ರಿಯೆ ಕೇಳಲು ಕರೆ ಮಾಡಿದಾಗ “ಅಲ್ಲೇ ಫೇಸ್‌ಬುಕ್‌ನಲ್ಲಿ ಹೇಳಿದ್ದೇನಲ್ಲ” ಎಂದು ಕಾಲ್ ಕಟ್ ಮಾಡುವುದು ಯಾವ ರೀತಿಯ ನಾಗರಿಕ ವರ್ತನೆ?

ವೈಚಾರಿಕತೆ ಎಂದರೆ ಕೇವಲ ವೇದಿಕೆಯ ಮೇಲೆ ಚಪ್ಪಲಿ ಧರಿಸಿ ಫೋಟೋಗೆ ಹೂವು ಹಾಕುವುದಲ್ಲ; ಸಮಾಜದಲ್ಲಿ ಒಂದು ವಿವಾದ ಎದ್ದಾಗ ಅದನ್ನು ಪ್ರಬುದ್ಧವಾಗಿ ಎದುರಿಸುವ ತಾಳ್ಮೆಯೂ ಇರಬೇಕು. ಬಾನು ಮುಷ್ತಾಕ್ ಅವರು ತಮ್ಮ ವೈಯಕ್ತಿಕ ಅಹಂಕಾರದಿಂದಾಗಿ ಒಂದು ಸಮಾಜದ ಭಾವನೆಯನ್ನು ಕೆರಳಿಸುವಂತಾಗಬಾರದು. ಮಾಧ್ಯಮಗಳನ್ನು ಕೀಳಾಗಿ ಕಾಣುವ ಅಥವಾ ಸಂವಹನದಿಂದ ಪಲಾಯನ ಮಾಡುವ ಇವರ ನಡೆ ವಿವಾದಕ್ಕೆ ತುಪ್ಪ ಸುರಿದಂತಿದೆ.

ಇದನ್ನೂ ಓದಿ: ಶಿಸ್ತಿನ ಪಕ್ಷದಲ್ಲಿ ‘ಅಶಿಸ್ತಿನ’ ಅಬ್ಬರ; ವಿಜಯೇಂದ್ರ ಕೈಬಿಟ್ಟು ಉಚ್ಛಾಟಿತ ಶಾಸಕ ಯತ್ನಾಳ್ ಬೆನ್ನೇರಿದ್ರಾ ಚರಂತಿಮಠ?

ರಾಜಕೀಯ ಮೇಲಾಟ ಮತ್ತು ಸಮಾಜದ ಹೊಣೆ

ಈ ಘಟನೆಯನ್ನು ಬಳಸಿಕೊಂಡು ಬಿಜೆಪಿ ಮತ್ತು ಬಿಜೆಪಿ ಬೆಂಬಲಿತ ಸಂಘಟನೆಗಳು ಬಾನು ಮುಷ್ತಾಕ್ ವಿರುದ್ಧ ತೀವ್ರವಾಗಿ ಹರಿಹಾಯ್ದಿವೆ. ಇದನ್ನು ಅಂಬೇಡ್ಕರ್ ವಿರೋಧಿ ನಡೆ ಎಂದು ಬಿಂಬಿಸಿ ಬೀದಿಗೆ ಇಳಿಯುವ ಪ್ರಯತ್ನಗಳು ನಡೆದಿವೆ. ಇದು ರಾಜಕೀಯ ಲಾಭಕ್ಕಾಗಿ ಮಾಡುವ ಗದ್ದಲವೇ ಹೊರತು ಅಂಬೇಡ್ಕರ್ ಅವರ ಮೇಲಿನ ಅಪ್ಪಟ ಪ್ರೇಮದಿಂದಲ್ಲ ಎನ್ನುವುದು ಸ್ಪಷ್ಟ.

ಚಪ್ಪಲಿ ಧರಿಸಿ ಪುಷ್ಪಾರ್ಚನೆ ಮಾಡುವ ವಿಚಾರದಲ್ಲಿ ಪಾಸಿಟಿವ್ ಆಗಿಯೇ ಚರ್ಚೆ ನಡೆಯಬೇಕು. ಏಕೆಂದರೆ ಅದು ಶ್ರಮ ಸಂಸ್ಕೃತಿಗೆ ನೀಡುವ ಗೌರವದ ಪ್ರಶ್ನೆ. ಆದರೆ, ಆ ಸಿದ್ಧಾಂತವನ್ನು ಪ್ರತಿಪಾದಿಸುವ ಬಾನು ಮುಷ್ತಾಕ್ ಅಂತಹವರು ಸಾರ್ವಜನಿಕವಾಗಿ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕು ಎಂಬಲ್ಲಿ ಎಡವುತ್ತಿದ್ದಾರೆ. ವೈಚಾರಿಕತೆ ಎನ್ನುವುದು ಕೇವಲ ತೋರಿಕೆಯಲ್ಲ, ಅದು ಸಂವಹನದಲ್ಲೂ ಇರಬೇಕು. ಸಮಾಜವನ್ನು ಎದುರಿಸುವ ಧೈರ್ಯವಿಲ್ಲದ ಮತ್ತು ಸಂವೇದನೆಯನ್ನು ಕಳೆದುಕೊಂಡ ಸಾಹಿತಿಗಳು ಕೇವಲ ಫೇಸ್‌ಬುಕ್ ಗೋಡೆಗಳ ಹಿಂದೆ ಅಡಗಿಕೊಳ್ಳುವುದು ಎಷ್ಟು ಸರಿ? ಇದು ಇವತ್ತಿನ ವೈಚಾರಿಕ ವಲಯದ ಮುಂದಿರುವ ದೊಡ್ಡ ಪ್ರಶ್ನೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments