ಬಾಗಲಕೋಟೆ (Bagalkot) ಜಿಲ್ಲೆ ಇಂದು ಬೂದಿ ಮುಚ್ಚಿದ ಕೆಂಡದಂತಿದೆ. ಶಿವಾಜಿ ಜಯಂತಿಯ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಅಲುಗಾಡಿಸಿದೆ. ಆದರೆ, ಗಲಭೆ ಹತ್ತಿಕ್ಕಬೇಕಾದ ಪೊಲೀಸ್ ಇಲಾಖೆ ಅನುಸರಿಸುತ್ತಿರುವ ದ್ವಂದ್ವ ನೀತಿ ಮಾತ್ರ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ನಗರದಲ್ಲಿ ಒಂದು ಕಡೆ ನಿಷೇಧಾಜ್ಞೆ (ಸೆಕ್ಷನ್ 163) ಜಾರಿಯಲ್ಲಿದ್ದರೆ, ಮತ್ತೊಂದು ಕಡೆ ಪ್ರಚೋದನಾಕಾರಿ ಭಾಷಣಕಾರರ ಸಮಾವೇಶಗಳಿಗೆ ಪೊಲೀಸರು ಕೆಂಪು ಹಾಸು ಹಾಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
1. ಪೊಲೀಸರ ‘ಆಲ್ ಈಸ್ ವೆಲ್’ ವರದಿ ಮತ್ತು ಅಸಲಿ ಸತ್ಯ
ಘಟನೆ ನಡೆದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ Bagalkot ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಿದ್ದಾರ್ಥ ಗೋಯಲ್, “ಪರಿಸ್ಥಿತಿ ನಿಯಂತ್ರಣದಲ್ಲಿದೆ, ದೊಡ್ಡ ಮಟ್ಟದ ಹಾನಿಯೇನೂ ಆಗಿಲ್ಲ” ಎಂದು ಹೇಳಿಕೆ ನೀಡಿದ್ದರು. ಆದರೆ, ಪರಿಸ್ಥಿತಿ ಅಷ್ಟು ಸಲೀಸಾಗಿದ್ದರೆ ಇಂದು ಬಾಗಲಕೋಟೆಯ ಬೀದಿ ಬೀದಿಗಳಲ್ಲಿ ಇಷ್ಟೊಂದು ಪ್ರಮಾಣದ ಪೊಲೀಸ್ ಪಡೆ ಯಾಕೆ ಜಮಾವಣೆಯಾಗಿದೆ?
ಬಾಗಲಕೋಟೆಯಲ್ಲಿ ಬೀಡುಬಿಟ್ಟಿರುವ ಬೃಹತ್ ಪೊಲೀಸ್ ಪಡೆ ಹೀಗಿದೆ:
- ಐವರು ಎಸ್ಪಿಗಳು: ಬಾಗಲಕೋಟೆ (Bagalkot) ಸೇರಿದಂತೆ ಗದಗ, ಧಾರವಾಡ ಜಿಲ್ಲೆಗಳ ಒಟ್ಟು 5 ಜನ ಎಸ್ಪಿಗಳು ಸ್ಥಳದಲ್ಲಿದ್ದಾರೆ.
- ಅಧಿಕಾರಿಗಳ ದಂಡು: 8 ಜನ ಡಿವೈಎಸ್ಪಿಗಳು, 16 ಜನ ಸಿಪಿಐಗಳು, 32 ಜನ ಪಿಎಸ್ಐಗಳು ಮತ್ತು 65 ಜನ ಎಎಸ್ಐಗಳು ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ.
- ಸಿಬ್ಬಂದಿ ಸಂಖ್ಯೆ: 450 ಜನ ಕಾನ್ಸ್ಟೇಬಲ್ಗಳು, 250 ಜನ ಹೋಂ ಗಾರ್ಡ್ಸ್ ಮತ್ತು 10 ಕೆಎಸ್ಆರ್‌ಪಿ (KSRP) ತುಕಡಿಗಳನ್ನು ನಿಯೋಜಿಸಲಾಗಿದೆ.
ಒಬ್ಬ ಎಸ್ಪಿಯವರು “ನಥಿಂಗ್ ಸಿರಿಯಸ್” ಎಂದ ಮೇಲೆ ಇಷ್ಟೊಂದು ದೊಡ್ಡ ಮಟ್ಟದ ಸೈನ್ಯವನ್ನು ಕರೆಯಿಸಿಕೊಂಡಿದ್ದೇಕೆ? ಇದು ಇಲಾಖೆಯು ಸಾರ್ವಜನಿಕರಿಗೆ ನೀಡುತ್ತಿರುವ ತಪ್ಪು ಮಾಹಿತಿಯೋ ಅಥವಾ ಪರಿಸ್ಥಿತಿಯನ್ನು ಅಂದಾಜಿಸುವಲ್ಲಿ ಹಾಲಿ ಎಸ್ಪಿ ಸೋತಿದ್ದಾರೆಯೇ?
ಇದನ್ನೂ ಓದಿ: Bagalkot: ಮಾಜಿ ಶಾಸಕನ ಅಬ್ಬರಕ್ಕೆ ಸೈಲೆಂಟ್ ಆದರೇ ಎಸ್‌ಪಿ? ‘ಧಮ್ಮು ತಾಕತ್’ ಮಾತಿಗೆ ಪೊಲೀಸರು ಕಕ್ಕಾಬಿಕ್ಕಿ!
2. ಹಳೇ ಸಾರಥಿಗಳ ಎಂಟ್ರಿ: ಹಾಲಿ ಎಸ್ಪಿಯ ಅಸಮರ್ಥತೆಗೆ ಸಾಕ್ಷಿಯೇ?
ಗಲಭೆ ಹತ್ತಿಕ್ಕಲು ಮತ್ತು ತನಿಖೆಗೆ ವೇಗ ನೀಡಲು ರಾಜ್ಯ ಡಿಜಿಪಿ ಅವರು ಈಗ ಜಿಲ್ಲೆಯ ಮಾಜಿ ಎಸ್ಪಿಗಳಾದ ಸಿ.ಬಿ. ರಿಷ್ಯಂತ್ ಮತ್ತು ಅಮರನಾಥ ರೆಡ್ಡಿ ಅವರಿಗೆ ತುರ್ತು ಬುಲಾವ್ ನೀಡಿದ್ದಾರೆ. ಈ ಅಧಿಕಾರಿಗಳನ್ನು ಈಗ ಕರೆಸಿಕೊಳ್ಳುತ್ತಿರುವುದು, ಪ್ರಸ್ತುತ ಇರುವ ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ವಿಶ್ವಾಸವಿಲ್ಲವೇ ಎಂಬ ಸಂಶಯವನ್ನು ಹುಟ್ಟುಹಾಕಿದೆ. ಹಾಲಿ ಎಸ್ಪಿಯವರಿಗೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಈ ಇಬ್ಬರು ಹಿರಿಯ ಅಧಿಕಾರಿಗಳ ಆಗಮನದಿಂದ ಸ್ಪಷ್ಟವಾಗುತ್ತಿದೆ.
3. ನಿಷೇಧಾಜ್ಞೆ ನಡುವೆಯೂ ಸಮಾವೇಶಗಳ ಅಬ್ಬರ: ಬೆಂಕಿಗೆ ತುಪ್ಪ ಸುರಿಯುವವರ ಆಗಮನ!
ನಗರದಲ್ಲಿ ಕಲ್ಲು ತೂರಾಟ ನಡೆದು ಉದ್ವಿಗ್ನತೆ ಮನೆ ಮಾಡಿದೆ. ಇಷ್ಟೆಲ್ಲಾ ಇದ್ದರೂ ಸಹ, ಸಂಘ ಪರಿವಾರದ ನೂರು ವರ್ಷಗಳ ಪೂರೈಕೆಯ ಹಿನ್ನೆಲೆಯಲ್ಲಿ ಪೊಲೀಸರು ಬೃಹತ್ ಮೆರವಣಿಗೆ ಮತ್ತು ಸಮಾವೇಶಗಳಿಗೆ ಮುಕ್ತ ಅವಕಾಶ ನೀಡಿದ್ದಾರೆ.
ಆತಂಕಕಾರಿ ಬೆಳವಣಿಗೆಗಳ ಸರಣಿ: ಇಂದು ನವನಗರದಲ್ಲಿ ಸಾವಿರಾರು ಜನ ಸೇರಿ ಬೃಹತ್ ಮೆರವಣಿಗೆ ನಡೆಸಿದ್ದಾರೆ. ಆರ್.ಎಸ್.ಎಸ್ ಮುಖಂಡ ಹನುಮಂತ ಮಳಲಿ ಅವರಿಂದ ಭಾಷಣ ನಡೆದಿದೆ.
ಬಾಗಲಕೋಟೆ ಈಗಷ್ಟೇ ತಣ್ಣಗಾಗುತ್ತಿದೆ ಎಂದು ಭಾವಿಸುವ ಹೊತ್ತಿಗೆ, ಜಿಲ್ಲೆಯ ಶಾಂತಿಗೆ ಕೊಳ್ಳಿ ಇಡಬಲ್ಲ ವಿವಾದಾತ್ಮಕ ವ್ಯಕ್ತಿಗಳ ಸರಣಿ ಭೇಟಿ ಆರಂಭವಾಗಿದೆ. ಗಲಭೆಯ ನಂತರದ ಸೂಕ್ಷ್ಮ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತವು ಹೊರಗಿನ ವ್ಯಕ್ತಿಗಳ ಪ್ರವೇಶಕ್ಕೆ ನಿರ್ಬಂಧ ಹೇರಬೇಕಿತ್ತು. ಆದರೆ, ಇಲ್ಲಿ ನಡೆಯುತ್ತಿರುವುದೇ ಬೇರೆ.
ಇದನ್ನೂ ಓದಿ: Bagalkot Bandh! ಕಿಡಿಗೇಡಿಗಳ ಕೃತ್ಯ- ಕೇಸರಿ ಪಡೆಗೆ ಉಪಚುನಾವಣೆಯ ಆಹಾರ? ದಾರಿ ತಪ್ಪಿತೇ ಪೊಲೀಸ್ ಇಲಾಖೆ?
ಭಾನುವಾರ ಬಸನಗೌಡ ಪಾಟೀಲ್ ಯತ್ನಾಳ್ ಅವರ ಎಂಟ್ರಿ ಸಾಧ್ಯತೆ!
ವಿಜಯಪುರ ಶಾಸಕ ಯತ್ನಾಳ್ ಅಂದರೆ ಅಲ್ಲಿ ಅಬ್ಬರದ ಮಾತುಗಳಿರುತ್ತವೆ. ಈಗಾಗಲೇ ಕೋಮು ಘರ್ಷಣೆಯಿಂದ ನೊಂದಿರುವ ಜಿಲ್ಲೆಯಲ್ಲಿ, ತಮ್ಮ ಹರಿತವಾದ ಮತ್ತು ಪ್ರಚೋದನಾಕಾರಿ ಭಾಷಣದ ಮೂಲಕ ಹೆಸರಾದ ಯತ್ನಾಳ್ ಅವರ ಆಗಮನ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಲಿದೆ. ಉದ್ವಿಗ್ನಗೊಂಡಿರುವ ಯುವಕರ ಮನಸ್ಸನ್ನು ಮತ್ತಷ್ಟು ಕೆರಳಿಸುವ ಇಂತಹ ಭಾಷಣಗಳು, ಪೊಲೀಸರು ಮಾಡುತ್ತಿರುವ ‘ಶಾಂತಿ ಸ್ಥಾಪನೆ’ಯ ನಾಟಕವನ್ನು ಒಂದೇ ಕ್ಷಣದಲ್ಲಿ ಬಲಿ ಪಡೆಯುವ ಸಾಧ್ಯತೆಯಿದೆ.
ಸೋಮುವಾರ ಮುತಾಲಿಕ್ ಮತ್ತು ಪುನೀತ್ ಕೆರೆಹಳ್ಳಿ ಅಬ್ಬರ!
ಸೋಮವಾರ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಹಾಗೂ ಗೋರಕ್ಷಣೆ ಹೆಸರಲ್ಲಿ ಕೊಲೆ ಆರೋಪ ಎದುರಿಸುತ್ತಿರುವ ಪುನೀತ್ ಕೆರೆಹಳ್ಳಿಯಂತಹವರು ಜಿಲ್ಲೆಗೆ ಪ್ರವೇಶಿಸುತ್ತಿದ್ದಾರೆ. ಇವರ ಇತಿಹಾಸವೇ ವಿವಾದಗಳಿಂದ ಕೂಡಿದೆ. ಗಲಭೆಯ ನಂತರದ ತನಿಖೆ ನಡೆಯುತ್ತಿರುವಾಗಲೇ, ಇಂತಹ ವಿವಾದಾತ್ಮಕ ವ್ಯಕ್ತಿಗಳಿಗೆ ವೇದಿಕೆ ಸಿದ್ಧಪಡಿಸಿಕೊಡುವುದು ಎಂದರೆ ಮತ್ತೆ ಅಶಾಂತಿಗೆ ಆಹ್ವಾನ ನೀಡಿದಂತೆ.
ಪರಿಣಾಮವೇನು?:
ಇಂತಹ ಪರಿಸ್ಥಿತಿಯಲ್ಲಿ ಇವರು ಬಂದರೆ ಏನಾಗುತ್ತದೆ ಎಂಬ ಅರಿವು ಕನಿಷ್ಠ ಪಕ್ಷ ಪೊಲೀಸರಿಗಾದರೂ ಇರಬೇಕಿತ್ತು. ಇಂತಹ ವ್ಯಕ್ತಿಗಳ ಭಾಷಣಗಳು ಒಂದು ಸಮುದಾಯವನ್ನು ಕೆರಳಿಸಿದರೆ, ಇನ್ನೊಂದು ಸಮುದಾಯದಲ್ಲಿ ಪ್ರತಿಕಾರಕ್ಕೆ ಪ್ರೇರಣೆ ನೀಡುತ್ತವೆ. ಇದು ಬೀದಿ ಬದಿಯ ಗಲಾಟೆಯನ್ನು ದೊಡ್ಡ ಮಟ್ಟದ ಕೋಮು ದಳ್ಳುರಿಗೆ ತಿರುಗಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಪೊಲೀಸರು ಇಷ್ಟೊಂದು ದೊಡ್ಡ ಪಡೆಯನ್ನು ನಿಯೋಜಿಸಿದ್ದರೂ, ಇಂತಹವರ ಆಗಮನಕ್ಕೆ ತಡೆ ನೀಡದಿರುವುದು ಇಲಾಖೆಯ ಅಸಹಾಯಕತೆಯೋ ಅಥವಾ ರಾಜಕೀಯ ಗುಲಾಮಗಿರಿಯೋ?
ಗಲಭೆ ನಿಯಂತ್ರಿಸಲು 5 ಜನ ಎಸ್ಪಿಗಳನ್ನು ಹಾಕಿರುವ ಪೊಲೀಸರು, ಜಿಲ್ಲೆಯಲ್ಲಿ ಶಾಂತಿ ಕದಡಬಲ್ಲ ಇಂತಹ ವ್ಯಕ್ತಿಗಳ ಸಮಾವೇಶಗಳಿಗೆ ಅನುಮತಿ ನೀಡಿದ್ದು ಯಾವ ನ್ಯಾಯ? ಸೆಕ್ಷನ್ 163 ಬರೀ ಬಡ ಅಂಗಡಿಕಾರರಿಗೆ ಮತ್ತು ಸಾಮಾನ್ಯ ಜನರಿಗಷ್ಟೇ ಸೀಮಿತವೇ?
4. ಶಾಂತಿ ಸಭೆಗಳೆಂಬ ನಾಟಕ: ಮುಖಂಡರದ್ದೇ ರಾಜಕೀಯ!
ಜಿಲ್ಲಾಡಳಿತ ನಡೆಸುತ್ತಿರುವ ಶಾಂತಿ ಸಭೆಗಳು ಕೇವಲ ಪ್ರಹಸನದಂತೆ ಕಾಣುತ್ತಿವೆ. ನಿನ್ನೆ ಮುಸ್ಲಿಂ ಮುಖಂಡರು ಸಭೆಗೆ ಬಾರದೆ ಬಹಿಷ್ಕರಿಸಿದರೆ, ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಗೆ ಹಿಂದೂ ಮುಖಂಡರು ಗೈರಾಗಿದ್ದಾರೆ. ಉಭಯ ಕೋಮುಗಳ ನಡುವೆ ವಿಶ್ವಾಸ ಮೂಡಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಇಬ್ಬರು ಮಾಜಿ ಎಸ್ಪಿಗಳನ್ನು ಸಭೆಗೆ ಕರೆತಂದು ಕುಳ್ಳಿರಿಸಿದೆಯಾದರೂ, ಸಭೆಗೆ ಬರಬೇಕಾದ ಮುಖಂಡರೇ ಗೈರಾಗುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಇದನ್ನೂ ಓದಿ: Rahul Gandhi: ಮೋದಿ ‘ಸರೆಂಡರ್’! ರಾಹುಲ್ ಪೋಸ್ಟ್ ಹಿಂದೆ ಅಡಗಿದೆಯೇ ‘ಬೃಹತ್ ಹಗರಣದ’ ಸುಳಿವು?
5. ಪೊಲೀಸರಿಗೆ ಎದುರಾಗಿರುವ ತೀಕ್ಷ್ಣ ಪ್ರಶ್ನೆಗಳು
- ನಿಯಮಗಳ ದ್ವಂದ್ವ ಯಾಕೆ?: ಒಂದು ಕಡೆ ಗಲಭೆ ಹತ್ತಿಕ್ಕಲು 5 ಜನ ಎಸ್ಪಿಗಳನ್ನು ನಿಯೋಜಿಸಿ, ಮತ್ತೊಂದು ಕಡೆ ಪ್ರಚೋದನಾಕಾರಿ ಭಾಷಣಕಾರರಿಗೆ ವೇದಿಕೆ ಸಿದ್ಧಪಡಿಸಿಕೊಡುವುದು ಶಾಂತಿ ಕಾಪಾಡುವ ಲಕ್ಷಣವೇ?
- ಕೊಲೆ ಆರೋಪಿಗಳಿಗೆ ಸ್ವಾಗತವೇ?: ಗೋರಕ್ಷಣೆ ಹೆಸರಲ್ಲಿ ಕೊಲೆ ಆರೋಪಿಯಾಗಿರುವ ಪುನೀತ್ ಕೆರೆಹಳ್ಳಿಯಂತಹವರು ಉದ್ವಿಗ್ನ ಜಿಲ್ಲೆಗೆ ಬರುವಾಗ ಪೊಲೀಸರು ಮೌನ ವಹಿಸಿದ್ದೇಕೆ?
- ಯತ್ನಾಳ್ ಭಾಷಣಕ್ಕೆ ತಡೆಯಿಲ್ಲವೇ?: ಈಗಾಗಲೇ ಬಾಗಲಕೋಟೆ ಬೂದಿ ಮುಚ್ಚಿದ ಕೆಂಡಂತಿದೆ. ಇಂತಹ ಸಮಯದಲ್ಲಿ ಯತ್ನಾಳ್ ಅವರ ಅಬ್ಬರದ ಭಾಷಣಕ್ಕೆ ಅವಕಾಶ ನೀಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವುದಿಲ್ಲವೇ?
- ಸಮರ್ಥನೆ ಎಲ್ಲಿದೆ?: ಇಬ್ಬರು ಮಾಜಿ ಎಸ್ಪಿಗಳನ್ನು ಕರೆಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದರೆ ಜಿಲ್ಲಾ ಪೊಲೀಸ್ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದರ್ಥವಲ್ಲವೇ?
ಬಾಗಲಕೋಟೆಯಲ್ಲಿ ಈಗ ಇರುವುದು ಬರೀ ಪೊಲೀಸರ ಸಂಖ್ಯೆಯಲ್ಲ, ಬದಲಾಗಿ ಆಡಳಿತದ ಅಸಹಾಯಕತೆ. ಒಂದು ಕಡೆ ಗಲಭೆಕೋರರನ್ನು ಹಿಡಿಯುವ ನಾಟಕ, ಇನ್ನೊಂದು ಕಡೆ ಅದೇ ಹೊತ್ತಿನಲ್ಲಿ ವಿವಾದಾತ್ಮಕ ನಾಯಕರಿಗೆ ಸಲಾಮು ಹೊಡೆಯುವ ಪದ್ಧತಿ. ಈ ‘ಡಬಲ್ ಸ್ಟ್ಯಾಂಡರ್ಡ್’ ಆಟದಿಂದ ಬಾಗಲಕೋಟೆಯ ಸಾಮಾನ್ಯ ಜನರು ಮಾತ್ರ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಹಳೇ ಅಧಿಕಾರಿಗಳ ಎಂಟ್ರಿಯಿಂದಲಾದರೂ ಜಿಲ್ಲೆಯಲ್ಲಿ ಶಾಂತಿ ನೆಲೆಸುತ್ತದೆಯೇ ಅಥವಾ ರಾಜಕೀಯ ಸಮಾವೇಶಗಳ ಆರ್ಭಟಕ್ಕೆ ಖಾಕಿ ಪಡೆ ಶರಣಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

