ಬಾಗಲಕೋಟೆ(Bagalkot) : ಉತ್ತರ ಕರ್ನಾಟಕದ ಕೋಟೆ ನಾಡು ಬಾಗಲಕೋಟೆಯಲ್ಲಿ ಈಗ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ಕಳೆದ ಫೆಬ್ರವರಿ 19 ರಂದು ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟದ ಘಟನೆಯು ಈಗ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸಂಘರ್ಷಕ್ಕೆ ನಾಂದಿ ಹಾಡಿದೆ. ಈ ಹೇಯ ಕೃತ್ಯವನ್ನು ಖಂಡಿಸಿ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಇಂದು ನವನಗರದ ಜಿಲ್ಲಾಡಳಿತ ಭವನದ ಎದುರು ನಡೆದ ಬೃಹತ್ ಧರಣಿ ಸತ್ಯಾಗ್ರಹವು ಜಿಲ್ಲಾಡಳಿತಕ್ಕೆ ಅಂತಿಮ ಎಚ್ಚರಿಕೆಯನ್ನು ನೀಡಿದೆ.
15 ದಿನಗಳ ಗಡುವು: “ಬ್ಯಾರಿಕೇಡ್‌ಗಳು ನಮ್ಮನ್ನು ತಡೆಯಲಾರವು”
ಪ್ರತಿಭಟನಾ ವೇದಿಕೆಯಿಂದ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ನೀಡಲಾಗಿರುವ ಗಡುವು ಅತ್ಯಂತ ಗಂಭೀರವಾಗಿದೆ. “ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಪಂಖಾ ಮಸೀದಿಯ ಅಧ್ಯಕ್ಷ ಹಾಗೂ ಎಲ್ಲಾ ಸದಸ್ಯರ ಮೇಲೆ ಕೇಸ್ ದಾಖಲಿಸಿ ಕೂಡಲೇ ಬಂಧಿಸಬೇಕು. ನಾವು ಅಧಿಕಾರಿಗಳಿಗೆ ಕೇವಲ 15 ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ” ಎಂದು ಮುಖಂಡರು ಗುಡುಗಿದ್ದಾರೆ.
ಒಂದು ವೇಳೆ 15 ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ ಎಂದು ಎಚ್ಚರಿಸಿದ ಮುಖಂಡರು, “ನಮ್ಮ ಬೇಡಿಕೆ ಈಡೇರದಿದ್ದರೆ ಅದೇ ರಸ್ತೆಗೆ ಮತ್ತೆ ಬರ್ತೀವಿ, ಅದೇ ರಸ್ತೆಯಲ್ಲಿ ಮತ್ತೆ ಶಿವಾಜಿ ಜಯಂತಿ ಮಾಡ್ತೀವಿ. ಅಂದು ನೀವು 3,000 ಪೊಲೀಸರನ್ನಲ್ಲ, ಇಡೀ ಪಡೆಯನ್ನೇ ತಂದರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಾವಿರಾರು ಕಾರ್ಯಕರ್ತರು ನುಗ್ಗಿ ಬರಲಿದ್ದಾರೆ. 15 ದಿನದ ನಂತರ ಇವತ್ತು ನೀವು ನಿರ್ಮಿಸಿಕೊಂಡಿರುವ ನಿಮ್ಮ ರಕ್ಷಣಾ ಕವಚವನ್ನ ಮೀರಿ ಬರ್ತೀವಿ. ಅವತ್ತು ಯಾವ ಬ್ಯಾರಿಕೇಡ್‌ಗಳೂ ಉಳಿಯಲ್ಲ” ಎಂದು ಪಂಥಾಹ್ವಾನ ನೀಡಿದ್ದಾರೆ.
ಇದನ್ನೂ ಓದಿ: Bagalkot: ಕೇಸರಿ ಪಡೆಯ ‘ಡೆಡ್‌ಲೈನ್’ಗೆ ಡೋಂಟ್ ಕೇರ್! ಎಸ್‌ಪಿ ಸಿದ್ದಾರ್ಥ ಗೋಯಲ್ ಖಡಕ್ ‘ದಂಡಯಾತ್ರೆ’
ಪೊಲೀಸರ ರಕ್ಷಣೆ ಮಾಡಿದ್ದೇ ನಾವು: ಆವೇಶಭರಿತ ಮಾತು
ಘಟನೆ ನಡೆದ ದಿನದ ಬಗ್ಗೆ ಸ್ಫೋಟಕ ಮಾಹಿತಿ ಹಂಚಿಕೊಂಡ ಮುಖಂಡರು, “ಅವತ್ತು ನಿಮ್ಮ ತಲೆ ರಕ್ಷಣೆ ಮಾಡಿದ್ದು ನಾವು. ಒಂದು ವೇಳೆ ಅವತ್ತು ಅವರಂತೆಯೇ ನಾವೂ ಪ್ರತಿಕ್ರಿಯೆ ನೀಡಿದ್ದರೆ 10-20 ಪೊಲೀಸರ ತಲೆ ಒಡೆದು ಹೋಗುತ್ತಿದ್ದವು. ಆದರೆ ನಾವು ಸಂವಿಧಾನದ ಮೇಲೆ ನಂಬಿಕೆ ಇರುವವರು ಮತ್ತು ಅದರ ರಕ್ಷಣೆ ಮಾಡುವವರು. ಪೊಲೀಸರ ರಕ್ಷಣೆ ಮಾಡಲೂ ನಾವೇ ಇದ್ದೀವಿ. ಆದರೆ ನಮ್ಮ ಸಹನೆಯನ್ನು ಪರೀಕ್ಷಿಸಬೇಡಿ. ಆ ಮುಸಲ್ಮಾನ್ ಮಸೀದಿಯ ಅಧ್ಯಕ್ಷ ಮತ್ತು ಸದಸ್ಯರ ಮೇಲೆ ಕೇಸ್ ಹಾಕಿ ಕೂಡಲೇ ಜೈಲಿಗಟ್ಟಲೇಬೇಕು” ಎಂದು ಆಗ್ರಹಿಸಿದರು.
ಅಶೋಕ್ ಲಿಂಬಾವಳಿ ಅವರ ಸ್ಫೋಟಕ ಆರೋಪ: ಮಸೀದಿಯೊಳಗೆ ಶಸ್ತ್ರಾಸ್ತ್ರಗಳಿದ್ದವೇ?
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖ ಮುಖಂಡ ಅಶೋಕ್ ಲಿಂಬಾವಳಿ ಅವರು ಮಸೀದಿಯ ಬಗ್ಗೆ ಅತ್ಯಂತ ಗಂಭೀರವಾದ ಮತ್ತು ಸ್ಫೋಟಕವಾದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. “ಪಂಖಾ ಮಸೀದಿ ಕಟ್ಟಿದ ಉದ್ದೇಶವೇ ಬೇರೆ ಇದೆ. ಅವರು ಅಲ್ಲಿ ನಮಾಜ್ ಮಾಡಲು ಕಟ್ಟಿರಲಿಕ್ಕಿಲ್ಲ, ಬದಲಿಗೆ ಹಿಂದೂ ಮೆರವಣಿಗೆಗಳ ಮೇಲೆ ಕಲ್ಲು, ಚಪ್ಪಲಿ ಮತ್ತು ಸೋಡಾ ಬಾಟಲಿಗಳನ್ನು ಎಸೆಯಲು ಆ ಮಸೀದಿಯನ್ನು ಬಳಸುತ್ತಿದ್ದಾರೆ ಎನಿಸುತ್ತದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸರೊಂದಿಗೆ ತಮಗಾದ ಸಂಭಾಷಣೆಯನ್ನು ಉಲ್ಲೇಖಿಸಿದ ಅವರು, “ಮೊನ್ನೆ ಘಟನೆ ನಡೆದಾಗ ನಾನು ಪೊಲೀಸರ ಬಳಿ ಕೇಳಿದ್ದೆ – ಯಾಕೆ ನೀವು ಅಂದು ಮಸೀದಿಯ ಒಳಗಿದ್ದವರ ಗಡ್ಡ ಹಿಡಿದು ಅಷ್ಟು ಸಮಾಧಾನ ಮಾಡಿದ್ರಿ ಅಂತ. ಅದಕ್ಕೆ ಪೊಲೀಸರು ನೀಡಿದ ಉತ್ತರ ಕೇಳಿ ದಿಗಿಲಾಯಿತು. ಪೊಲೀಸರು ಹೇಳಿದ್ರು – ಆ ರೀತಿ ಸಮಾಧಾನ ಮಾಡದೇ ಇದ್ದಿದ್ದರೆ ಅವತ್ತು ಆ ಮಸೀದಿಯೊಳಗೆ ದೊಡ್ಡ ಮಟ್ಟದ ಶಸ್ತ್ರಾಸ್ತ್ರ ಸಂಗ್ರಹವಿತ್ತು. ಮಸೀದಿಯೊಳಗೆ ತಲ್ವಾರ್‌ಗಳು (ವಾಳ್ಗಳು), ಕಬ್ಬಿಣದ ರಾಡ್‌ಗಳು ಮತ್ತು ಮಾರಕಾಸ್ತ್ರಗಳಿದ್ದವು. ಪೊಲೀಸರ ಮೇಲೆ ಮತ್ತು ಮೆರವಣಿಗೆಯ ಮೇಲೆ ದೊಡ್ಡ ಅನಾಹುತಗಳು ನಡೆಯುವ ಸಾಧ್ಯತೆ ಇತ್ತು. ಹಾಗಾಗಿ ಅನಿವಾರ್ಯವಾಗಿ ಸಮಾಧಾನ ಮಾಡಬೇಕಾಯಿತು ಎಂದು ಪೊಲೀಸರೇ ಒಪ್ಪಿಕೊಂಡಿದ್ದಾರೆ” ಎಂದು ಅಶೋಕ್ ಲಿಂಬಾವಳಿ ಗುಡುಗಿದರು. “ಒಮ್ಮೆ ವಿಚಾರ ಮಾಡಿ, ಆ ಮಸೀದಿ ನಮಾಜ್ ಮಾಡಲು ಇರುವ ಕೇಂದ್ರವೋ ಅಥವಾ ಹಿಂದೂಗಳ ಮೇಲೆ ಹಲ್ಲೆ ಮಾಡಲು ಸಿದ್ಧಪಡಿಸಿರುವ ಕೇಂದ್ರವೋ?” ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: Bagalkot: ಖಾಕಿ ಕೋಟೆ, ಕರ್ಫ್ಯೂ ನಾಟಕ; ಸರಣಿ ಸಮಾವೇಶಕ್ಕೆ ಜೈ ಎಂದ ಪೊಲೀಸರು ಶಾಂತಿ ಕಾಪಾಡ್ತಾರಾ?
ದಶಕಗಳ ಇತಿಹಾಸವಿರುವ ‘ಕುಚೇಷ್ಟೆ’
ಅಶೋಕ್ ಲಿಂಬಾವಳಿ ಅವರು ಮಸೀದಿಯ ಇತಿಹಾಸವನ್ನು ಕೆದಕಿ ಮಾತನಾಡುತ್ತಾ, “1956 ರಿಂದಲೂ ಈ ಭಾಗದಲ್ಲಿ ಇಂತಹ ಉಪಟಳಗಳು ನಡೆಯುತ್ತಲೇ ಇವೆ. RSS ಪಥಸಂಚಲನ ಹೋಗುವಾಗಲೂ ಕಲ್ಲು ಎಸೆಯುತ್ತಲೇ ಬಂದಿದ್ದಾರೆ. ಗಣೇಶ ಮೆರವಣಿಗೆ, ಹೋಳಿ ಹಬ್ಬದ ಮೆರವಣಿಗೆಗಳ ಮೇಲೆ ಅದೇ ಮಸೀದಿಯಿಂದ ಕಲ್ಲು ತೂರಾಟ ನಿಂತಿಲ್ಲ. 1982 ರಲ್ಲಿ ನಾನು ಆರ್ ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾದಾಗಲೂ ಕಲ್ಲು ತೂರಲಾಗಿತ್ತು. 1985 ರಲ್ಲಿ ನಾವು ಹೋಳಿ ಹುಣ್ಣಿಮೆ ಆಚರಿಸುತ್ತಿದ್ದಾಗ ಸೋಡಾ ಬಾಟಲ್ ಎಸೆದರು. ಆಗಲೇ ಈ ಮಸೀದಿಯ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೆಲ್ಲಾ ಅವರು ಈ ಕುಚೇಷ್ಟೆ ಮಾಡುತ್ತಲೇ ಬಂದಿದ್ದಾರೆ” ಎಂದು ರಾಜಕೀಯ ವಾಗ್ದಾಳಿ ನಡೆಸಿದರು.
ಮಸೀದಿ ಸ್ಥಳಾಂತರ ಮತ್ತು ಸಂಚಿನ ಆರೋಪ
ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಮುಖಂಡ ಉಲ್ಲಾಸ್** ಮಾತನಾಡಿ, “ನಮ್ಮ ಮೆರವಣಿಗೆಯ ಶಬ್ದ ಅವರಿಗೆ ಕಿರಿಕಿರಿಯಾದರೆ ನಾವು ಮೆರವಣಿಗೆ ನಿಲ್ಲಿಸಲಾಗದು. ಆ ರಸ್ತೆ ಬದಿಯ ಮಸೀದಿಯನ್ನು ಅವರೇ ಬೇರೆ ಕಡೆ ಸ್ಥಳಾಂತರ ಮಾಡಿಕೊಳ್ಳಲಿ. ಅವರು ಮಸೀದಿಯಿಂದ ಕಲ್ಲು ಎಸೆದರೆ ಅದು ಅವರ ಮನೆಗಳಿಗೇ ಬೀಳುವಂತಿರಬೇಕು, ಆಗ ಮಾತ್ರ ಇಲ್ಲಿ ಶಾಂತಿ ನೆಲೆಸಲು ಸಾಧ್ಯ” ಎಂದರು. “ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಘಟನೆ ನಡೆಯುತ್ತಲೇ ಇವೆ. ಇವು ಆಕಸ್ಮಿಕ ಎನ್ನಲು ಹೇಗೆ ಸಾಧ್ಯ? ಇದರ ಹಿಂದೆ ದೊಡ್ಡ ಸಂಚಿದೆ. ಜಿಲ್ಲೆಯ ಅಶಾಂತಿಗೆ ಕಾರಣವಾಗಿರುವ ಪಂಖಾ ಮಸೀದಿಯನ್ನು ಕೂಡಲೇ ಬಂದ್ ಮಾಡಬೇಕು” ಎಂದು ಒತ್ತಾಯಿಸಿದರು.
ಹೋಳಿ ಹಬ್ಬಕ್ಕೆ ಸಿದ್ಧತೆ: “ಇದು ನಮಗೆ ಚಾಲೆಂಜ್”
ಪ್ರತಿಭಟನಾಕಾರರು ಜಿಲ್ಲೆಯ ಹಿಂದೂ ಬಾಂಧವರಿಗೆ ಮಹತ್ವದ ಕರೆ ನೀಡಿದ್ದಾರೆ. “ಮುಂದಿನ 15 ದಿನಗಳಲ್ಲಿ ಹೋಳಿ ಹಬ್ಬವಿದೆ. ಯಾರೂ ಊರು ಬಿಟ್ಟು ಹೋಗಬೇಡಿ. ಇದನ್ನೊಂದು ಸವಾಲಾಗಿ ತೆಗೆದುಕೊಳ್ಳಿ ಮತ್ತು ಹಬ್ಬವನ್ನು ಯಶಸ್ವಿಯಾಗಿ ಆಚರಿಸೋಣ. 15 ದಿನದೊಳಗೆ ಮಸೀದಿ ನಿಷೇಧಿಸಿ, ಅದರ ಪದಾಧಿಕಾರಿಗಳನ್ನು ಜೈಲಿಗಟ್ಟದಿದ್ದರೆ ನಾವು ಮುಂದಿನ ಹಂತಕ್ಕೆ ಹೋರಾಟ ತೆಗೆದುಕೊಂಡು ಹೋಗ್ತೀವಿ” ಎಂದು ಘೋಷಿಸಿದ್ದಾರೆ.
ಜಿಲ್ಲಾಡಳಿತದ ಹತ್ತಿಕ್ಕುವ ಪ್ರಯತ್ನಕ್ಕೆ ಆಕ್ರೋಶ
“ಈ ನಮ್ಮ ಹೋರಾಟ ಮತ್ತು ಪ್ರತಿಭಟನೆಯನ್ನು ಹತ್ತಿಕ್ಕಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಹಳ ಪ್ರಯತ್ನ ಮಾಡಿದೆ. ಜಿಲ್ಲೆಯ ಎಲ್ಲಾ ಕಾರ್ಯಕರ್ತರಿಗೆ ನೋಟಿಸ್ ಕೊಡಲಾಗಿದೆ, ಠಾಣೆಗಳಲ್ಲಿ ಶಾಂತಿ ಸಭೆ ಮಾಡಲಾಗಿದೆ. ಪ್ರತಿಭಟನೆಯ ಸ್ಥಳವನ್ನೂ ಬದಲಾಯಿಸಲಾಗಿದೆ. ಆದರೆ ಈ ಹೋರಾಟ ಇಲ್ಲಿಗೆ ನಿಲ್ಲಲ್ಲ” ಎಂದು ಮುಖಂಡರು ಸ್ಪಷ್ಟಪಡಿಸಿದರು.
ಧರಣಿಯಲ್ಲಿ ಹಂಸನೂರು ಶ್ರೀಗಳು ಸಾನಿಧ್ಯ ವಹಿಸಿದ್ದರು. ಸಂಸದ ಪಿ.ಸಿ. ಗದ್ದಿಗೌಡರ, ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ, ರಾಜಶೇಖರ ಶೀಲವಂತ ಸೇರಿದಂತೆ ಸಾವಿರಾರು ಗಣ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಬಾಗಲಕೋಟೆ ಜಿಲ್ಲಾಡಳಿತದ ಮುಂದೆ ಈಗ 15 ದಿನಗಳ ಕಾಲಮಿತಿ ಇದೆ. ಈ ಗಡುವು ಮುಗಿದ ನಂತರ ಪರಿಸ್ಥಿತಿ ಯಾವ ತಿರುವು ಪಡೆಯಲಿದೆ ಎಂಬುದು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ.

