Homeವಿಶ್ಲೇಷಣೆBagalkot Medical college: ಬೂಟ್ ಪಾಲಿಶ್ ಚಳವಳಿಯಿಂದ ಶಂಕುಸ್ಥಾಪನೆಯವರೆಗೆ; ಜಿಲ್ಲಾ ನಾಯಕರ ಪಿತೂರಿ ಬಯಲು ಮಾಡಿದ...

Bagalkot Medical college: ಬೂಟ್ ಪಾಲಿಶ್ ಚಳವಳಿಯಿಂದ ಶಂಕುಸ್ಥಾಪನೆಯವರೆಗೆ; ಜಿಲ್ಲಾ ನಾಯಕರ ಪಿತೂರಿ ಬಯಲು ಮಾಡಿದ ಬದ್ನೂರ್!

ಬಾಗಲಕೋಟೆ: ದಶಕಗಳ ಕಾಲದ ನಿರಂತರ ಹೋರಾಟ, ಬೀದಿಗೆ ಬಂದು ಮಾಡಿದ ಬೂಟ್ ಪಾಲಿಷ್ ಚಳವಳಿ, ರಾಜಕೀಯ ಪಿತೂರಿಗಳು ಹಾಗೂ ಅಡೆತಡೆಗಳನ್ನ ಮೆಟ್ಟಿ ನಿಂತ ಬಾಗಲಕೋಟೆ ಜನರ ದೀರ್ಘಕಾಲದ ಕನಸು ಈಗ ನನಸಾಗುವ ಹಾದಿಯಲ್ಲಿದೆ. ನಾಳೆ (ಮಾರ್ಚ್ 14ರಂದು) ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೆಡಿಕಲ್ ಕಾಲೇಜಿನ (Bagalkot Medical college) ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಈ ಐತಿಹಾಸಿಕ ಕ್ಷಣದಲ್ಲಿ, ಈ ಹೋರಾಟದ ಮುಂಚೂಣಿ ನಾಯಕ, ಅಂದಿನ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ (Ramesh Badnur) ಅವರು ‘ಅಸಲಿ ಸುದ್ದಿ’ ಜೊತೆ ಮಾತನಾಡಿ, ಬಾಗಲಕೋಟೆ ಜಿಲ್ಲೆಯ ರಾಜಕೀಯ ಮುಖಂಡರ ದ್ವಂದ್ವ ನೀತಿ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದ ಸಿಕ್ರೆಟ್ ಅನ್ನು ಬಿಚ್ಚಿಟ್ಟಿದ್ದಾರೆ.

12 ವರ್ಷಗಳ ಸುದೀರ್ಘ ಹೋರಾಟದ ಹಾದಿ

ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಬೇಕೆಂಬ ಬೇಡಿಕೆ ಇಂದಿನದಲ್ಲ. 2014-15ರಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರ ಈ ಬಗ್ಗೆ ಘೋಷಣೆ ಮಾಡಿತ್ತಾದರೂ, ಇಂಡಿಯನ್ ಮೆಡಿಕಲ್ ಕೌನ್ಸಿಲ್ (IMC) ತಾಂತ್ರಿಕ ತೊಂದರೆ ಮತ್ತು ಸ್ಥಳೀಯ ರಾಜಕೀಯ ಅಸಹಕಾರದಿಂದಾಗಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಅಂದಿನಿಂದ ಈವರೆಗೂ ಅಂದರೆ ಸುಮಾರು 12 ವರ್ಷಗಳ ಕಾಲ ನಿರಂತರ ಹೋರಾಟ ನಡೆದಿದೆ. ಈ ಹೋರಾಟದಲ್ಲಿ ಕರವೇ ಜಿಲ್ಲಾಧ್ಯಕ್ಷರಾಗಿದ್ದ ರಮೇಶ್ ಬದ್ನೂರ್ ಅವರ ನೇತೃತ್ವದಲ್ಲಿ ಬಸವರಾಜ್ ಧರ್ಮಂತಿ, ಮಲ್ಲು ಕಟ್ಟಿಮಣಿ, ಆತ್ಮಾರಾಮ ನೀಲ್ ನಾಯಕರು, ಬಸವರಾಜ ಅಮಗರ, ಭಾಗ್ಯ ಬಿಟ್ಟಗೇರಿ, ಮಂಜು ಪವಾರ್, ರಂಜಾನ್ ನದಾಫ್ ಸೇರಿದಂತೆ ಹತ್ತಾರು ಯುವ ಮಿತ್ರರು ಬೀದಿಗಿಳಿದು ಹೋರಾಡಿದ್ದರು. ಈ ಹೋರಾಟಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ನಾಡಗೌಡ ಅವರು ಮಾರ್ಗದರ್ಶನ ನೀಡಿ ಬೆನ್ನಲುಬಾಗಿ ನಿಂತಿದ್ದರು.

ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ನಾಡಗೌಡ ಮಾರ್ಗದರ್ಶನ

ಚರಂತಿಮಠ ಅವರದ್ದು ಕೇವಲ ಅಧಿವೇಶನದ ನಾಟಕ: ಬದ್ನೂರ್ ಆಕ್ರೋಶ

ಮೆಡಿಕಲ್ ಕಾಲೇಜು ವಿಚಾರದಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಅಧಿವೇಶನದಲ್ಲಿ ಧ್ವನಿ ಎತ್ತಿದ್ದ ವಿಡಿಯೋ ವೈರಲ್ ಆಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್ ಬದ್ನೂರ್ ಅವರು, “ಚರಂತಿಮಠ ಅವರು ಅಧಿವೇಶನದಲ್ಲಿ ಮಾತನಾಡಿದ್ದು ಕೇವಲ ಒಂದು ನಾಟಕವಷ್ಟೇ,” ಎಂದು ನೇರವಾಗಿ ಟೀಕಿಸಿದರು.

“ಅವರು ಅಧಿವೇಶನದಲ್ಲಿ ಮಾತನಾಡುವ ಅವಶ್ಯಕತೆಯಾಗಲಿ, ಅನಿವಾರ್ಯತೆಯಾಗಲಿ ಅಂದು ಇರಲಿಲ್ಲ. ಏಕೆಂದರೆ, ಅವರು ಅಂದು ವಿರೋಧ ಪಕ್ಷದಲ್ಲಿದ್ದು ಧ್ವನಿ ಎತ್ತಿದ್ದರೆ ಅದಕ್ಕೊಂದು ತೂಕವಿರುತ್ತಿತ್ತು. ಆದರೆ ರಾಜ್ಯದಲ್ಲಿ ಅಂದು ಅವರದ್ದೇ ಸರ್ಕಾರವಿತ್ತು. ಅವರು ಶಾಸಕರಾಗಿ, ಪ್ರಭಾವಿ ನಾಯಕರಾಗಿ ನೇರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಅಧಿಕೃತವಾಗಿ ಮೆಡಿಕಲ್ ಕಾಲೇಜಿಗೆ ಅನುದಾನ ತರಬಹುದಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ. ಬದಲಿಗೆ ಅಧಿವೇಶನದಲ್ಲಿ ಮಾತನಾಡಿ, ತಾನು ಮೆಡಿಕಲ್ ಕಾಲೇಜು ವಿರೋಧಿ ಅಲ್ಲ ಎಂದು ಜನರ ಮುಂದೆ ಪ್ರೊಜೆಕ್ಟ್ ಮಾಡಿಕೊಳ್ಳುವ ಹುನ್ನಾರ ನಡೆಸಿದರು” ಎಂದು ಬದ್ನೂರ್ ಹರಿಹಾಯ್ದರು.

ಇದನ್ನೂ ಓದಿ: Bagalkot: ಮಾಜಿ ಶಾಸಕನ ಅಬ್ಬರಕ್ಕೆ ಸೈಲೆಂಟ್ ಆದರೇ ಎಸ್‌ಪಿ? ‘ಧಮ್ಮು ತಾಕತ್‌’ ಮಾತಿಗೆ ಪೊಲೀಸರು ಕಕ್ಕಾಬಿಕ್ಕಿ!

ಬೊಮ್ಮಾಯಿ ಬಿಚ್ಚಿಟ್ಟ ಆ ‘ಸಿಕ್ರೆಟ್’: ಜಿಲ್ಲಾ ನಾಯಕರೇ ಮೆಡಿಕಲ್ ಕಾಲೇಜಿಗೆ ಅಡ್ಡಿ?

ಈ ಹೋರಾಟದ ಹಾದಿಯಲ್ಲಿ ರಮೇಶ್ ಬದ್ನೂರ್ ಅವರು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ನಡೆದ ಒಂದು ಆಘಾತಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ.

“ಬೇರೆ ಜಿಲ್ಲೆಯವರು ತಮ್ಮ ಜಿಲ್ಲೆಗೆ ಅನುದಾನ ಬೇಕು ಎಂದು ನಿಯೋಗದೊಂದಿಗೆ ಬರುತ್ತಾರೆ. ಆದರೆ ಬಾಗಲಕೋಟೆ ಜಿಲ್ಲೆಯ ಪ್ರಭಾವಿ ನಾಯಕರ ನಿಯೋಗವು ಮೆಡಿಕಲ್ ಕಾಲೇಜಿಗೆ ಅನುದಾನ ಕೊಡಬೇಡಿ ಎಂದು ನನ್ನ ಬಳಿ ಬಂದಿತ್ತು ಎಂದು ಸ್ವತಃ ಬೊಮ್ಮಾಯಿ ಅವರೇ ಹೇಳಿದ್ದರು,” ಎಂಬ ಸ್ಫೋಟಕ ಮಾಹಿತಿಯನ್ನು ಬದ್ನೂರ್ ಬಿಚ್ಚಿಟ್ಟರು.

ಆ ನಿಯೋಗದ ನೇತೃತ್ವವನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ವಹಿಸಿದ್ದರು. ಗೋವಿಂದ ಕಾರಜೋಳ, ವೀರಣ್ಣ ಚರಂತಿಮಠ ಹಾಗೂ ದೊಡ್ಡನಗೌಡ ಪಾಟೀಲ್ ಸೇರಿದಂತೆ ಹಲವು ಪ್ರಮುಖರು ಆ ನಿಯೋಗದಲ್ಲಿದ್ದರು. “ಒಂದು ವೇಳೆ ಅವರ ಮಾತು ಧಿಕ್ಕರಿಸಿ ನಿಮ್ಮ ಜಿಲ್ಲೆಗೆ ಮೆಡಿಕಲ್ ಕಾಲೇಜಿಗೆ ಅನುದಾನ ನೀಡಿದರೆ, ನನ್ನ ಕುರ್ಚಿಗೇ ಕಂಟಕ ಬರುತ್ತದೆ ಎಂದು ಬೊಮ್ಮಾಯಿ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದರು,” ಎಂದು ಬದ್ನೂರ್ ಅವರು ಜಿಲ್ಲಾ ನಾಯಕರ ಬಣ್ಣವನ್ನು ಬಯಲು ಮಾಡಿದರು.

ಹೋರಾಟದ ವಿವಿಧ ಮಜಲುಗಳು: ಬೂಟ್ ಪಾಲಿಷ್‌ನಿಂದ ದೀಡ ನಮಸ್ಕಾರದವರೆಗೆ

ಈ 12 ವರ್ಷಗಳಲ್ಲಿ ಹೋರಾಟಗಾರರು ನಡೆಸಿದ ಚಳವಳಿಗಳು ಒಂದೆರಡಲ್ಲ. 2018ರ ಅವಧಿಯಲ್ಲಿ ಮೆಡಿಕಲ್ ಕಾಲೇಜು ಹೋರಾಟ ತೀವ್ರಗೊಂಡಾಗ ಕರವೇ ವತಿಯಿಂದ ‘ಬೂಟ್ ಪಾಲಿಷ್’ ಅಭಿಯಾನ ನಡೆಸಲಾಯಿತು. “ನಾವು ಬೂಟ್ ಪಾಲಿಷ್ ಮಾಡಿ ಹಣ ಸಂಗ್ರಹಿಸುತ್ತಿದ್ದಾಗ ಚರಂತಿಮಠ ಅವರು ನನ್ನನ್ನು ಅಪಹಾಸ್ಯ ಮಾಡಿದ್ದರು. ‘ಜಿಲ್ಲೆಯಾದ್ಯಂತ ಬೂಟ್ ಪಾಲಿಷ್ ಮಾಡು, ಇನ್ನು ಹಣ ಸಂಗ್ರಹವಾಗುತ್ತದೆ’ ಎಂದು ವ್ಯಂಗ್ಯವಾಡಿದ್ದರು. ಅವರ ಈ ವ್ಯಂಗ್ಯವನ್ನೇ ಸವಾಲಾಗಿ ಸ್ವೀಕರಿಸಿದ ನಾವು ಜಿಲ್ಲಾದ್ಯಂತ ಮಾತ್ರವಲ್ಲದೇ ಹುಬ್ಬಳ್ಳಿಯಲ್ಲಿ ಹಾಗೂ ಬೆಳಗಾವಿ ಅಧಿವೇಶನ ಹಾಗೂ ಬೆಂಗಳೂರಿನಲ್ಲೂ ಬೂಟ್ ಪಾಲಿಷ್ ಮಾಡಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದೆವು,” ಎಂದು ಬದ್ನೂರ್ ಸ್ಮರಿಸಿದರು.

ಈ ಹೋರಾಟದಲ್ಲಿ ಬಿಗ್ ಬಾಸ್‌ನ ಈ ಹಿಂದಿನ ಸೀಜನ್ ಸ್ಪರ್ಧಿ ಅಶ್ವಿನಿ ಗೌಡ ಅವರು ಕೂಡ ಭಾಗಿಯಾಗಿ ದನಿಯಾಗಿದ್ದರು. ತದನಂತರ ಕರವೇ ಜಿಲ್ಲಾಧ್ಯಕ್ಷರಾದ ಬಸವರಾಜ್ ಧರ್ಮಂತಿ ಅವರು ಈ ಕಿಚ್ಚನ್ನು ಮುಂದುವರಿಸಿದರು. ಜಿಲ್ಲಾಡಳಿತ ಭವನದಿಂದ ಶಾಸಕರ ಮನೆವರೆಗೆ ‘ದೀಡ ನಮಸ್ಕಾರ’ ಹಾಕುವ ಮೂಲಕ ಗಮನ ಸೆಳೆದಿದ್ದರು. ಸಾರ್ವಜನಿಕವಾಗಿ ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿ ಸರ್ಕಾರಕ್ಕೆ ನೀಡುವ ಮೂಲಕ ಜಿಲ್ಲಾ ನಾಯಕರ ಇಚ್ಛಾಶಕ್ತಿಯ ಕೊರತೆಯನ್ನು ಅಣಕಿಸಿದ್ದರು. ಈ ಸಂದರ್ಭದಲ್ಲಿ ಹೋರಾಟಗಾರರ ಮೇಲೆ ಪೊಲೀಸ್ ಕೇಸುಗಳನ್ನು ಹಾಕಿ ಹತ್ತಿಕ್ಕುವ ಪ್ರಯತ್ನಗಳು ನಿರಂತರವಾಗಿ ನಡೆದವು.

ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ, ನಟಿ ಅಶ್ವಿನಿ ಗೌಡ ಚಳುವಳಿಯಲ್ಲಿ ಭಾಗಿ

ಅಟ್ರಾಸಿಟಿ ಕೇಸ್ ಎಂಬ ಹತ್ತಿಕ್ಕುವ ತಂತ್ರ

ರಮೇಶ್ ಬದ್ನೂರ್ ಅವರು ಆರೋಪಿಸುವಂತೆ, “ನಮ್ಮ ಹೋರಾಟವನ್ನು ಹತ್ತಿಕ್ಕಲು ಚರಂತಿಮಠ ಅವರು ಸಮಗಾರ ಸಮುದಾಯದವರನ್ನು ಮುಂದೆ ಬಿಟ್ಟು ನನ್ನ ಮೇಲೆ ಸುಮಾರು 10 ಅಟ್ರಾಸಿಟಿ ಪ್ರಕರಣಗಳನ್ನು ದಾಖಲಿಸಿದರು. ಅಷ್ಟೇ ಅಲ್ಲದೆ, ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಭೂಮಿಯೇ ಲಭ್ಯವಿಲ್ಲ ಎಂದು ಅಧಿಕಾರಿಗಳಿಂದ ಬರೆಸುವ ಮೂಲಕ ಈ ಯೋಜನೆಗೆ ತಣ್ಣೀರು ಸುರಿಯಲು ಪ್ರಯತ್ನಿಸಿದ್ದರು.” ಇಷ್ಟೆಲ್ಲಾ ಕಿರುಕುಳದ ನಡುವೆಯೂ ಹೋರಾಟಗಾರರು ಹಿಂದೆ ಸರಿಯಲಿಲ್ಲ.

ಇದನ್ನೂ ಓದಿ: Bagalkot: ಕೇಸರಿ ಪಡೆಯ ‘ಡೆಡ್‌ಲೈನ್’ಗೆ ಡೋಂಟ್‌ ಕೇರ್! ಎಸ್‌ಪಿ ಸಿದ್ದಾರ್ಥ ಗೋಯಲ್ ಖಡಕ್ ‘ದಂಡಯಾತ್ರೆ’

ನಿರಂತರ ಪ್ರಯತ್ನಕ್ಕೆ ಸಂದ ಜಯ

ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯನವರನ್ನು ಬಾಗಲಕೋಟೆಯ ಬಸ್ತಿಗೆ ಅಡ್ಡಗಟ್ಟಿ ಹೋರಾಟಗಾರರು ಒತ್ತಾಯಿಸಿದ್ದರು. “ನಾನೇ ಮುಖ್ಯಮಂತ್ರಿಯಾದರೆ ಬಾಗಲಕೋಟೆಗೆ ಮೆಡಿಕಲ್ ಕಾಲೇಜು ನೀಡುತ್ತೇನೆ” ಎಂದು ಸಿದ್ದರಾಮಯ್ಯ ಅಂದು ಭರವಸೆ ನೀಡಿದ್ದರು. ಅದರಂತೆ, 2026ರ ಬಜೆಟ್‌ನಲ್ಲಿ 450 ಕೋಟಿ ರೂ. ಅನುದಾನ ಮೀಸಲಿಟ್ಟು, ಈಗ ಶಂಕುಸ್ಥಾಪನೆಗೆ ದಿನ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ದಿ. ಎಚ್.ವೈ. ಮೇಟಿಯವರ ಕೊಡುಗೆಯನ್ನು ಹೋರಾಟಗಾರರು ಸ್ಮರಿಸುತ್ತಾರೆ.

ಕೊನೆಯದಾಗಿ ರಮೇಶ್ ಬದ್ನೂರ್ ಅವರು, “ಎಷ್ಟೇ ಅಡೆತಡೆಗಳು ಬಂದರೂ, ಕೇಸ್‌ಗಳನ್ನು ಹಾಕಿದರೂ ನಾವು ಹೆದರಲಿಲ್ಲ. ಇಂದು ಬಾಗಲಕೋಟೆಯ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಸಿಗಲಿದೆ ಎಂಬುದು ನಮಗೆ ಅತ್ಯಂತ ಸಂತಸ ತಂದಿದೆ,” ಎಂದು ಹೇಳುವ ಮೂಲಕ ತಮ್ಮ ಹೋರಾಟದ ಸಾರ್ಥಕತೆಯನ್ನು ಹಂಚಿಕೊಂಡರು.

ಬಾಗಲಕೋಟೆಯ ಇತಿಹಾಸದಲ್ಲಿ ಈ ಮೆಡಿಕಲ್ ಕಾಲೇಜು ಹೋರಾಟವು ಒಂದು ಮೈಲಿಗಲ್ಲಾಗಿ ಉಳಿಯಲಿದೆ. ಅಧಿಕಾರದ ದರ್ಪ ಮತ್ತು ರಾಜಕೀಯ ತಂತ್ರಗಾರಿಕೆಯ ನಡುವೆಯೂ ಜನರ ಹಿತಕ್ಕಾಗಿ ನಡೆದ ಹೋರಾಟಕ್ಕೆ ಇಂದು ನ್ಯಾಯ ಸಿಕ್ಕಂತಾಗಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments