ಬಾಗಲಕೋಟೆ (Bagalkot): ಹಸಿರು ಮತ್ತು ಕೇಸರಿಯ ಸಂಘರ್ಷಕ್ಕೆ ಹೆಸರಾಗಿದ್ದ ಬಾಗಲಕೋಟೆ ಜಿಲ್ಲೆ ಈಗಷ್ಟೇ ತಣ್ಣಗಾಗುತ್ತಿದೆ ಎನ್ನುವಾಗಲೇ, ಹಸುಳೆಗಳ ಮನಸ್ಸಿನಲ್ಲಿ ಕೋಮುವಾದದ ವಿಷಬೀಜ ಬಿತ್ತುತ್ತಿರುವ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ಕೇವಲ 12 ವರ್ಷದ ಬಾಲಕನೊಬ್ಬ ಮಸೀದಿಯ ಮುಂದೆ ಘೋಷಣೆ ಬರೆಯುವಂತೆ ಪ್ರಚೋದಿಸಿದ ಘಟನೆ ಜಿಲ್ಲೆಯ ಪ್ರಜ್ಞಾವಂತರನ್ನು ಬೆಚ್ಚಿಬೀಳಿಸಿದೆ.
ಘಟನೆಯ ಹಿನ್ನೆಲೆ: ಕೆಂಡದಂತಿದ್ದ ಬಾಗಲಕೋಟೆ
ಕಳೆದ ಕೆಲವು ದಿನಗಳಿಂದ ಬಾಗಲಕೋಟೆ (Bagalkot) ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಿತ್ತು. ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ಮಸೀದಿಯಿಂದ ಚಪ್ಪಲಿ ಎಸೆಯಲಾಯಿತು ಎನ್ನುವ ಕಿಡಿ ಇಡೀ ನಗರವನ್ನೇ ಆವರಿಸಿತ್ತು. ಇದರ ಬೆನ್ನಲ್ಲೇ ತಡರಾತ್ರಿ ಮುಸ್ಲಿಂ ಸಮುದಾಯದ ಬಡ ವ್ಯಾಪಾರಿಗಳ ತಳ್ಳುಗಾಡಿಗಳಿಗೆ ಬೆಂಕಿ ಹಚ್ಚುವ ಮೂಲಕ ಕಿಡಿಗೇಡಿಗಳು ತಮ್ಮ ವಿಕೃತಿ ಮೆರೆದಿದ್ದರು. ಬಿಜೆಪಿ ಬೆಂಬಲಿತ ಸಂಘಟನೆಗಳು ಈ ವಿಚಾರವನ್ನೇ ಮುಂದಿಟ್ಟುಕೊಂಡು ನಗರದಲ್ಲಿ ದೊಡ್ಡ ಮಟ್ಟದ ಗಲಭೆ ಸೃಷ್ಟಿಸಲು ಹೊಂಚು ಹಾಕಿದ್ದವು ಎನ್ನುವ ಮಾತುಗಳು ಕೇಳಿಬಂದಿದ್ದವು. ಮಸೀದಿಗಳ ಮೇಲೆ ಕಲ್ಲು ತೂರಾಟದ ಯತ್ನ, ಲಾಠಿ ಚಾರ್ಜ್‌ಗಳ ನಡುವೆ ನಗರ ಅಕ್ಷರಶಃ ಯುದ್ಧಭೂಮಿಯಾಗಿತ್ತು.
ಪೊಲೀಸರ ಚಾಣಾಕ್ಷತೆ ಮತ್ತು ಶಾಂತಿ ಕಾಪಾಡಿದ ‘ಐವರು ಎಸ್‌ಪಿಗಳುʼ
ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸರ್ಕಾರ, ಜಿಲ್ಲಾ ಎಸ್‌ಪಿ ಸಿದ್ದಾರ್ಥ ಗೋಯಲ್ ಅವರಿಗೆ ಸಾಥ್ ನೀಡಲು ಈ ಹಿಂದೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅನುಭವವಿರುವ ಇಬ್ಬರು ಎಸ್‌ಪಿಗಳು ಸೇರಿದಂತೆ ಒಟ್ಟು ಐವರು ಎಸ್‌ಪಿಗಳನ್ನು ಸ್ಥಳಕ್ಕೆ ನಿಯೋಜಿಸಿತ್ತು. ಪೊಲೀಸರ ಖಡಕ್ ನಿರ್ಧಾರದಿಂದಾಗಿ ಪ್ರತಿಭಟನೆಗಳು ದಿಕ್ಕು ಬದಲಿಸಿದವು. ಇತ್ತೀಚೆಗೆ ನಡೆದ ಆರ್‌ಎಸ್‌ಎಸ್ ಶತಮಾನೋತ್ಸವ ಮೆರವಣಿಗೆಯು ಮಸೀದಿ ಮುಂದೆ ಸಾಗಿದರೂ, ಕಿಡಿಗೇಡಿಗಳು ಬಾಲ ಬಿಚ್ಚದಂತೆ ಪೊಲೀಸರು ತೋರಿದ ಚಾಣಾಕ್ಷತನದಿಂದ ನಗರ ಮತ್ತೆ ಸಹಜ ಸ್ಥಿತಿಗೆ ಮರಳತೊಡಗಿತ್ತು.
ಇದನ್ನೂ ಓದಿ: Bagalkot: ಕೇಸರಿ ಪಡೆಯ ‘ಡೆಡ್‌ಲೈನ್’ಗೆ ಡೋಂಟ್ ಕೇರ್! ಎಸ್‌ಪಿ ಸಿದ್ದಾರ್ಥ ಗೋಯಲ್ ಖಡಕ್ ‘ದಂಡಯಾತ್ರೆ’
ಈಗಿನ ಕೃತ್ಯ: ಮಕ್ಕಳೇ ಕೋಮು ಕ್ರಿಮಿಗಳ ದಾಳ?
ಎಲ್ಲವೂ ತಣ್ಣಗಾಯಿತು ಎನ್ನುವಷ್ಟರಲ್ಲಿ ಮಾರ್ಚ್ 6ರಂದು ಮಧ್ಯಾಹ್ನ ನವನಗರದ ಸೆಕ್ಟರ್-44ರ ಮಸೀದಿಯ ಮುಂದೆ ಒಂದು ದುರದೃಷ್ಟಕರ ಘಟನೆ ನಡೆದಿದೆ. ಯಮುನೋರಿ ಬಜಂತ್ರಿ ಎಂಬ ಆಟೋ ಚಾಲಕ ತನ್ನೊಂದಿಗೆ ಆರು ಮಕ್ಕಳನ್ನು ಕರೆತಂದು, ಆ ಪೈಕಿ ಸುಮಾರು 12 ವರ್ಷದ ಬಾಲಕನ ಕೈಯಲ್ಲಿ ಹೋಳಿ ಬಣ್ಣ ಬಳಸಿ ಮಸೀದಿಯ ಮುಂದೆ “ಜೈ ಶ್ರೀರಾಮ” ಎಂದು ಬರೆಯಲು ಪ್ರಚೋದಿಸಿದ್ದಾನೆ.

ಈ ಇಡೀ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಯಮುನೋರಿಯನ್ನು ಬಂಧಿಸಿದ್ದಾರೆ. ಈತನ ವಿರುದ್ಧ ನವನಗರ ಠಾಣೆಯಲ್ಲಿ ಕ್ರೈಂ ನಂ. 39/2026ರಡಿ ಬಿಎನ್‌ಎಸ್ ಕಲಂ 299ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಕೃತ್ಯಕ್ಕೆ ಬಳಸಿಕೊಂಡ ಬಾಲಕನನ್ನು ಜುವೆನೈಲ್ ಜಸ್ಟಿಸ್ ಬೋರ್ಡ್ ಮುಂದೆ ಹಾಜರುಪಡಿಸಲಾಗುತ್ತಿದೆ.

ಮುಸ್ಲಿಂ ಸಮುದಾಯದ ಸಂಯಮಕ್ಕೆ ಶ್ಲಾಘನೆ
ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ಭಾವೋದ್ವೇಗಕ್ಕೆ ಒಳಗಾಗಿ ಗಲಭೆಗಳು ಸ್ಫೋಟಗೊಳ್ಳುತ್ತವೆ. ಆದರೆ, ಬಾಗಲಕೋಟೆಯ ಮುಸ್ಲಿಂ ಸಮುದಾಯದ ಮುಖಂಡರು ತೋರಿದ ಸಂಯಮ ಶ್ಲಾಘನೀಯ. ಘಟನೆಯನ್ನು ದೊಡ್ಡದು ಮಾಡದೆ, ಪೊಲೀಸರ ತನಿಖೆಗೆ ಪೂರ್ಣ ಸಹಕಾರ ನೀಡಿ ಶಾಂತಿ ಕಾಪಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮುನ್ನ ಎದುರಾಗಿದ್ದ ಚಪ್ಪಲಿ ತೂರಾಟ ಮತ್ತು ಅಂಗಡಿಗಳಿಗೆ ಬೆಂಕಿ ಇಟ್ಟ ಘಟನೆಗಳ ನಂತರವೂ ಈ ಸಮುದಾಯ ತೋರಿದ ಸೌಹಾರ್ದತೆ ಮಾದರಿಯಾಗಿದೆ.
‘ಅಸಲಿ ಸುದ್ದಿ’ಯ ಕಳಕಳಿ: ಇದು ಕೇವಲ ಕೃತ್ಯವಲ್ಲ, ಸಂಚು!
ಹನ್ನೆರಡು ವರ್ಷದ ಮಗುವಿಗೆ ಧರ್ಮ, ಮಸೀದಿ ಅಥವಾ ಘೋಷಣೆಗಳ ರಾಜಕೀಯ ಅರ್ಥವಾಗುವುದಿಲ್ಲ. ಅಂತಹ ಮಗುವಿನ ಕೈಗೆ ಬಣ್ಣ ನೀಡಿ ದ್ವೇಷದ ಘೋಷಣೆ ಬರೆಸುವ ಹಿಂದೆ ದೊಡ್ಡ ‘ಕೋಮು ಕ್ರಿಮಿಗಳ’ ಸಂಚು ಇದೆಯೇ ಎನ್ನುವ ಅನುಮಾನ ದಟ್ಟವಾಗಿದೆ. ಮಕ್ಕಳ ಮನಸ್ಸಿನಲ್ಲಿ ಈ ವಯಸ್ಸಿನಲ್ಲೇ ವಿಷ ಬಿತ್ತಿದರೆ, ಮುಂದಿನ ಸಮಾಜದ ಗತಿಯೇನು? ದ್ವೇಷದ ಕಾರ್ಖಾನೆಯಲ್ಲಿ ಮಕ್ಕಳನ್ನು ಕಾರ್ಮಿಕರನ್ನಾಗಿ ಬಳಸಿಕೊಳ್ಳುತ್ತಿರುವ ಈ ಪ್ರವೃತ್ತಿ ನಿಲ್ಲಬೇಕಿದೆ.
ಇದನ್ನೂ ಓದಿ: Bagalkote: ದೇಶಕ್ಕೆ ಸೈನಿಕ, ಹಳ್ಳಿಗೆ ದಲಿತ! ಸಾವಿನಲ್ಲೂ ಅಸ್ಪೃಶ್ಯತೆಯ ಅಟ್ಟಹಾಸ!
ಬಾಗಲಕೋಟೆ ಜಿಲ್ಲಾ ಪೊಲೀಸರು ಮನವಿ ಮಾಡಿರುವಂತೆ, ಪೋಷಕರು ಜವಾಬ್ದಾರಿಯಿಂದ ವರ್ತಿಸಬೇಕು. ನಿರಪರಾಧಿ ಮಕ್ಕಳನ್ನು ದ್ವೇಷ ಹರಡುವ ಕೃತ್ಯಗಳಿಗೆ ಬಳಸಿಕೊಳ್ಳುವುದು ದೊಡ್ಡ ಅಪರಾಧ. ಸಮಾಜದ ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದೇ ಈ ವಿಷ ವರ್ತುಲಕ್ಕೆ ಅಂತ್ಯ ಹಾಡಲು ಇರುವ ಏಕೈಕ ದಾರಿ.
ಅಸಲಿ ಸುದ್ದಿ – ಸತ್ಯದ ಪರ, ಸಮಾಜದ ಹಿತಕ್ಕಾಗಿ.

