Bagalkot By-Election: ರಾಜಕೀಯದಲ್ಲಿ ಅಧಿಕಾರಕ್ಕಾಗಿ ಯಾರ ಕಾಲು ಬೇಕಾದರೂ ಹಿಡಿಯಬಹುದು ಎಂಬ ಅಲಿಖಿತ ನಿಯಮವೊಂದಿದೆ. ಆದರೆ, ‘ಶಿಸ್ತಿನ ಪಕ್ಷ’, ‘ಸಿದ್ಧಾಂತದ ಅಡಿಪಾಯ’ ಎಂದು ಬೊಬ್ಬಿರಿಯುವ ಭಾರತೀಯ ಜನತಾ ಪಾರ್ಟಿ ಇಂದು ಬಾಗಲಕೋಟೆ ಉಪಚುನಾವಣೆಯ ಗೆಲುವಿಗಾಗಿ ತಲುಪಿರುವ ಅಧೋಗತಿ ನೋಡಿದರೆ, ಆ ಪಕ್ಷದ ಕಾರ್ಯಕರ್ತರೇ ತಲೆತಗ್ಗಿಸುವಂತಾಗಿದೆ. ತನ್ನನ್ನು, ತನ್ನ ತಂದೆಯನ್ನು, ಇಡೀ ಕುಟುಂಬವನ್ನು ‘ಲೂಟಿಕೋರರು’ ಎಂದು ಜರೆದ, ತನ್ನನ್ನು ‘ಬಚ್ಚಾ’ ಎಂದು ಹೀಯಾಳಿಸಿದ ವ್ಯಕ್ತಿಯ ಕಾಲಿಗೆ ಬಿದ್ದು ಪ್ರಚಾರಕ್ಕೆ ಬನ್ನಿ ಎಂದು ಪರೋಕ್ಷವಾಗಿ ಆಹ್ವಾನಿಸುತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಡೆ, ರಾಜ್ಯ ರಾಜಕಾರಣದ ಅತ್ಯಂತ ‘ದುರ್ಧೈವದ ಸಂಗತಿ’ ಎನ್ನದೆ ವಿಧಿಯಿಲ್ಲ.
ಲೂಟಿಕೋರ ಎಂದವನಿಗೆ ‘ರೆಡ್ ಕಾರ್ಪೆಟ್’ ಸ್ವಾಗತ!
ಕಳೆದ ಕೆಲವು ತಿಂಗಳುಗಳಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಡದ ಮಾತಿಲ್ಲ. ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರನ್ನು “ಅಪ್ಪ-ಮಕ್ಕಳು ರಾಜ್ಯವನ್ನು ಲೂಟಿ ಹೊಡೆದಿದ್ದಾರೆ”, “ವಿಜಯೇಂದ್ರ ಇನ್ನೂ ರಾಜಕೀಯದ ಬಚ್ಚಾ”, “ಶಿಕಾರಿಪುರದ ಕುಟುಂಬದ ಹಿಡಿತದಿಂದ ಪಕ್ಷ ಮುಕ್ತವಾಗಬೇಕು” ಎಂದು ಬೀದಿ ಬೀದಿಯಲ್ಲಿ ಬೊಬ್ಬಿರಿದಿದ್ದರು. ಪಕ್ಷದಿಂದ ಉಚ್ಚಾಟಿತರಾಗಿರುವ ಒಬ್ಬ ಶಾಸಕ, ತನ್ನದೇ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಇಷ್ಟೊಂದು ಕೀಳುಮಟ್ಟದ ವಾಗ್ದಾಳಿ ನಡೆಸುತ್ತಿದ್ದರೂ, ಇಂದು ಅದೇ ಅಧ್ಯಕ್ಷರು ಬಾಗಲಕೋಟೆಯಲ್ಲಿ “ಯತ್ನಾಳ್ ಪ್ರಚಾರ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ” ಎಂದು ಹೇಳುತ್ತಿರುವುದು ಬಿಜೆಪಿಯ ಅಸಹಾಯಕತೆಯನ್ನು ಬೆತ್ತಲೆ ಮಾಡಿದೆ.
ಒಬ್ಬ ಸ್ವಾಭಿಮಾನಿ ನಾಯಕನಾಗಿದ್ದರೆ, ತನ್ನ ಕುಟುಂಬವನ್ನು ಮತ್ತು ತನ್ನನ್ನು ಅಷ್ಟೊಂದು ಹೀನಾಯವಾಗಿ ನಿಂದಿಸಿದ ವ್ಯಕ್ತಿಯನ್ನು ಪಕ್ಷದ ಚೌಕಟ್ಟಿನಿಂದ ದೂರ ಇಡಬೇಕಿತ್ತು. ಆದರೆ, ವಿಜಯೇಂದ್ರ ಇಲ್ಲಿ ಕೇವಲ ಒಂದು ಉಪಚುನಾವಣೆಯ ಗೆಲುವಿಗಾಗಿ ತನ್ನೆಲ್ಲಾ ಆತ್ಮಗೌರವವನ್ನು ಅಡವಿಟ್ಟಂತೆ ಭಾಸವಾಗುತ್ತಿದೆ. ಇದು ವಿಜಯೇಂದ್ರ ಅವರ ವ್ಯಕ್ತಿತ್ವಕ್ಕೆ ಬಿದ್ದ ದೊಡ್ಡ ಹೊಡೆತ ಮಾತ್ರವಲ್ಲ, ಒಬ್ಬ ರಾಜ್ಯಾಧ್ಯಕ್ಷನಾಗಿ ಅವರು ಎಷ್ಟು ದುರ್ಬಲರಾಗಿದ್ದಾರೆ ಎಂಬುದಕ್ಕೆ ಸಾಕ್ಷಿ.
ಶಿಸ್ತಿನ ಪಕ್ಷಕ್ಕೆ ಅಂಟಿದ ‘ಅನಿವಾರ್ಯತೆ’ಯ ಶಾಪ
ಬಿಜೆಪಿ ಯಾವಾಗಲೂ “ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು” ಎಂಬ ಘೋಷಣೆ ಕೂಗುತ್ತದೆ. ಆದರೆ ಬಾಗಲಕೋಟೆಯಲ್ಲಿ “ಸಿದ್ಧಾಂತಕ್ಕಿಂತ ಸೀಟು ದೊಡ್ಡದು” ಎಂಬುದು ಸಾಬೀತಾಗಿದೆ. ಶ್ರೀರಾಮುಲು ಅವರು ಯತ್ನಾಳ್ ಅವರನ್ನು “ನಮ್ಮ ನಾಯಕ” ಎಂದು ಘೋಷಿಸಿದಾಗಲೂ ಸುಮ್ಮನಿದ್ದ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ, ಈಗ ವಿಜಯೇಂದ್ರ ಅವರ ಬಾಯಲ್ಲೇ ಯತ್ನಾಳ್ ಪರವಾಗಿ ಪರೋಕ್ಷ ಸ್ವಾಗತ ಕೋರಿಸಿರುವುದು ನಾಚಿಕೆಗೇಡಿನ ಸಂಗತಿ.
ಒಂದು ಉಪಚುನಾವಣೆಯ (Bagalkot By-Election) ಗೆಲುವಿಗಾಗಿ ಪಕ್ಷದ ಶಿಸ್ತನ್ನೇ ಗಾಳಿಗೆ ತೂರಿರುವುದು ರಾಷ್ಟ್ರೀಯ ಪಕ್ಷವೊಂದರ ಬೆಲೆ ಎಷ್ಟು ಎಂಬುದನ್ನು ಸಾರುತ್ತಿದೆ. ಬೀದಿಯಲ್ಲಿ ಹೋಗುವ ಸಾಮಾನ್ಯ ಜನರೂ “ಇದೇನಾ ನಿಮ್ಮ ಶಿಸ್ತು?” ಎಂದು ಪ್ರಶ್ನಿಸುತ್ತಿದ್ದಾರೆ. ಉಚ್ಚಾಟಿತ ಶಾಸಕನೊಬ್ಬನ ಪ್ರಭಾವಕ್ಕೆ ಹೆದರಿ ಶರಣಾಗುವ ಸ್ಥಿತಿ ಬಿಜೆಪಿಗೆ ಬಂದಿದೆ ಎಂದರೆ, ಆ ಪಕ್ಷದ ಆಂತರಿಕ ಶಕ್ತಿ ಎಷ್ಟು ಕುಸಿದಿದೆ ಎಂಬುದು ಸ್ಪಷ್ಟವಾಗುತ್ತದೆ.
ವಿಜಯೇಂದ್ರ ಅವರ ದ್ವಂದ್ವ ನಿಲುವು: ಹತಾಶೆಯ ಪರಮಾವಧಿ
ಬಾಗಲಕೋಟೆಯಲ್ಲಿ ವಿಜಯೇಂದ್ರ ನೀಡಿದ ಹೇಳಿಕೆ ಅವರ ಹತಾಶೆಯನ್ನು ಎತ್ತಿ ತೋರಿಸುತ್ತಿದೆ. “ಕಾಂಗ್ರೆಸ್‌ನವರೇ ನಮಗೆ ಒಳಗೊಳಗೆ ಸಹಾಯ ಮಾಡುತ್ತಿದ್ದಾರೆ, ಹಾಗಿರುವಾಗ ಬೇರೆಯವರು (ಯತ್ನಾಳ್) ಕೆಲಸ ಮಾಡುವುದರಲ್ಲಿ ತಪ್ಪೇನಿದೆ?” ಎಂಬ ಅವರ ಮಾತು ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್ ಸಹಾಯ ಮಾಡುತ್ತಿದೆ ಎಂಬುದು ಕೇವಲ ಒಂದು ಕುಂಟು ನೆಪ. ಅಸಲಿಗೆ, ಯತ್ನಾಳ್ ಅವರ ಪ್ರಚಾರವಿಲ್ಲದೆ ವೀರಣ್ಣ ಚರಂತಿಮಠ ಅವರು ಗೆಲ್ಲುವುದು ಕಷ್ಟ ಎಂಬ ಸತ್ಯ ವಿಜಯೇಂದ್ರ ಅವರಿಗೆ ಮನವರಿಕೆಯಾಗಿದೆ.
ತಮ್ಮನ್ನು ‘ಲೂಟಿಕೋರರು’ ಎಂದ ವ್ಯಕ್ತಿಯ ಎದುರು ಶರಣಾಗುವ ಮೂಲಕ ವಿಜಯೇಂದ್ರ ಅವರು ತಮ್ಮ ನಾಯಕತ್ವದ ಘನತೆಯನ್ನು ತಾವೇ ಮಣ್ಣುಪಾಲು ಮಾಡಿಕೊಂಡಿದ್ದಾರೆ. ಒಬ್ಬ ರಾಜ್ಯಾಧ್ಯಕ್ಷನಿಗೆ ಇರಬೇಕಾದ ಕನಿಷ್ಠ ಪಕ್ಷದ ಶಿಸ್ತು ಮತ್ತು ವೈಯಕ್ತಿಕ ಘನತೆ ಇಲ್ಲಿ ಮಾಯವಾಗಿದೆ. ಇದು ಬಿಜೆಪಿಯ ಸೋಲೋ ಅಥವಾ ಗೆಲುವೋ ಎಂಬುದು ಅಪ್ರಸ್ತುತ, ಆದರೆ ಇದು ನೈತಿಕವಾಗಿ ಬಿಜೆಪಿಯ ಪಾಲಿಗೆ ದೊಡ್ಡ ಸೋಲಾಗಿದೆ.
ಯತ್ನಾಳ್ ಅವರ ‘ಅಟ್ಟಹಾಸ’ಕ್ಕೆ ಸಿಕ್ಕ ಮನ್ನಣೆ
ಯತ್ನಾಳ್ ಅವರು ಇಂದು ಬಿಜೆಪಿಯಲ್ಲಿ ಯಾರನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಅವರು ಪಕ್ಷದ ವಿರುದ್ಧವೇ ಬಹಿರಂಗ ಸಮರ ಸಾರಿದವರು. ಅಂತಹ ವ್ಯಕ್ತಿಯನ್ನು ಮಣಿಸುವ ಬದಲು, ಅವರ ಕಾಲಿಗೆ ಬೀಳುವ ಸ್ಥಿತಿಗೆ ಬಿಜೆಪಿ ಅಧ್ಯಕ್ಷರು ಬಂದಿರುವುದು ಯತ್ನಾಳ್ ಅವರ ಅಟ್ಟಹಾಸಕ್ಕೆ ಸಿಕ್ಕ ಅಧಿಕೃತ ಮುದ್ರೆ. ವಿಜಯೇಂದ್ರ ಅವರು ತಮ್ಮನ್ನು ಟೀಕಿಸಿದವರನ್ನೇ ಬೆನ್ನಿಗೆ ಹಾಕಿಕೊಳ್ಳುವ ಮೂಲಕ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ. “ಪಕ್ಷದ ವಿರುದ್ಧ ಎಷ್ಟು ಬೇಕಾದರೂ ಬಯ್ಯಿರಿ, ಚುನಾವಣೆ ಬಂದಾಗ ನಿಮ್ಮ ಕಾಲು ಹಿಡಿಯುತ್ತೇವೆ” ಎಂಬ ಕೆಟ್ಟ ಸಂಪ್ರದಾಯಕ್ಕೆ ವಿಜಯೇಂದ್ರ ಮುನ್ನುಡಿ ಬರೆದಿದ್ದಾರೆ.
ಇದು ಬಿಜೆಪಿಯ ಇತಿಹಾಸದಲ್ಲಿಯೇ ಅತ್ಯಂತ ಕರಾಳ ದಿನಗಳಲ್ಲಿ ಒಂದು. ಒಂದು ಕಡೆ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆ ಎಂದು ಹೇಳುವ ವಿಜಯೇಂದ್ರ, ಮತ್ತೊಂದೆಡೆ ತಮ್ಮನ್ನು ಮತ್ತು ತಮ್ಮ ತಂದೆಯನ್ನು ಭ್ರಷ್ಟರು ಎಂದು ಕರೆದ ಯತ್ನಾಳ್ ಅವರ ಸಹಾಯ ಯಾಚಿಸುತ್ತಿದ್ದಾರೆ. ಇದು ಅವರ ವ್ಯಕ್ತಿತ್ವದ ದ್ವಂದ್ವತೆಯನ್ನು ತೋರಿಸುತ್ತದೆ.
ಒಂದು ಉಪಚುನಾವಣೆಯ ಗೆಲುವು ಪಕ್ಷಕ್ಕೆ ಒಂದು ಸೀಟು ತಂದುಕೊಡಬಹುದು, ಆದರೆ ಸಾರ್ವಜನಿಕವಾಗಿ ಪಕ್ಷ ಮತ್ತು ಅಧ್ಯಕ್ಷರು ಕಳೆದುಕೊಂಡಿರುವ ನೈತಿಕ ಬೆಲೆಯನ್ನು ಹೇಗೆ ಮರಳಿ ಪಡೆಯುತ್ತಾರೆ? “ಅಪ್ಪ-ಮಕ್ಕಳು ಲೂಟಿಕೋರರು” ಎಂಬ ಯತ್ನಾಳ್ ಮಾತನ್ನು ಒಪ್ಪಿಕೊಂಡೇ ವಿಜಯೇಂದ್ರ ಅವರು ಅವರ ಸಹಾಯ ಪಡೆಯುತ್ತಿದ್ದಾರೆಯೇ? ಎಂಬ ಪ್ರಶ್ನೆ ಈಗ ವಿರೋಧ ಪಕ್ಷಗಳಿಗಿಂತ ಹೆಚ್ಚಾಗಿ ಬಿಜೆಪಿಯ ಕಾರ್ಯಕರ್ತರನ್ನೇ ಕಾಡುತ್ತಿದೆ.
ಇದನ್ನೂ ಓದಿ: BJP Crisis: ಬಿಜೆಪಿಯಲ್ಲಿ ಅಸಲಿ ನಾಯಕ ಯಾರು? ವಿಜಯೇಂದ್ರನಾ ಅಥವಾ ಯತ್ನಾಳ್ ಅವರಾ? ರಾಮುಲು ನೀಡಿದ ‘ನಾಯಕ’ ಪಟ್ಟದ ಮರ್ಮವೇನು?
ಇದು ಬಿಜೆಪಿಗೆ ಬಂದೊದಗಿದ ದುರ್ಧೈವ!
ಒಟ್ಟಾರೆಯಾಗಿ ಹೇಳುವುದಾದರೆ, ಬಾಗಲಕೋಟೆಯ ಈ ಪ್ರಹಸನವು ಬಿಜೆಪಿಯ ದುಸ್ಥಿತಿಗೆ ಹಿಡಿದ ಕನ್ನಡಿ. ತನ್ನನ್ನು ಹೀನಾಯವಾಗಿ ಬೈದವನಿಗೇ ಶರಣಾಗುವ ರಾಜ್ಯಾಧ್ಯಕ್ಷ, ಶಿಸ್ತನ್ನೇ ಮರೆತ ರಾಷ್ಟ್ರೀಯ ಪಕ್ಷ, ಮತ್ತು ಗೆಲುವಿಗಾಗಿ ಯಾವುದೇ ರಾಜಿ ಮಾಡಿಕೊಳ್ಳುವ ಹಪಹಪಿ – ಇವೆಲ್ಲವೂ ಬಿಜೆಪಿಯ ನೈತಿಕ ಪತನವನ್ನು ಸಾರುತ್ತಿವೆ.
ಇದು ಕೇವಲ ವೀರಣ್ಣ ಚರಂತಿಮಠ ಅವರ ಗೆಲುವಿನ ಪ್ರಶ್ನೆಯಲ್ಲ, ಇದು ಬಿಜೆಪಿಯ ಆತ್ಮಗೌರವದ ಪ್ರಶ್ನೆ. ಆದರೆ ಆ ಆತ್ಮಗೌರವವನ್ನು ವಿಜಯೇಂದ್ರ ಅವರು ಉಪಚುನಾವಣೆಯ ಮಾರುಕಟ್ಟೆಯಲ್ಲಿ ಹರಾಜು ಹಾಕಿದ್ದಾರೆ. ಇದು ಬಿಜೆಪಿಗೆ ಮತ್ತು ಅದರ ರಾಜ್ಯಾಧ್ಯಕ್ಷರಿಗೆ ಬಂದೊದಗಿದ ಅತಿದೊಡ್ಡ ದುರ್ಧೈವ. ಈ ‘ಅಪವಿತ್ರ’ ಮೈತ್ರಿಯಿಂದ ಚುನಾವಣೆಯಲ್ಲಿ ಗೆಲುವು ಸಿಕ್ಕರೂ, ಪಕ್ಷದ ಒಳಗಿನ ಹುಣ್ಣು ಮಾತ್ರ ವಾಸಿಯಾಗುವುದು ಅಸಾಧ್ಯ.

