Homeರಾಜ್ಯBagalkot: ಜಾರಕಿಹೊಳಿ ಅಪ್ಪ-ಮಗನ ‘ಜುಗಲ್‌ಬಂದಿ’ಗೆ ಕಮಲ ಪಾಳಯ ತತ್ತರ!? ಅಹಿಂದ ಸುನಾಮಿಗೆ ಸಜ್ಜಾದ ಸಿದ್ದು-ಸತೀಶ್ ರಣತಂತ್ರ!

Bagalkot: ಜಾರಕಿಹೊಳಿ ಅಪ್ಪ-ಮಗನ ‘ಜುಗಲ್‌ಬಂದಿ’ಗೆ ಕಮಲ ಪಾಳಯ ತತ್ತರ!? ಅಹಿಂದ ಸುನಾಮಿಗೆ ಸಜ್ಜಾದ ಸಿದ್ದು-ಸತೀಶ್ ರಣತಂತ್ರ!

ಬಾಗಲಕೋಟೆಯ (Bagalkot) ಐತಿಹಾಸಿಕ ಮಣ್ಣಿನಲ್ಲಿ ಈಗ ಉಪಚುನಾವಣೆಯ ಕಾವು ಕೇವಲ ರಾಜಕೀಯ ಸಂಘರ್ಷವಾಗಿ ಉಳಿದಿಲ್ಲ; ಇದು ಅಸ್ತಿತ್ವದ ಹೋರಾಟ. ಈ ಬಾರಿಯ ಚುನಾವಣೆ ಕೇವಲ ಅಭ್ಯರ್ಥಿಗಳ ನಡುವಿನ ಯುದ್ಧವಲ್ಲ, ಬದಲಿಗೆ ರಾಜ್ಯ ರಾಜಕಾರಣದ ‘ಚುನಾವಣಾ ಚಾಣಕ್ಯ’ ಎಂದೇ ಗುರುತಿಸಲ್ಪಡುವ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಉತ್ತರಾಧಿಕಾರಿ ರಾಹುಲ್ ಜಾರಕಿಹೊಳಿ ಅವರ ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ. ಈ ಹಿಂದೆ ಶಿಗ್ಗಾವಿ ಮತ್ತು ಮುಧೋಳದಂತಹ ಕೇಸರಿ ಭದ್ರಕೋಟೆಗಳನ್ನು ಧೂಳೀಪಟ ಮಾಡಿದ ‘ಜಾರಕಿಹೊಳಿ ಮ್ಯಾಜಿಕ್’ ಈಗ ಬಾಗಲಕೋಟೆಯಲ್ಲೂ ಮರುಕಳಿಸುತ್ತದೆಯೇ ಎಂಬ ಕುತೂಹಲ ಗರಿ ಗೆದರಿದೆ. ಅಪ್ಪನ ನಿಖರ ರಣತಂತ್ರಕ್ಕೆ ಮಗನ ಯುವಶಕ್ತಿ ಜತೆಯಾಗಿರುವುದು ‘ಕೈ’ ಪಾಳೆಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಸತೀಶ್ ಜಾರಕಿಹೊಳಿ: ಶಿಗ್ಗಾವಿ ವಿಜೇತ ‘ಸೈಲೆಂಟ್ ಕಿಲ್ಲರ್’ ಈಗ ಬಾಗಲಕೋಟೆ ಸಾರಥಿ

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಸತ್ತಿಗೆ ಆಯ್ಕೆಯಾದಾಗ, ಶಿಗ್ಗಾವಿ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವುದು ಕಾಂಗ್ರೆಸ್‌ಗೆ ಅಸಾಧ್ಯದ ಮಾತಾಗಿತ್ತು. ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಂಬಿಕಸ್ತ ಬಂಟನಾಗಿ ಏಕಾಂಗಿಯಾಗಿ ಅಖಾಡಕ್ಕಿಳಿದು, ಕೇಸರಿ ಪಡೆಯ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ ಕ್ಷೇತ್ರವನ್ನು ಕಾಂಗ್ರೆಸ್ ಪಾಲಾಗುವಂತೆ ಮಾಡಿದವರು ಸತೀಶ್ ಜಾರಕಿಹೊಳಿ. ಅಬ್ಬರವಿಲ್ಲದ ಪ್ರಚಾರ, ಆದರೆ ವಿರೋಧಿಗಳಿಗೆ ತಿಳಿಯದಂತೆ ಮತಗಳನ್ನು ಸೆಳೆಯುವ ಅವರ ‘ಸೈಲೆಂಟ್’ ಶೈಲಿ ಈಗ ಬಾಗಲಕೋಟೆಯಲ್ಲೂ ಕೆಲಸ ಮಾಡುತ್ತಿದೆ.

ದಿವಂಗತ ಶಾಸಕ ಹೆಚ್.ವೈ. ಮೇಟಿಯವರ ನಿಧನದಿಂದ ತೆರವಾಗಿರುವ ಬಾಗಲಕೋಟೆ (Bagalkot) ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದಾಗ, ಪಕ್ಷದ ವರಿಷ್ಠರು ಯಾವುದೇ ಎರಡನೇ ಯೋಚನೆ ಮಾಡದೆ ಜವಾಬ್ದಾರಿಯನ್ನು ಜಾರಕಿಹೊಳಿ ಹೆಗಲಿಗೆ ಏರಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಬಾಗಲಕೋಟೆಗೆ ಎಂಟ್ರಿ ಕೊಟ್ಟಿದ್ದಾರೆ ಎಂದರೆ ಅಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಕತ್ತರಿ ಬೀಳುವುದು ಖಚಿತ ಎಂಬ ಆತಂಕ ಈಗಾಗಲೇ ಕಮಲ ಪಾಳೆಯದಲ್ಲಿ ಶುರುವಾಗಿದೆ.

ಇದನ್ನೂ ಓದಿ: Bagalkot BJP: ಶಕ್ತಿಪ್ರದರ್ಶನಕ್ಕೆ ಸೀಮಿತವಾದ್ರಾ ಘಟಾನುಘಟಿ ನಾಯಕರು? ಅಹಂನ ಸುಳಿಯಲ್ಲಿ ಸಿಲುಕಿ ಮತ್ತೆ ಒಂಟಿಯಾದ್ರಾ ಚರಂತಿಮಠ?

ರಾಹುಲ್ ಜಾರಕಿಹೊಳಿ ಎಂಟ್ರಿ: ಅಖಾಡಕ್ಕೆ ಅಪ್ಪ-ಮಗನ ಜುಗಲ್‌ಬಂದಿ

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಾಳೆಯದಲ್ಲಿ ಘಟಾನುಘಟಿಗಳು ಪ್ರಚಾರದ ಅಖಾಡಕ್ಕಿಳಿದಿದ್ದಾರೆ. ಇವರುಗಳ ಮಧ್ಯೆ ಸತೀಶ್ ಜಾರಕಿಹೊಳಿ ತಮ್ಮ ಪುತ್ರ ರಾಹುಲ್ ಜಾರಕಿಹೊಳಿ ಅವರನ್ನೂ ಅಖಾಡಕ್ಕಿಳಿಸಿರುವುದು ಈ ಚುನಾವಣೆಯ ಅತಿ ದೊಡ್ಡ ಹೈಲೈಟ್. ಇದು ಕೇವಲ ಒಬ್ಬ ಯುವ ನಾಯಕನ ಪ್ರಚಾರವಲ್ಲ, ಬದಲಿಗೆ ಜಾರಕಿಹೊಳಿ ಕುಟುಂಬದ ಮುಂದಾಲೋಚನೆಯ ರಾಜಕೀಯ ನಡೆ.

ರಾಹುಲ್ ಜಾರಕಿಹೊಳಿ ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಕ್ಷೇತ್ರದಲ್ಲಿನ ಯುವ ಮತದಾರರನ್ನು ಸೆಳೆಯುವುದು ಮತ್ತು ಅವರನ್ನು ಪಕ್ಷದತ್ತ ಕ್ರೋಢೀಕರಿಸುವುದು ರಾಹುಲ್ ಅವರ ಪ್ರಮುಖ ಕಾರ್ಯತಂತ್ರವಾಗಿದೆ. ಅವರು ಕ್ಷೇತ್ರದಲ್ಲಿ ಎಷ್ಟು ದಿನ ಬೀಡುಬಿಡಲಿದ್ದಾರೆ ಎಂಬುದು ವಿರೋಧ ಪಕ್ಷದ ನಿದ್ದೆಗೆಡಿಸಿದೆ. ಅಪ್ಪ ಹಿರಿಯರನ್ನು ಮತ್ತು ಸಮುದಾಯದ ಮುಖಂಡರನ್ನು ಒಗ್ಗೂಡಿಸುತ್ತಿದ್ದರೆ, ಮಗ ಯುವ ಸಮುದಾಯದ ಮನ ಗೆಲ್ಲುವ ಮೂಲಕ ಹೊಸ ರಾಜಕೀಯ ಸಮೀಕರಣಕ್ಕೆ ನಾಂದಿ ಹಾಡುತ್ತಿದ್ದಾರೆ.

ಮುಧೋಳದ ಇತಿಹಾಸ ಮತ್ತು ಕಾರಜೋಳರ ಎದುರಾಳಿ

ಸತೀಶ್ ಜಾರಕಿಹೊಳಿ ಅವರ ಶಕ್ತಿಯ ಬಗ್ಗೆ ಮಾತನಾಡಬೇಕೆಂದರೆ ಮುಧೋಳದ ಉದಾಹರಣೆಯೇ ಸಾಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಧೋಳ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಅವರು ಮಾಡಿದ ಮ್ಯಾಜಿಕ್‌ನಿಂದಾಗಿ ಸತತ ಐದು ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೋಲನ್ನು ಅನುಭವಿಸಬೇಕಾಯಿತು. ಆರ್.ಬಿ. ತಿಮ್ಮಾಪುರ ಅವರನ್ನು ಗೆಲ್ಲಿಸುವ ಮೂಲಕ ಕಾರಜೋಳರ ಭದ್ರಕೋಟೆಯನ್ನು ಜಾರಕಿಹೊಳಿ ನುಚ್ಚುನೂರು ಮಾಡಿದ್ದರು.

ಈಗ ಬಾಗಲಕೋಟೆಯಲ್ಲೂ ಅದೇ ಇತಿಹಾಸ ಮರುಕಳಿಸುವ ಮುನ್ಸೂಚನೆ ಸಿಗುತ್ತಿದೆ. ಕಾಕತಾಳೀಯವೆಂದರೆ, ಬಾಗಲಕೋಟೆ ಉಪಚುನಾವಣೆಯ ಬಿಜೆಪಿ ಉಸ್ತುವಾರಿ ಪಟ್ಟಿಯಲ್ಲಿ ಸಂಸದ ಗೋವಿಂದ ಕಾರಜೋಳರೂ ಇದ್ದಾರೆ. ಅಂದು ಮುಧೋಳದಲ್ಲಿ ಸೋಲಿನ ರುಚಿ ತೋರಿಸಿದ್ದ ಸತೀಶ್ ಜಾರಕಿಹೊಳಿ ಎದುರು ಇಂದು ಬಾಗಲಕೋಟೆಯಲ್ಲಿ ಕಾರಜೋಳರು ಮತ್ತೆ ಮುಖಾಮುಖಿಯಾಗುತ್ತಿದ್ದಾರೆ. ಇದು ಕೇವಲ ಚುನಾವಣೆ ಮಾತ್ರವಲ್ಲ, ಜಾರಕಿಹೊಳಿ ವರ್ಸಸ್ ಕಾರಜೋಳ ನಡುವಿನ ಪ್ರತಿಷ್ಠೆಯ ಕದನವೂ ಹೌದು.

ಇದನ್ನೂ ಓದಿ: Bagalkot Medical college: ಬೂಟ್ ಪಾಲಿಶ್ ಚಳವಳಿಯಿಂದ ಶಂಕುಸ್ಥಾಪನೆಯವರೆಗೆ; ಜಿಲ್ಲಾ ನಾಯಕರ ಪಿತೂರಿ ಬಯಲು ಮಾಡಿದ ಬದ್ನೂರ್!

ಸಿಎಂ ಸಿದ್ದರಾಮಯ್ಯ ಎಂಟ್ರಿ: ‘ಅಹಿಂದ’ ಬ್ರಹ್ಮಾಸ್ತ್ರದ ಬಳಕೆ

ಸತೀಶ್ ಜಾರಕಿಹೊಳಿ ಮತ್ತು ರಾಹುಲ್ ಜಾರಕಿಹೊಳಿ ಅಖಾಡ ಸಿದ್ಧಪಡಿಸಿದರೆ, ಅದಕ್ಕೆ ‘ಫಿನಿಶಿಂಗ್ ಟಚ್’ ನೀಡಲು ಈಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬಳಗ ಬಾಗಲಕೋಟೆಗೆ ಎಂಟ್ರಿ ಕೊಡುತ್ತಿದೆ. ಸಿದ್ದರಾಮಯ್ಯನವರು ನಾಳೆಯಿಂದ ನಾಲ್ಕು ದಿನಗಳ ಕಾಲ ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರತಿ ಗ್ರಾಮಗಳ ಪ್ರತಿ ಮನೆಯ ಬಾಗಿಲು ತಟ್ಟುವ ‘ಮೈಕ್ರೋ ಮ್ಯಾನೇಜ್‌ಮೆಂಟ್’ ತಂತ್ರ ಹೆಣೆದಿದ್ದಾರೆ.

  • ಜಾತಿವಾರು ರಣತಂತ್ರ: ಅಹಿಂದ ವರ್ಗದ ಜಾತಿವಾರು ರಾಜ್ಯಮಟ್ಟದ ನಾಯಕರನ್ನು ಕರೆಸಿ, ಪ್ರತಿಯೊಂದು ಊರುಗಳಲ್ಲಿ ಸಣ್ಣಪುಟ್ಟ ಸಮುದಾಯಗಳ ಸಭೆ ನಡೆಸಿ ಮತಗಳನ್ನು ಸಾಲಿಡ್ ಆಗಿ ಕಾಂಗ್ರೆಸ್ ಬುಟ್ಟಿಗೆ ಹಾಕಿಕೊಳ್ಳುವ ತಂತ್ರ ರೂಪಿಸಲಾಗಿದೆ. ಇದು ಕೇವಲ ಚುನಾವಣೆ ಪ್ರಚಾರವಲ್ಲ, ಇದು ಅಹಿಂದ ವರ್ಗದ ‘ಗಟ್ಟಿತನ’ ಪ್ರದರ್ಶನದ ವೇದಿಕೆಯಾಗಲಿದೆ.
  • ಅಹಿಂದ ಮತಗಳ ಕ್ರೋಢೀಕರಣ: ಕ್ಷೇತ್ರದಲ್ಲಿ ಸುಮಾರು 1.25 ಲಕ್ಷ ಇರುವ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮತದಾರರನ್ನು ಒಗ್ಗೂಡಿಸಿ ಬಿಜೆಪಿಯ ಹಿಂದುತ್ವದ ಅಲೆಗೆ ಬ್ರೇಕ್ ಹಾಕುವುದು ಸಿಎಂ ಬಳಗದ ಏಕೈಕ ಗುರಿ. ಸಿದ್ದರಾಮಯ್ಯನವರ ವರ್ಚಸ್ಸು ಮತ್ತು ಜಾರಕಿಹೊಳಿಯವರ ಸಂಘಟನೆ ಕಾಂಗ್ರೆಸ್‌ಗೆ ಆನೆಯ ಬಲ ನೀಡಿದೆ.

ಬಿಜೆಪಿ ಅಭ್ಯರ್ಥಿಯ ವ್ಯಕ್ತಿಗತ ಹಿನ್ನಡೆ ಮತ್ತು ‘ಮೆಡಿಕಲ್’ ವಿವಾದ

ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ನಡವಳಿಕೆ ಈಗ ಪಕ್ಷಕ್ಕೆ ಮುಳುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಮತ ಕೇಳುತ್ತಿದ್ದರೂ, ಅಭ್ಯರ್ಥಿಯ ಉಡಾಫೆಯ ಮಾತುಗಳು ಮತ್ತು ಸಾರ್ವಜನಿಕರ ಮೇಲಿನ ದಬ್ಬಾಳಿಕೆಯ ಹಳೆಯ ಆಡಿಯೋ-ವಿಡಿಯೋಗಳು ವೈರಲ್‌ ಆಗಿವೆ. ಅವು ಚರಂತಿಮಠರ ವೈಯಕ್ತಿಕ ಇಮೇಜ್‌ಗೆ ಭಾರಿ ಧಕ್ಕೆ ತಂದಿವೆ.

ಜೊತೆಗೆ, ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆಯಾದ ಸರ್ಕಾರಿ ಮೆಡಿಕಲ್ ಕಾಲೇಜು ವಿಚಾರದಲ್ಲಿ ಚರಂತಿಮಠರ ವಿರುದ್ಧದ ಆರೋಪಗಳು ಬಲವಾಗಿವೆ. ಹೋರಾಟಗಾರ ರಮೇಶ್ ಬದ್ನೂರ್ ಅವರು ಹೇಳುವಂತೆ, ಚರಂತಿಮಠ ಅವರು ಶಾಸಕರಾಗಿದ್ದಾಗ ತಮ್ಮದೇ ಖಾಸಗಿ ಶಿಕ್ಷಣ ಸಂಸ್ಥೆಯ ಲಾಭಕ್ಕಾಗಿ ಸರ್ಕಾರಿ ಮೆಡಿಕಲ್ ಕಾಲೇಜು ಬರದಂತೆ ಅಡ್ಡಗಾಲು ಹಾಕಿದ್ದರು. ಆದರೆ ಈಗ ಕಾಂಗ್ರೆಸ್ ಇತ್ತೀಚೆಗೆ ಶಂಕುಸ್ಥಾಪನೆ ಮಾಡುವ ಮೂಲಕ ಈ ಬೇಡಿಕೆಯನ್ನು ಈಡೇರಿಸುತ್ತಿದೆ. ಈ ವಿಚಾರ ಹಳ್ಳಿಗರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಇದಕ್ಕೆ ಪ್ರತಿಯಾಗಿ ಹೆಚ್.ವೈ. ಮೇಟಿಯವರು ನಿರ್ಮಿಸಿದ ಸರ್ಕಾರಿ ಕಾಲೇಜು ಮತ್ತು ಹಾಸ್ಟೆಲ್‌ಗಳು ಹಳ್ಳಿಯ ಜನರ ಕಣ್ಣೆದುರಿಗಿವೆ.

ಮಲ್ಲಿಕಾರ್ಜುನ ಚರಂತಿಮಠ ಮತ್ತು ದೇವರಾಜ್ ಪಾಟೀಲ್ ಪ್ರಭಾವ

ಬಿಜೆಪಿಗೆ ಅತಿ ದೊಡ್ಡ ಹೊಡೆತ ಬಿದ್ದಿರುವುದು ಮಲ್ಲಿಕಾರ್ಜುನ ಚರಂತಿಮಠ ಅವರಿಂದ. ಕಳೆದ ಬಾರಿ ಅವರು ಪಕ್ಷೇತರವಾಗಿ ಸ್ಪರ್ಧಿಸಿ ಪಡೆದ 10 ಸಾವಿರ ಮತಗಳು ಈ ಬಾರಿ ನೇರವಾಗಿ ಕಾಂಗ್ರೆಸ್ ಪಾಲಾಗುತ್ತಿವೆ. ಇನ್ನು ಬಿಜೆಪಿ ಸೇರಿರುವ ದೇವರಾಜ್ ಪಾಟೀಲ್ ಕುರುಬ ಸಮುದಾಯದ ಮೇಲೆ ಅಂತಹ ಪ್ರಭಾವ ಹೊಂದಿಲ್ಲದ ಕಾರಣ, ಅವರ ಸೇರ್ಪಡೆಯಿಂದ ಕಾಂಗ್ರೆಸ್‌ನ ಅಹಿಂದ ಮತಬ್ಯಾಂಕ್‌ಗೆ ಕಿಂಚಿತ್ತೂ ವ್ಯತ್ಯಾಸವಾಗುವುದಿಲ್ಲ ಎಂಬುದು ವಾಸ್ತವ.

ಶತಾಯ-ಗತಾಯ ಕ್ಷೇತ್ರ ಉಳಿಸಿಕೊಳ್ಳುವ ಹಠ

ಬಾಗಲಕೋಟೆ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳಲು ಕಾಂಗ್ರೆಸ್ ಎಲ್ಲ ಸಾಧ್ಯ ತಂತ್ರ-ಪ್ರತಿತಂತ್ರಗಳನ್ನು ರೂಪಿಸುತ್ತಿದೆ. ಸಣ್ಣ ಪುಟ್ಟ ಸಮುದಾಯಗಳ ಮತಗಳ ಕ್ರೋಢೀಕರಣಕ್ಕೆ ಸತೀಶ್ ಜಾರಕಿಹೊಳಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದು ಕೇವಲ ಒಂದು ಸ್ಥಾನದ ಗೆಲುವಲ್ಲ, ಬದಲಿಗೆ ಅಹಿಂದ ವರ್ಗದ ಸಂಘಟಿತ ಶಕ್ತಿಯ ಪ್ರದರ್ಶನ. ಸಿದ್ದರಾಮಯ್ಯನವರ ಎಂಟ್ರಿ ಮತ್ತು ಅಹಿಂದ ವರ್ಗದ ನಾಯಕರ ದಂಡು ಕ್ಷೇತ್ರದಲ್ಲಿ ಕೇಸರಿ ಪಡೆಯ ಹಿಂದುತ್ವದ ತಂತ್ರಗಾರಿಕೆಗೆ ತಕ್ಕ ಪ್ರತ್ಯುತ್ತರ ನೀಡಲು ಸನ್ನದ್ಧವಾಗಿದೆ.

ಒಟ್ಟಾರೆಯಾಗಿ ಬಾಗಲಕೋಟೆ ಉಪಚುನಾವಣೆ ಈಗ ‘ಅಹಂಕಾರದ ರಾಜಕಾರಣ’ವೋ ಅಥವಾ ‘ಅಹಿಂದದ ಸಂಘಟನೆ’ಯೋ ಎಂಬ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಸತೀಶ್ ಜಾರಕಿಹೊಳಿ ಮತ್ತು ರಾಹುಲ್ ಜಾರಕಿಹೊಳಿ ಅವರ ತಳಮಟ್ಟದ ಸಂಘಟನೆ ಹಾಗೂ ಸಿದ್ದರಾಮಯ್ಯನವರ ‘ಅಹಿಂದ’ ಸುನಾಮಿಯ ಮುಂದೆ ಕಮಲದ ಹಾದಿ ಅತ್ಯಂತ ದುರ್ಗಮವಾಗಿದೆ. ಬಾಗಲಕೋಟೆಯ ಮತದಾರ ಕೇವಲ ರಸ್ತೆ-ಗಟಾರುಗಳಿಗಿಂತ ಹೆಚ್ಚಾಗಿ, ತಮಗೆ ಮರ್ಯಾದೆ ಕೊಡುವ ಮತ್ತು ಜಿಲ್ಲೆಯ ಸಾರ್ವಜನಿಕ ಹಿತ ಕಾಯುವ ನಾಯಕನನ್ನು ಆರಿಸಲು ನಿರ್ಧರಿಸಿದಂತಿದೆ. ಹಸ್ತದ ಗುರುತು ಕ್ಷೇತ್ರದಲ್ಲಿ ಬಲವಾಗಿ ಗೋಚರಿಸುತ್ತಿದ್ದು, ಬಿಜೆಪಿಯ ಭದ್ರಕೋಟೆ ಬಿರುಕು ಬಿಟ್ಟಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments