ಬಾಗಲಕೋಟೆ: ವಿಧಾನಸಭಾ ಕ್ಷೇತ್ರದ ಉಪಚುನಾವಣಾ (Bagalkot By-Election) ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈವರೆಗೂ ಜಿಲ್ಲೆಯ ಶಾಸಕರು ಹಾಗೂ ಮಂತ್ರಿಗಳು ಪ್ರಚಾರ ನಡೆಸುತ್ತಿದ್ದರು ಆದರೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಅಖಾಡಕ್ಕೆ ಇಳಿದು, ತಮ್ಮ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿದರು. ಜಿಲ್ಲೆಯ ಸುತಗುಂಡಾರ ಹಾಗೂ ನಾಯನೇಗಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಬೇಟೆ ನಡೆಸಿದ ಸಿಎಂ, ಭಾವನಾತ್ಮಕ ಮತ್ತು ರಾಜಕೀಯ ಅಸ್ತ್ರಗಳನ್ನು ಪ್ರಯೋಗಿಸುವ ಮೂಲಕ ಮತದಾರರ ಮನಗೆಲ್ಲಲು ಪ್ರಯತ್ನಿಸಿದರು.
ಮೇಟಿ ಕನಸು ಹಾಗೂ ಮೆಡಿಕಲ್ ಕಾಲೇಜು
ದಿವಂಗತ ಎಚ್.ವೈ. ಮೇಟಿ ಅವರ ಸೇವೆಯನ್ನು ಸ್ಮರಿಸಿದ ಮುಖ್ಯಮಂತ್ರಿಗಳು, “ಬಾಗಲಕೋಟೆಗೆ ಇಂದು ಮೆಡಿಕಲ್ ಕಾಲೇಜು ಮಂಜೂರಾಗಿ ಬರುತ್ತಿದೆ ಎಂದರೆ ಅದು ಮೇಟಿಯವರ ಅವಿರತ ಶ್ರಮದ ಫಲ. ಜನರ ಕೈಗೆಟುಕುವ ನಾಯಕರಾಗಿದ್ದ ಮೇಟಿಯವರ ಆತ್ಮಕ್ಕೆ ನಿಜವಾದ ಶಾಂತಿ ಸಿಗಬೇಕಾದರೆ, ಅವರ ಉತ್ತರಾಧಿಕಾರಿಯಾಗಿ ಸ್ಪರ್ಧಿಸಿರುವ ಉಮೇಶ್ ಮೇಟಿ ಅವರನ್ನು ನೀವು ಅತಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು” ಎಂದು ಕರೆ ನೀಡಿದರು. ಕುಟುಂಬ ರಾಜಕಾರಣದ ಟೀಕೆಗಳಿಗೆ ಉತ್ತರಿಸಿದ ಅವರು, ಮೇಟಿಯವರ ನಾಲ್ಕೂ ಮಕ್ಕಳು ಟಿಕೆಟ್ ಕೇಳಿದ್ದರೂ, ಪಕ್ಷದ ಶಿಸ್ತಿನಂತೆ ಉಮೇಶ್‌ಗೆ ಟಿಕೆಟ್ ನೀಡಲಾಗಿದೆ ಮತ್ತು ಕುಟುಂಬದವರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ವಿರುದ್ಧ ವಾಗ್ದಾಳಿ: “ಅಭಿವೃದ್ಧಿ ಮಾಡದ ಕಳ್ಳೆತ್ತುಗಳು”
ತಮ್ಮ ಭಾಷಣದುದ್ದಕ್ಕೂ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯ, ಬಿಜೆಪಿಯನ್ನು ‘ಕಳ್ಳೆತ್ತುಗಳಿಗೆ’ ಹೋಲಿಸಿದರು. “ಗೇಯುವ ಎತ್ತಿಗೆ (ಕೆಲಸ ಮಾಡುವವರಿಗೆ) ಮೇವು ಹಾಕಬೇಕೇ ಹೊರತು, ಸುಮ್ಮನೆ ಕೂತು ಲೂಟಿ ಮಾಡುವವರಿಗಲ್ಲ. ನಾವು ಕೆಲಸ ಮಾಡಿದ್ದೇವೆ, ನಮಗೆ ಕೂಲಿ ರೂಪದಲ್ಲಿ ಮತ ನೀಡಿ” ಎಂದು ಮಾರ್ಮಿಕವಾಗಿ ನುಡಿದರು. ಆಲಮಟ್ಟಿ ಜಲಾಶಯದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯದ ಹಿಂದಿನ ಬಿಜೆಪಿ ಸರ್ಕಾರಗಳು ಉತ್ತರ ಕರ್ನಾಟಕಕ್ಕೆ ದ್ರೋಹ ಬಗೆದಿವೆ. 13 ವರ್ಷಗಳಿಂದ ಗೆಜೆಟ್ ನೋಟಿಫಿಕೇಶನ್ ಮಾಡದೆ ಕಾಲಹರಣ ಮಾಡಿವೆ ಎಂದು ಕಿಡಿಕಾರಿದರು.
ಇದನ್ನೂ ಓದಿ: Bagalkot By-Election: ಯತ್ನಾಳ್‌ಗೆ ವಿಜಯೇಂದ್ರನಿಂದ ಪರೋಕ್ಷ ವೆಲ್ಕಂ! ಗೆಲುವಿಗಾಗಿ ಆತ್ಮಗೌರವದ ಬಲಿ? ಬಿಜೆಪಿಯ ನೈತಿಕ ಪತನ!
ರೈತರು ಮತ್ತು ಭೂಪರಿಹಾರದ ಭರವಸೆ
ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ಸಿಹಿ ಸುದ್ದಿ ನೀಡಿದ ಸಿಎಂ, “ನೀರಾವರಿ ಜಮೀನಿಗೆ 40 ಲಕ್ಷ ರೂ. ಹಾಗೂ ಒಣ ಭೂಮಿಗೆ 30 ಲಕ್ಷ ರೂ. ಪರಿಹಾರ ನೀಡುವ ಮಹತ್ವದ ತೀರ್ಮಾನವನ್ನು ನಮ್ಮ ಸರ್ಕಾರ ಮಾಡಿದೆ. ಮುಂದಿನ ಮೂರು ವರ್ಷಗಳಲ್ಲಿ ಸಂಪೂರ್ಣ ಪರಿಹಾರ ವಿತರಿಸಲಾಗುವುದು” ಎಂದು ಭರವಸೆ ನೀಡಿದರು. ಅಲ್ಲದೆ, ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಿ ಬೆಂಬಲ ಬೆಲೆಯನ್ನು 200 ರೂ. ಹೆಚ್ಚಿಸಿದ ಉದಾಹರಣೆಯನ್ನು ನೀಡಿದರು.
ಗ್ಯಾರಂಟಿ ಯೋಜನೆಗಳೇ ನಮ್ಮ ಶಕ್ತಿ
“ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದು ರೂಪಾಯಿ ಸಾಲ ಮನ್ನಾ ಮಾಡಲಿಲ್ಲ. ಆದರೆ ನಾವು 5 ಗ್ಯಾರಂಟಿಗಳ ಮೂಲಕ ವರ್ಷಕ್ಕೆ 52 ಸಾವಿರ ಕೋಟಿ ರೂಪಾಯಿಯನ್ನು ನೇರವಾಗಿ ಜನರ ಜೇಬಿಗೆ ಹಾಕುತ್ತಿದ್ದೇವೆ” ಎಂದು ಹೆಮ್ಮೆಯಿಂದ ಹೇಳಿಕೊಂಡರು. ಬಾಗಲಕೋಟೆಯಲ್ಲಿ ಕೇವಲ ಮೆಡಿಕಲ್ ಕಾಲೇಜು ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ ಸ್ಥಾಪಿಸುವ ಭರವಸೆಯನ್ನೂ ನೀಡಿದರು.
ಒಟ್ಟಾರೆಯಾಗಿ, ಬಾಗಲಕೋಟೆ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಸಿಎಂ ಸಿದ್ದರಾಮಯ್ಯ, ಅಭಿವೃದ್ಧಿ ಮತ್ತು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತದಾರರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.

