Bagalkot By-Election: ರಾಜಕೀಯ ಅಖಾಡದಲ್ಲಿ ಅಭಿವೃದ್ಧಿ ಕೆಲಸಗಳು ಮತ ತಂದುಕೊಡುತ್ತವೆ ಎನ್ನುವುದು ಒಂದು ಕಾಲದ ನಂಬಿಕೆ. ಆದರೆ, ಇಂದಿನ ಕಾಲದಲ್ಲಿ ಜನರೊಂದಿಗೆ ಬೆರೆಯುವ ರೀತಿ, ಸೌಜನ್ಯ ಮತ್ತು ನಡವಳಿಕೆ ಕೂಡ ಅಷ್ಟೇ ಮುಖ್ಯ. ಬಾಗಲಕೋಟೆ ಉಪಚುನಾವಣೆಯ ಕಣದಲ್ಲಿ ಈಗ ಇಂತದ್ದೇ ಒಂದು ಚರ್ಚೆ ಮುನ್ನೆಲೆಗೆ ಬಂದಿದೆ. ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ವಿರುದ್ಧ ಕ್ಷೇತ್ರದ ಜನಸಾಮಾನ್ಯರಲ್ಲಿ ದಶಕಗಳಿಂದಲೂ ಇರುವ ‘ಅಹಂಕಾರಿ’ ಪಟ್ಟಕ್ಕೆ ಈಗ ಸ್ವತಃ ಅವರ ಆಪ್ತ ಮಿತ್ರ, ಫೈರ್‌ಬ್ರ್ಯಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸಾರ್ವಜನಿಕ ವೇದಿಕೆಯಲ್ಲೇ ಮೊಳೆ ಹೊಡೆದಿದ್ದಾರೆ.
ವೇದಿಕೆಯಲ್ಲೇ ‘ಬೆತ್ತಲಾದ’ ಚರಂತಿಮಠ ನಡವಳಿಕೆ!
ಬಾಗಲಕೋಟೆ ಉಪಚುನಾವಣೆಯ (Bagalkot By-Election) ಪ್ರಚಾರದ ವೇಳೆ ಮೈಕ್ ಹಿಡಿದ ಯತ್ನಾಳ್, ಚರಂತಿಮಠ ಅವರ ಮುಖಕ್ಕೆ ಕನ್ನಡಿ ಹಿಡಿದ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. “ನೋಡ್ರೀ ಚರಂತಿಮಠ ಅವರೇ, ನೀವು ಕೆಲಸ ಮಾಡ್ತಿದೀರಿ ಹೌದು.. ಆದ್ರೆ ನಿಮ್ಮ ಮುಖ ಯಾಕೋ ಯಾವಾಗಲೂ ಸಿಡುಕಾಗಿ ಇರುತ್ತೆ. ನಗೋದನ್ನೇ ಮರೆತುಬಿಟ್ಟಿದ್ದೀರಾ. ನಾನು ಮೊದಲೇ ಹೇಳಿದ್ದೀನಿ, ಸ್ವಲ್ಪ ಹಲ್ಲು ಕಿಸದು (ನಗುಮುಖದಿಂದ) ಜನರ ಜೊತೆ ಮಾತಾಡೋದನ್ನ ಕಲಿ ಮುತ್ಯಾ. ಬಂದವರಿಗೆ ಒಂದು ಚಹ-ಕಾಫಿ ಕೇಳಿ ಪ್ರೀತಿಯಿಂದ ಮಾತಾಡಿಸು,” ಎಂದು ಯತ್ನಾಳ್ ತಮ್ಮದೇ ಜವಾರಿ ಶೈಲಿಯಲ್ಲಿ ಕಿವಿಮಾತು ಹೇಳಿದ್ದಾರೆ.
ಯತ್ನಾಳ್ ಅವರ ಈ ಮಾತುಗಳು ಕೇವಲ ಹಾಸ್ಯಕ್ಕೆ ಸೀಮಿತವಾಗಿಲ್ಲ; ಇದು ಬಾಗಲಕೋಟೆಯ ಮತದಾರರ ಮನದ ಆಳದಲ್ಲಿದ್ದ ಆಕ್ರೋಶಕ್ಕೆ ಸಿಕ್ಕ ಸಾಕ್ಷಿಯಾಗಿದೆ. ಒಬ್ಬ ಜನಪ್ರತಿನಿಧಿ ಜನರಿಂದ ದೂರವಾದಾಗ ಏನಾಗುತ್ತದೆ ಎನ್ನುವುದಕ್ಕೆ ಚರಂತಿಮಠ ಅವರ ಇಂದಿನ ಸ್ಥಿತಿಯೇ ಉದಾಹರಣೆ.
‘ಚೇಲಾಗಳ’ ಕೋಟೆ: ಜನರ ಕೈಗೆ ಸಿಗದ ಜನಪ್ರತಿನಿಧಿ!
ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಚರಂತಿಮಠ ಅವರ ವಿರುದ್ಧ ಪ್ರತಿ ಚುನಾವಣೆಯಲ್ಲೂ ಕೇಳಿಬರುವ ದೊಡ್ಡ ಆರೋಪವೆಂದರೆ ಅವರು ಸಾಮಾನ್ಯ ಜನರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ ಎಂಬುದು. ಯಾರಾದರೂ ಸಮಸ್ಯೆ ಹೊತ್ತು ಹೋದರೆ ಅಥವಾ ಸಹಾಯ ಕೇಳಲು ಮುಂದಾದರೆ, ಮೊದಲು ಅವರ ಸುತ್ತಲಿರುವ ‘ಚೇಲಾಗಳ’ ದರ್ಬಾರ್ ದಾಟಬೇಕು. ಈ ಬೆಂಬಲಿಗರ ಪಡೆಯನ್ನು ದಾಟಿ ಶಾಸಕರನ್ನು ಭೇಟಿಯಾಗುವುದು ಸಾಮಾನ್ಯ ಜನರಿಗೆ ಅಸಾಧ್ಯದ ಮಾತು.
“ಚುನಾವಣೆ ಬಂದಾಗ ಕೈಮುಗಿದು ಬರ್ತಾರೆ, ಗೆದ್ದ ಮೇಲೆ ಅವರನ್ನ ನೋಡಬೇಕಾದ್ರೆ ಅವರ ಹಿಂದೆಮುಂದೆ ಓಡಾಡುವ ಚೇಲಾಗಳ ಹತ್ತಿರ ಭಿಕ್ಷೆ ಬೇಡಬೇಕು,” ಎನ್ನುವುದು ಬಾಗಲಕೋಟೆಯಿಂದ ಹಿಡಿದು ಕ್ಷೇತ್ರದ ಕಟ್ಟಕಡೆಯ ಹಳ್ಳಿಗಳವರೆಗಿನ ಮತದಾರರ ಸಾಮಾನ್ಯ ಅಳಲು. ಈ ಬಾರಿ ಉಪಚುನಾವಣೆಯ ಹೊಸ್ತಿಲಲ್ಲೂ ಇದೇ ಮಾತುಗಳು ಜೋರಾಗಿ ಕೇಳಿಬರುತ್ತಿವೆ.
ಇದನ್ನೂ ಓದಿ: Bagalkot By-Election: ಗಜಕೇಸರಿ ಯೋಗಿಯ ತಂದೆಯನ್ನೇ ಸೋಲಿಸುವಂತೆ ಎಂಬಿ ಪಾಟೀಲರಿಗೆ ಯತ್ನಾಳ್ ಓಪನ್ ಚಾಲೆಂಜ್!
ಏಕವಚನ ಮತ್ತು ಉದ್ಧಟತನ: ಕಾರ್ಯಕರ್ತರಲ್ಲೂ ಅಸಮಾಧಾನ
ಚರಂತಿಮಠ ಅವರ ವ್ಯಕ್ತಿಗತ ನಡವಳಿಕೆ ಕೇವಲ ಮತದಾರರಿಗೆ ಮಾತ್ರವಲ್ಲ, ಅವರ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೂ ಬೇಸರ ತರಿಸಿದೆ. ವಯಸ್ಸಿನಲ್ಲಿ ಹಿರಿಯರಾದವರಿಗೂ ಕೂಡ ಏಕವಚನದಲ್ಲೇ ಮಾತನಾಡುವುದು, ಕಿರಿಯರನ್ನ ಲೇ, ಆ ಮಗ ಈ ಮಗ ಎಂದು ಹಿಯಾಳಿಸುವುದು ಅವರ ವ್ಯಕ್ತಿತ್ವದ ಭಾಗವಾಗಿ ಹೋಗಿದೆ ಎನ್ನುತ್ತಾರೆ ಸ್ಥಳೀಯರು.
ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಡಿಯೋ ಮತ್ತು ವಿಡಿಯೋಗಳು ಅವರ ಈ ಗಡಸು ಮತ್ತು ಉದ್ಧಟತನದ ನಡವಳಿಕೆಗೆ ಪುಷ್ಟಿ ನೀಡುತ್ತಿವೆ. ಈ ಉದ್ಧಟತನವೇ ಇಂದು ಅವರಿಗೆ ಮುಳುವಾಗುವ ಲಕ್ಷಣಗಳು ಕಾಣುತ್ತಿವೆ. ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ, ಆದರೆ ಉಳಿಸಿಕೊಳ್ಳುವ ನಡವಳಿಕೆ ಶಾಶ್ವತವಾಗಿರಬೇಕು ಎಂಬ ಅರಿವು ಚರಂತಿಮಠ ಅವರಿಗೆ ಮರೆತುಹೋದಂತಿದೆ ಎಂದು ಹಿರಿಯ ವರದಿಗರರ ಅಭಿಪ್ರಾಯವಾಗಿದೆ.
“ಮೇಟಿ ಮುತ್ಯಾ ಬೆಸ್ಟ್”: ಹಳ್ಳಿ ಜನರ ನಾಡಿಮಿಡಿತ
“ಸೊಕ್ಕಿನ ಮನುಷ್ಯ ಅದಾನ ಅವನಿಗೇನ ಓಟು ಹಾಕೋದು, ನಮಗೆ ಗೌರವ ಕೊಡದವರಿಗೆ ನಾವ್ಯಾಕೆ ಬೆಂಬಲ ನೀಡಬೇಕು?” ಎಂಬ ಮಾತುಗಳು ಹಳ್ಳಿಗಳ ಕಟ್ಟೆಗಳ ಮೇಲೆ ಕೇಳಿಬರುತ್ತಿವೆ. ಇದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ಕುಟುಂಬದ ಸೌಮ್ಯ ಸ್ವಭಾವ ಜನರ ಗಮನ ಸೆಳೆಯುತ್ತಿದೆ.
“ಮೇಟಿ ಕುಟುಂಬದವರು ನಗುಮುಖದಿಂದ ಮಾತನಾಡಿಸುತ್ತಾರೆ, ಕಷ್ಟಕ್ಕೆ ಸ್ಪಂದಿಸುತ್ತಾರೆ” ಎಂಬ ಇಮೇಜ್ ಈಗ ಚರಂತಿಮಠ ಅವರಿಗೆ ದೊಡ್ಡ ಸವಾಲಾಗಿದೆ. ತನಗೆ ಗೌರವ ನೀಡದ ನಾಯಕನಿಗಿಂತ, ಪ್ರೀತಿಯಿಂದ ಮಾತನಾಡಿಸುವ ನಾಯಕನ ಪರವಾಗಿ ಮತದಾರರು ಒಲವು ತೋರುತ್ತಿರುವುದು ಬಿಜೆಪಿ ಪಾಳೆಯದಲ್ಲಿ ನಡುಕ ಹುಟ್ಟಿಸಿದೆ.
ಯತ್ನಾಳ್ ಹೇಳಿದ್ದೇನು? ಅದರ ಒಳಾರ್ಥವೇನು?
ಬಿಜೆಪಿಯಿಂದ ಉಚ್ಚಾಟಿತರಾಗಿದ್ದರೂ ಹಿಂದುತ್ವ ಮತ್ತು ಸ್ನೇಹದ ಹೆಸರಿನಲ್ಲಿ ಚರಂತಿಮಠ ಪರವಾಗಿ ಪ್ರಚಾರಕ್ಕೆ ಬಂದಿರುವ ಯತ್ನಾಳ್, ವಾಸ್ತವವನ್ನೇ ತೆರೆದಿಟ್ಟಿದ್ದಾರೆ. ಚರಂತಿಮಠ ಅವರ ‘ನಗು’ ಮತ್ತು ‘ಸೌಜನ್ಯ’ದ ಕೊರತೆಯೇ ಈ ಚುನಾವಣೆಯಲ್ಲಿ ಅವರ ಗೆಲುವಿಗೆ ಅತಿ ದೊಡ್ಡ ಅಡ್ಡಿ ಎಂಬುದನ್ನು ಯತ್ನಾಳ್ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
“ನಮ್ಮ ಮಂದಿ ಏನೂ ಕೇಳೋದಿಲ್ಲ, ಪ್ರೀತಿಯಿಂದ ಮಾತನಾಡಿಸಿ ಒಂದು ಚಹಾ ಕೊಟ್ಟರೆ ಸಾಕು, ಹಳೆಯ ಸಿಟ್ಟು ಮರೆತು ವೋಟ್ ಹಾಕ್ತಾರೆ” ಎಂದು ಯತ್ನಾಳ್ ಹೇಳುವ ಮೂಲಕ, ಚರಂತಿಮಠ ಅವರು ಮತದಾರರನ್ನು ಹೇಗೆ ಕಡೆಗಣಿಸಿದ್ದಾರೆ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ.
ಬಾಗಲಕೋಟೆ ಉಪಚುನಾವಣೆಯ ಫಲಿತಾಂಶ ಏನಾಗಲಿದೆಯೋ ಗೊತ್ತಿಲ್ಲ. ಆದರೆ, ಒಬ್ಬ ಜನಪ್ರತಿನಿಧಿಗೆ ಅಭಿವೃದ್ಧಿಯಷ್ಟೇ ಜನರೊಂದಿಗಿನ ಭಾವನಾತ್ಮಕ ಸಂಬಂಧ ಕೂಡ ಮುಖ್ಯ ಎಂಬುದಕ್ಕೆ ಈ ಪ್ರಸಂಗ ಒಂದು ದೊಡ್ಡ ಪಾಠ. ಯತ್ನಾಳ್ ಅವರ ‘ಹಲ್ಲು ಕಿಸಿಯುವ’ ಸಲಹೆಯನ್ನು ಚರಂತಿಮಠ ಗಂಭೀರವಾಗಿ ತೆಗೆದುಕೊಳ್ಳುತ್ತಾರೋ ಅಥವಾ ಎಂದಿನಂತೆ ತಮ್ಮ ‘ಖಡಕ್’ ಅಹಂನಲ್ಲೇ ಮುಂದುವರಿಯುತ್ತಾರೋ ಕಾದು ನೋಡಬೇಕಿದೆ. ಆದರೆ, ಬಾಗಲಕೋಟೆಯ ಜನರು ಮಾತ್ರ ಈ ಬಾರಿ ‘ಅಭಿಮಾನ’ ಮತ್ತು ‘ಅಹಂ’ ನಡುವಿನ ವ್ಯತ್ಯಾಸವನ್ನು ಮತಗಟ್ಟೆಯಲ್ಲಿ ತೋರಿಸಲು ಸಜ್ಜಾಗಿದ್ದಾರೆ.

