Homeರಾಜ್ಯBagalkot By-Election: ವೀರಣ್ಣ ಚರಂತಿಮಠ ಸಹೋದರನ ಮನೆಗೆ ಸಿಎಂ ಎಂಟ್ರಿ! ಬಿಜೆಪಿಯ ಎಲ್ಲಾ ಪ್ಲ್ಯಾನ್‌ ಉಡೀಸ್‌?

Bagalkot By-Election: ವೀರಣ್ಣ ಚರಂತಿಮಠ ಸಹೋದರನ ಮನೆಗೆ ಸಿಎಂ ಎಂಟ್ರಿ! ಬಿಜೆಪಿಯ ಎಲ್ಲಾ ಪ್ಲ್ಯಾನ್‌ ಉಡೀಸ್‌?

Bagalkot By-Election: ಹೆಚ್‌ವೈ ಮೇಟಿ (HY Meti) ಅವರ ನಿಧನದಿಂದ ತೆರುವಾದ ಬಾಗಲಕೋಟೆ ಮತಕ್ಷೇತ್ರಕ್ಕೆ ಇನ್ನೇನು ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಬಿಸಿಲುನಾಡಿನಲ್ಲಿ ರಾಜಕಾರಣದ ಕಿಚ್ಚು ಇದೀಗ ಮತ್ತಷ್ಟು ಹೆಚ್ಚಾಗುತ್ತಿದೆ. ಇದೀಗ ರಾಜಕೀಯದ ಕುರುಕ್ಷೇತ್ರ ಬಾಗಲಕೋಟೆಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಒಂದು ಕಡೆ ಉಪಚುನಾವಣೆಯ ಕಹಳೆ ಮೊಳಗುವ ಮುನ್ಸೂಚನೆ ಸಿಗುತ್ತಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಮಾ. 14) ನೀಡಲಿರುವ ಒಂದು ‘ಮಾಸ್ಟರ್ ಸ್ಟ್ರೋಕ್’ ಭೇಟಿ ಬಿಜೆಪಿಯ ಭದ್ರಕೋಟೆಯನ್ನು ನಡುಗಿಸಿದೆ. ಹೌದು ಬಿಜೆಪಿಯ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಸ್ವಂತ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಅವರ ಮನೆಗೆ ಸಿದ್ದರಾಮಯ್ಯ ಎಂಟ್ರಿ ಕೊಡುವ ಮೂಲಕ ಜಿಲ್ಲಾ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಲಿದ್ದಾರೆ.

ಕೋಮು ಸಂಘರ್ಷದ ಅಲೆಗೆ ಸಿಎಂ ಸಿದ್ದರಾಮಯ್ಯ ಬ್ರೇಕ್!

ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ನಡೆದ ಶಿವಾಜಿ ಮೆರವಣಿಗೆ ಮೇಲೆ ಕಲ್ಲು ಮತ್ತು ಚಪ್ಪಲಿ ತೂರಾಟದ ಪ್ರಕರಣ ಬಾಗಲಕೋಟೆ ರಾಜಕಾರಣದಲ್ಲಿ ಕಿಚ್ಚು ಹಚ್ಚಿತ್ತು. ಬಿಜೆಪಿ ಮತ್ತು ಅದರ ಬೆಂಬಲಿತ ಸಂಘಟನೆಗಳು ಈ ಘಟನೆಯನ್ನೇ ಪ್ರಬಲ ಚುನಾವಣಾ (Bagalkot By-Election) ಅಸ್ತ್ರವನ್ನಾಗಿ ಮಾಡಿಕೊಂಡಿದ್ದವು. ಒಂದು ನಿರ್ದಿಷ್ಟ ಸಮುದಾಯದ ಮತಗಳನ್ನು ಕ್ರೂಢೀಕರಿಸಲು ಬಿಜೆಪಿ ಈಗಾಗಲೇ ವ್ಯವಸ್ಥಿತ ತಂತ್ರ ಹೆಣೆದಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ, ಕ್ಷೇತ್ರದಲ್ಲಿ ಮೇಟಿ ಕುಟುಂಬದ ಪರ ಅನುಕಂಪದ ಅಲೆ ಇದ್ದರೂ ಸಹ, ಕೋಮು ಸಂಘರ್ಷದ ಅಬ್ಬರದ ಮುಂದೆ ಎಲ್ಲವೂ ಗೌಣವಾಗತೊಡಗಿತ್ತು. ಈ ಭಾವನಾತ್ಮಕ ಅಲೆಯ ಲಾಭ ಪಡೆದು ಉಪಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಬಹುದು ಎಂದು ತುದಿಗಾಲಲ್ಲಿ ನಿಂತಿದ್ದ ಬಿಜೆಪಿ ನಾಯಕರಿಗೆ ಇದೀಗ ಸಿಎಂ ಸಿದ್ದರಾಮಯ್ಯ ಭರ್ಜರಿ ಶಾಕ್ ನೀಡಿದ್ದಾರೆ.

ಶತ್ರುವಿನ ಕೋಟೆಯಲ್ಲಿ ಸಿದ್ದರಾಮಯ್ಯ ಸವಾರಿ!

ಬಾಗಲಕೋಟೆ ನಗರದ ನವನಗರದ ಸೆಕ್ಟರ್ ನಂ. 52ರಲ್ಲಿರುವ ಮಲ್ಲಿಕಾರ್ಜುನ ಚರಂತಿಮಠ ಅವರ ನಿವಾಸ ನಾಳೆ ಹೈವೋಲ್ಟೇಜ್ ರಾಜಕೀಯಕ್ಕೆ ಸಾಕ್ಷಿಯಾಗಲಿದೆ. ಮುಖ್ಯಮಂತ್ರಿಗಳ ಅಧಿಕೃತ ಪ್ರವಾಸದ ಪಟ್ಟಿಯಲ್ಲಿ ಈ ಭೇಟಿ ನಿಗದಿಯಾಗಿದ್ದೇ ತಡ, ಬಿಜೆಪಿ ಪಾಳಯದಲ್ಲಿ ಆತಂಕ ಶುರುವಾಗಿದೆ. ಉಪಚುನಾವಣೆಗೆ ತಂತ್ರ ಹೆಣೆಯುತ್ತಿದ್ದ ಕೇಸರಿ ಪಡೆಗೆ, ತನ್ನದೇ ಮನೆಯ ಒಂದು ಭಾಗ ಈಗ ‘ಕೈ’ ನಾಯಕರ ಆಪ್ತವಲಯಕ್ಕೆ ಸೇರಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದನ್ನೂ ಓದಿ: Bagalkot: ಮಾಜಿ ಶಾಸಕನ ಅಬ್ಬರಕ್ಕೆ ಸೈಲೆಂಟ್ ಆದರೇ ಎಸ್‌ಪಿ? ‘ಧಮ್ಮು ತಾಕತ್‌’ ಮಾತಿಗೆ ಪೊಲೀಸರು ಕಕ್ಕಾಬಿಕ್ಕಿ!

25 ವರ್ಷಗಳ ಬಿಜೆಪಿ ನಿಷ್ಠಾವಂತ ಈಗ ಕಾಂಗ್ರೆಸ್ ಶಕ್ತಿ?

ಮಲ್ಲಿಕಾರ್ಜುನ ಚರಂತಿಮಠ ಅವರು ಸಾಮಾನ್ಯ ವ್ಯಕ್ತಿಯಲ್ಲ. 1996ರಿಂದಲೇ ಬಿಜೆಪಿಗಾಗಿ ರಕ್ತ ಸುರಿಸಿದವರು, ತಳಮಟ್ಟದ ಕಾರ್ಯಕರ್ತರಾಗಿ ಪಕ್ಷ ಕಟ್ಟಿದವರು. ಆದರೆ, ಕಾಲನಂತರದಲ್ಲಿ ಅವರೇ ಹೇಳಿಕೊಂಡಂತೆ, ಅಣ್ಣ ವೀರಣ್ಣ ಚರಂತಿಮಠ ಅವರ ಏಕಪಕ್ಷೀಯ ಧೋರಣೆ ಮತ್ತು ವರ್ತನೆಗೆ ಬೇಸತ್ತು 2023ರಲ್ಲಿ ಇವರು ಬಂಡಾಯವೆದ್ದಿದ್ದರು. ಅಂದು ಚರಂತಿಮಠ ಅವರನ್ನು ಸೋಲಿಸಲು ಮಲ್ಲಿಕಾರ್ಜುನ ಅವರಿಗೆ ಸಾಥ್ ನೀಡಿದ್ದು ಪ್ರಬಲ ಮುಖಂಡ ಸಂತೋಷ್ ಹೊಕ್ರಾಣಿ ನೇತೃತ್ವದ ದೊಡ್ಡ ಪಡೆ. ಅಂದಿನಿಂದ ಈ ಪಡೆ ಚರಂತಿಮಠ ಕುಟುಂಬದ ವಿರೋಧಿ ಪಾಳೆಯವಾಗಿ ಗುರುತಿಸಿಕೊಂಡಿದೆ.

ಬಿಜೆಪಿ ಪ್ಲ್ಯಾನ್ ಉಡೀಸ್ ಮಾಡಿದ ‘ಅಪರೇಷನ್ ಹಸ್ತ’?

ಉಪಚುನಾವಣೆಯಲ್ಲಿ ವೀರಣ್ಣ ಚರಂತಿಮಠ ಅವರನ್ನೇ ಕಣಕ್ಕಿಳಿಸಿ ಮತ್ತೆ ಗೆಲ್ಲಿಸಿಕೊಳ್ಳಬೇಕು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ನಾಳೆ ಮಲ್ಲಿಕಾರ್ಜುನ ಅವರ ಮನೆಗೆ ಭೇಟಿ ನೀಡುವ ಮೂಲಕ ಆ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗಾಗಿಸಿದ್ದಾರೆ.

  • ಲಿಂಗಾಯತ ಮತಬ್ಯಾಂಕ್‌ಗೆ ಲಗ್ಗೆ: ಚರಂತಿಮಠ ಕುಟುಂಬದ ಒಡಕನ್ನು ಸಿದ್ದರಾಮಯ್ಯ ಬಹಳ ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಿದ್ದಾರೆ.
  • ಬಂಡಾಯದ ಕಿಚ್ಚು: ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯದಿಂದ ಮೂಲ ಕಾರ್ಯಕರ್ತರ ಗುಂಪನ್ನು ಕಾಂಗ್ರೆಸ್ ತನ್ನತ್ತ ಸೆಳೆಯುತ್ತಿದೆ.
  • ಸಂತೋಷ್ ಹೊಕ್ರಾಣಿ ಫ್ಯಾಕ್ಟರ್: ಕಳೆದ ಲೋಕಸಭಾ ಚುನಾವಣೆಯಲ್ಲೇ ಕಾಂಗ್ರೆಸ್ ಪರ ಕೆಲಸ ಮಾಡಿದ್ದ ಈ ಬಳಗಕ್ಕೆ ಈಗ ಸಿಎಂ ಖುದ್ದಾಗಿ ಭೇಟಿ ನೀಡಿರುವುದು ಆನೆಬಲ ನೀಡಿದೆ.

ಇದನ್ನೂ ಓದಿ: Bagalkot: ಕೇಸರಿ ಪಡೆಯ ‘ಡೆಡ್‌ಲೈನ್’ಗೆ ಡೋಂಟ್‌ ಕೇರ್! ಎಸ್‌ಪಿ ಸಿದ್ದಾರ್ಥ ಗೋಯಲ್ ಖಡಕ್ ‘ದಂಡಯಾತ್ರೆ’

ಈ ಭೇಟಿ ಕೇವಲ ಸೌಜನ್ಯವೇ?

ನಾಳೆ ಸಿಎಂ ಸಿದ್ದರಾಮಯ್ಯ ಅವರು ಮಧ್ಯಾಹ್ನ ಮಲ್ಲಿಕಾರ್ಜುನ ಅವರ ಮನೆಗೆ ತೆರಳುವ ಬಗ್ಗೆ ಅಧಿಕೃತಗೊಳಿಸಿರುವುದನ್ನು ನೋಡಿದ್ರೆ, ಇದು ಕೇವಲ ಸೌಜನ್ಯದ ಭೇಟಿಯಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಇದು ಮುಂಬರುವ ಉಪಚುನಾವಣೆಗೆ ಸಿದ್ದರಾಮಯ್ಯ ಹೂಡಿರುವ ಪಕ್ಕಾ ‘ರಾಜಕೀಯ ಸ್ಕೆಚ್’.

ಚರಂತಿಮಠ ಅವರ ಮನೆಯಲ್ಲೇ ಕಾಂಗ್ರೆಸ್ ಧ್ವಜ ಹಾರಿಸುವ ಸಿದ್ದರಾಮಯ್ಯ ಅವರ ಈ ಗೇಮ್ ಪ್ಲ್ಯಾನ್‌ಗೆ ಬಿಜೆಪಿ ಹೈಕಮಾಂಡ್ ಯಾವ ರೀತಿ ಉತ್ತರ ಕೊಡಲಿದೆ ಎಂಬುದು ಸದ್ಯದ ಕುತೂಹಲ. ಒಟ್ಟಾರೆಯಾಗಿ, ಬಾಗಲಕೋಟೆಯಲ್ಲಿ ಈ ಬಾರಿ ಅಣ್ಣ-ತಮ್ಮಂದಿರ ರಾಜಕೀಯ ಕಿತ್ತಾಟದ ನಡುವೆ ಸಿದ್ದರಾಮಯ್ಯ ಅವರು ವಿಜಯದ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments