ಬಾಗಲಕೋಟೆ: ಮಾಜಿ ಸಚಿವ ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ (Bagalkot By-Election) ಘೋಷಣೆಯಾಗುತ್ತಿದ್ದಂತೆ, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಅಭೂತಪೂರ್ವ ಪೈಪೋಟಿ ಶುರುವಾಗಿದೆ. ಈ ಬಾರಿ ಹೈಕಮಾಂಡ್ ಹಳೆಯ ಮುಖವನ್ನೇ ನೆಚ್ಚಿಕೊಳ್ಳುತ್ತದೆಯೇ ಅಥವಾ ಹೊಸ ಬದಲಾವಣೆಗೆ ಮುಂದಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ವಿಶೇಷವಾಗಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಹಾದಿಯಲ್ಲಿ ಈ ಬಾರಿ ಸವಾಲುಗಳು ಹೆಚ್ಚಿದ್ದು, ಟಿಕೆಟ್ ಅಂತಿಮಗೊಳ್ಳುವ ಪ್ರಕ್ರಿಯೆಯಲ್ಲಿ ಅಚ್ಚರಿಗಳು ಕಾದಿರುವ ಸಾಧ್ಯತೆ ಇದೆ.
ವೀರಣ್ಣ ಚರಂತಿಮಠ: ಶಿಸ್ತು ಮತ್ತು ಸ್ನೇಹದ ನಡುವೆ ಕಸರತ್ತು
ವೀರಣ್ಣ ಚರಂತಿಮಠ ಅವರು ಕ್ಷೇತ್ರದಲ್ಲಿ ಪ್ರಬಲ ಹಿಡಿತ ಹೊಂದಿದ್ದರೂ, ಈ ಬಾರಿ ಅವರ ಹಾದಿ ಅಷ್ಟು ಸುಗಮವಾಗಿಲ್ಲ ಎನ್ನುವ ಮಾತುಗಳು ಬಿಜೆಪಿ ಕಚೇರಿಯಿಂದಲೇ ಕೇಳಿಬರುತ್ತಿವೆ.
- ವರಿಷ್ಠರ ನಿಲುವು: ಪಕ್ಷದ ವಿರೋಧಿ ಚಟುವಟಿಕೆಗಳ ಆರೋಪ ಎದುರಿಸಿ ಪಕ್ಷದಿಂದಲೇ ಉಚ್ಛಾಟಿಸಲ್ಪಟ್ಟ ಬಸನಗೌಡ ಪಾಟೀಲ್ ಯತ್ನಾಳ್ ಅವರೊಂದಿಗೆ ಚರಂತಿಮಠ ಗುರುತಿಸಿಕೊಂಡಿರುವುದು, ಮತ್ತೆ ಇತ್ತೀಚೆಗೆ ಚರಂತಮಠ ಅವರು ಟಿಕೆಟ್ ಘೋಷಣೆಗೂ ಮುಂಚೆ, ಯತ್ನಾಳ್ ಅವರೊಂದಿಗೆ ನನ್ನ ಸಂಬಂಧಂದ ಚೆನ್ನಾಗಿದೆ ಹಾಗಾಗಿ ಅವರು ನಮ್ಮಲ್ಲಿ ಬಂದು ಬೆಂಬಲ ನೀಡಬಹುದು ಎಂದು ಹೇಳುವ ಮೂಲಕ ಅವರ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ ಎನ್ನುವುದನ್ನು ಸಾಬೀತುಮಾಡಿದ್ದಾರೆ. ಇದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹೈಕಮಾಂಡ್‌ನ ಗಮನ ಸೆಳೆದಿದೆ. ಪಕ್ಷದಲ್ಲಿ ಶಿಸ್ತಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಈ ಸ್ನೇಹ ಸಂಬಂಧವು ಟಿಕೆಟ್ ಹಂಚಿಕೆಯ ಮೇಲೆ ಪ್ರಭಾವ ಬೀರಬಹುದು ಎನ್ನಲಾಗುತ್ತಿದೆ.
- ಆಂತರಿಕ ಭಿನ್ನಮತ: ಚರಂತಿಮಠ ಅವರ ವಿರುದ್ಧ ಕೇಳಿಬರುತ್ತಿರುವ ‘ಏಕಚಕ್ರಾದಿಪತ್ಯ’ದ ದೂರುಗಳು ಹಳೆಯವು. ಆದರೆ ಇತ್ತೀಚೆಗೆ ಅವರ ಸ್ವಂತ ಸಹೋದರ ಮಲ್ಲಿಕಾರ್ಜುನ್ ಚರಂತಿಮಠ ಅವರೇ ಅಸಮಾಧಾನ ಹೊರಹಾಕಿರುವುದು ಬಿಜೆಪಿಯ ಆಂತರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ನಾಗರಾಜ್ ಹದ್ಲಿ, ಸಂತೋಷ್ ಹೊಕ್ರಾಣಿ ಅಂತಹ ನಿಷ್ಠಾವಂತರು ದೂರವಾಗಲು ಇವರೇ ಕಾರಣ ಎಂಬ ಆರೋಪಗಳು ಈಗ ಮತ್ತೆ ಜೀವ ಪಡೆದುಕೊಂಡಿವೆ.
ಎಂಎಲ್‌ಸಿ, ಪಿ.ಹೆಚ್. ಪೂಜಾರ್: ಸಂಘಟನೆಯ ‘ಭೀಷ್ಮ’ನಿಗೆ ಸಿಗುತ್ತಾ ನ್ಯಾಯ?
ಪಿ.ಹೆಚ್. ಪೂಜಾರ್: ಪಕ್ಷದ ಅಸ್ತಿತ್ವಕ್ಕಾಗಿ ಸವೆದ ಬದುಕು
ಚರಂತಿಮಠ ಅವರಿಗೆ ಪರ್ಯಾಯವಾಗಿ ಕೇಳಿಬರುತ್ತಿರುವ ಅತ್ಯಂತ ಪ್ರಬಲ ಹಾಗೂ ಭಾವನಾತ್ಮಕ ಹೆಸರು ಪಿ.ಹೆಚ್. ಪೂಜಾರ್. ಇವರ ರಾಜಕೀಯ ಪಯಣವೇ ಒಂದು ರೋಚಕ ಹೋರಾಟದ ಕಥೆ.
- ಜನಸಂಘದ ಕಾಲದ ನಿಷ್ಠಾವಂತ: 1972ರಲ್ಲಿ ಧಾರವಾಡದಲ್ಲಿ ಎಲ್.ಎಲ್.ಬಿ ವ್ಯಾಸಂಗ ಮಾಡುತ್ತಿರುವಾಗಲೇ ಜನಸಂಘದ ಮೂಲಕ ರಾಜಕೀಯಕ್ಕೆ ಕಾಲಿಟ್ಟವರು ಪೂಜಾರ್. ಆಗಿನ್ನೂ ಪಿಯುಸಿಯಲ್ಲಿದ್ದಾಗಲೇ ಜನಸಂಘದ ಧ್ವಜ ಹಿಡಿದು ಹಳ್ಳಿಹಳ್ಳಿ ಸುತ್ತಿ ಪಕ್ಷ ಸಂಘಟಿಸಿದ ಇವರು, ಬಿಜೆಪಿಯ ನಿಜವಾದ ತಳಹದಿಯ ರೂವಾರಿ. 1989ರಲ್ಲಿ ಕಾಂಗ್ರೆಸ್ ಮತ್ತು ಜನತಾದಳದ ಅಬ್ಬರದ ನಡುವೆಯೂ ಬಾಗಲಕೋಟೆಯಲ್ಲಿ ಕಮಲ ಅರಳುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
- ಹೋರಾಟ ಮತ್ತು ಜನಸೇವೆ: 1998 ಮತ್ತು 1999ರಲ್ಲಿ ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದ ಇವರು, ಆಲಮಟ್ಟಿ ಜಲಾಶಯದ ಸಂತ್ರಸ್ತರ ಪರವಾಗಿ ನಡೆಸಿದ ಹೋರಾಟ ಮರೆಯುವಂತಿಲ್ಲ. ವಿರೋಧ ಪಕ್ಷದಲ್ಲಿದ್ದರೂ ಅಂದಿನ ಇಡೀ ಸಚಿವ ಸಂಪುಟವನ್ನೇ ಬಾಗಲಕೋಟೆಗೆ ಬರುವಂತೆ ಮಾಡಿದ್ದು ಇವರ ಹಠವಾದಿ ಗುಣಕ್ಕೆ ಸಾಕ್ಷಿ. ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಮತ್ತು ಪರಿಹಾರ ಕೊಡಿಸಲು ಅಂದು ಇವರು ನಡೆಸಿದ ಅಹೋರಾತ್ರಿ ಹೋರಾಟವೇ ಇಂದು ‘ನವನಗರ’ ತಲೆಎತ್ತಲು ಕಾರಣ ಎನ್ನಲಾಗುತ್ತದೆ.
- ‘ಕರುಣೆಯ ತುತ್ತು’: ರಾಜಕೀಯ ಅಧಿಕಾರಕ್ಕಿಂತಲೂ ಮಿಗಿಲಾಗಿ ಇವರು ಇಂದಿಗೂ ಮಾಡುತ್ತಿರುವ ‘ಕರುಣೆಯ ತುತ್ತು’ ಯೋಜನೆ ಜನಮನ ಗೆದ್ದಿದೆ. ಅನಾಥ ವೃದ್ಧರಿಗೆ ಪ್ರತಿದಿನ ಅವರ ಮನೆಬಾಗಿಲಿಗೇ ಊಟ ತಲುಪಿಸುವ ಇವರ ಸಾಮಾಜಿಕ ಕಳಕಳಿ, ಪಕ್ಷಾತೀತವಾಗಿ ಇವರ ಮೇಲಿನ ಗೌರವವನ್ನು ಹೆಚ್ಚಿಸಿದೆ. ಅಷ್ಟೆಲ್ಲಾ ದುಡಿದರೂ 20 ವರ್ಷಗಳ ಕಾಲ ರಾಜಕೀಯ ವನವಾಸ ಅನುಭವಿಸಿದ ಪೂಜಾರ್ ಅವರಿಗೆ ಈ ಬಾರಿ ಟಿಕೆಟ್ ನೀಡಬೇಕೆಂಬ ಒತ್ತಾಯ ಕಾರ್ಯಕರ್ತರಿಂದ ಜೋರಾಗಿ ಕೇಳಿಬರುತ್ತಿದೆ.
ಇದನ್ನೂ ಓದಿ: Bagalkot Medical college: ಬೂಟ್ ಪಾಲಿಶ್ ಚಳವಳಿಯಿಂದ ಶಂಕುಸ್ಥಾಪನೆಯವರೆಗೆ; ಜಿಲ್ಲಾ ನಾಯಕರ ಪಿತೂರಿ ಬಯಲು ಮಾಡಿದ ಬದ್ನೂರ್!
ವೀರಣ್ಣ ಹಳೆಗೌಡರ: ಹಿಂದುಳಿದ ವರ್ಗಗಳ ‘ಹೋರಾಟದ ಕಿಡಿ’
ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕವಾಗಿದ್ದು, ಈ ನಿಟ್ಟಿನಲ್ಲಿ ವೀರಣ್ಣ ಹಳೆಗೌಡರ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇಷ್ಟು ದಿನ ಕಾಂಗ್ರೆಸ್‌ನ ಹೆಚ್‌ವೈ ಮೇಟಿ ಅವರು ಕುರುಬ ಸಮುದಾಯದ ಮತಗಳನ್ನೂ ಸೇರಿದಂತೆ ಹಿಂದೂಳಿದ ವರ್ಗಗಳ ಮತಗಳನ್ನು ಸೆಳೆಯುತ್ತಿದ್ದರು. ಇದೀಗ ಅವರ ಅನುಪಸ್ಥಿತಿಯಲ್ಲಿ ಆ ಮತಗಳನ್ನು ಬಿಜೆಪಿಯತ್ತ ಸೆಳೆಯುವ ಸಾಮರ್ಥ್ಯ ನನಗೆ ಇದೆ ಎಂದು ಹಳೆಗೌಡರ ಅವರು ಪ್ರತಿಪಾದಿಸುತ್ತಿದ್ದಾರೆ.
- ಜೈಲು ವಾಸ ಮತ್ತು ಹೋರಾಟ: ಹಳೆಗೌಡರ ಅವರು ಕೇವಲ ಅಧಿಕಾರಕ್ಕಾಗಿ ಬಂದವರಲ್ಲ. ಕುರುಬ ಸಮುದಾಯದ ಹಕ್ಕುಗಳಿಗಾಗಿ ಹಾಗೂ ಅಹಿಂದ ವರ್ಗವನ್ನು ಬಿಜೆಪಿಯತ್ತ ಸೆಳೆಯಲು ಮಾಜಿ ಡಿಸಿಎಂ ಜೊತೆಗೂಡಿ ರಾಯಣ್ಣ ಬ್ರಿಗೇಡ್ ಕಟ್ಟಿ ರಾಜ್ಯಾದ್ಯಂತ ಸಂಚರಿಸಿದವರು. ಹಿಂದೂಳಿದ ವರ್ಗಗಳ ನ್ಯಾಯಕ್ಕಾಗಿ ನಡೆದ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದು, ಜೈಲು ವಾಸವನ್ನೂ ಅನುಭವಿಸಿದ್ದಾರೆ.
- ರಾಜಕೀಯ ಲೆಕ್ಕಾಚಾರ: “ಬಿಜೆಪಿಯಲ್ಲಿ ಹಿಂದುಳಿದ ವರ್ಗದವರಿಗೆ ಈ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಅವಕಾಶ ಸಿಕ್ಕಿಲ್ಲ. ಈ ಬಾರಿ ನನಗೆ ಟಿಕೆಟ್ ನೀಡಿದರೆ ಕಾಂಗ್ರೆಸ್‌ನ ಅಹಿಂದ ಮತಗಳನ್ನು ಸೆಳೆಯಲು ಸಾಧ್ಯ” ಎಂಬ ತಾರ್ಕಿಕ ವಾದವನ್ನು ಅವರು ವರಿಷ್ಠರ ಮುಂದಿಟ್ಟಿದ್ದಾರೆ. ಸಂಘಟನೆಯಲ್ಲಿ ತಳಹಂತದಿಂದ ಬಂದ ಇವರು, ಕಾರ್ಯಕರ್ತರ ಪಾಲಿಗೆ ಭರವಸೆಯ ನಾಯಕರಾಗಿದ್ದಾರೆ.
ಇದನ್ನೂ ಓದಿ: Bagalkot: ಮಾಜಿ ಶಾಸಕನ ಅಬ್ಬರಕ್ಕೆ ಸೈಲೆಂಟ್ ಆದರೇ ಎಸ್‌ಪಿ? ‘ಧಮ್ಮು ತಾಕತ್’ ಮಾತಿಗೆ ಪೊಲೀಸರು ಕಕ್ಕಾಬಿಕ್ಕಿ!
ಹೈಕಮಾಂಡ್ ಆಯ್ಕೆ ಯಾರ ಕಡೆಗೆ?
ಒಟ್ಟಿನಲ್ಲಿ, ಬಾಗಲಕೋಟೆ ಬಿಜೆಪಿಯಲ್ಲಿ ಈಗ ಮೂರು ವಿಭಿನ್ನ ಆಯಾಮಗಳಿವೆ. ಅನುಭವದ ಚರಂತಿಮಠ, ಸಂಘಟನೆಯ ಪೂಜಾರ್ ಮತ್ತು ಹೋರಾಟದ ಹಳೆಗೌಡರ. ಹೈಕಮಾಂಡ್ ಈ ಮೂವರಲ್ಲಿ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ಕೇವಲ ಒಂದು ಕ್ಷೇತ್ರದ ಫಲಿತಾಂಶವಲ್ಲ, ಬದಲಾಗಿ ಇಡೀ ಜಿಲ್ಲೆಯ ಬಿಜೆಪಿ ಭವಿಷ್ಯದ ದಿಕ್ಸೂಚಿಯಾಗಲಿದೆ. ಚರಂತಿಮಠ ಅವರ ಹಾದಿಗೆ ಅಡೆತಡೆಗಳು ಎದುರಾಗಿರುವ ಸನ್ನಿವೇಶದಲ್ಲಿ, ಪೂಜಾರ್ ಅಥವಾ ಹಳೆಗೌಡರ ಅವರಲ್ಲಿ ಒಬ್ಬರಿಗೆ ಅದೃಷ್ಟ ಒಲಿಯುವ ಸಾಧ್ಯತೆ ದಟ್ಟವಾಗಿದೆ.

