Homeರಾಜ್ಯBagalkot: ವಿಜಯೇಂದ್ರ ಸಮ್ಮುಖದಲ್ಲೇ ಯತ್ನಾಳ್‌ಗೆ ಬಹು ಪರಾಕ್; ಬಿಜೆಪಿ ಮೆರವಣಿಗೆಯಲ್ಲಿ 'ನೆಕ್ಸ್ಟ್ ಸಿಎಂ' ಹವಾ! ಚರಂತಿಮಠ...

Bagalkot: ವಿಜಯೇಂದ್ರ ಸಮ್ಮುಖದಲ್ಲೇ ಯತ್ನಾಳ್‌ಗೆ ಬಹು ಪರಾಕ್; ಬಿಜೆಪಿ ಮೆರವಣಿಗೆಯಲ್ಲಿ ‘ನೆಕ್ಸ್ಟ್ ಸಿಎಂ’ ಹವಾ! ಚರಂತಿಮಠ ನಡೆಗೆ ಹೈಕಮಾಂಡ್ ಶಾಕ್?

ಬಾಗಲಕೋಟೆ (Bagalkot): ರಾಜಕೀಯ ಅಖಾಡದಲ್ಲಿ ಸ್ನೇಹ ಮತ್ತು ಶತ್ರುತ್ವದ ನಡುವಿನ ಗೆರೆ ಬಹಳ ತೆಳ್ಳಗಿರುತ್ತದೆ ಎಂಬುದಕ್ಕೆ ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ನಾಮಪತ್ರ ಸಲ್ಲಿಕೆಯ ಬೃಹತ್ ಮೆರವಣಿಗೆಯೇ ಸಾಕ್ಷಿ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ತಮ್ಮ ಶಕ್ತಿ ಪ್ರದರ್ಶನಕ್ಕೆ ಇಳಿದಿದ್ದರೋ ಅಥವಾ ಪಕ್ಷದ ಹೈಕಮಾಂಡ್ ನಾಯಕರಿಗೆ ಸವಾಲು ಹಾಕಲು ಮುಂದಾಗಿದ್ದರೋ ಎಂಬ ಅನುಮಾನ ಈಗ ಇಡೀ ರಾಜ್ಯ ರಾಜಕೀಯ ವಲಯವನ್ನು ಕಾಡುತ್ತಿದೆ.

ಕಾರಣವಿಷ್ಟೇ, ನಾಮಪತ್ರ ಸಲ್ಲಿಸಲು ಹೊರಡುವ ಮೆರವಣಿಗೆಯಲ್ಲಿ ಬಿಜೆಪಿಯ ಸಾರಥಿ ಬಿ.ವೈ. ವಿಜಯೇಂದ್ರ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಂತಹ ದಿಗ್ಗಜರು ಭಾಗಿಯಾಗಿದ್ದರು. ಅವರ ಕಣ್ಣೆದುರೇ ರಾರಾಜಿಸಿದ್ದು ಮಾತ್ರ ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಭಾವಚಿತ್ರಗಳು! ಅದೂ ಸುಮ್ಮನೆ ಫೋಟೋಗಳಲ್ಲ, ‘ನೆಕ್ಸ್ಟ್ ಸಿಎಂ’ (Next CM) ಎಂಬ ಹಣೆಪಟ್ಟಿ ಹೊತ್ತ ಪೋಸ್ಟರ್‌ಗಳು ಸೃಷ್ಟಿಸಿದ ಸಂಚಲನ ಸಾಮಾನ್ಯದ್ದಲ್ಲ.‌

ವಿಜಯೇಂದ್ರ ಸಮ್ಮುಖದಲ್ಲೇ ‘ಬಂಡಾಯ’ದ ಕಹಳೆ!

ಯಾರು ವಿಜಯೇಂದ್ರ ಅವರ ನಾಯಕತ್ವವನ್ನು ಪ್ರಶ್ನಿಸಿ, ಯಾರು ಯಡಿಯೂರಪ್ಪ ಕುಟುಂಬದ ವಿರುದ್ಧ ದಿನನಿತ್ಯ ವಿಷ ಕಾರುತ್ತಿದ್ದಾರೋ, ಅದೇ ವ್ಯಕ್ತಿಯ ಫೋಟೋವನ್ನು ಹಿಡಿದು ಕಾರ್ಯಕರ್ತರು ಕುಣಿದಿದ್ದು ಬಿಜೆಪಿಯ ಅಧಿಕೃತ ನಾಯಕರಿಗೆ ಮಾಡಿದ ಅತಿದೊಡ್ಡ ಅವಮಾನ ಎಂದೇ ವಿಶ್ಲೇಷಿಸಲಾಗುತ್ತಿದೆ. ಸಾವಿರಾರು ಕಾರ್ಯಕರ್ತರ ನಡುವೆ ಯತ್ನಾಳ್ ಫೋಟೋಗಳು ತೇಲಿ ಬರುತ್ತಿದ್ದರೂ, ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಅದನ್ನು ತಡೆಯುವ ಅಥವಾ ಸರಿಪಡಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ. ಇದು ಕೇವಲ ಅಭಿಮಾನಿಗಳ ಹುಂಬತನವೋ ಅಥವಾ ಚರಂತಿಮಠ ಅವರೇ ಹಾಕಿಕೊಟ್ಟ ‘ಸ್ಕ್ರಿಪ್ಟ್’ ಆ ಎಂಬ ಪ್ರಶ್ನೆ ಈಗ ಗಲ್ಲಿ ಗಲ್ಲಿಗಳಲ್ಲಿ ಕೇಳಿಬರುತ್ತಿದೆ.

ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷದಲ್ಲಿ ಶಿಸ್ತು ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಬಾಗಲಕೋಟೆಯ ಅಂಗಳದಲ್ಲಿ ಅವರ ಕಣ್ಣೆದುರೇ ಶಿಸ್ತು ಹರಾಜಾದ ದೃಶ್ಯಗಳು ಕಂಡುಬಂದವು. ಉಚ್ಚಾಟಿತ ನಾಯಕನೊಬ್ಬನನ್ನು ‘ಮುಂದಿನ ಮುಖ್ಯಮಂತ್ರಿ’ ಎಂದು ಬಿಂಬಿಸುವ ಮೂಲಕ, ಪ್ರಸ್ತುತ ನಾಯಕತ್ವಕ್ಕೆ ಚರಂತಿಮಠ ಬೆಂಬಲಿಗರು ನೇರವಾಗಿಯೇ ಸವಾಲು ಹಾಕಿದ್ದಾರೆ.

ಚರಂತಿಮಠ್ – ಯತ್ನಾಳ್ ‘ಗುಪ್ತ ಸ್ನೇಹ’ದ ಅಸಲಿ ಕಥೆ

ವೀರಣ್ಣ ಚರಂತಿಮಠ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಸಂಬಂಧ ಕೇವಲ ರಾಜಕೀಯವಲ್ಲ, ಅದು ವೈಯಕ್ತಿಕವಾಗಿಯೂ ಬಹಳ ಆಳವಾದುದು. ‘ಅಸಲಿ ಸುದ್ದಿ’ (asalisuddi.com) ಈ ಹಿಂದಿನ ವರದಿಗಳಲ್ಲಿ ಇವರಿಬ್ಬರ ನಡುವಿನ ಒಳಒಪ್ಪಂದಗಳ ಬಗ್ಗೆ ಬೆಳಕು ಚೆಲ್ಲಿತ್ತು. ಈಗ ಆ ಒಪ್ಪಂದಗಳು ಬಾಗಲಕೋಟೆಯ ಬೀದಿಯಲ್ಲಿ ಅಧಿಕೃತವಾಗಿ ಪ್ರದರ್ಶನಗೊಂಡಿವೆ. ಯತ್ನಾಳ್ ಅವರಿಗೆ ಬಿಜೆಪಿಯಲ್ಲಿ ಸ್ಥಾನವಿಲ್ಲದಿರಬಹುದು, ಆದರೆ ಚರಂತಿಮಠ ಅವರ ಹೃದಯದಲ್ಲಿ ಮತ್ತು ಬಾಗಲಕೋಟೆಯ ಮತದಾರರ ಮನಸ್ಸಿನಲ್ಲಿ ಅವರಿನ್ನೂ ‘ಅಸಲಿ ನಾಯಕ’ ಎಂಬ ಸಂದೇಶವನ್ನು ಈ ಮೆರವಣಿಗೆ ರವಾನಿಸಿದೆ.

Bagalkot: ಶಿಸ್ತಿನ ಪಕ್ಷದಲ್ಲಿ ಅಶಿಸ್ತಿನ ಆಟ; ಚರಂತಿಮಠ್-ಯತ್ನಾಳ್ ಜುಗಲ್‌ಬಂದಿ! ಬಿಎಸ್‌ವೈ ವಿರುದ್ಧದ ಸೇಡಿನ ಸರ್ಕಸ್?

Bagalkot BJP: ಕಟಗೇರಿ ಎಂಟ್ರಿಗೆ ‘ಅಸಡ್ಡೆ’, ಯತ್ನಾಳ್ ಮೇಲೆ ‘ಅಕ್ಕರೆ’; ವಿಜಯೇಂದ್ರ ನಾಯಕತ್ವಕ್ಕೆ ಚರಂತಿಮಠ ಸೆಡ್ಡು?

Bagalkot BJP: ಶಿಸ್ತಿನ ಪಕ್ಷದಲ್ಲಿ ‘ಅಶಿಸ್ತಿನ’ ಅಬ್ಬರ; ವಿಜಯೇಂದ್ರ ಕೈಬಿಟ್ಟು ಉಚ್ಛಾಟಿತ ಶಾಸಕ ಯತ್ನಾಳ್ ಬೆನ್ನೇರಿದ್ರಾ ಚರಂತಿಮಠ?‌

ಉಪಚುನಾವಣೆಯಲ್ಲಿ ಗೆಲ್ಲಲು ಚರಂತಿಮಠ ಅವರಿಗೆ ಪಂಚಮಸಾಲಿ ಸಮುದಾಯದ ಮತಗಳು ಅನಿವಾರ್ಯ. ಈ ಸಮುದಾಯದ ಮೇಲೆ ಯತ್ನಾಳ್ ಹೊಂದಿರುವ ಹಿಡಿತವನ್ನು ಬಳಸಿಕೊಳ್ಳಲು ಚರಂತಿಮಠ ಅವರು ಹೈಕಮಾಂಡ್ ಕೆಂಗಣ್ಣಿಗೂ ಗುರಿಯಾಗಲು ಸಿದ್ಧರಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

ಪ್ರಹ್ಲಾದ್ ಜೋಶಿಯವರಿಗೂ ಶಾಕ್ ನೀಡಿದ ‘ಫೋಟೋ ಪಾಲಿಟಿಕ್ಸ್’

ಕೇವಲ ರಾಜ್ಯ ನಾಯಕರಿಗಷ್ಟೇ ಅಲ್ಲ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಉಪಸ್ಥಿತಿಯಲ್ಲೂ ಈ ಘಟನೆ ನಡೆದಿದೆ. ದೆಹಲಿ ಮಟ್ಟದಲ್ಲಿ ಪ್ರಭಾವ ಹೊಂದಿರುವ ಜೋಶಿಯವರ ಎದುರೇ ಪಕ್ಷದ ಶಿಸ್ತು ಉಲ್ಲಂಘನೆಯಾಗುತ್ತಿರುವುದು ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. “ನಾವು ಯಾರನ್ನು ಪಕ್ಷದಿಂದ ಹೊರಹಾಕಿದ್ದೇವೆಯೋ, ಅವರನ್ನೇ ಇಲ್ಲಿ ಹೀರೋ ಎಂದು ಬಿಂಬಿಸಲಾಗುತ್ತಿದೆ” ಎಂಬ ಅಸಮಾಧಾನ ಜೋಶಿ ಬಣದಲ್ಲಿ ಮನೆ ಮಾಡಿದೆ

ಈ ಬೆಳವಣಿಗೆಯಿಂದಾಗಿ ಬಾಗಲಕೋಟೆ ಉಪಚುನಾವಣೆಯು ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹೋರಾಟವಾಗಿ ಉಳಿದಿಲ್ಲ. ಬದಲಾಗಿ, ಇದು ಬಿಜೆಪಿ ಒಳಗಿನ ‘ಅಸಲಿ’ ಮತ್ತು ‘ನಕಲಿ’ ನಾಯಕರ ನಡುವಿನ ಶೀತಲ ಸಮರಕ್ಕೆ ನಾಂದಿ ಹಾಡಿದೆ.

ಹೈಕಮಾಂಡ್ ಶಾಕ್: ಚರಂತಿಮಠ ನಡೆಗೆ ಬರಲಿದೆಯೇ ನೋಟಿಸ್?

ಒಂದು ಕಡೆ ಬಿಜೆಪಿಯ ಬಿ-ಫಾರ್ಮ್ ಹಿಡಿದಿರುವ ಚರಂತಿಮಠ ಮತ್ತೊಂದೆಡೆ ಅವರ ಬೆಂಬಲಿಗರು ಅದೇ ಪಕ್ಷದ ವಿರೋಧಿ ಎನಿಸಿಕೊಂಡಿರುವ ಯತ್ನಾಳ್ ಫೋಟೋ ಹಾರಿಸುತ್ತಿರುವುದು ದ್ವಂದ್ವ ನೀತಿಯ ಪರಮಾವಧಿ. ಈ ಕುರಿತು ಬಿಜೆಪಿ ಶಿಸ್ತು ಸಮಿತಿ ಕ್ರಮ ತೆಗೆದುಕೊಳ್ಳುತ್ತಾ? ಎನ್ನುವ ಪ್ರಶ್ನೆಗಳು ಎದ್ದಿವೆ‌. ವಿಜಯೇಂದ್ರ ಅವರಿಗೆ ಮುಜುಗರ ಉಂಟುಮಾಡಿದ ಈ ಘಟನೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುತ್ತಾ? ಚುನಾವಣೆ ಮುಗಿದ ಬೆನ್ನಲ್ಲೇ ಚರಂತಿಮಠ ಅವರಿಗೆ ನೋಟಿಸ್ ನೀಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಗೆಲುವಿಗಾಗಿ ಯಾವ ಹಂತಕ್ಕಾದರೂ ಇಳಿಯುವ ಚರಂತಿಮಠ ಅವರ ಈ ತಂತ್ರಗಾರಿಕೆ ಅವರಿಗೆ ವರದಾನವಾಗಲಿದೆಯೇ ಅಥವಾ ರಾಜಕೀಯ ಭವಿಷ್ಯಕ್ಕೆ ಮುಳುವಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ಯತ್ನಾಳ್ ಬೆಂಬಲ ಪಡೆಯುವ ಭರದಲ್ಲಿ ಸ್ವಂತ ಪಕ್ಷದ ನಾಯಕರನ್ನೇ ಎದುರು ಹಾಕಿಕೊಂಡಿರುವುದು ಎಷ್ಟು ಬುದ್ಧಿವಂತಿಕೆ ಎಂಬ ಚರ್ಚೆ ಶುರುವಾಗಿದೆ.

ಇದು ಕೇವಲ ಫೋಟೋ ಅಲ್ಲ, ಬದಲಾವಣೆಯ ಮುನ್ಸೂಚನೆ!

ಬಾಗಲಕೋಟೆಯಲ್ಲಿ ನಡೆದ ಈ ‘ಫೋಟೋ ಹೈಡ್ರಾಮಾ’ ಕೇವಲ ಒಂದು ಆಕಸ್ಮಿಕ ಘಟನೆಯಲ್ಲ. ಇದು ವ್ಯವಸ್ಥಿತವಾಗಿ ನಡೆದ ಒಂದು ರಾಜಕೀಯ ಪ್ರದರ್ಶನ. ಬಿಜೆಪಿಯೊಳಗೆ ಬೆಳೆಯುತ್ತಿರುವ ಅತೃಪ್ತ ಬಣಕ್ಕೆ ಚರಂತಿಮಠ ಅವರು ವೇದಿಕೆ ಒದಗಿಸಿಕೊಟ್ಟಂತಿದೆ. ಯತ್ನಾಳ್ ಹೊರಗಿದ್ದರೂ ಒಳಗಿನವರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ.

ವಿಜಯೇಂದ್ರ ಅವರ ನಾಯಕತ್ವಕ್ಕೆ ಬಾಗಲಕೋಟೆಯಲ್ಲಿ ಸಿಕ್ಕ ಈ ‘ಸ್ವಾಗತ’ವು ರಾಜ್ಯದ ಇತರ ಕ್ಷೇತ್ರಗಳ ಮೇಲೆಯೂ ಪ್ರಭಾವ ಬೀರಬಹುದು. ಚರಂತಿಮಠ ಅವರು ಗೆದ್ದರೂ ಅದು ‘ಬಿಜೆಪಿಯ ಗೆಲುವು’ ಎನ್ನುವುದಕ್ಕಿಂತ ‘ಯತ್ನಾಳ್ ಬಣದ ಗೆಲುವು’ ಎಂದು ಬಿಂಬಿತವಾಗುವ ಅಪಾಯವಿದೆ. ಇದು ಬಿಜೆಪಿಯ ಅಧಿಕೃತ ನಾಯಕತ್ವಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಒಟ್ಟಾರೆಯಾಗಿ, ಬಾಗಲಕೋಟೆ ಉಪಚುನಾವಣೆಯು ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ವಿಜಯೇಂದ್ರ ಕಣ್ಣೆದುರಲ್ಲೇ ಯತ್ನಾಳ್ ಪರಾಕು ಹಾಕಿದ್ದು ಮಾತ್ರ ಅಚ್ಚರಿ ಮೂಡಿಸಿದೆ. ಇದರ ಹಿಂದೆ ಯಾರ, ಯಾರ ಬೆಂಬಲವಿದೆ? ಹೈಕಮಾಂಡ್ ಈ ‘ಶಾಕ್’ ನಿಂದ ಚೇತರಿಸಿಕೊಂಡು ಯಾವ ಕ್ರಮ ಕೈಗೊಳ್ಳಲಿದೆ? ಬಾಗಲಕೋಟೆಯ ಮತದಾರರು ಈ ‘ಫೋಟೋ ಪಾಲಿಟಿಕ್ಸ್’ ಗೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ? ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments