ಬಾಗಲಕೋಟೆ: ಉಪಚುನಾವಣೆಯ ಅಖಾಡದಲ್ಲಿ ಬಿಜೆಪಿಯ (Bagalkot BJP) ಅಧಿಕೃತ ಅಭ್ಯರ್ಥಿ ವೀರಣ್ಣ ಚರಂತಿಮಠ್ ಅವರ ಇತ್ತೀಚಿನ ನಡೆಗಳು ಮತ್ತು ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂಬಂತೆ ಕಂಡರೂ, ಚರಂತಿಮಠ್ ಅವರ ಮಾತುಗಳ ನಡುವಿನ ವ್ಯಂಗ್ಯ ಮತ್ತು ಅಂತರವು ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವದ ವಿರುದ್ಧದ ಅಸಮಾಧಾನವನ್ನು ಎತ್ತಿ ತೋರಿಸುತ್ತಿದೆ. ವಿಶೇಷವಾಗಿ ಬಸವರಾಜ್ ಕಟಗೇರಿ ಮರಳಿದ ವಿಚಾರದಲ್ಲಿ ಅವರು ತೋರಿದ ಅನಾಸಕ್ತಿ ಮತ್ತು ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕುರಿತಾದ ಮಮಕಾರವು ಬಿಜೆಪಿಯ ಒಳಗಿನ ಬಿರುಕನ್ನು ಜಗಜ್ಜಾಹೀರು ಮಾಡುತ್ತಿದೆ.
“ಅವರ ಕೆಲಸ ಅವರು ಮಾಡ್ತಾರೆ, ನನಗೇನು ಗೊತ್ತಿಲ್ಲ”: ಕಟಗೇರಿ ವಿಚಾರದಲ್ಲಿ ಅಸಡ್ಡೆ!
ದಶಕಗಳ ಕಾಲ ಬಿಜೆಪಿಯಲ್ಲಿದ್ದು, ಚರಂತಿಮಠ್ ಅವರೊಂದಿಗಿನ ಸಂಘರ್ಷದಿಂದಲೇ ಪಕ್ಷ ತೊರೆದಿದ್ದ ಬಸವರಾಜ್ ಕಟಗೇರಿ ಮರಳಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆದರೆ ಈ ಪುನರಾಗಮನದ ಕುರಿತು ಚರಂತಿಮಠ್ ಅವರು ಪ್ರತಿಕ್ರಿಯಿಸಿದ ರೀತಿ ಆಘಾತಕಾರಿಯಾಗಿದೆ. “ಅವರು ವಾಪಸ್ ಬರುವ ಬಗ್ಗೆ ನನಗೇನು ಗೊತ್ತಿಲ್ಲ, ರಾಜ್ಯ ಅಧ್ಯಕ್ಷರು ಕಾರಜೋಳ ಮತ್ತು ಅರುಣ್ ಶಹಾಪುರ ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ, ಅವರ ಕೆಲಸ ಅವರು ಮಾಡಿದ್ದಾರೆ” ಎನ್ನುವ ಮೂಲಕ ಚರಂತಿಮಠ್ ಅವರು ತಮ್ಮ ಅಸಮಾಧಾನವನ್ನು ನೇರವಾಗಿಯೇ ಹೊರಹಾಕಿದ್ದಾರೆ.
ತಮ್ಮದೇ ಕ್ಷೇತ್ರದ ಪ್ರಮುಖ ನಾಯಕನೊಬ್ಬ ಪಕ್ಷಕ್ಕೆ ಬರುವಾಗ ಸ್ಥಳೀಯ ಅಭ್ಯರ್ಥಿಗೆ ಮಾಹಿತಿಯೇ ಇಲ್ಲ ಎನ್ನುವುದು ಎಷ್ಟು ಸರಿ? ಇದು ವಿಜಯೇಂದ್ರ ನಾಯಕತ್ವದ ರಾಜ್ಯ ಬಿಜೆಪಿಯು ಚರಂತಿಮಠ್ ಅವರನ್ನೇ ಕತ್ತಲಲ್ಲಿಟ್ಟು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ. ಚರಂತಿಮಠ್ ಅವರ ಈ “ನನಗೇನು ಗೊತ್ತಿಲ್ಲ” ಎಂಬ ಅಸಡ್ಡೆಯ ಮಾತುಗಳು ರಾಜ್ಯ ನಾಯಕತ್ವದ ಮೇಲೆ ಅವರಿಗಿರುವ ಅವಿಶ್ವಾಸವನ್ನು ಎತ್ತಿ ತೋರಿಸುತ್ತಿದೆ.
ಇದನ್ನೂ ಓದಿ: Bagalkot BJP: ಚರಂತಿಮಠಗೆ ‘ಮರುಮನ್ನಣೆ’; ಸವಾಲುಗಳ ಸುರಿಮಳೆ ಮಧ್ಯೆ ಗೆದ್ದುಬರುತ್ತಾ ಹಳೆ ಹುಲಿ?
ಯತ್ನಾಳ್ ಅಕ್ಕರೆ; ವಿಜಯೇಂದ್ರ ಅಸಡ್ಡೆ?
ಒಂದೆಡೆ ಪಕ್ಷದ ಅಧಿಕೃತ ನಾಯಕರ ನಿರ್ಧಾರಗಳಿಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಚರಂತಿಮಠ್, ಇನ್ನೊಂದೆಡೆ ಪಕ್ಷದಿಂದ ಉಚ್ಚಾಟಿತಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಚಾರದ ಬಗ್ಗೆ ಮಾತ್ರ ಭಾರೀ ಆಸಕ್ತಿ ತೋರುತ್ತಿದ್ದಾರೆ. “ನಮ್ಮ ವೈಯಕ್ತಿಕ ಸಂಬಂಧದ ಮೇಲೆ ಯತ್ನಾಳ್ ಅವರು ಬರಬಹುದು, ಅವರಿಗೆ ಈ ಕ್ಷೇತ್ರದ ಪರಿಚಯವಿದೆ” ಎಂದು ಚರಂತಿಮಠ್ ಹೇಳುತ್ತಿರುವುದು ಹೈಕಮಾಂಡ್‌ಗೆ ನೀಡಿದ ಸವಾಲಿನಂತಿದೆ. ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಬಂಡಾಯವೆದ್ದಿರುವ ಯತ್ನಾಳ್ ಅವರನ್ನೇ ಪ್ರಚಾರಕ್ಕೆ ಆಹ್ವಾನಿಸುವ ಮೂಲಕ ಚರಂತಿಮಠ್ ಅವರು ತಾವು ಯಾವ ಬಣದಲ್ಲಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದು ಪಕ್ಷದ ಶಿಸ್ತನ್ನು ಗಾಳಿಗೆ ತೂರಿದಂತಾಗುವುದಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.
ಹೈಕಮಾಂಡ್ ಮೇಲೆ ಚರಂತಿಮಠ್ ಮುನಿಸು?
Bagalkot BJP: ಚರಂತಿಮಠ್ ಅವರು ಹಿರಿಯ ನಾಯಕರಾಗಿ ಬಾಗಲಕೋಟೆಯಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡವರು. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷದ ನಿರ್ಧಾರಗಳಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಅವರಲ್ಲಿ ಮೂಡಿದಂತಿದೆ. ವಿಜಯೇಂದ್ರ ನಾಯಕತ್ವದ ಬಗ್ಗೆ ಅವರು ತೋರುತ್ತಿರುವ ಈ ಅಸಡ್ಡೆಯು ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ಹೊಡೆತ ನೀಡುವ ಸಾಧ್ಯತೆ ಇದೆ. ಕಾರಜೋಳ ಮತ್ತು ಅರುಣ್ ಶಹಾಪುರ ಅವರ ಮೂಲಕ ಹೈಕಮಾಂಡ್ ಜಿಲ್ಲಾ ರಾಜಕಾರಣವನ್ನು ನಿಯಂತ್ರಿಸಲು ಮುಂದಾಗಿರುವುದು ಚರಂತಿಮಠ್ ಅವರಿಗೆ ನುಂಗಲಾರದ ತುತ್ತಾಗಿದೆ.
ಆಂತರಿಕ ಕಚ್ಚಾಟದ ಲಾಭ ಯಾರಿಗೆ?
ಒಂದೆಡೆ ಕಟಗೇರಿ ಅವರೊಂದಿಗೆ ಹಳೆಯ ದ್ವೇಷದ ಆಡಿಯೋ ವೈರಲ್ ಸೌಂಡ್ ಇನ್ನು ಕಿವಿಗಳಲ್ಲಿ ಗುಂಯ್ಗುಡುತ್ತಿದೆ. ಇನ್ನೊಂದೆಡೆ ಯತ್ನಾಳ್ ಅವರಂತಹ ಬಂಡಾಯ ನಾಯಕರನ್ನು ಪ್ರಚಾರಕ್ಕೆ ತರುವ ಹಠ. ಈ ನಡುವೆ ರಾಜ್ಯ ನಾಯಕತ್ವದ ಮೇಲೆ ಅಸಮಾಧಾನ. ಈ ಎಲ್ಲಾ ಬೆಳವಣಿಗೆಗಳು ಬಾಗಲಕೋಟೆ ಬಿಜೆಪಿಯಲ್ಲಿ “ಎಲ್ಲವೂ ಸರಿ ಇಲ್ಲ” ಎಂಬ ಅಸಲಿ ಸತ್ಯವನ್ನು ಸಾರುತ್ತಿವೆ. ಅಭ್ಯರ್ಥಿಯೇ ರಾಜ್ಯ ನಾಯಕರ ನಿರ್ಧಾರಗಳನ್ನು ಅಸಡ್ಡೆಯಿಂದ ನೋಡುತ್ತಿದ್ದರೆ, ಕೆಳಮಟ್ಟದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುವುದು ಸಹಜ. ಈ ಆಂತರಿಕ ಕಚ್ಚಾಟದ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಇದನ್ನೂ ಓದಿ: Bagalkot Medical college: ಬೂಟ್ ಪಾಲಿಶ್ ಚಳವಳಿಯಿಂದ ಶಂಕುಸ್ಥಾಪನೆಯವರೆಗೆ; ಜಿಲ್ಲಾ ನಾಯಕರ ಪಿತೂರಿ ಬಯಲು ಮಾಡಿದ ಬದ್ನೂರ್!
ಗೆಲುವಿನ ಹಾದಿಯಲ್ಲಿ ಅಡೆತಡೆಗಳು
ಚರಂತಿಮಠ್ ಅವರು ಮಾ. 23ರಂದು ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಅವರ ಸುತ್ತಲಿರುವ ಸವಾಲುಗಳು ಮಾತ್ರ ಸುರಿಮಳೆಯಂತೆ ಬರುತ್ತಿವೆ.
- ಹಳೆಯ ಶತ್ರುಗಳನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು ಅವರಿಗೆ ‘ಪ್ಲಸ್’ ಆಗುವ ಬದಲು ‘ಮೈನಸ್’ ಆಗುವ ಲಕ್ಷಣಗಳು ಕಾಣುತ್ತಿವೆ.
- ಯತ್ನಾಳ್ ಅವರ ಪ್ರಚಾರವು ಪಕ್ಷದ ಒಗ್ಗಟ್ಟನ್ನು ಪ್ರದರ್ಶಿಸುವ ಬದಲು ಬಂಡಾಯದ ವೇದಿಕೆಯಾಗಿ ಮಾರ್ಪಟ್ಟರೆ ಹೈಕಮಾಂಡ್ ಸುಮ್ಮನಿರುತ್ತದೆಯೇ?
- ಅಭಿವೃದ್ಧಿಯ ವಿಚಾರಗಳಿಗಿಂತ ಹೆಚ್ಚಾಗಿ ಆಂತರಿಕ ರಾಜಕೀಯದ ಚರ್ಚೆಗಳೇ ಮುನ್ನೆಲೆಗೆ ಬರುತ್ತಿರುವುದು ಅವರ ಗೆಲುವಿನ ಹಾದಿಯನ್ನು ಕಠಿಣಗೊಳಿಸುತ್ತಿದೆ.
ವೀರಣ್ಣ ಚರಂತಿಮಠ್ ಅವರು ಈ ಬಾರಿ ಕೇವಲ ವಿರೋಧ ಪಕ್ಷದ ವಿರುದ್ಧವಷ್ಟೇ ಅಲ್ಲ, ತಮ್ಮದೇ ಪಕ್ಷದ ಒಳಗಿನ ವ್ಯವಸ್ಥೆಯ ವಿರುದ್ಧವೂ ಹೋರಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಯತ್ನಾಳ್ ಅವರ ಬೆಂಬಲದೊಂದಿಗೆ ರಾಜ್ಯ ನಾಯಕತ್ವಕ್ಕೆ ಸೆಡ್ಡು ಹೊಡೆಯಲು ಹೊರಟಿರುವ ಚರಂತಿಮಠ್ ಅವರ ಈ ನಡೆ ಬಾಗಲಕೋಟೆ ಉಪಸಮರದಲ್ಲಿ ಯಾವ ತಿರುವು ಪಡೆಯಲಿದೆ? ಹಳೆಹುಲಿಯ ಈ ಲೆಕ್ಕಾಚಾರ ವರ್ಕೌಟ್ ಆಗುತ್ತಾ ಅಥವಾ ಉಲ್ಟಾ ಹೊಡೆಯುತ್ತಾ? ಕಾದು ನೋಡಬೇಕಿದೆ.

