ಚಿಕ್ಕಮಗಳೂರು/ಬೆಂಗಳೂರು: ಸೌಹಾರ್ದತೆಯ ನೆಲೆಬೀಡು ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯಲ್ಲಿ (Baba Budangiri) ಕಾಂಗ್ರೆಸ್ ಸರ್ಕಾರವು ಸಂಘಪರಿವಾರದ ಒತ್ತಡಕ್ಕೆ ಮಣಿದು, ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ‘ಉರುಸ್’ ಆಚರಣೆಗೆ ಅಡ್ಡಿಪಡಿಸಿದೆ ಎಂದು ಆರೋಪಿಸಿ, ಜಿಲ್ಲಾಡಳಿತದ ಈ ದ್ವಂದ್ವ ನೀತಿಯನ್ನು ಖಂಡಿಸಿ ರಾಜ್ಯದ ಪ್ರಮುಖ ಪ್ರಗತಿಪರ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತದ ಧೋರಣೆಗೆ ಉರುಸ್ ಬಹಿಷ್ಕಾರ
ಮಾರ್ಚ್ 4 ರಿಂದ 6 ರವರೆಗೆ ಬಾಬಾ ಬುಡನ್ (Baba Budangiri) ದರ್ಗಾದಲ್ಲಿ ಸಂದಲ್ ಮತ್ತು ಉರುಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಇಸ್ಲಾಂ ಧರ್ಮದ ಸೂಫಿ ಸಂತರ ಪರಂಪರೆಯಂತೆ ವಿಧಿವಿಧಾನ ನೆರವೇರಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರಾಕರಣೆ ಮಾಡಿದೆ. ಶಾಖಾದ್ರಿ (ಸಜ್ಜಾದೆ ನಶೀನ್) ಅವರಿಗೆ ಗಂಧ ಹಚ್ಚುವ ಮತ್ತು ಗೋರಿಯ ಮೇಲೆ ಹಸಿರು ಚಾದರ್ ಅರ್ಪಿಸುವ ಸಾಂಪ್ರದಾಯಿಕ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಜಿಲ್ಲಾಡಳಿತದ ಈ ಏಕಪಕ್ಷೀಯ ಧೋರಣೆಯಿಂದ ನೊಂದ ಶಾಖಾದ್ರಿ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಇಂದು ನಡೆಯಬೇಕಿದ್ದ ಉರುಸ್ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಬಹಿಷ್ಕರಿಸಿದ್ದಾರೆ.
“ಇದು ಸರ್ಕಾರದ ಆದೇಶದ ಉಲ್ಲಂಘನೆ ಮಾತ್ರವಲ್ಲ, ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಸ್ಪಷ್ಟ ಉಲ್ಲಂಘನೆಯೂ ಹೌದು. ಇದರ ವಿರುದ್ಧ ನಾವು ನ್ಯಾಯಾಂಗ ಹೋರಾಟ ಮುಂದುವರಿಸುತ್ತೇವೆ” ಎಂದು ಶಾಖಾದ್ರಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: US Target India: ಭಾರತದ ಮೇಲೆ ಅಮೆರಿಕದ ಕಣ್ಣು? ಇರಾನ್ ಪ್ರತಿನಿಧಿ ಬಿಚ್ಚಿಟ್ಟ ಸ್ಫೋಟಕ ಸತ್ಯ!
ಮುಖ್ಯಮಂತ್ರಿಗೆ ಬಹಿರಂಗ ಪತ್ರ: ಪ್ರಮುಖ ಆರೋಪಗಳು
ಹಿರಿಯ ಪತ್ರಕರ್ತೆ ಡಾ. ವಿಜಯಮ್ಮ, ನಟ ಪ್ರಕಾಶ್ ರಾಜ್, ತಾರಾರಾವ್ ಸೇರಿದಂತೆ ಹಲವು ಪ್ರಗತಿಪರ ಚಿಂತಕರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಸರ್ಕಾರದ ‘ಹುಸಿ ಜಾತ್ಯಾತೀತ’ ನಿಲುವನ್ನು ಪ್ರಶ್ನಿಸಿದ್ದಾರೆ:
- ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ: ದತ್ತ ಜಯಂತಿಯ ಹೆಸರಿನಲ್ಲಿ ಇಡೀ ಗಿರಿಯನ್ನು ಕೇಸರಿಮಯಗೊಳಿಸಿ, ಬ್ರಾಹ್ಮಣೀಯ ಆಚರಣೆಗಳಿಗೆ ಸಂಪೂರ್ಣ ರಕ್ಷಣೆ ನೀಡಿದ ಜಿಲ್ಲಾಡಳಿತ, ಉರುಸ್ ವಿಚಾರದಲ್ಲಿ ಮಾತ್ರ ಸೂಫಿ ಪರಂಪರೆಯನ್ನು ನಿಶೇಧಿಸಲು ಸಂಚು ರೂಪಿಸಿದೆ.
- ಪೊಲೀಸ್ ದೌರ್ಜನ್ಯ: ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಮುಂದಾದ ಹೋರಾಟಗಾರರನ್ನು ಪೊಲೀಸರು ಅಮಾನವೀಯವಾಗಿ ಎಳೆದಾಡಿ ಅವಮಾನಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದು ಪತ್ರದಲ್ಲಿ ಖಂಡಿಸಲಾಗಿದೆ.
- ಅಲ್ಪಸಂಖ್ಯಾತರ ಹಕ್ಕುಗಳ ಹರಣ: ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ಹತ್ತಿಕ್ಕುವ ಮೂಲಕ ಕಾಂಗ್ರೆಸ್ ಸರ್ಕಾರ ಸಂಘಪರಿವಾರಕ್ಕೆ ಶರಣಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ
ಇಂದು ಬೆಳಿಗ್ಗೆ 10 ಗಂಟೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನೂರಾರು ಹೋರಾಟಗಾರರು ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ನಂತರ ಬಾಬಾ ಬುಡನ್‌ಗಿರಿಗೆ (Baba Budangiri) ಪ್ರಯಾಣ ಬೆಳೆಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಕ್ಕೆ ಸಹಿ ಹಾಕಿದ ಪ್ರಮುಖರು:
ಡಾ. ವಿಜಯಮ್ಮ, ನಟ ಪ್ರಕಾಶ್ ರಾಜ್, ನೂರ್ ಶ್ರೀಧರ್ (ಕರ್ನಾಟಕ ಜನಶಕ್ತಿ), ಕೆ.ಎಲ್. ಅಶೋಕ್, ಸಾಹಿತಿ ಬಂಜಗೆರೆ ಜಯಪ್ರಕಾಶ್, ಪ್ರೊ. ವಿ.ಎಸ್. ಶ್ರೀಧರ್, ಶಿಕ್ಷಣ ತಜ್ಞ ಶ್ರೀಪಾದ್ ಭಟ್, ನಿರಂಜನಾರಾಧ್ಯ, ಹೋರಾಟಗಾರರಾದ ಬಸವರಾಜ್ ಕೌತಾಳ್, ಕರಿಯಪ್ಪ ಗುಡಿಮನಿ, ಸಿರಿಮನೆ ನಾಗರಾಜ್, ಕುಮಾರ್ ಸಮತಳ, ಖಲೀಂಉಲ್ಲಾ ಹಾಗೂ ಗೌಸ್ ಮೊಹಿಯುದ್ಧೀನ್.

