ಧಾರವಾಡ: ಇಂದಿನ ಯುವ ಸಮುದಾಯಕ್ಕೆ ಮಾನವಶಾಸ್ತ್ರ ವಿಷಯದ ಅಧ್ಯಯನ ಹಾಗೂ ಸಂಶೋಧನೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಆರ್. ಗಂಗಾಧರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಅಂಥ್ರೋಪೋಲಾಜಿಕಲ್ ಸೊಸೈಟಿಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ರಾಶಿ ಫಾರ್ಮ್ಸ್‌ನಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಮಾನವಶಾಸ್ತ್ರ ದಿನಾಚರಣೆ’ (Anthropology Day) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಂಸ್ಕೃತಿಕ ಪರಂಪರೆಯ ರಕ್ಷಣೆ
ಅಮೇರಿಕನ್ ಅಂಥ್ರೋಪೋಲಾಜಿಕಲ್ ಅಸೋಸಿಯೇಷನ್ ವಿಶ್ವ ಮಾನವಶಾಸ್ತ್ರ ದಿನಾಚರಣೆ (Anthropology Day) ಆಚರಿಸಲು ನಿರ್ಧರಿಸಿದ್ದು, ಸಾರ್ವಜನಿಕರಲ್ಲಿ ಈ ವಿಷಯದ ಕುರಿತು ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. “ಭಾರತೀಯ ಸಂಪ್ರದಾಯ ಮತ್ತು ಜ್ಞಾನ ಪರಂಪರೆಯು ಅತ್ಯಂತ ಪುರಾತನವಾದುದು. ಜಾಗತಿಕವಾಗಿ ನಡೆಯುತ್ತಿರುವ ವೇಗದ ಬದಲಾವಣೆಗಳ ನಡುವೆ, ಮಾನವನ ಸಾಂಸ್ಕೃತಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಮಾನವಶಾಸ್ತ್ರದ ಅಧ್ಯಯನ ಅನಿವಾರ್ಯವಾಗಿದೆ,” ಎಂದು ಅವರು ತಿಳಿಸಿದರು.
ಪಾಶ್ಚಿಮಾತ್ಯ ದೇಶಗಳಲ್ಲಿ ಮಾನವಶಾಸ್ತ್ರ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ನಮ್ಮ ವಿದ್ಯಾರ್ಥಿಗಳು ಯೋಗ, ಆಯುರ್ವೇದ ಹಾಗೂ ನಮ್ಮ ಮೂಲ ಸಂಸ್ಕೃತಿಯನ್ನು ಈ ಶಾಸ್ತ್ರದ ಮೂಲಕ ಅರಿಯಬೇಕು ಮತ್ತು ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: NCERT Row: ಪಠ್ಯದಲ್ಲಿ ಲಂಚದ ಪಾಠ; ಸುಪ್ರೀಂ ಕೋರ್ಟ್ ಕೆಂಗಣ್ಣು!
ಸರ್ವವ್ಯಾಪಿ ಮಾನವಶಾಸ್ತ್ರ
ಸಿ.ಎಂ.ಡಿ.ಆರ್ ಸಹ ಪ್ರಾಧ್ಯಾಪಕ ಪ್ರೊ. ಜೈ ಪ್ರಭಾಕರ ಎಸ್.ಸಿ ಮಾತನಾಡಿ, “ಮಾನವಶಾಸ್ತ್ರವು ಕೇವಲ ಒಂದು ವಿಷಯವಲ್ಲ, ಅದು ಎಲ್ಲಾ ಜ್ಞಾನಶಿಸ್ತುಗಳನ್ನೂ ಒಳಗೊಂಡಿರುವ ಮಾನವ ಸಂಸ್ಕೃತಿಯ ಅಧ್ಯಯನವಾಗಿದೆ. ಇತರ ವಿಷಯಗಳ ಸಂಶೋಧಕರು ಕೂಡ ಮಾನವಶಾಸ್ತ್ರದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ,” ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಸಿ. ಸುಗಂಧಿ ಮಾತನಾಡಿ, ಪ್ರಸ್ತುತ ಭಾರತೀಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (UPSC/KPSC) ಹೆಚ್ಚಿನ ಅಭ್ಯರ್ಥಿಗಳು ಮಾನವಶಾಸ್ತ್ರವನ್ನು ಆಯ್ದುಕೊಳ್ಳುತ್ತಿರುವುದು ಈ ವಿಷಯದ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ವೈಜ್ಞಾನಿಕ ದೃಷ್ಟಿಕೋನ
ಸೊಸೈಟಿಯ ಅಧ್ಯಕ್ಷ ಶ್ರೀನಿವಾಸ ಶಾಸ್ತ್ರಿ ಮಾತನಾಡಿ, ಸಮಾಜವನ್ನು ನೋಡುವ ದೃಷ್ಟಿಕೋನ ಭಿನ್ನವಾಗಿರಬೇಕು ಮತ್ತು ಮಾನವಶಾಸ್ತ್ರದ ಸಂಶೋಧನೆಗಳು ಸಂಪೂರ್ಣವಾಗಿ ವೈಜ್ಞಾನಿಕ ತಳಹದಿಯ ಮೇಲೆ ನಿಂತಿವೆ ಎಂದರು. ಕಾರ್ಯದರ್ಶಿ ಪ್ರೊ. ಮಲ್ಲಿಕಾರ್ಜುನ ಕಾಂಬಳೆ ವಾರ್ಷಿಕ ವರದಿಯನ್ನು ಮಂಡಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಪುಂಡಪ್ಪನವರ, ಡಾ. ಪ್ರಭಾಕರ ಕಾಂಬಳೆ, ಡಾ. ಅನುಷಾ ಕೆ., ಡಾ. ಅಂಜು ನಾಗಣ್ಣವರ, ಡಾ. ರಾಜು ಜಯಪ್ಪಗೋಳ್ ಸೇರಿದಂತೆ ಅನೇಕ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಾ. ಪ್ರಬುದ್ಧ ಕಾಂಬಳೆ ಸ್ವಾಗತಿಸಿದರು, ಡಾ. ಪ್ರಸನ್ನ ಕಳಾಸಕರ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಡಾ. ಗೌತಮ ಸಿಂಗೆ ವಂದಿಸಿದರು.

