Tuesday, November 24, 2026
Home ವಿಶ್ಲೇಷಣೆ Bagalkot: DHOಗೆ ಆಯುಕ್ತರಿಂದ ಶೋಕಾಸ್ ನೋಟಿಸ್! ತನಿಖಾ ವರದಿ ಬೆನ್ನಲ್ಲೇ ಬಿಗ್‌ ಟ್ವಿಸ್ಟ್!

Bagalkot: DHOಗೆ ಆಯುಕ್ತರಿಂದ ಶೋಕಾಸ್ ನೋಟಿಸ್! ತನಿಖಾ ವರದಿ ಬೆನ್ನಲ್ಲೇ ಬಿಗ್‌ ಟ್ವಿಸ್ಟ್!

Bagalkot: DHOಗೆ ಆಯುಕ್ತರಿಂದ ಶೋಕಾಸ್ ನೋಟಿಸ್! ತನಿಖಾ ವರದಿ ಬೆನ್ನಲ್ಲೇ ಬಿಗ್‌ ಟ್ವಿಸ್ಟ್!

ಬಾಗಲಕೋಟೆ (Bagalkot) ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಡಳಿತಾತ್ಮಕ ವಲಯದಲ್ಲಿ ಈಗ ತೀವ್ರ ಸಂಚಲನ ಮೂಡಿದೆ. ಒಂದು ಕಡೆ ಸರ್ಕಾರದ ಉನ್ನತ ಮಟ್ಟದ ಪತ್ರವ್ಯವಹಾರಗಳು ಹಾಗೂ ಇಲಾಖಾ ವಿಚಾರಣೆಯ ಚುರುಕು, ಮತ್ತೊಂದೆಡೆ ನ್ಯಾಯಾಲಯದ ಕದನ—ಈ ಎರಡೂ ಬೆಳವಣಿಗೆಗಳು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿವೆ. ದಾಖಲೆಗಳ ಪುಟಗಳನ್ನು ತಿರುವಿ ಹಾಕಿದಾಗ, ಈ ಪ್ರಕರಣವು ಹಂತ ಹಂತವಾಗಿ ಪಡೆದುಕೊಂಡಿರುವ ತಿರುವುಗಳು ಸ್ಪಷ್ಟವಾಗಿ ಗೋಚರಿಸುತ್ತವೆ.

ವಿಜಿಲೆನ್ಸ್ ಕದ ತಟ್ಟಿದ್ದ ಶಾಸಕರ ಪತ್ರ (13.08.2026)

ಈ ಬೆಳವಣಿಗೆಗಳ ಆರಂಭಿಕ ಕೊಂಡಿಯಾಗಿ ಕಾಣಿಸಿಕೊಳ್ಳುವುದು ಬಾಗಲಕೋಟೆ (Bagalkot) ಕ್ಷೇತ್ರದ ಶಾಸಕ ಉಮೇಶ ಹುಲ್ಲಪ್ಪ ಮೇಟಿ ಅವರು 13.08.2026 ರಂದು ಬೆಂಗಳೂರಿನ ಆರೋಗ್ಯ ಸೌಧದ ಚೀಫ್ ವಿಜಿಲೆನ್ಸ್ ಆಫೀಸರ್ ಅವರಿಗೆ ಬರೆದ ಪತ್ರ. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಯಾಗಿದ್ದ ಡಾ. ಸುವರ್ಣಾ ಕುಲಕರ್ಣಿ ಅವರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿರುವ ದೂರುಗಳನ್ನು ಶಾಸಕರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಖಾಸಗಿ ನರ್ಸಿಂಗ್ ಹೋಮ್ ಜೊತೆಗಿನ ನಂಟು, ಆಶಾ ಕಾರ್ಯಕರ್ತೆಯರ ಮೂಲಕ ಗರ್ಭಿಣಿಯರನ್ನು ಖಾಸಗಿ ಆಸ್ಪತ್ರೆಗಳಿಗೆ ಕರೆತರುವ ಆರೋಪ, ಸರ್ಕಾರಿ ಔಷಧಗಳ ಕುರಿತ ದೂರುಗಳು, ಭ್ರೂಣ ಲಿಂಗಪತ್ತೆ ಹಾಗೂ ಚುನಾವಣಾ ಸಂದರ್ಭದ ಆರೋಪಗಳ ಕುರಿತು ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸುವಂತೆ ಅವರು ಕೋರಿದ್ದರು. ಅಷ್ಟೇ ಅಲ್ಲದೆ, ತನಿಖೆ ಪೂರ್ಣಗೊಳ್ಳುವವರೆಗೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಅಮಾನತುಗೊಳಿಸಿ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವಂತೆಯೂ ಪತ್ರದಲ್ಲಿ ಮನವಿ ಮಾಡಲಾಗಿತ್ತು.

Bagalkot: DHOಗೆ ಆಯುಕ್ತರಿಂದ ಶೋಕಾಸ್ ನೋಟಿಸ್! ತನಿಖಾ ವರದಿ ಬೆನ್ನಲ್ಲೇ ಬಿಗ್‌ ಟ್ವಿಸ್ಟ್!
ಶಾಸಕ ಉಮೇಶ ಮೇಟಿ ಅವರು ಬೆಂಗಳೂರಿನ ಆರೋಗ್ಯ ಸೌಧದ ಚೀಫ್ ವಿಜಿಲೆನ್ಸ್ ಆಫೀಸರ್ ಅವರಿಗೆ ಬರೆದ ಪತ್ರ

ಬೆಳಗಾವಿ ವಿಭಾಗದ ತನಿಖಾ ತಂಡದ ವರದಿ: ಮೇಲ್ನೋಟಕ್ಕೆ ಕಂಡುಬಂದಿದ್ದೇನು? (22.10.2026)

ಬಾಗಲಕೋಟೆ (Bagalkot) DHO ವಿರುದ್ಧ ಮಾಧ್ಯಮ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟವಾದ ದೂರುಗಳ ಬೆನ್ನಲ್ಲೇ ಆರೋಗ್ಯ ಇಲಾಖೆಯು ಸುಮ್ಮನೆ ಕೂರಲಿಲ್ಲ. ಬೆಳಗಾವಿ ವಿಭಾಗದ ವಿಭಾಗೀಯ ಸಹ ನಿರ್ದೇಶಕರ ಕಚೇರಿಯಿಂದ ವಿಶೇಷ ತನಿಖಾ ತಂಡವನ್ನು ರಚಿಸಿ ವಿಚಾರಣೆ ಕೈಗೊಳ್ಳಲಾಯಿತು. 22.10.2026 ರಂದು ಆಯುಕ್ತರಿಗೆ ಸಲ್ಲಿಸಲಾದ ಅಧಿಕೃತ ವರದಿಯಲ್ಲಿ (ಸಂಖ್ಯೆ: ಸನಿಕಬೆ/ವಿಚಾರಣಾ/163/2026-27) ಮಹತ್ವದ ಅಂಶಗಳನ್ನು ದಾಖಲಿಸಲಾಗಿದೆ. ವಿಚಾರಣೆ ವೇಳೆ ದಾಖಲಾತಿಗಳ ತಿದ್ದುಪಡಿ ಹಾಗೂ ಕೆ.ಪಿ.ಎಂ.ಇ (KPME) ಲಾಗಿನ್ ಮತ್ತು ಪಿ.ಸಿ.ಪಿ.ಎನ್.ಡಿ.ಟಿ (PCPNDT) ಸಂಬಂಧಪಟ್ಟ ದಾಖಲಾತಿಗಳ ಬದಲಾವಣೆ ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿ, ಪೂರಕ ದಾಖಲೆಗಳ ಸಮೇತ ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ.

Bagalkot: DHOಗೆ ಆಯುಕ್ತರಿಂದ ಶೋಕಾಸ್ ನೋಟಿಸ್! ತನಿಖಾ ವರದಿ ಬೆನ್ನಲ್ಲೇ ಬಿಗ್‌ ಟ್ವಿಸ್ಟ್!
ಬೆಳಗಾವಿ ವಿಭಾಗದ ವಿಭಾಗೀಯ ಸಹ ನಿರ್ದೇಶಕರ ಕಚೇರಿಯಿಂದ ವಿಶೇಷ ತನಿಖಾ ತಂಡದ ವರದಿ..

ಇದನ್ನೂ ಓದಿ: ವಾಣಿಜ್ಯ ಹಬ್, ನಡುಗಡ್ಡೆ ಸಂತ್ರಸ್ತರ ಪುನರ್ವಸತಿಗೆ ಪ್ರಕಾಶ್ ತಪಶೆಟ್ಟಿ ‘ಮಾಸ್ಟರ್ ಪ್ಲಾನ್’! `BTDA Act-2026′ ಜಾರಿಗೆ ಸಿದ್ಧತೆ!

ಆಯುಕ್ತಾಲಯದ ‘ಕಾರಣ ಕೇಳುವ ಸೂಚನಾ ಪತ್ರ’ (13.11.2026)

ಬೆಳಗಾವಿ ವಿಭಾಗದ ಪ್ರಾಥಮಿಕ ತನಿಖಾ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು, 13-11-2026 ರಂದು ಡಾ. ಸುವರ್ಣಾ ಬಿ. ಕುಲಕರ್ಣಿ ಅವರಿಗೆ ಕಾರಣ ಕೇಳುವ ಸೂಚನಾ ಪತ್ರ (Show Cause Notice – ಸಂಖ್ಯೆ: CHS/MOS/S-2/DPG/1573934/2/2026-27 (E-2339234)) ಜಾರಿಗೊಳಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುವ ಅಂಶಗಳನ್ನು ಪತ್ರದಲ್ಲಿ ಉಲ್ಲೇಖಿಸಿ, ನೋಟಿಸ್ ತಲುಪಿದ 07 ದಿನಗಳೊಳಗೆ ಸೂಕ್ತ ಸಮಜಾಯಿಷಿ ನೀಡುವಂತೆ ಗಡುವು ನೀಡಲಾಗಿದೆ. ತಪ್ಪಿದಲ್ಲಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ಮೇರೆಗೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಆಯುಕ್ತರು ನೀಡಿದ್ದಾರೆ.

Bagalkot: DHOಗೆ ಆಯುಕ್ತರಿಂದ ಶೋಕಾಸ್ ನೋಟಿಸ್! ತನಿಖಾ ವರದಿ ಬೆನ್ನಲ್ಲೇ ಬಿಗ್‌ ಟ್ವಿಸ್ಟ್!
ಡಾ. ಸುವರ್ಣಾ ಬಿ. ಕುಲಕರ್ಣಿ ಅವರಿಗೆ ಶೋಕಾಸ್‌ ನೋಟಿಸ್

ನ್ಯಾಯಾಲಯದ ಮೆಟ್ಟಿಲೇರಿದ ವಿವಾದ

ಆಡಳಿತಾತ್ಮಕವಾಗಿ ಈ ಎಲ್ಲಾ ಪತ್ರವ್ಯವಹಾರಗಳು ನಡೆಯುತ್ತಿರುವ ನಡುವೆಯೇ, ಈ ಪ್ರಕರಣ ಕಾನೂನು ಹೋರಾಟದ ಸ್ವರೂಪವನ್ನೂ ಪಡೆದುಕೊಂಡಿದೆ. ಡಾ. ಸುವರ್ಣಾ ವಿವೇಕಾನಂದ ಕುಲಕರ್ಣಿ ಅವರು ಬಾಗಲಕೋಟೆಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ (OS No. 926/2026) ದಾವೆ ಹೂಡಿದ್ದಾರೆ. ತಮ್ಮ 26 ವರ್ಷಗಳ ಸೇವಾವಧಿಯಲ್ಲಿ ಒಂದೇ ಒಂದು ಇಲಾಖಾ ವಿಚಾರಣೆ ಅಥವಾ ಕಪ್ಪುಚುಕ್ಕೆ ಇಲ್ಲವೆಂದು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ತಮ್ಮ ವಿರುದ್ಧ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ಮಾನಹಾನಿಕರ ವಿಷಯಗಳನ್ನು ಪ್ರಕಟಿಸದಂತೆ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ, ನ್ಯಾಯಾಲಯವು 16-10-2026 ರಂದು ಸುಳ್ಳು, ಅಶ್ಲೀಲ, ಅವಹೇಳನಕಾರಿ ಅಥವಾ ಮಾನಹಾನಿಕರ ಲೇಖನ/ಪೋಸ್ಟ್‌ಗಳನ್ನು ಪ್ರಕಟಿಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಮುಂದೇನು? ಕುತೂಹಲ ಕೆರಳಿಸಿರುವ ಎರಡು ಹಾದಿಗಳು

ಈಗ ಇಡೀ ಪ್ರಕರಣವು ಎರಡು ಪ್ರಮುಖ ಹಾದಿಗಳಲ್ಲಿ ಸಾಗುತ್ತಿದೆ:

  • ಆಡಳಿತಾತ್ಮಕ ಹಾದಿ: ಆಯುಕ್ತಾಲಯ ನೀಡಿರುವ ಕಾರಣ ಕೇಳುವ ನೋಟಿಸ್‌ಗೆ ಸಂಬಂಧಪಟ್ಟ ಅಧಿಕಾರಿಗಳು ನೀಡುವ ಸಮಜಾಯಿಷಿ ಏನು? ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ ಇಲಾಖೆ ಮುಂದೆ ಯಾವ ಹೆಜ್ಜೆ ಇಡಲಿದೆ? ಎಂಬುದು ಆಡಳಿತ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
  • ಕಾನೂನು ಹಾದಿ: ಮತ್ತೊಂದೆಡೆ, ನ್ಯಾಯಾಲಯದಲ್ಲಿ ನಡೆಯುತ್ತಿರುವ ಸಿವಿಲ್ ದಾವೆಯ ವಿಚಾರಣೆಯು ಕಾನೂನಾತ್ಮಕ ಅಂಶಗಳನ್ನು ನಿರ್ಧರಿಸಲಿದೆ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಸಂಬಂಧಿಸಿದ ಈ ವಿಷಯದಲ್ಲಿ, ಅಧಿಕೃತ ದಾಖಲೆಗಳು ಮತ್ತು ನ್ಯಾಯಾಲಯದ ಆದೇಶಗಳ ಚೌಕಟ್ಟಿನಲ್ಲಿ ಮುಂದಿನ ಬೆಳವಣಿಗೆಗಳು ಯಾವ ದಿಕ್ಕಿನತ್ತ ಸಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...