Tuesday, November 24, 2026
Home ವಿಶ್ಲೇಷಣೆ Rahul Gandhi: ‘ಮೊಹಬ್ಬತ್ ಕಿ ದುಕಾನ್’ನಲ್ಲಿ ಶಸ್ತ್ರಾಸ್ತ್ರಗಳ ಲೆಕ್ಕಾಚಾರ! ನರಮೇಧ ನಡೆಸಿದ ಇಸ್ರೇಲ್ ಮೇಲೆ ಲವ್ವಾಯ್ತಾ?...

Rahul Gandhi: ‘ಮೊಹಬ್ಬತ್ ಕಿ ದುಕಾನ್’ನಲ್ಲಿ ಶಸ್ತ್ರಾಸ್ತ್ರಗಳ ಲೆಕ್ಕಾಚಾರ! ನರಮೇಧ ನಡೆಸಿದ ಇಸ್ರೇಲ್ ಮೇಲೆ ಲವ್ವಾಯ್ತಾ? ಇದು ರಾಹುಲ್ ಗಾಂಧಿಯವರ ಇಬ್ಬಂದಿ ನೀತಿ ಅಲ್ಲವೇ?

Rahul Gandhi: 'ಮೊಹಬ್ಬತ್ ಕಿ ದುಕಾನ್'ನಲ್ಲಿ ಶಸ್ತ್ರಾಸ್ತ್ರಗಳ ಲೆಕ್ಕಾಚಾರ! ನರಮೇಧ ನಡೆಸಿದ ಇಸ್ರೇಲ್ ಮೇಲೆ ಲವ್ವಾಯ್ತಾ? ಇದು ರಾಹುಲ್ ಗಾಂಧಿಯವರ ಇಬ್ಬಂದಿ ನೀತಿ ಅಲ್ಲವೇ?

“ನಫ್ರತ್ ಕಿ ಬಾಝಾರ್ ಮೇ ಮೊಹಬ್ಬತ್ ಕಿ ದುಕಾನ್ ಖೋಲ್ ರಹಾ ಹೂಂ” — ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೆಜ್ಜೆ ಹಾಕುತ್ತಾ, ದೇಶದ ಉದ್ದಗಲಕ್ಕೂ ರಾಹುಲ್ ಗಾಂಧಿ (Rahul Gandhi) ಮೊಳಗಿಸಿದ ಈ ಘೋಷವಾಕ್ಯ ಕೋಟ್ಯಂತರ ಜನರಲ್ಲಿ ಹೊಸದೊಂದು ಭರವಸೆಯ ಕಿರಣ ಮೂಡಿಸಿತ್ತು. ದ್ವೇಷ, ಹಿಂಸೆ ಮತ್ತು ದಬ್ಬಾಳಿಕೆಯ ರಾಜಕಾರಣಕ್ಕೆ ತಾವು ಪರ್ಯಾಯ ಎಂಬಂತೆ ಅವರು ಬಿಂಬಿಸಿಕೊಂಡಿದ್ದರು. ಆದರೆ, ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದ ವೇದಿಕೆಯ ಮೇಲೆ ನಿಂತು ಅವರು ಆಡಿದ ಮಾತುಗಳು, ಆ ‘ಪ್ರೀತಿಯ ಅಂಗಡಿ’ಯ ಅಸಲಿ ಸರಕುಗಳೇನು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ. ಗಾಝಾದಲ್ಲಿ ಅಮಾಯಕರ ರಕ್ತದೋಕುಳಿ ಹರಿಯುತ್ತಿರುವಾಗ, ಇಸ್ರೇಲ್ ಜೊತೆಗಿನ ಬಲವಾದ ಸಂಬಂಧ ಮತ್ತು ಶಸ್ತ್ರಾಸ್ತ್ರ ಖರೀದಿಯನ್ನು ರಾಹುಲ್ ಗಾಂಧಿ ಸಮರ್ಥಿಸಿಕೊಂಡಿರುವುದು, ಅವರದೇ ಬೆಂಬಲಿಗರು ಮತ್ತು ಮಾನವ ಹಕ್ಕುಗಳ ಹೋರಾಟಗಾರರಿಗೆ ನುಂಗಲಾರದ ತುತ್ತಾಗಿದೆ.

ಚಿಕಾಗೋ ವೇದಿಕೆಯಲ್ಲಿ ಹೊರಬಿದ್ದ ‘ಕಾರ್ಯತಂತ್ರದ ವ್ಯಾಪಾರ’

ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ರಾಬರ್ಟ್ ಪೇಪ್ ಅವರೊಂದಿಗೆ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿ (Rahul Gandhi) ಅವರ ಮಾತುಗಳು ಅಕ್ಷರಶಃ ರಾಜತಾಂತ್ರಿಕ ಲೆಕ್ಕಾಚಾರದಂತಿದ್ದವು. “ನಮಗೆ ಇಸ್ರೇಲ್ ಜೊತೆ ಉತ್ತಮ ಸಂಬಂಧವಿದೆ ಮತ್ತು ನಾವು ಅವರಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತೇವೆ. ನಮ್ಮ ಸಶಸ್ತ್ರ ಪಡೆಗಳಿಗೆ ಅತ್ಯುತ್ತಮ ಶಸ್ತ್ರಾಸ್ತ್ರಗಳನ್ನು ಖರೀದಿಸುವುದು ಸೇರಿದಂತೆ ನಮಗೆ ಕಾರ್ಯತಂತ್ರದ ಹಿತಾಸಕ್ತಿಗಳಿವೆ. ಇಸ್ರೇಲ್ ಜೊತೆಗಿನ ಬಲವಾದ ಸಂಬಂಧವನ್ನು ನಾನು ಬೆಂಬಲಿಸುತ್ತೇನೆ” ಎಂದು ಅವರು ನೇರವಾಗಿಯೇ ಹೇಳಿದ್ದಾರೆ.

ಒಂದೆಡೆ, ಇಸ್ರೇಲ್ ಜೊತೆಗಿನ ಸ್ನೇಹ ಎಂದರೆ ಗಾಝಾ ವಿಚಾರದಲ್ಲಿ ಮೌನವಾಗಿರುವುದಲ್ಲ ಎಂದು ಹೇಳುತ್ತಲೇ, ಅಕ್ಟೋಬರ್ 7ರ ಹಮಾಸ್ ದಾಳಿ ಮತ್ತು ಗಾಝಾದಲ್ಲಿ ಇಸ್ರೇಲ್ ಮಾಡಿರುವುದನ್ನು ಖಂಡಿಸುತ್ತೇನೆ, ಒಂದು ತಪ್ಪು ಮತ್ತೊಂದು ತಪ್ಪನ್ನು ಸಮರ್ಥಿಸಲಾರದು ಎಂಬ ಸಮತೋಲನದ ಸಾಲನ್ನೂ ಅವರು ಸೇರಿಸಿದ್ದಾರೆ. ಆದರೆ, ವಿಮರ್ಶಕರು ಮತ್ತು ಪ್ರಗತಿಪರ ಚಿಂತಕರು ಕೇಳುತ್ತಿರುವ ಪ್ರಶ್ನೆ ಇಷ್ಟೇ: ಸಾವಿರಾರು ಮಕ್ಕಳು ಮತ್ತು ಮಹಿಳೆಯರ ಜೀವ ಬಲಿತೆಗೆದುಕೊಂಡಿರುವ ಸಂಘರ್ಷದ ನಡುವೆ, ಅದೇ ದೇಶದೊಂದಿಗೆ ಶಸ್ತ್ರಾಸ್ತ್ರ ವ್ಯಾಪಾರ ಮತ್ತು ಮಿಲಿಟರಿ ಬಾಂಧವ್ಯವನ್ನು ಬೆಂಬಲಿಸುವುದು ಎಂತಹ ಮಾನವೀಯತೆ? ಕೇವಲ ಒಂದು ಸಾಲಿನ ‘ಖಂಡನೆ’ಯಿಂದ ಗಾಝಾದಲ್ಲಿನ ನೋವು ಮತ್ತು ವಿನಾಶಕ್ಕೆ ಮುಲಾಮು ಹಚ್ಚಲು ಸಾಧ್ಯವೇ? ಮಾನವೀಯ ಮೌಲ್ಯಗಳಿಗಿಂತ ಶಸ್ತ್ರಾಸ್ತ್ರ ಖರೀದಿಯ ‘ಕಾರ್ಯತಂತ್ರ’ವೇ ದೊಡ್ಡದಾಯಿತೇ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯಗಳಲ್ಲಿ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಪಾಪು ಕಟ್ಟಿದ ಮನೆಯೊಳಗೆ ತತ್ವದ ತಿಕ್ಕಾಟ! ಬಸವ ವಿರೋಧಿ ಧೋರಣೆಯ ಈ ನಾಟಕ ಎಲ್ಲಿಯವರೆಗೆ ಭಟ್ರೇ?

ಮೋದಿ ಸರ್ಕಾರದ ಹಾದಿಯಲ್ಲೇ ರಾಹುಲ್ ಹೆಜ್ಜೆ: ಪರ್ಯಾಯ ರಾಜಕಾರಣ ಎಲ್ಲಿ?

ದಿ ಪ್ರಿಂಟ್ ವರದಿಯಲ್ಲಿ ವಿಶ್ಲೇಷಿಸಿರುವಂತೆ, ರಾಹುಲ್ ಗಾಂಧಿ (Rahul Gandhi) ಅವರ ಈ ನಿಲುವು ಇಸ್ರೇಲ್-ಪ್ಯಾಲೆಸ್ಟೈನ್ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುಸರಿಸುತ್ತಿರುವ ನೀತಿ- ಇವೆರಡು ಬಹುತೇಕ ಹೋಲುತ್ತವೆ. ಮೋದಿ ಸರ್ಕಾರವು ಇಸ್ರೇಲ್ ಜೊತೆಗಿನ ಸಂಬಂಧವನ್ನು ‘ವಿಶೇಷ ಕಾರ್ಯತಂತ್ರದ ಪಾಲುದಾರಿಕೆ’ಯ ಮಟ್ಟಕ್ಕೆ ಕೊಂಡೊಯ್ದು, ರಕ್ಷಣಾ ಸಹಕಾರವನ್ನು ಬಲಪಡಿಸಿಕೊಂಡಿದೆ. ಅದೇ ಸಮಯದಲ್ಲಿ, ವಿಶ್ವಸಂಸ್ಥೆಯಲ್ಲಿ ಗಾಝಾ ಕದನ ವಿರಾಮಕ್ಕೆ ಕರೆ ನೀಡುವುದು ಮತ್ತು ಪ್ಯಾಲೆಸ್ಟೈನ್ ಜನರ ಸ್ವಯಂ ನಿರ್ಣಯದ ಹಕ್ಕನ್ನು ಬೆಂಬಲಿಸುವ ಮೂಲಕ ಭಾರತ ತನ್ನ ಸಾಂಪ್ರದಾಯಿಕ ನಿಲುವನ್ನೂ ಕಾಯ್ದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಹಲವು ರಾಜಕೀಯ ವಿಶ್ಲೇಷಕರು ಎತ್ತುತ್ತಿರುವ ಪ್ರಮುಖ ಟೀಕೆಯೆಂದರೆ—ವಿದೇಶಾಂಗ ನೀತಿಯ ವಿಷಯದಲ್ಲಿ ಆಡಳಿತಾರೂಢ ಬಿಜೆಪಿಯ ಹಾದಿಯನ್ನೇ ವಿರೋಧ ಪಕ್ಷದ ನಾಯಕರೂ ತುಳಿಯುವುದಾದರೆ, ಇಬ್ಬರ ನಡುವಿನ ವ್ಯತ್ಯಾಸವಾದರೂ ಏನು? ದೇಶದೊಳಗೆ ಬಿಜೆಪಿಯ ನೀತಿಗಳನ್ನು ಕಟುವಾಗಿ ಟೀಕಿಸುತ್ತಾ, ತಾವು ಸೈದ್ಧಾಂತಿಕವಾಗಿ ಭಿನ್ನ ಎಂದು ಹೇಳಿಕೊಳ್ಳುವ ರಾಹುಲ್ ಗಾಂಧಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಪ್ರಶ್ನೆ ಎದುರಾದಾಗ ‘ರಾಷ್ಟ್ರೀಯ ಹಿತಾಸಕ್ತಿ’ಯ ಹೆಸರಿನಲ್ಲಿ ಅದೇ ಮಾರ್ಗವನ್ನು ಅನುಸರಿಸುತ್ತಿರುವುದು ಅವರ ಸೈದ್ಧಾಂತಿಕ ಗೊಂದಲಕ್ಕೆ ಸಾಕ್ಷಿಯಾಗಿದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

ಇತಿಹಾಸ ಮತ್ತು ವರ್ತಮಾನದ ನಡುವಿನ ವೈರುಧ್ಯ

ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ತಿರುಗಿ ನೋಡಿದರೆ, ಮಹಾತ್ಮಾ ಗಾಂಧಿ ಅವರಿಂದ ಹಿಡಿದು ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರವರೆಗೆ ಪ್ಯಾಲೆಸ್ಟೈನ್ ಜನರ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತವಾಗುತ್ತಲೇ ಬಂದಿದೆ. 2023ರ ಅಕ್ಟೋಬರ್ 19ರಂದು ಸ್ವತಃ ರಾಹುಲ್ ಗಾಂಧಿ ಅವರು ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಮಾಡುತ್ತಾ, “ಗಾಝಾದಲ್ಲಿ ಮಕ್ಕಳು ಸೇರಿದಂತೆ ಸಾವಿರಾರು ಅಮಾಯಕ ನಾಗರಿಕರ ಹತ್ಯೆ ಮತ್ತು ಲಕ್ಷಾಂತರ ಜನರ ಆಹಾರ, ನೀರು ಮತ್ತು ವಿದ್ಯುತ್ ಕಡಿತಗೊಳಿಸಿ ಸಾಮೂಹಿಕ ಶಿಕ್ಷೆ ನೀಡುವುದು ಮಾನವೀಯತೆಯ ವಿರುದ್ಧದ ಅಪರಾಧಗಳಾಗಿವೆ” ಎಂದು ಕಟುವಾಗಿ ಬರೆದಿದ್ದರು.

ಅಂದು “ಮಾನವೀಯತೆಯ ವಿರುದ್ಧದ ಅಪರಾಧ” ಎಂದು ಕರೆದಿದ್ದ ಅದೇ ನಾಯಕ, ಇಂದು ಅದೇ ರಾಷ್ಟ್ರದೊಂದಿಗೆ ಬಲವಾದ ರಕ್ಷಣಾ ಸಂಬಂಧ ಮತ್ತು ಶಸ್ತ್ರಾಸ್ತ್ರ ಖರೀದಿಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಇಬ್ಬಂದಿ ನೀತಿಯಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. 2023ರ ಅಕ್ಟೋಬರ್‌ನಲ್ಲಿ ಸಂಘರ್ಷ ಆರಂಭವಾದಾಗಲೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ನಿರ್ಣಯದಲ್ಲಿ ಹಮಾಸ್ ಹೆಸರನ್ನು ಉಲ್ಲೇಖಿಸದಿರುವುದು ಪಕ್ಷದೊಳಗೇ ಶಶಿ ತರೂರ್ ಮತ್ತು ಪವನ್ ಕುಮಾರ್ ಬನ್ಸಲ್ ಅವರಂತಹ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ನಂತರ ಪವನ್ ಖೇರಾ ಮತ್ತು ರಾಹುಲ್ ಗಾಂಧಿ ಹಮಾಸ್ ದಾಳಿಯನ್ನು ಖಂಡಿಸಿ ಸ್ಪಷ್ಟನೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್‌ನ ಈ ನಿಲುವಿನಲ್ಲಿ ಒಂದು ಸ್ಪಷ್ಟ ನೈತಿಕ ರೇಖೆ ಕಾಣಿಸುತ್ತಿಲ್ಲ ಎಂಬುದು ರಾಜಕೀಯ ವೀಕ್ಷಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಅಪಪ್ರಚಾರದ ಕತ್ತಲಲ್ಲಿ ಬಸವ ತತ್ವದ ಹತ್ಯೆಯ ಯತ್ನ! ಸರ್ಕಾರದ ಸವಲತ್ತು ಉಣ್ಣುತ್ತಾ ಬಸವಣ್ಣನಿಗೆ ಅವಮಾನ? ಸಂಪಾದಕೀಯ ಬೂಟಾಟಿಕೆಗೆ ತಕ್ಕ ಪಾಠ ಯಾವಾಗ?

ಎರಡೂ ಕಡೆಯಿಂದ ಟೀಕೆಗಳ ಸುರಿಮಳೆ

ಅಮೆರಿಕ ಪ್ರವಾಸದಲ್ಲಿ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಗಳು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಒಂದೆಡೆ, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಭಾರತವು “ಆರ್ಥಿಕ ದುರಂತದ ಅಂಚಿನಲ್ಲಿದೆ” ಎಂದು ಹೇಳಿರುವುದಕ್ಕೆ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದು, ವಿದೇಶಿ ನೆಲದಲ್ಲಿ ದೇಶದ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ಚಿಕಾಗೋದಲ್ಲಿ ಇಸ್ರೇಲ್ ಪರವಾಗಿ ಮಾತನಾಡಿರುವುದಕ್ಕೆ ಮಾನವ ಹಕ್ಕುಗಳ ಹೋರಾಟಗಾರರು, ಪ್ರಗತಿಪರ ಚಿಂತಕರು ಮತ್ತು ಸ್ವತಃ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರೇ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಒಟ್ಟಾರೆಯಾಗಿ, 150 ಕೋಟಿ ಜನಸಂಖ್ಯೆಯ ದೇಶವಾಗಿ ಭಾರತವು ಯಾರ ಒತ್ತಡಕ್ಕೂ ಮಣಿಯದೆ ತನ್ನ ಹಿತಾಸಕ್ತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂಬ ರಾಹುಲ್ ಗಾಂಧಿ ಅವರ ವಾದವು ರಾಜತಾಂತ್ರಿಕ ವಲಯದಲ್ಲಿ ಸಮರ್ಥನೀಯವೆಂದು ಕಂಡುಬಂದರೂ, ಅವರದೇ ‘ಮೊಹಬ್ಬತ್ ಕಿ ದುಕಾನ್’ ಸಿದ್ಧಾಂತದ ಅಡಿಯಲ್ಲಿ ಅದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ. ಶಾಂತಿ ಮತ್ತು ಅಹಿಂಸೆಯ ಮಂತ್ರ ಜಪಿಸುವ ನಾಯಕತ್ವವು, ಶಸ್ತ್ರಾಸ್ತ್ರ ವ್ಯಾಪಾರ ಮತ್ತು ಕಾರ್ಯತಂತ್ರದ ಮೈತ್ರಿಯ ನಡುವೆ ನೈತಿಕ ಸ್ಪಷ್ಟತೆಯನ್ನು ಕಾಯ್ದುಕೊಳ್ಳದಿದ್ದರೆ, ಸೈದ್ಧಾಂತಿಕ ರಾಜಕಾರಣವು ಕೇವಲ ಘೋಷಣೆಗಳಿಗೆ ಸೀಮಿತವಾಗುವ ಅಪಾಯವಿದೆ ಎಂಬುದನ್ನು ಈ ಬೆಳವಣಿಗೆಗಳು ಎತ್ತಿ ತೋರಿಸುತ್ತಿವೆ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...