Wednesday, November 25, 2026
Home ವಿಶ್ಲೇಷಣೆ Siddhasiri Co-Operative Society ವಿವಾದಕ್ಕೆ ಬಿಗ್ ಟ್ವಿಸ್ಟ್! `ಮುಗಿದ ಅಧ್ಯಾಯ’ ಎಂದವರಿಗೆ ತನಿಖೆಯ ಕಂಟಕ? ದಾಖಲೆಗಳು...

Siddhasiri Co-Operative Society ವಿವಾದಕ್ಕೆ ಬಿಗ್ ಟ್ವಿಸ್ಟ್! `ಮುಗಿದ ಅಧ್ಯಾಯ’ ಎಂದವರಿಗೆ ತನಿಖೆಯ ಕಂಟಕ? ದಾಖಲೆಗಳು ಹೇಳುತ್ತಿರುವ ಅಸಲಿ ಸತ್ಯವೇನು?

Siddhasiri Co-Operative Society ವಿವಾದಕ್ಕೆ ಬಿಗ್ ಟ್ವಿಸ್ಟ್! `ಮುಗಿದ ಅಧ್ಯಾಯ' ಎಂದವರಿಗೆ ತನಿಖೆಯ ಕಂಟಕ? ದಾಖಲೆಗಳು ಹೇಳುತ್ತಿರುವ ಅಸಲಿ ಸತ್ಯವೇನು?

ವಿಜಯಪುರದ ಸಹಕಾರಿ ವಲಯದಲ್ಲಿ ಭಾರಿ ಸಂಚಲನ ಮೂಡಿಸಿರುವ ‘ಶ್ರೀ ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿಪರಪಜ್ ಕೋ-ಆಪರೇಟಿವ್ ಸೊಸೈಟಿ’ (Siddhasiri) ವಿಚಾರವು ಸದ್ಯ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಬಳಿಕ ಬೆಳಕಿಗೆ ಬಂದ ಈ ವಿವಾದ, ವಿವಿಧ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತು. ಈ ಇಡೀ ಬೆಳವಣಿಗೆಯ ಹಿಂದೆ ನಡೆದಿರುವ ಘಟನೆಗಳು, ದಾಖಲೆಗಳು ಹಾಗೂ ವಿವಾದದ ನೈಜ ಚಿತ್ರಣವನ್ನು ಯಾವುದೇ ಅಭಿಪ್ರಾಯ ಇಲ್ಲದೆ, ಅಧಿಕೃತ ದಾಖಲೆಗಳು ಮತ್ತು ಹೇಳಿಕೆಗಳ ಆಧಾರದ ಮೇಲೆ ವಿವರವಾಗಿ ವಿಶ್ಲೇಷಿಸಲಾಗಿದೆ.

ವಿವಾದದ ಆರಂಭ ಮತ್ತು ಮೊದಲ ಹಂತದ ಸ್ಪಷ್ಟನೆಗಳು

‘ಶ್ರೀ ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿಪರಪಜ್ ಕೋ-ಆಪರೇಟಿವ್ ಸೊಸೈಟಿ’ (Siddhasiri) ವಿವಾದವು ಸಾರ್ವಜನಿಕ ಚರ್ಚೆಗೆ ಬಂದ ಆರಂಭಿಕ ದಿನಗಳಲ್ಲಿ, ಕೇಂದ್ರ ಸಹಕಾರಿ ಸಚಿವಾಲಯದಿಂದ ಬಂದಿದ್ದ 11 ಪ್ರಮುಖ ಪ್ರಶ್ನೆಗಳು ಹಾಗೂ ನೋಟಿಸ್ ಕುರಿತು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟಗೊಂಡವು. ಈ ಹಂತದಲ್ಲಿ ಎಚ್ಚೆತ್ತುಕೊಂಡ ಸಿದ್ಧಸಿರಿ ಸೊಸೈಟಿಯ ಕಾನೂನು ಸಲಹೆಗಾರರು ಹಾಗೂ ಆಡಳಿತ ಮಂಡಳಿಯ ಪ್ರಮುಖರು ತಕ್ಷಣವೇ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಿದರು.

ಆ ಸಂದರ್ಭದಲ್ಲಿ ಅವರು ನೀಡಿದ ಸ್ಪಷ್ಟನೆಯ ಮುಖ್ಯ ಸಾರಾಂಶವೆಂದರೆ— “ಅದು ಹಳೆಯ ನೋಟಿಸ್ ವಿಚಾರ, ಅದಕ್ಕೆ ನಾವು ಈಗಾಗಲೇ ಸಮಂಜಸ ಉತ್ತರ ನೀಡಿದ್ದೇವೆ. ಹೀಗಾಗಿ ಆ ಅಧ್ಯಾಯ ಅಲ್ಲಿಗೆ ಮುಗಿದುಹೋಗಿದೆ” ಎಂದು ಆಡಳಿತ ಮಂಡಳಿಯು ತಿಳಿಸಿತ್ತು. ಇದರ ಬೆನ್ನಲ್ಲೇ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್ ಅವರು ವಿಶೇಷ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಸಂಸ್ಥೆಯ ಮೇಲಿರುವ ಆರೋಪಗಳನ್ನು ತಳ್ಳಿಹಾಕಿದರು. ಅಷ್ಟೇ ಅಲ್ಲದೆ, ತಮ್ಮ ಸಂಸ್ಥೆಯ ಮೇಲೆ ಅಥವಾ ಯಾವುದೇ ಹಣಕಾಸಿನ ವ್ಯವಹಾರದಲ್ಲಿ ದೋಷ ಅಥವಾ ಅವ್ಯವಹಾರ ನಡೆದಿದೆ ಎಂದು ದಾಖಲೆ ಸಮೇತ ಸಾಬೀತುಪಡಿಸಿದವರಿಗೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸುವುದರ ಜೊತೆಗೆ, ಸುಖಾಸುಮ್ಮನೆ ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಸಿದ್ಧಸಿರಿ ಸಂಸ್ಥೆಗೆ ಎಲ್ಲೆಡೆ ಕ್ಲೀನ್ ಚಿಟ್ ಸಿಕ್ಕಿದೆ ಎಂಬ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: ವಾಣಿಜ್ಯ ಹಬ್, ನಡುಗಡ್ಡೆ ಸಂತ್ರಸ್ತರ ಪುನರ್ವಸತಿಗೆ ಪ್ರಕಾಶ್ ತಪಶೆಟ್ಟಿ ‘ಮಾಸ್ಟರ್ ಪ್ಲಾನ್’! `BTDA Act-2026′ ಜಾರಿಗೆ ಸಿದ್ಧತೆ!

ರಮೇಶ್ ಬಿದನೂರುರವರ ಮಾಧ್ಯಮ ಗೋಷ್ಠಿ ಮತ್ತು ಸ್ಫೋಟಕ ದಾಖಲೆಗಳ ಬಹಿರಂಗ

ಸಿದ್ಧಸಿರಿ ಸೊಸೈಟಿ (Siddhasiri) ಆಡಳಿತ ಮಂಡಳಿಯು “ಎಲ್ಲವೂ ಮುಗಿದ ಅಧ್ಯಾಯ” ಎಂದು ಹೇಳಿ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ ಬೆನ್ನಲ್ಲೇ, ವಿಜಯಪುರದಲ್ಲಿ ರಮೇಶ್ ಬಿದನೂರು ಅವರು ಮಾಧ್ಯಮ ಗೋಷ್ಠಿ ನಡೆಸಿ ಕೆಲವು ಅಧಿಕೃತ ದಾಖಲೆಗಳನ್ನು ಬಹಿರಂಗಪಡಿಸುವ ಮೂಲಕ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದರು. ರಮೇಶ್ ಬಿದನೂರು ಅವರ ಪ್ರಕಾರ, ಸಿದ್ಧಸಿರಿ ಆಡಳಿತ ಮಂಡಳಿ ಮತ್ತು ಕಾನೂನು ಸಲಹೆಗಾರರು ಮಾಧ್ಯಮಗಳ ಮುಂದೆ ಸತ್ಯವನ್ನು ಮುಚ್ಚಿಟ್ಟು “ಹಳೆಯ ಹಾಗೂ ಮುಗಿದ ಹೋದ ಕಥೆ” ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದರು.

ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ:

  • ಇದು ಕೇವಲ ಹಿಂದಿನ ಮುಗಿದ ಹೋದ ನೋಟಿಸ್ ಅಲ್ಲ; ಬದಲಾಗಿ ಕೇಂದ್ರ ಸಹಕಾರ ಸಂಘಗಳ ನಿಬಂಧಕರ ಆದೇಶದ ಮೇರೆಗೆ, ದೆಹಲಿಯ ಕೇಂದ್ರ ಸಚಿವಾಲಯವು ರಾಜ್ಯದ ಸಹಕಾರಿ ಇಲಾಖೆಗೆ ಪತ್ರ ಬರೆದು ತನಿಖೆ ನಡೆಸುವಂತೆ ಸೂಚಿಸಿದೆ.
  • ಇದರ ಆಧಾರದ ಮೇಲೆ ಕರ್ನಾಟಕ ಸರ್ಕಾರದ ಸಹಕಾರ ಸಂಘಗಳ ನಿಬಂಧಕರು ದಿನಾಂಕ 05-11-2026 ರಂದು ಅಧಿಕೃತ ಆದೇಶ ಹೊರಡಿಸಿ, ಬೆಳಗಾವಿ ಪ್ರಾಂತದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದಾರೆ.
  • ಬೆಳಗಾವಿ ಪ್ರಾಂತದ ಸಂಯುಕ್ತ ನಿಬಂಧಕರು ದಿನಾಂಕ 07-11-2026 ರಂದು ಅಧಿಕೃತ ತನಿಖಾ ನೋಟಿಸ್ ಜಾರಿ ಮಾಡಿದ್ದು, ನವೆಂಬರ್ 17 ರಂದು ವಿಜಯಪುರದ ಉಪ ನಿಬಂಧಕರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವುದನ್ನು ರಮೇಶ್ ಬಿದನೂರು ದಾಖಲೆ ಸಹಿತ ಸಾಬೀತುಪಡಿಸಿದರು.

ತನಿಖಾ ನೋಟಿಸ್‌ನಲ್ಲಿರುವ ಗಂಭೀರ ಆರೋಪಗಳು

ಬೆಳಗಾವಿ ಪ್ರಾಂತದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು ಹಾಗೂ ತನಿಖಾ ತಂಡದ ಅಧ್ಯಕ್ಷರು ನೀಡಿರುವ ನೋಟಿಸ್‌ನಲ್ಲಿ (ಕ್ರ: ಜೆಆರ್‌ಎಲ್/ಎಫ್/ತನಿಖೆ/ /2026-27, ದಿನಾಂಕ: 07-11-2026) ಬಹುರಾಜ್ಯ ಸಹಕಾರ ಸಂಘಗಳ ಕಾಯ್ದೆ 2002ರ ಕಲಂ 78(1ಬಿ) ಹಾಗೂ 78(2) ರನ್ವಯ ಪ್ರಮುಖ 5 ಗಂಭೀರ ಆರೋಪಗಳ ಕುರಿತು ತನಿಖೆ ನಡೆಸಿ 20 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ:

  • ಚಿಂಚೋಳಿ ಎಥೆನಾಲ್ ಹೂಡಿಕೆ: ‘ಸಿದ್ಧಸಿರಿ ಎಥೆನಾಲ್ ಅಂಡ್ ಪವರ್ ಲಿಮಿಟೆಡ್, ಚಿಂಚೋಳಿ’ ಸಂಸ್ಥೆಯಲ್ಲಿ ಸೊಸೈಟಿಯ ನಿಧಿಯನ್ನು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗಿದ್ದು, ಯೋಜನೆಯ ಕಾರ್ಯನಿರ್ವಹಣೆ, ಹಣದ ವಸೂಲಾತಿ ಹಾಗೂ ಠೇವಣಿಗಳ ಬಳಕೆ ಕುರಿತು ಗಂಭೀರ ಆಕ್ಷೇಪಣೆಗಳಿವೆ.
  • ಸಾಲ ಮಂಜೂರಾತಿಯಲ್ಲಿ ಅಕ್ರಮ: ಕೆಲವು ನಿರ್ದಿಷ್ಟ ಸಂಸ್ಥೆಗಳಿಗೆ ಮತ್ತು ಸಂಬಂಧಿತ ವ್ಯಕ್ತಿಗಳಿಗೆ ಸಾಕಷ್ಟು ಭದ್ರತೆ ಇಲ್ಲದೆ, ನಿಗದಿತ ಮಿತಿ ಮೀರಿ ಹಾಗೂ ಬಡ್ಡಿ ರಿಯಾಯಿತಿಯೊಂದಿಗೆ ಸಾಲ ನೀಡಿರುವ ಕುರಿತು.
  • Liquidity ಕೊರತೆ: ಶಾಸನಬದ್ಧ ಮೀಸಲು ಮತ್ತು Liquidity ನಿರ್ವಹಣೆಯಲ್ಲಿ ಲೋಪವಾಗಿದ್ದು, 31.03.2023 ರಂದು ಅಂದಾಜು 248 ಕೋಟಿ ರೂ. ಹಾಗೂ 21.12.2023 ರಂದು 134.07 ಕೋಟಿ ರೂ.ಗಳಷ್ಟು ಲಿಕ್ವಿಡಿಟಿ ಕೊರತೆ ವರದಿಯಾಗಿದೆ.
  • ಭೂ ವ್ಯವಹಾರ ಮತ್ತು ಆಡಳಿತಾತ್ಮಕ ಲೋಪಗಳು: ಸ್ಥಿರಾಸ್ತಿ ಖರೀದಿಗಳು, ಚಿಂಚೋಳಿಯ 97.13 ಎಕರೆ ಆಸ್ತಿ ಕೆಐಎಡಿವಿಯಿಂದ (KIADB) ನಿರ್ದೇಶಕರ ಹೆಸರಿಗೆ ವರ್ಗಾವಣೆಯಾಗಿರುವುದು, ಲಾಭಾಂಶ ಹಂಚಿಕೆ, ಸಿಬ್ಬಂದಿ ನೇಮಕಾತಿ ಮತ್ತು ಗ್ರಾಚ್ಯುಟಿ ನಿಧಿ ನಿರ್ವಹಣೆಯಲ್ಲಿನ ವ್ಯತ್ಯಾಸಗಳು.
  • ಇತರೆ ವೆಚ್ಚಗಳು: ಚುನಾವಣಾ ವೆಚ್ಚಗಳು, ಸಿಬ್ಬಂದಿ ಖಾತೆಗಳು, ಬಾಡಿಗೆ ಪಾವತಿಗಳು ಮತ್ತು ವೈಯಕ್ತಿಕ ವೆಚ್ಚಗಳಿಗೆ ಸಂಬಂಧಿಸಿದ ಆರೋಪಗಳು.

ಕಾನೂನು ವ್ಯಾಪ್ತಿ ಮತ್ತು ಜ್ಯೂರಿಸ್ಡಿಕ್ಷನಲ್ (Jurisdictional) ವಾದಗಳು:

ಈ ಇಡೀ ವಿವಾದದಲ್ಲಿ ಪ್ರಮುಖವಾಗಿ ಎರಡು ಭಿನ್ನ ವಾದಗಳು ಮುನ್ನೆಲೆಗೆ ಬಂದಿವೆ:

  • ಸಿದ್ಧಸಿರಿ ಆಡಳಿತ ಮಂಡಳಿ ಹಾಗೂ ಕಾನೂನು ಸಲಹೆಗಾರರ ವಾದ: ಸಧ್ಯಕ್ಕೆ ಸಿದ್ಧಸಿರಿಯು ಮಲ್ಟಿಸ್ಟೇಟ್ (ಬಹುರಾಜ್ಯ) ಸಂಸ್ಥೆಯಾಗಿ ಬೆಳೆದಿರುವುದರಿಂದ, ಈಗ ರಾಜ್ಯ ಸರ್ಕಾರಕ್ಕೂ ಹಾಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸಿದ್ಧಸಿರಿ ಕಾನೂನು ಸಲಹೆಗಾರರು ಮತ್ತು ಆಡಳಿತ ಮಂಡಳಿಯು ವಾದಿಸುತ್ತದೆ. ಅಷ್ಟೇ ಅಲ್ಲದೇ, ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬಂದಿರುವುದರಿಂದ, ಅಲ್ಲಿ ನಮಗೆ ಏನೇ ಸಣ್ಣಪುಟ್ಟ ತಪ್ಪುಗಳಿದ್ದರೂ ಸಹ ಮುಂದಿನ 5 ವರ್ಷಗಳ ವರೆಗೆ ಅದನ್ನ ಸರಿಪಡಿಸಿಕೊಳ್ಳಲು ಅಥವಾ ರೋಡ್ ಮ್ಯಾಪ್ ಪಡೆದುಕೊಳ್ಳಲು ಅವಕಾಶ ಇರುತ್ತದೆ ಎಂದು ಬಸನಗೌಡ ಪಾಟೀಲ ಯತ್ನಾಳ್ ಅವರು ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯದಿಂದ ತಡೆಯಾಜ್ಞೆ (Stay) ಪಡೆಯುವ ಮೂಲಕ ಈ ತನಿಖೆಯನ್ನು ವಿರೋಧಿಸುತ್ತಿದ್ದಾರೆ.
  • ರಮೇಶ್ ಬಿದನೂರು ಅವರ ಪ್ರತಿಪಾದನೆ: ಈ ವಾದವನ್ನು ತೀವ್ರವಾಗಿ ಖಂಡಿಸಿರುವ ರಮೇಶ್ ಬಿದನೂರು ಅವರು ‘ಅಸಲಿ ಸುದ್ದಿ’ ಸಂಸ್ಥೆಯೊಂದಿಗೆ ಮಾತನಾಡಿ, ಕೆಲವು ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಅವರ ಪ್ರಕಾರ— “ಹೌದು ಸರ್, ಈಗ ಸಿದ್ಧಸಿರಿ ಸಂಸ್ಥೆಯು ಕೇಂದ್ರದ ವ್ಯಾಪ್ತಿಯಲ್ಲಿದೆ ಎಂಬುದು ನಿಜ; ಆದರೆ ಕೇಂದ್ರದ ಕೆಳಗೆ ಅಂದರೆ ಮಲ್ಟಿಸ್ಟೇಟ್ ಆಗಿ ಪರಿವರ್ತನೆಗೊಂಡು ಹೋಗುವ ಮುನ್ನ ಈ ಸಿದ್ಧಸಿರಿ ಸೊಸೈಟಿ ಇದ್ದದ್ದು ರಾಜ್ಯದ ಕಾಯ್ದೆಯಡಿಯಲ್ಲಲ್ವಾ? ರಾಜ್ಯ ಸರ್ಕಾರದಡಿ ಕಾರ್ಯಾನಿರ್ವಹಿಸುತ್ತಿದ್ದಾಗ ಇಲ್ಲಿ ಕ್ಲಿಯರೆನ್ಸ್ (ನಿರಪೇಕ್ಷಣಾ ಪತ್ರ) ಪಡೆದು ತದನಂತರವಷ್ಟೇ ಕೇಂದ್ರಕ್ಕೆ ಹೋಗಬೇಕಲ್ವೇ? ಹಾಗಾಗಿ ಕೇಂದ್ರವು ಈಗ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿ ನೋಟಿಸ್ ನೀಡಿದೆ. ಮತ್ತೆ ಆ ನೋಟಿಸ್ ಮತ್ತು ಅದರ ಹಿಂದಿನ ದಾಖಲೆಗಳು ಸರಿಯಿಲ್ಲದಿದ್ದಾಗ, ಆ ಹಿಂದಿನ ಕಾಲಘಟ್ಟದ ಮೇಲ್ವಿಚಾರಣೆ ಮತ್ತು ತನಿಖೆಯನ್ನು ರಾಜ್ಯ ಮಟ್ಟದವರೇ ಮಾಡಬೇಕಲ್ವೇ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಾರಜೋಳರ ಹಣ ಗೋವಿಂದ? ಡಿಸಿ ಆಫೀಸ್‌ಗೇ ಜಪ್ತಿ ವಾರೆಂಟ್ ಬಿಸಿ… ಅಧಿಕಾರಿಗಳ ಎಡವಟ್ಟಿಗೆ 161 ಕೋಟಿ ಜನರ ತೆರಿಗೆ ದುಡ್ಡು ಬಲಿ!

ಆಡಳಿತ ಮಂಡಳಿಯ ಪತ್ರಿಕಾಗೋಷ್ಠಿ ಮತ್ತು ಅನುಮಾನಗಳು

ರಮೇಶ್ ಬಿದನೂರು ಅವರು ದಾಖಲೆಗಳನ್ನು ಬಿಡುಗಡೆ ಮಾಡಿ ಸರ್ಕಾರದ ತನಿಖೆ ಹಾಗೂ ನೋಟಿಸ್ ವಿಚಾರವನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ, ಕೆಲಹೊತ್ತಲ್ಲೇ ಸಿದ್ಧಸಿರಿ ಆಡಳಿತ ಮಂಡಳಿ ಮತ್ತು ಕಾನೂನು ಸಲಹೆಗಾರರು ತುರ್ತು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

ಆ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದ ಪ್ರಮುಖ ಅಂಶಗಳು ಹಾಗೂ ಎದ್ದಿರುವ ಪ್ರಶ್ನೆಗಳು ಹೀಗಿವೆ:

  • ನ್ಯಾಯಾಲಯದ ತಡೆಯಾಜ್ಞೆ (Stay Order): ಸರ್ಕಾರದ ತನಿಖಾ ನೋಟಿಸ್ ಅನ್ನು ಪ್ರಶ್ನಿಸಿ ತಾವು ಹೈಕೋರ್ಟ್‌ನಿಂದ ತಡೆಯಾಜ್ಞೆ (Stay) ಪಡೆದುಕೊಂಡಿರುವುದಾಗಿ ಆಡಳಿತ ಮಂಡಳಿಯ ಪರ ವಕೀಲರು ಒಪ್ಪಿಕೊಂಡರು. ನ್ಯಾಯಾಲಯದಲ್ಲಿ ಸ್ಟೇ ಸಿಕ್ಕಿರುವ ಕಾರಣ ಸದ್ಯಕ್ಕೆ ತನಿಖೆ ಚಾಲ್ತಿಯಲ್ಲಿಲ್ಲ ಎಂದು ವಾದಿಸಿದರು.
  • ಮುಖಂಡರ ಮೌನ ಹಾಗೂ ಜಾರಿಕೊಳ್ಳುವ ಯತ್ನದ ಬಗ್ಗೆ ಜನಸಾಮಾನ್ಯರ ಪ್ರಶ್ನೆ…
  • ಸರ್ಕಾರದ ವತಿಯಿಂದ ಅಧಿಕೃತವಾಗಿ ತನಿಖಾ ಸಮಿತಿ ರಚನೆಯಾಗಿ, ನೋಟಿಸ್ ಜಾರಿಯಾಗಿ, ವಿಚಾರಣೆಗೆ ದಿನಾಂಕ ನಿಗದಿಯಾಗಿದ್ದರೂ ಸಹ, ಆರಂಭದಲ್ಲಿ ಆಡಳಿತ ಮಂಡಳಿಯು “ಅದೆಲ್ಲ ಮುಗಿದ ಅಧ್ಯಾಯ, ಯಾವುದೇ ತನಿಖೆ ಇಲ್ಲ” ಎಂದು ಸಾರ್ವಜನಿಕವಾಗಿ ಏಕೆ ಬಿಂಬಿಸಿತು?
  • ನ್ಯಾಯಾಲಯದಿಂದ ಸ್ಟೇ ತಂದಿರುವ ವಿಷಯ ಅಥವಾ ಹೊಸ ತನಿಖಾ ನೋಟಿಸ್ ಬಂದಿರುವ ವಿಚಾರವನ್ನು ಆರಂಭದಲ್ಲೇ ಮುಚ್ಚಿಡಲು ಕಾರಣವೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಮೂಡಿದೆ.
  • ಮಾಧ್ಯಮಗಳ ಮುಂದೆ ಬಂದಾಗ ನೇರವಾದ ಮತ್ತು ಸ್ಪಷ್ಟ ಉತ್ತರಗಳನ್ನು ನೀಡದೆ, ರಾಜಕೀಯ ಪ್ರೇರಿತ ಆರೋಪಗಳೆಂದು ಹೇಳಿ ವಿಷಯದಿಂದ ನುಣುಚಿಕೊಳ್ಳಲು ಯತ್ನಿಸುತ್ತಿರುವುದುೇಕೆ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಒಟ್ಟಾರೆಯಾಗಿ… 6,500 ಕೋಟಿ ರೂಪಾಯಿಗೂ ಅಧಿಕ ಸಾರ್ವಜನಿಕರ ಠೇವಣಿಗಳನ್ನು ಹೊಂದಿರುವ ಬೃಹತ್ ಸಹಕಾರಿ ಸಂಸ್ಥೆಯೊಂದರ ಮೇಲೆ ಕೇಂದ್ರ ಮತ್ತು ರಾಜ್ಯ ಮಟ್ಟದ ಸಹಕಾರಿ ಇಲಾಖೆಗಳು ಗಂಭೀರ ಆರೋಪಗಳ ತನಿಖೆಗೆ ಮುಂದಾಗಿರುವುದು ಸಾಮಾನ್ಯ ವಿಚಾರವಲ್ಲ. ರಮೇಶ್ ಬಿದನೂರು ಅವರು ಬಿಡುಗಡೆ ಮಾಡಿರುವ ಅಧಿಕೃತ ದಾಖಲೆಗಳು ಹಾಗೂ ಸರ್ಕಾರದ ತನಿಖಾ ನೋಟಿಸ್‌ಗಳು ಒಂದು ಕಡೆಯಿದ್ದರೆ, ಆಡಳಿತ ಮಂಡಳಿಯು ಮಲ್ಟಿಸ್ಟೇಟ್ ವ್ಯಾಪ್ತಿ, 5 ವರ್ಷಗಳ ಕಾಲಾವಕಾಶದ ವಾದ ಹಾಗೂ ಕಾನೂನು ಹೋರಾಟದ ಮೂಲಕ ಇದನ್ನು ಎದುರಿಸುತ್ತಿರುವುದು ಮತ್ತೊಂದು ಕಡೆಯಿದೆ. ಠೇವಣಿದಾರರ ಹಿತಾಸಕ್ತಿ ಮತ್ತು ಹಣಕಾಸಿನ ಪಾರದರ್ಶಕತೆಯ ದೃಷ್ಟಿಯಿಂದ, ಈ ಸಂಪೂರ್ಣ ತನಿಖೆಯು ಕಾನೂನು ಚೌಕಟ್ಟಿನಲ್ಲಿ ಪೂರ್ಣಗೊಂಡು ಸತ್ಯಾಸತ್ಯತೆ ಹೊರಬರುವವರೆಗೂ ಈ ವಿವಾದ ಕುತೂಹಲದ ಕೇಂದ್ರಬಿಂದುವಾಗಿ ಮುಂದುವರಿಯಲಿದೆ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...