Narendra Modi: ದೇಶದ ಕೋಟ್ಯಂತರ ಯುವಜನತೆಯ ಭವಿಷ್ಯ, ಪೋಷಕರ ರಕ್ತ-ಬೆವರ ಸಂಪಾದನೆ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳನ್ನು ಸಜೀವವಾಗಿ ದಹಿಸುತ್ತಿರುವ ‘ಪ್ರಶ್ನೆ ಪತ್ರಿಕೆ ಸೋರಿಕೆ’ (Paper Leak) ಹಗರಣವು ಈಗ ಭಾರತದ ಶಿಕ್ಷಣ ವ್ಯವಸ್ಥೆಯ ಕೊಳೆತ ಮುಖವನ್ನು ದಿಗಂಬರಗೊಳಿಸಿದೆ. ದೇಶಾದ್ಯಂತ NEET/NET ಪರೀಕ್ಷಾ ಅಕ್ರಮಗಳ ವಿರುದ್ಧ ಉದ್ವಿಗ್ನತೆ ಹೆಚ್ಚಾಗುತ್ತಿರುವಾಗ, ಧರಣಿ ನಿರತ ಯುವಕರ ಮೇಲೆ ಪೊಲೀಸರ ಲಠಿ ಚಾರ್ಜ್ ನಡೆಯುತ್ತಿರುವಾಗ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಡರಾತ್ರಿ ಬಿಡುಗಡೆ ಮಾಡಿದ ಒಂದು ‘ಅರ್ಧರಾತ್ರಿಯ ವಿಡಿಯೋ ಸಂದೇಶ’ (Midnight Video) ದೇಶದ ಜನಕ್ರೋಶಕ್ಕೆ ಮತ್ತಷ್ಟು ಬೆಂಕಿ ಹಚ್ಚಿದೆ.
ಕಳೆದ 47 ದಿನಗಳಿಂದ ದೇಶಾದ್ಯಂತ ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತು ಕಣ್ಣೀರಿಡುತ್ತಿದ್ದಾಗ ಮೌನಕ್ಕೆ ಶರಣಾಗಿದ್ದ ಪ್ರಧಾನಿಯವರು, ಈಗ ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗಲೇ ಸದನಕ್ಕೆ ಮುಖ ತೋರಿಸದೆ ಕ್ಯಾಮೆರಾ ಮುಂದೆ ಬಂದು ‘ವಿಡಿಯೋ ಸಂದೇಶ’ ನೀಡಿರುವುದು ವಿಪಕ್ಷಗಳು ಮತ್ತು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. “ವಿದ್ಯಾರ್ಥಿಗಳ ಬುದ್ಧಿವಂತಿಕೆಯನ್ನು ಅವಮಾನಿಸುವುದನ್ನು ಮೊದಲು ನಿಲ್ಲಿಸಿ, ಅರ್ಧರಾತ್ರಿಯ ಡ್ರಾಮಾಗಳನ್ನು ಬಂದ್ ಮಾಡಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಂಪುಟದಿಂದ ಆಚೆ ತಳ್ಳಿ” ಎಂದು ವಿಪಕ್ಷಗಳು ಮತ್ತು ಬಾಲಿವುಡ್ ತಾರೆಯರು ಪ್ರಧಾನಿ ಮೋದಿ ವಿರುದ್ಧ ಕಟು ಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ: NEET Scam: ಮಂತ್ರಿ ಪದವಿ ಬಿಡದ ಪ್ರಧಾನ್; ಮೋದಿ-ಶಾ ಸರ್ಕಾರದ ಗದ್ದುಗೆಯನ್ನೇ ಅಲ್ಲಾಡಿಸಿದ ಜೊಂಡಿಗ್ಯಾಗಳು!
’47 ದಿನ ತಡವಾಗಿ ಬಂದು ಕಣ್ಣೀರು ಒರೆಸುವ ಅಭಿನಯ!’: ನಟಿ ದಿಯಾ ಮಿರ್ಜಾ
ಈ ಹಗರಣದಲ್ಲಿ ಪ್ರಧಾನಿ ಮೋದಿ (Narendra Modi) ಯವರ ಹೊಣೆಗೇಡಿತನವನ್ನು ರಾಜಕಾರಣಿಗಳಷ್ಟೇ ಅಲ್ಲದೆ ನಾಗರಿಕ ಸಮಾಜವೂ ಬಟ್ಟೆ ಬಿಚ್ಚಿ ತೋರಿಸುತ್ತಿದೆ. ಬಾಲಿವುಡ್ ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ದಿಯಾ ಮಿರ್ಜಾ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿಯವರ ವಿಡಿಯೋ ಸಂದೇಶದ ವಿರುದ್ಧ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿಯವರ ಇಡೀ ವೀಡಿಯೊದಲ್ಲಿ ನೊಂದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕನಿಷ್ಠ ‘ಅನುಕಂಪದ’ ಒಂದೇ ಒಂದು ಮಾತು ಇರಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
“47 ದಿನಗಳ ದೀರ್ಘ ಮೌನದ ನಂತರ ಕೊನೆಗೂ ಮಾತನಾಡಲು ನಿಮಗೆ ಸಮಯ ಸಿಕ್ಕಿತು, ಆದರೆ ಮಾತನಾಡಿದ ಮೇಲೂ ನೀವು ಏನನ್ನೂ ಹೇಳಲಿಲ್ಲ! ತಮ್ಮ ಮಕ್ಕಳನ್ನು ಕಳೆದುಕೊಂಡು ರೋದಿಸುತ್ತಿರುವ ಪೋಷಕರಿಗೆ, ಜೀವ ಕಳೆದುಕೊಂಡ ಅಮಾಯಕರ ಕುಟುಂಬಕ್ಕೆ, ತಮ್ಮ ಹಕ್ಕುಗಳಿಗಾಗಿ ಸತತವಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳಿಗೆ ಅಥವಾ ವಾರಗಟ್ಟಲೆ ಉಪವಾಸ ಸತ್ಯಾಗ್ರಹ ಕುಳಿತಿದ್ದ ಸೋನಮ್ ವಾಂಗ್‌ಚುಕ್ ಮತ್ತು ವಿದ್ಯಾರ್ಥಿಗಳಿಗೆ ಅನುಕಂಪದ ಒಂದೇ ಒಂದು ಮಾತನ್ನೂ ಆಡಲು ನಿಮಗೆ ಸಾಧ್ಯವಾಗಲಿಲ್ಲವೇ? ನೊಂದ ಕೋಟ್ಯಂತರ ಮನಸ್ಸುಗಳಿಗೆ ಸಾಂತ್ವನ ಹೇಳುವುದು ನಿಮಗಷ್ಟು ಕಷ್ಟವೇ ಪ್ರಧಾನಿಯವರೇ?”
– ದಿಯಾ ಮಿರ್ಜಾ, ಇನ್‌ಸ್ಟಾಗ್ರಾಮ್ ಪೋಸ್ಟ್.
View this post on Instagram
ಪರೀಕ್ಷಾ ಅಕ್ರಮಗಳು ಮತ್ತು ಭವಿಷ್ಯದ ಅನಿಶ್ಚಿತತೆಯಿಂದಾಗಿ ಕಂಗಾಲಾಗಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಸಾವು ಮತ್ತು ಅವರ ಕುಟುಂಬಗಳ ಆಕ್ರಂದನ ಪ್ರಧಾನಿಯವರ ಕಣ್ಣಿಗೆ ಕಾಣುತ್ತಿಲ್ಲವೇ? ಇಷ್ಟು ದಿನ ಮೌನವಾಗಿದ್ದು ಈಗ ಬಂದ ಪ್ರಧಾನಿ, ಅನುಕಂಪದ ಮಾತುಗಳನ್ನಾಡುವ ಬದಲು ಕೇವಲ ಶುಷ್ಕ ಭರವಸೆಗಳನ್ನು ನೀಡುತ್ತಿರುವುದು ಶೋಚನೀಯ ಎಂದು ದಿಯಾ ಮಿರ್ಜಾ ತೊಳಲಾಟ ವ್ಯಕ್ತಪಡಿಸಿದ್ದಾರೆ.
‘ಮೂರೂ ಷರತ್ತು ಒಪ್ಪಿ, ಇಲ್ಲವೇ ಪರಿಣಾಮ ಎದುರಿಸಿ’: ರಾಹುಲ್ ಗಾಂಧಿ ಚಾಟಿ
ಸಂಸತ್ತಿನ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪ್ರಧಾನಿಯವರ ತಡರಾತ್ರಿಯ ವಿಡಿಯೋವನ್ನು “ಪರಿಣಾಮಕಾರಿಯಲ್ಲದ ಕೀಳುಮಟ್ಟದ ಪ್ರಯತ್ನ” ಎಂದು ಬಣ್ಣಿಸಿರುವ ರಾಹುಲ್ ಗಾಂಧಿ, ಕೇವಲ ಕ್ಯಾಮೆರಾ ಮುಂದೆ ಮಾತನಾಡುವುದರಿಂದ ಪ್ರಧಾನಿಯವರು ತಮ್ಮ ಹೊಣೆಗಾರಿಕೆಯಿಂದ ಓಡಿಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ‘X’ (ಟ್ವಿಟರ್) ನಲ್ಲಿ ಪ್ರಧಾನಿಗೆ ನೇರವಾಗಿ ಮೂರು ಷರತ್ತುಗಳನ್ನು ವಿಧಿಸಿದ್ದಾರೆ:
1. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಿ (Sack Pradhan).
2. ನ್ಯಾಯ ಕೇಳಲು ಬೀದಿಗಿಳಿದ ವಿದ್ಯಾರ್ಥಿಗಳನ್ನು ರಕ್ತ ಬರುವಂತೆ ಹೊಡೆದ ಪೊಲೀಸರು ಮತ್ತು ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿ (Punish those who beat students).
3. ದೇಶದ ಯುವಜನತೆ ಮತ್ತು ಪೋಷಕರ ಬಳಿ ಪ್ರಧಾನಿ ಬಹಿರಂಗವಾಗಿ ಕ್ಷಮೆಯಾಚಿಸಲಿ (Apologise).
“ಮಿಸ್ಟರ್ ಮೋದಿ, ದೇಶದ ವಿದ್ಯಾರ್ಥಿಗಳು ಶಿಕ್ಷಣ ಸಚಿವರ ರಾಜೀನಾಮೆ ಕೇಳುತ್ತಿದ್ದಾರೆ. ಇಂತಹ ನಿಕೃಷ್ಟ ಅರ್ಧರಾತ್ರಿಯ ವಿಡಿಯೋಗಳನ್ನು ಬಿಟ್ಟು ಅವರ ಬುದ್ಧಿವಂತಿಕೆಯನ್ನು ಅವಮಾನಿಸಬೇಡಿ” ಎಂದು ರಾಹುಲ್ ಗಾಂಧಿ ಖಡಕ್ ಆಗಿ ಸವಾಲು ಎಸೆದಿದ್ದಾರೆ.
Mr. Modi, our students are demanding Dharmendra Pradhan’s resignation.
Don’t insult their intelligence with this pathetic midnight video.
1. Sack Pradhan.
2. Punish those who beat students.
3. Apologise https://t.co/7SLB6pQqZx— Rahul Gandhi (@RahulGandhi) July 23, 2026
‘ಮನ್ ಕಿ ಬಾತ್’ ಬಂದ್ ಮಾಡಿ, ಸಂಸತ್ತಿಗೆ ಬನ್ನಿ: ಖರ್ಗೆ ಆಕ್ರೋಶ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಹಿಂಡಿ ಹಿಪ್ಪೆ ಮಾಡಿದ್ದಾರೆ. “ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿರುವಾಗ, ಪ್ರಧಾನಿಯಾದವರು ಸದನದ ಒಳಗೆ ಬಂದು ಅಧಿಕೃತವಾಗಿ ವಿಷಯವನ್ನು ಮಂಡಿಸಬೇಕು. ಅದನ್ನು ಬಿಟ್ಟು ಸಂಸತ್ತಿನ ಹೊರಗೆ ನಿಂತು ಏಕಪಕ್ಷೀಯವಾಗಿ ‘ಮನ್ ಕಿ ಬಾತ್’ (Mann Ki Baat) ಮಾಡುವುದಲ್ಲ” ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.
“ಇಂದು ಸಂಸತ್ತಿಗೆ ಬರುವ ಮುನ್ನ ಮೊದಲ ಕೆಲಸವಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸಿ. ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ ಮಾಸೂಮ್ ವಿದ್ಯಾರ್ಥಿಗಳ ಮೇಲೆ ಲಠಿ ಚಾರ್ಜ್ ಮತ್ತು ಪೆಲೆಟ್ ಗನ್ (Pellet Guns) ಬಳಸಿ ಧ್ವನಿ ಅಡಗಿಸಲು ಯತ್ನಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಪ್ರಧಾನಿಯವರು ದೇಶದ ವಿದ್ಯಾರ್ಥಿಗಳ ಕ್ಷಮೆಯಾಚಿಸಲಿ. ಆ ನಂತರವಷ್ಟೇ ನಾವು ಶಿಕ್ಷಣ ವ್ಯವಸ್ಥೆಯ ಮೇಲಿನ ಸಮಗ್ರ ಚರ್ಚೆಗೆ ಸಿದ್ಧರಿದ್ದೇವೆ” ಎಂದು ಖರ್ಗೆ ಗುಡುಗಿದ್ದಾರೆ.
जब संसद चल रही होती है तो प्रधानमंत्री को संसद के पटल पर Statement देना होता है, देर रात एक वीडियो बनाकर, संसद के बाहर एकतरफ़ा “मन की बात” नहीं करनी होती !! @narendramodi जी,
आज संसद में आने से पहले, धर्मेंद्र प्रधान को बर्खास्त कर के आइएगा। पहले छात्रों से माफ़ी माँगिए और…
— Mallikarjun Kharge (@kharge) July 24, 2026
ಸತ್ಯ ಮುಚ್ಚಿಡಲು ಯತ್ನಿಸಿ ಈಗ ಜಾರಿಕೊಳ್ಳುವ ತಂತ್ರ: ಜೈರಾಮ್ ರಮೇಶ್
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಮೋದಿ ಸರ್ಕಾರದ ದ್ವಂದ್ವ ನೀತಿ ಮತ್ತು ಹಳೆಯ ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ:
- ಸೋರಿಕೆಯನ್ನೇ ನಿರಾಕರಿಸಿದ್ದ ಸರ್ಕಾರ: ಕಳೆದ ಎರಡು ತಿಂಗಳಿನಿಂದ NEET-UG 2026 ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಸರ್ಕಾರ ಸಾಧಿಸುತ್ತಲೇ ಬಂದಿತ್ತು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಪತ್ರಿಕಾಗೋಷ್ಠಿಯಲ್ಲಿ ‘ಲೀಕ್’ ಎಂಬ ಪದವನ್ನೇ ಬಳಸಲು ನಿರಾಕರಿಸಿದ್ದರು. ಶಿಕ್ಷಣ ಸಚಿವಾಲಯವು ಸಂಸದೀಯ ಕಾಯಂ ಸಮಿತಿಗೂ ‘ಯಾವುದೇ ಸೋರಿಕೆಯಾಗಿಲ್ಲ’ ಎಂದು ಸುಳ್ಳು ಮಾಹಿತಿ ನೀಡಿತ್ತು. ಈಗ ಜನಕ್ರೋಶ ಬೀದಿಗೆ ಬಂದಾಗ ಪ್ರಧಾನಿ ಅನಿವಾರ್ಯವಾಗಿ ಸತ್ಯ ಒಪ್ಪಿಕೊಳ್ಳುತ್ತಿದ್ದಾರೆ.
- ಸಾಕ್ಷ್ಯ ನಾಶ ಮತ್ತು ಮಾಫಿಯಾಗೆ ರಕ್ಷಣೆ: 2024ರ ನೀಟ್ ಹಗರಣದಲ್ಲಿ ಹಜಾರಿಬಾಗ್‌ನಲ್ಲಿ ನಡೆದಿರುವುದು ‘ಆಯ್ದ ಸೋರಿಕೆ’ ಎಂದು ಒಪ್ಪಿಕೊಂಡಿದ್ದ ಸರ್ಕಾರ, ಹಗರಣದ ಮಾಸ್ಟರ್ ಮೈಂಡ್ ಎಂದೇ ಬಿಂಬಿತವಾಗಿದ್ದ ಸಂಜೀವ್ ಮುಖಿಯಾ ಎಂಬಾತನಿಗೆ ಈಗ ಹಸಿರು ನಿಶಾನೆ ನೀಡಿ ಆತ ನಿರ್ದೋಷಿ ಎಂದು ಬಿಂಬಿಸುತ್ತಿದೆ.
- CBI ನೈತಿಕತೆಯ ಪತನ: 2024ರ UGC-NET ಪರೀಕ್ಷೆಯನ್ನು ರದ್ದುಗೊಳಿಸಿದ ಸಿಬಿಐ (CBI), ಯಾವುದೇ ಸೂಕ್ತ ಕಾರಣಗಳನ್ನು ನೀಡದೆ ಕವರ್-ಅಪ್ ಮಾಡಲು ‘ಕ್ಲೋಸರ್ ರಿಪೋರ್ಟ್’ (Closure Report) ಸಲ್ಲಿಕೆ ಮಾಡಿದೆ.
- ಪೊಲೀಸ್ ದೌರ್ಜನ್ಯಕ್ಕೆ ಮೌನ: ಜುಲೈ 20 ರಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಬರ್ಬರ ಹಲ್ಲೆಯ ಬಗ್ಗೆ ಪ್ರಧಾನಿ ತಮ್ಮ ವಿಡಿಯೋದಲ್ಲಿ ಒಂದು ಮಾತನ್ನೂ ಆಡದಿರುವುದು ಅವರ ಜವಾಬ್ದಾರಿರಹಿತ ತನಕ್ಕೆ ಸಾಕ್ಷಿ.
The desperate and hassled-looking Pradhan Mantri finally broke his two-month-long silence late last night via a video message to speak on paper leaks.
Remember that the Modi Sarkar has long denied that the NEET-UG 2026 exam was leaked. The Mantri Pradhan deliberately refused to…
— Jairam Ramesh (@Jairam_Ramesh) July 24, 2026
ವಿಡಿಯೋದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು? – ಬರೀ ಕಾಗದದ ಹುಲಿಯಾಗಲಿದೆಯೇ ಕಾಯ್ದೆ?
ಗುರುವಾರ ತಡರಾತ್ರಿ ಬಿಡುಗಡೆಯಾದ ವಿಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ, “ಪ್ರಶ್ನೆ ಪತ್ರಿಕೆ ಸೋರಿಕೆ ಸಣ್ಣ ವಿಷಯವಲ್ಲ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಅನುಭವಿಸುತ್ತಿರುವ ನೋವು ನನಗೆ ಅರ್ಥವಾಗುತ್ತದೆ. ತಪ್ಪಿತಸ್ಥರನ್ನು ಈಗಾಗಲೇ ಜೈಲಿಗೆ ಅಟ್ಟಲಾಗಿದೆ. 22 ಲಕ್ಷ ವಿದ್ಯಾರ್ಥಿಗಳಿಗೆ ತಕ್ಷಣವೇ ಮರುಪರೀಕ್ಷೆ ನಡೆಸಿ ಅವರ ಒಂದು ವರ್ಷ ಹಾಳಾಗದಂತೆ ನೋಡಿಕೊಳ್ಳಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಕಠಿಣ ಕಾನೂನು ತರಲಾಗುವುದು. ಶುಕ್ರವಾರ ಸಂಪುಟ ಸಭೆಯಲ್ಲಿ ಚರ್ಚಿಸಿ, ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ದ್ವಿತೀಯ ವಾರದ ಅಧಿವೇಶನದಲ್ಲಿ ಮಸೂದೆ ಮಂಡಿಸಿ ತಕ್ಷಣವೇ ಅಂಗೀಕರಿಸಲಾಗುವುದು” ಎಂದು ಹೇಳಿದ್ದರು.
ಆದರೆ, ವ್ಯವಸ್ಥೆಯೇ ಸಂಪೂರ್ಣವಾಗಿ ಸಡಿದುಬಿದ್ದಿರುವಾಗ, ಕೇವಲ ಹೊಸ ಕಾನೂನು ತರುವುದರಿಂದ ಈ ಹಗರಣಗಳು ನಿಲ್ಲುತ್ತವೆಯೇ ಎಂಬ ಪ್ರಶ್ನೆ ಎದ್ದಿದೆ.
‘ಗೋಡೆ ಇಲ್ಲದ ಮನೆಗೆ ಗೇಟ್ ಬೀಗ’: ಕಾಕ್ರೋಚ್ ಜನತಾ ಪಾರ್ಟಿ ವ್ಯಂಗ್ಯ
ಪ್ರತಿಭಟನೆಯ ಮುಂಚೂಣಿಯಲ್ಲಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಕೂಡ ಕೇಂದ್ರ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಿಜೆಪಿ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಮಾತನಾಡಿ, “ಮೋದಿ ಜೀ, ನೀವು ತರಬಹುದಾದ ಅತ್ಯಂತ ಕಠಿಣ ಕಾಯ್ದೆ ಎಂದರೆ ಅದು ನಾಳೆಯೇ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸುವುದು. ಆ ಧೈರ್ಯ ತೋರಿ” ಎಂದು ಸವಾಲು ಎಸೆದಿದ್ದಾರೆ.
ಇನ್ನು ಸಿಜೆಪಿ ಸಂಸ್ಥಾಪಕ ಅಭೀಜಿತ್ ದಿಪ್ಕೆ ಅವರು ‘X’ ನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಸುತ್ತಲೂ ಗೋಡೆಯೇ ಇಲ್ಲದ ಬರಿದಾದ ಜಾಗದಲ್ಲಿ, ಕೇವಲ ಒಂದು ಗೇಟ್‌ಗೆ ವ್ಯಕ್ತಿಯೊಬ್ಬ ಬೀಗ ಹಾಕುತ್ತಿರುವ ಚಿತ್ರವಿತ್ತು. ಅಂದರೆ, ಮೂಲ ಶಿಕ್ಷಣ ವ್ಯವಸ್ಥೆ ಮತ್ತು ಪರೀಕ್ಷಾ ಮಂಡಳಿಗಳೇ ಧ್ವಂಸವಾಗಿರುವಾಗ, ಬರೀ ಕಾಯ್ದೆ ಎಂಬ ಗೇಟ್‌ಗೆ ಬೀಗ ಹಾಕುವ ಮೋದಿ ಸರ್ಕಾರದ ತಂತ್ರವನ್ನು ಅವರು ಅತ್ಯಂತ ಮಾರ್ಮಿಕವಾಗಿ ಲೇವಡಿ ಮಾಡಿದ್ದಾರೆ.
Strict actions. https://t.co/4KWlyn8hiR pic.twitter.com/Y5Z5vGSTCo
— Abhijeet Dipke (@abhijeet_dipke) July 23, 2026
ರಾಜಕೀಯ ನಾಟಕ ಬಿಟ್ಟು ನೈತಿಕತೆ ಪ್ರದರ್ಶಿಸಿ!
ದೇಶದಲ್ಲಿ ಪರೀಕ್ಷಾ ಅಕ್ರಮಗಳು ಹೊಸದೇನಲ್ಲ, ಆದರೆ ಆ ಅಕ್ರಮಗಳನ್ನು ಮುಚ್ಚಿಹಾಕಲು ಸರ್ಕಾರ ತೋರುತ್ತಿರುವ ಉದ್ಧಟತನ ಮತ್ತು ಜಾಣ ಕುರುಡು ಪ್ರಜಾಪ್ರಭುತ್ವದ ಅತಿ ದೊಡ್ಡ ದುರಂತ. ಕಷ್ಟಪಟ್ಟು ಹಗಲಿರುಳು ಓದುವ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಬೀದಿಯಲ್ಲಿ ನಿಂತು ಲಠಿ ಏಟು ತಿನ್ನುವಾಗ, ಪೋಷಕರು ತಮ್ಮ ಮಕ್ಕಳ ಜೀವ ಉಳಿಸಿಕೊಳ್ಳಲು ಗೋಳಾಡುತ್ತಿರುವಾಗ ಪ್ರಧಾನಿಯವರು ಕ್ಯಾಮೆರಾ ಮುಂದೆ ಬಂದು ‘ವಿಡಿಯೋ’ ಹರಿಬಿಡುವುದು ಸಂವೇದನಾರಾಹಿತ್ಯದ ಪರಮಾವಧಿ.
- ಶಿಕ್ಷಣ ಸಚಿವರ ರಕ್ಷಣೆ ಏಕೆ?: ಸಾಲು ಸಾಲು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದರೂ, ಎನ್‌ಟಿಎ (NTA) ವಿಶ್ವಾಸಾರ್ಹತೆ ಕಳೆದುಕೊಂಡಿದ್ದರೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿರುವುದು ಮತ್ತು ಅವರನ್ನು ಪ್ರಧಾನಿ ರಕ್ಷಿಸುತ್ತಿರುವುದು ರಾಜಕೀಯ ಲಾಭಕ್ಕಾಗಿಯೇ?
- ಸಂಸತ್ತಿಗೆ ಮುಖ ತೋರಿಸಲು ಭಯವೇ?: ಸಂಸತ್ತು ನಡೆಯುತ್ತಿರುವಾಗ ಪ್ರಧಾನಿ ವೀಡಿಯೋ ಸಂದೇಶ ನೀಡುವುದು ಸದನಕ್ಕೆ ಮತ್ತು ಸಂವಿಧಾನಕ್ಕೆ ಮಾಡುವ ಅಪಚಾರ. ಪ್ರಧಾನಿಗೆ ಧೈರ್ಯವಿದ್ದರೆ ಸಂಸತ್ತಿನಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ನೇರ ಉತ್ತರ ನೀಡಲಿ.
- ಯುವಶಕ್ತಿಯ ಆಕ್ರೋಶಕ್ಕೆ ಬೆಲೆ ತೆರಬೇಕಾದೀತು: ವಿದ್ಯಾರ್ಥಿಗಳ ಕಣ್ಣೀರು ಮತ್ತು ಪೋಷಕರ ಆಕ್ರೋಶ ಕೇವಲ ಪ್ರತಿಭಟನೆಗೆ ಸೀಮಿತವಾಗುವುದಿಲ್ಲ. ನೈತಿಕ ಹೊಣೆ ಹೊರದೆ ಕೇವಲ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿರುವ ಸರ್ಕಾರಕ್ಕೆ ದೇಶದ ಯುವಜನತೆ ತಕ್ಕ ಸಮಯದಲ್ಲೇ ತಕ್ಕ ಪಾಠ ಕಲಿಸಲಿದ್ದಾರೆ.
ಕೇಂದ್ರ ಸರ್ಕಾರ ತಕ್ಷಣವೇ ನಾಟಕಗಳನ್ನು ನಿಲ್ಲಿಸಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯಬೇಕು, ದೌರ್ಜನ್ಯ ಎಸಗಿದ ಅಧಿಕಾರಿಗಳನ್ನು ಜೈಲಿಗಟ್ಟಬೇಕು ಮತ್ತು ದೇಶದ ಯುವಜನತೆಯ ಕ್ಷಮೆಯಾಚಿಸಬೇಕು!

