Homeವಿಶ್ಲೇಷಣೆSiddaramaiah vs Satish: ಗುರುವಿಗೆ ಗುನ್ನಾ! ಹಣದ 'ಹೊಳೆ' ಹರಿಸಿದ್ರೆ ಅಹಿಂದ ವರ್ಗ 'ಜಾರಿ' ಬರಲ್ಲ;...

Siddaramaiah vs Satish: ಗುರುವಿಗೆ ಗುನ್ನಾ! ಹಣದ ‘ಹೊಳೆ’ ಹರಿಸಿದ್ರೆ ಅಹಿಂದ ವರ್ಗ ‘ಜಾರಿ’ ಬರಲ್ಲ; ಸಿದ್ದು ಬೆನ್ನಿಗೆ ಚೂರಿ ಹಾಕಿದ್ರಾ ಸತೀಶ್?

Siddaramaiah vs Satish: ಕರ್ನಾಟಕ ರಾಜಕಾರಣ ಎನ್ನುವುದು ಬಣ್ಣ ಬದಲಿಸುವ ಸರಸರನೆ ಹರಿಯುವ ನದಿಯಿದ್ದಂತೆ. ಇಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ. ಆದರೆ, ಅಧಿಕಾರಕ್ಕಾಗಿ ನಂಬಿದವರಿಗೇ ಬೆನ್ನಿಗೆ ಚೂರಿ ಹಾಕುವ ಕಲೆ ಮಾತ್ರ ದಿನದಿಂದ ದಿನಕ್ಕೆ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ರಾಜಕೀಯ ಪಲ್ಲಟಗಳು ಈಗ ಇಡೀ ರಾಜ್ಯದ ಗಮನ ಸೆಳೆದಿವೆ. ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ ಬೆನ್ನಲ್ಲೇ, ಸದ್ಯ ಗದ್ದುಗೆಯ ಆಟಕ್ಕಿಂತಲೂ ಹೆಚ್ಚಾಗಿ ಮುಂದಿನ ‘ಅಹಿಂದ’ (Ahinda) ನಾಯಕ ಯಾರು ಎಂಬ ಜಿದ್ದಾಜಿದ್ದಿ ತಾರಕಕ್ಕೇರಿದೆ. ಸಿದ್ದರಾಮಯ್ಯ ಅವರ ಪರಮಾಪ್ತ ಬಳಗದಲ್ಲೇ ಗುರುತಿಸಿಕೊಂಡಿದ್ದ ಸತೀಶ್ ಜಾರಕಿಹೊಳಿ (Satish Jarkiholi) ಅವರ ಇತ್ತೀಚಿನ ನಡೆ ಮತ್ತು ಹೇಳಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ದೊಡ್ಡ ಮಟ್ಟದ ವಿಶ್ಲೇಷಣೆ ಹಾಗೂ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಅಹಿಂದ ವಲಯಕ್ಕೆ ಸಿಡಿಲು ಬಡಿದಂತಹ ಸುದ್ದಿ: ಸತೀಶ್ ಕುತಂತ್ರದ ಇತಿಹಾಸ?

ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿರುವ ಅತ್ಯಂತ ಸ್ಫೋಟಕ ಮಾಹಿತಿ ಎಂದರೆ, ಸಿದ್ದರಾಮಯ್ಯ ವಿರುದ್ಧ ಸತೀಶ್ ಜಾರಕಿಹೊಳಿ (Siddaramaiah vs Satish) ಕಳೆದ ಆರು ತಿಂಗಳಿನಿಂದಲೂ ತೆರೆಮರೆಯಲ್ಲಿ ವ್ಯವಸ್ಥಿತ ಕುತಂತ್ರ ನಡೆಸಿದ್ದರು ಎನ್ನಲಾಗುತ್ತಿದೆ. ಕೇವಲ ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದಷ್ಟೇ ಅಲ್ಲದೇ, ಸಿದ್ದು ವಿರುದ್ಧ ಶಾಸಕರ ಸಹಿ ಸಂಗ್ರಹಿಸಿ, ಆ ಸಹಿ ಪಟ್ಟಿಯನ್ನು ಡಿಕೆ ಶಿವಕುಮಾರ್ ಕೈಗೆ ಕೊಟ್ಟಿದ್ದರು ಎನ್ನುವ ಮಾತುಗಳು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಬಲವಾಗಿ ಹರಿದಾಡುತ್ತಿವೆ. ಈ ಸುದ್ದಿ ಸದ್ಯಕ್ಕೆ ಹೊರಬೀಳುತ್ತಿದ್ದಂತೆ ಇಡೀ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ವರ್ಗದ ಜನರಿಗೆ ಸಿಡಿಲುಹೊಡೆದಂತಾಗಿದೆ. ಸದಾ ಸೌಮ್ಯವಾಗಿ, ತತ್ವ ಸಿದ್ಧಾಂತಗಳ ಬೆನ್ನತ್ತಿ ಹೋಗುವ ಬುದ್ಧ, ಬಸವ, ಅಂಬೇಡ್ಕರ್ ವಿಚಾರವಾದಿ ಎಂದು ಬಿಂಬಿಸಿಕೊಳ್ಳುವ ಸತೀಶ್ ಜಾರಕಿಹೊಳಿ ಎನ್ನುವ ವ್ಯಕ್ತಿ ಇಂತಹ ಕೀಳುಮಟ್ಟದ ರಾಜಕೀಯಕ್ಕೆ ಇಳಿಯಲು ಹೇಗೆ ಸಾಧ್ಯ? ಇದು ಕೇವಲ ವಿರೋಧಿಗಳ ಅಪಪ್ರಚಾರ, ಸಂಪೂರ್ಣ ಸುಳ್ಳು ಎಂದು ಅಹಿಂದ ವರ್ಗದ ಜನ ಸಾರಾಸಗಟಾಗಿ ತಳ್ಳಿಹಾಕುತ್ತಿದ್ದರು.

Siddaramaiah vs Satish: ಗುರುವಿಗೆ ಗುನ್ನಾ! ಹಣದ 'ಹೊಳೆ' ಹರಿಸಿದ್ರೆ ಅಹಿಂದ ವರ್ಗ 'ಜಾರಿ' ಬರಲ್ಲ; ಸಿದ್ದು ಬೆನ್ನಿಗೆ ಚೂರಿ ಹಾಕಿದ್ರಾ ಸತೀಶ್?

ಆದರೆ, ಕಳೆದ ಕೆಲವು ದಿನಗಳಿಂದ ಕರ್ನಾಟಕ ಹಾಗೂ ದೆಹಲಿಯಂಗಳದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಚುಕ್ಕೆಗಳನ್ನು (Dots) ಜೋಡಿಸಿ ನೋಡಿದಾಗ, ಈ ಅನುಮಾನ ನಿಜವಿರಬಹುದೇ ಎಂಬ ಆತಂಕ ಸೃಷ್ಟಿಯಾಗಿದೆ. ಬದಲಾಗುತ್ತಿರುವ ಈ ರಾಜಕೀಯ ಪಲ್ಲಟಗಳ ನಡುವೆ “ಗೆದ್ದೆತ್ತಿನ ಬಾಲ ಹಿಡಿಯೋದು ಚಾಣಕ್ಷತನ” ಎನ್ನುವ ಮತಿಗೇಡಿತನದ ತೀರ್ಮಾನಕ್ಕೆ ಸತೀಶ್ ಜಾರಕಿಹೊಳಿ ಬಂದಂತಿದ್ದಾರೆ. ಇವತ್ತಲ್ಲ ನಾಳೆ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಲೇಬೇಕು, ಮುಂದಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋದು ನಿಶ್ಚಿತ ಎನ್ನುವುದು ಕಣ್ಣಿಗೆ ಕಾಣುವ ಸತ್ಯವಾಗಿತ್ತು. ಹಾಗಾಗಿ, ಮುಳುಗುವ ಹಡಗಿನಂತಿರುವ ಸಿದ್ದು ಬಣದಲ್ಲೇ ಉಳಿಯುವ ಬದಲು, ಉದಯೋನ್ಮುಖ ಡಿಕೆ ಶಿವಕುಮಾರ್ ಅವರೊಂದಿಗೆ ಕೈ ಜೋಡಿಸಿದ್ರೆ ರಾಜಕೀಯದಲ್ಲಿ ಉಜ್ವಲ ಭವಿಷ್ಯ ಇರಬಹುದು ಎನ್ನುವ ಸ್ವಾರ್ಥ ಲೆಕ್ಕಾಚಾರಕ್ಕೆ ಸತೀಶ್ ಬಂದಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಕಳೆದ ಆರು ತಿಂಗಳಿನಿಂದ ಡಿಕೆ ಶಿವಕುಮಾರ್ ಜೊತೆಗೆ ತೆರೆಮರೆಯಲ್ಲಿ ಸತತ ಮಾತುಕತೆ ನಡೆಸುತ್ತಿದ್ದ ಜಾರಕಿಹೊಳಿ, ಸಿದ್ದರಾಮಯ್ಯರವರಿಂದ ನಿಧಾನವಾಗಿ ದೂರ ಉಳಿಯುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ ಎನ್ನಲಾಗುತ್ತಿದೆ. ಅದರ ಪ್ರತ್ಯಕ್ಷ ದರ್ಶನ ಎಂಬಂತೆ, ಕಳೆದ ಎರಡು ದಿನಗಳಿಂದ ಸಿದ್ದರಾಮಯ್ಯ ಹತ್ತಿರವೂ ಸುಳಿಯದ ಸತೀಶ್ ನಡೆ ಅತ್ಯಂತ ನಿಗೂಢವಾಗಿತ್ತು.

ಇದನ್ನೂ ಓದಿ: Siddaramaiah: ಕರಗಿದ ವಿಧಾನಸೌಧದ ಕಲ್ಲುಗಳು, ಮೌನವಾಯ್ತು ಬಡವರ ಗಟ್ಟಿ ಧ್ವನಿ: ‘ಭಾಗ್ಯಗಳ ಸರದಾರ’ನ ವಿದಾಯದ ಭಾವಯಾನ!

‘ಸಾಹುಕಾರ್’ ಅಹಿಂದ ಆಸೆಗೆ ಸಿದ್ದರಾಮಯ್ಯ ತಣ್ಣೀರು?

ಸತೀಶ್ ಜಾರಕಿಹೊಳಿ ತಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ ಎನ್ನುವ ಮಾತುಗಳು ಸಿದ್ದರಾಮಯ್ಯ ಬಣಕ್ಕೆ ತಲುಪುತ್ತಿದ್ದಂತೆ, ಸಿದ್ದು ಕೂಡ ಸುಮ್ಮನೆ ಕೂತಿಲ್ಲ. ಸತೀಶ್ ಅವರ ರಾಜಕೀಯ ಆಸೆಗಳಿಗೆ ತಣ್ಣೀರು ಸುರಿಯುವ ಮೂಲಕ ಗುರು ತಕ್ಕ ಶಾಸ್ತಿ ಮಾಡುತ್ತಿದ್ದಾರಾ? ಎನ್ನುವ ಬಲವಾದ ಅನುಮಾನಗಳು ಈಗ ಮೂಡುತ್ತಿವೆ. ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಸಿಎಂ ಆದ್ರೆ ತಾನು ತೆರವಾಗುವ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಳ್ಳಬಹುದು ಎನ್ನುವ ಬಹುದೊಡ್ಡ ಆಸೆಯನ್ನು ಸತೀಶ್ ಜಾರಕಿಹೊಳಿ ಹೊಂದಿದ್ದರು. ಆದರೆ ದೆಹಲಿಯಂಗಳದಲ್ಲಿ ಬೀಡುಬಿಟ್ಟಿರುವ ಸಿದ್ದರಾಮಯ್ಯ, ಹೈಕಮಾಂಡ್ ಮೇಲೆ ಸತೀಶ್ ಬದಲಿಗೆ ಹಿರಿಯ ನಾಯಕ ಜಿ. ಪರಮೇಶ್ವರ್ ಅವರನ್ನು ಮತ್ತೊಮ್ಮೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ತೀವ್ರ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಇಂದು ಪರಮೇಶ್ವರ್‌ ಅವರಿಗೆ ಹೈಕಮಾಂಡ್‌ನಿಂದ ಬುಲಾವ್‌ ಬಂದಿದೆ.

ಇದಕ್ಕೆ ಪುಷ್ಟಿ ನೀಡುವಂತೆ, ನಿನ್ನೆ ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಹಾಗೂ ಜಂಟಿ ಸುದ್ದಿಗೋಷ್ಠಿ ಸಮಯದಲ್ಲಿ ಸಿದ್ದರಾಮಯ್ಯ ತಮ್ಮ ಒಂದು ಕಡೆ ಡಿಕೆ ಶಿವಕುಮಾರ್ ಅವರನ್ನು ಕೂರಿಸಿಕೊಂಡಿದ್ದರೆ, ಮತ್ತೊಂದು ಕಡೆ ಜಿ. ಪರಮೇಶ್ವರ್ ಅವರನ್ನು ಕೂರಿಸಿಕೊಂಡಿದ್ದರು. ಈ ಚಿತ್ರಣ ಇಡೀ ರಾಜ್ಯಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. ಈ ಮೂಲಕ ಜಾರಕಿಹೊಳಿ ಅವರ ತೆರೆಮರೆಯ ಕುತಂತ್ರಕ್ಕೆ ಸಿದ್ದರಾಮಯ್ಯ ಅತ್ಯಂತ ರಾಜತಾಂತ್ರಿಕವಾಗಿ ಹಾಗೂ ಖಡಕ್ ಆಗಿ ಉತ್ತರ ನೀಡುತ್ತಿದ್ದಾರಾ ಎನ್ನುವ ಪ್ರಶ್ನೆಗಳು ರಾಜಕೀಯ ವಿಶ್ಲೇಷಕರಲ್ಲಿ ಮೂಡದೇ ಇರದು.

ಆತುರದ ನಾಯಕತ್ವದ ಹಪಹಪಿ: ಹಾಸ್ಯಾಸ್ಪದ ಹೇಳಿಕೆ!

ಇವೆಲ್ಲದರ ಮಧ್ಯೆ ಸತೀಶ್ ಜಾರಕಿಹೊಳಿ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ತಾವೇ ಮುಂದಿನ ಅಹಿಂದ ನಾಯಕ ಎನ್ನುವ ರೀತಿಯಲ್ಲಿ ಅಹಂಕಾರದ ಧಾಟಿಯಲ್ಲಿ ಮಾತನಾಡಿದ್ದಾರೆ. “ರಾಜ್ಯದಲ್ಲಿ ಸುಮಾರು 500 ಜಾತಿಗಳ ದೊಡ್ಡ ಸಂಖ್ಯೆಯಿದೆ. ಇವರೆಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಮುನ್ನಡೆಯಲು ಯಾರಾದರೂ ಒಬ್ಬರು ಅಹಿಂದ ಧ್ವಜವನ್ನು ಹಿಡಿಯಲೇಬೇಕು. ಸಿದ್ದರಾಮಯ್ಯ ಅವರ ಸ್ಥಾನ ತುಂಬಲು ನಾನು ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ” ಎಂದು ಹೇಳಿದ್ದಾರೆ. ಸತೀಶ್ ಅವರ ಈ ಮಾತುಗಳು ಸದ್ಯದ ಪರಿಸ್ಥಿತಿಯಲ್ಲಿ ಎಷ್ಟು ಹಾಸ್ಯಾಸ್ಪದ ಎಂದರೆ, ಸಿದ್ದರಾಮಯ್ಯ ಸದ್ಯಕ್ಕೆ ಸಿಎಂ ಸ್ಥಾನದಿಂದ ಇಳಿದಿದ್ದಾರಷ್ಟೇ. ಆದರೆ ತಾವು ಸಕ್ರಿಯ ರಾಜಕಾರಣದಲ್ಲಿ (Active Politics) ಮುಂದುವರಿಯುವುದಾಗಿ ಸ್ವತಃ ಸಿದ್ದರಾಮಯ್ಯ ಅವರೇ ಘಂಟಾಘೋಷವಾಗಿ ಹೇಳಿದ್ದಾರೆ. ಸಿಎಂ ಕುರ್ಚಿಯಿಂದ ಇಳಿದ ತಕ್ಷಣ ಸಿದ್ದರಾಮಯ್ಯ ರಾಜಕೀಯ ಮುಗಿಯಿತು ಅಂದುಕೊಂಡಿರುವ ಈ ಮಹಾಶಯರು, ಸಿದ್ದು ಇನ್ನೂ ಉಸಿರಾಡುತ್ತಿರುವಾಗಲೇ ಅಹಿಂದ ನಾಯಕರಾಗಲು ಓಡುತ್ತಿರುವುದು ಇವರ ರಾಜಕೀಯ ಅಪಕ್ವತೆಯನ್ನು ತೋರಿಸುತ್ತದೆ.

ಇದನ್ನೂ ಓದಿ: Siddaramaiah: ಬಂಡಾಯದ ತಂತ್ರ ಕೈಬಿಟ್ಟು ರಾಜೀನಾಮೆಗೆ ಮುಂದಾದ ಸಿದ್ದರಾಮಯ್ಯ! ಅತಂತ್ರವಾಗುತ್ತಾ ಆಪ್ತರ ರಾಜಕೀಯ?

ಹಣದ ಹೊಳೆಯಿಂದ ಚುನಾವಣೆ ಗೆಲ್ಲಬಹುದು, ಜನರ ಹೃದಯವನ್ನಲ್ಲ!

ನಿಜ ಹೇಳಬೇಕೆಂದರೆ, 2004-05ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶದ ಮೂಲಕ ಸಿದ್ದರಾಮಯ್ಯ ಅವರು ಅಹಿಂದ ನಾಯಕರಾಗಿ ಮುಂಚೂಣಿಗೆ ಬಂದಾಗ ಸತೀಶ್ ಜಾರಕಿಹೊಳಿ ಅವರ ಬೆಂಬಲವಿತ್ತು. ಸಿದ್ದರಾಮಯ್ಯ ಅವರು ಆರ್ಥಿಕವಾಗಿ ಅಷ್ಟೊಂದು ಸಬಲರಲ್ಲದಿದ್ದ ಕಾಲದಲ್ಲಿ ಈ ಚಳವಳಿಯನ್ನು ಮುನ್ನಡೆಸಲು ಜಾರಕಿಹೊಳಿ ಕುಟುಂಬ ಹಣದ ಹೊಳೆಯನ್ನೇ ಹರಿಸಿತ್ತು ಎನ್ನುವುದರಲ್ಲಿ ಯಾವುದೇ ಸುಳ್ಳಿಲ್ಲ. ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯರೊಂದಿಗೆ ಮೊದಲಿನಂತೆಯೇ ಪ್ರಾಮಾಣಿಕವಾಗಿ, ಒಳ್ಳೆಯ ರೀತಿಯಲ್ಲೇ ಇದ್ದಿದ್ದರೆ, ಯಾವುದೇ ಸಂಶಯವಿಲ್ಲದೇ ಸಿದ್ದರಾಮಯ್ಯ ನಂತರ ಇಡೀ ಕರ್ನಾಟಕ ಅನ್ ಡೌಟೆಡ್ಲಿ (Undoubtedly) ಏಕೈಕ ಅಹಿಂದ ಲೀಡರ್ ಆಗಿ ಹೊರಹೊಮ್ಮುತ್ತಿದ್ದರು.

ಆದರೆ ಈಗ ಅಧಿಕಾರದ ಆಸೆಗಾಗಿ, ಸಿದ್ದರಾಮಯ್ಯ ಅವರು ಸಂಕಷ್ಟದಲ್ಲಿರುವಾಗಲೇ ಇಂತಹ ಕುತಂತ್ರದ ಆಟ ಆಡಿದ ಮೇಲೆ, ಈ ಸತೀಶ್ ಜಾರಕಿಹೊಳಿಯನ್ನು ಅಹಿಂದ ಜನರು ತಮ್ಮ ನಾಯಕ ಎಂದು ಒಪ್ಪಿಕೊಳ್ಳಲು ಸಾಧ್ಯವೇ? ಖಂಡಿತವಾಗಿಯೂ ಇಲ್ಲ (No Way). ಕೋಟ್ಯಂತರ ರೂಪಾಯಿ ಹಣದ ಹೊಳೆ ಹರಿಸಿ ಚುನಾವಣೆಗಳನ್ನು ಗೆಲ್ಲಬಹುದಷ್ಟೇ, ಆದರೆ ಜನರ ಹೃದಯ ಗೆದ್ದು ನಾಯಕನಾಗಲು ಸಾಧ್ಯವಿಲ್ಲ ಎನ್ನುವುದನ್ನು ನಾಯಕನಾಗಲು ಬಯಸುವ ಸಾಹುಕಾರರು ಮೊದಲು ತಿಳಿಯಬೇಕಿದೆ. ಅಹಿಂದ ವರ್ಗದ ನಾಯಕತ್ವ ಎನ್ನುವುದು ಕೇವಲ ತೋಳ್ಬಲ ಅಥವಾ ಧನಬಲದಿಂದ ಬರುವುದಿಲ್ಲ; ಅದು ನಂಬಿಕೆ, ಹೋರಾಟ ಮತ್ತು ತ್ಯಾಗದಿಂದ ಬರುತ್ತದೆ. ಗುರುವಿಗೆ ಗುನ್ನಾ ಇಟ್ಟು ಬಂದವನನ್ನು ಅಹಿಂದ ವರ್ಗ ಎಂದಿಗೂ ನಾಯಕ ಎಂದು ಸ್ವೀಕರಿಸುವುದಿಲ್ಲ.

ಮುಂದೇನು?

ಸದ್ಯದ ಮಟ್ಟಿಗೆ ಸಿದ್ದರಾಮಯ್ಯ ಅವರ ಎಕ್ಸಿಟ್ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಹಿರಿಯ ಸಚಿವರಿಗೆ ಕೊಡಲಿಪೆಟ್ಟು ಬೀಳುವುದು ಬಹುತೇಕ ಖಚಿತವಾಗಿದೆ. ಹೊಸ ಸಂಪುಟದಲ್ಲಿ 15 ಕ್ಕೂ ಹೆಚ್ಚು ಹಿರಿಯ ಸಚಿವರಿಗೆ ಹೈಕಮಾಂಡ್ ಕೋಕ್ ನೀಡುವ ಮುನ್ಸೂಚನೆ ಸಿಗುತ್ತಿದ್ದಂತೆ ಸಿದ್ದರಾಮಯ್ಯ ಪರಮಾಪ್ತರಾದ ಎಚ್.ಸಿ. ಮಹದೇವಪ್ಪ ಮತ್ತು ಜಮೀರ್ ಅಹಮದ್ ಖಾನ್ ಅವರು ರಹಸ್ಯ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಸತೀಶ್ ಜಾರಕಿಹೊಳಿ ಅವರು ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಸ್ವತಃ ತಾವೇ ತೋಡಿಕೊಂಡ ಹಳ್ಳಕ್ಕೆ ಬೀಳುವ ಮುನ್ಸೂಚನೆಗಳು ದಟ್ಟವಾಗಿವೆ. ರಾಜಕೀಯ ಚಾಣಕ್ಷತನದ ಹೆಸರಲ್ಲಿ ನಡೆಸಿದ ಈ ನಂಬಿಕೆದ್ರೋಹದ ಆಟಕ್ಕೆ ಕಾಲವೇ ಉತ್ತರ ನೀಡಬೇಕಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments