ಬಾಗಲಕೋಟೆ (Bagalkot): ಕೃಷ್ಣೆ, ಘಟಪ್ರಭೆ ಮತ್ತು ಮಲಪ್ರಭೆಯಂತಹ ಪುಣ್ಯನದಿಗಳು ಹರಿಯುವ ಬಾಗಲಕೋಟೆ ಜಿಲ್ಲೆ ಇಂದು ಮಾಫಿಯಾಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುವ ರಾಜಕಾರಣಿಗಳು, ತೆರೆಮರೆಯಲ್ಲಿ ನದಿಗಳ ರಕ್ತ ಹೀರುತ್ತಿದ್ದಾರೆ. ಜಿಲ್ಲಾಡಳಿತದ ಮೌನ, ಅಧಿಕಾರಿಗಳ ಅಸಹಾಯಕತೆ ಮತ್ತು ರಾಜಕಾರಣಿಗಳ ಹಪಾಹಪಿ ಜಿಲ್ಲೆಯನ್ನು ಅರಾಜಕತೆಯತ್ತ ದೂಡುತ್ತಿದೆ. ಇದು ಕೇವಲ ಮರಳು ಸಾಗಣೆಯಲ್ಲ, ಇದು ವ್ಯವಸ್ಥಿತವಾಗಿ ನಡೆಯುತ್ತಿರುವ ‘ಲಕ್ಷಾಂತರ ಕೋಟಿ’ ರೂಪಾಯಿಗಳ ಮಹಾ ದೋಚಾಟ!
ಕಮಿಷನ್ ದಂಧೆ ಬಂದ್; ಮರಳು ಮಾಫಿಯಾವೇ ಬಂಡವಾಳ?
ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಅನುದಾನದ ಕೊರತೆ ಎದುರಾಗುತ್ತಿದ್ದಂತೆ, ರಾಜಕಾರಣಿಗಳಿಗೆ ‘ಕಮಿಷನ್’ ಹಣದ ಮೂಲಗಳು ಬತ್ತಿ ಹೋಗಿವೆ. ಡೆವಲಪ್‌ಮೆಂಟ್ ಹೆಸರಿನಲ್ಲಿ ಲೂಟಿ ಮಾಡಲು ಹಣವಿಲ್ಲದ ಕಾರಣ, ಈಗ ಎಲ್ಲರ ಕಣ್ಣು ನದಿಗಳ ಮರಳಿನ ಮೇಲೆ ಬಿದ್ದಿದೆ ಎನ್ನುವ ಅನುಮಾನ ಶುರುವಾಗಿದೆ. ಈ ಅನುಮಾನಕ್ಕೆ ಪುಷ್ಠಿ ನೀಡುವಂತೆ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಹಿಂದೆಂದೂ ಕಾಣದ ರೀತಿಯಲ್ಲಿ ವಿಜೃಂಭಿಸುತ್ತಿದೆ. ವರ್ಗಾವಣೆ ದಂಧೆಯಲ್ಲೂ ಹಣದ ವಾಸನೆ ಬರುತ್ತಿದೆ ಎಂಬ ಆರೋಪಗಳ ನಡುವೆ, ಜಿಲ್ಲಾಡಳಿತದ ಚುಕ್ಕಾಣಿ ಹಿಡಿದವರು ದಂಧೆಕೋರರ ಪಾಲಿಗೆ ‘ರಕ್ಷಕ’ರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಜಮಖಂಡಿ-ತೇರದಾಳ: ಮಾಫಿಯಾದ ಪ್ರಮುಖ ಸೆಂಟರ್!
ಜಿಲ್ಲೆಯ ಜಮಖಂಡಿ ಮತ್ತು ತೇರದಾಳ ವಿಧಾನಸಭಾ ಕ್ಷೇತ್ರಗಳಲ್ಲಿ ಮರಳು ಮಾಫಿಯಾ ಅಟ್ಟಹಾಸ ಮಿತಿಮೀರಿದೆ. ಇಲ್ಲಿನ ನದಿ ಪಾತ್ರಗಳಲ್ಲಿ ಮರಳು ತೆಗೆಯುವವರು ಕೇವಲ ಕೂಲಿ ಕಾರ್ಮಿಕರಲ್ಲ, ಅವರ ಹಿಂದೆ ಇರುವುದು ಪ್ರಭಾವಿ ರಾಜಕಾರಣಿಗಳ ಬೆಂಬಲಿಗರು ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.
ಸ್ಥಳೀಯರ ಪ್ರಕಾರ, ಪ್ರತಿ ಟ್ರಕ್ ಮರಳು ಸಾಗಣೆಯಲ್ಲೂ ಶಾಸಕರಿಗೆ ‘ಹಪ್ತಾ’ ತಲುಪುತ್ತದೆ! ಅದರಲ್ಲೂ ತೇರದಾಳ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿಯೊಬ್ಬರ ಹೆಸರು ಅತ್ಯಂತ ಪ್ರಬಲವಾಗಿ ಕೇಳಿಬರುತ್ತಿದೆ. ಇಲ್ಲಿ ಪಕ್ಷಬೇಧವಿಲ್ಲ, ಸಿದ್ಧಾಂತಗಳ ಕಿತ್ತಾಟವಿಲ್ಲ. ದೋಚುವ ವಿಚಾರ ಬಂದಾಗ ಆಡಳಿತ ಮತ್ತು ಪ್ರತಿಪಕ್ಷದವರು ಒಂದೇ ತಟ್ಟೆಯ ಚೊಟ್ಟೆಗಳು ಎನ್ನುವಂತೆ ಕೈಜೋಡಿಸಿದ್ದಾರೆ. ಶಾಸಕರ ಬೆಂಬಲಿಗ ಈ ದಂಧೆಯ ‘ಕಿಂಗ್‌ಪಿನ್’ಗಳಾಗಿರುವುದರಿಂದ ಅಧಿಕಾರಿಗಳು ಅವರತ್ತ ಕಣ್ಣೆತ್ತಿ ನೋಡುವ ಧೈರ್ಯವನ್ನೂ ಮಾಡುತ್ತಿಲ್ಲ.
ಇದನ್ನೂ ಓದಿ: RB Timmapur: ಅಬಕಾರಿ ಸಚಿವರ ತವರಲ್ಲೇ ಎಗ್ಗಿಲ್ಲದ ಮದ್ಯದ ದರ್ಬಾರ್! ಮಾಧ್ಯಮ ರಂಗಕ್ಕೂ ಅಂಟಿದ ‘ಸರಾಯಿ’ ಕಳಂಕ (Part 2)
ಸರ್ವವ್ಯಾಪಿ ದಂಧೆ: ಹುನಗುಂದ, ಬಾದಾಮಿ, ಮುಧೋಳದ ಕಥೆ
ದಂಧೆಯ ಕಬಂಧ ಬಾಹುಗಳು ಕೇವಲ ಒಂದೆರಡು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಹುನಗುಂದ ಕ್ಷೇತ್ರದಲ್ಲಿ ತಾವೇನು ಕಡಿಮೆ ಇಲ್ಲ ಅವರ ಅʻಪ್ಪವನವರ್’ ತರಾ ಮಾಡುತ್ತೇವೆ ಎಂಬಂತೆ ಇಲ್ಲಿಯ ರಾಜಕಾರಣಿಗಳು ದರ್ಬಾರ್ ನಡೆಯುತ್ತಿದ್ದಾರೆ. ಬಾದಾಮಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ; ಈ ಹಿಂದೆ ಇಸ್ಪೇಟ್ ಕ್ಲಬ್‌ಗಳಿಗೆ ಹೆಸರಾಗಿದ್ದ ಬಾದಾಮಿ ಈಗ ಮರಳು ಮಾಫಿಯಾದ ಭದ್ರಕೋಟೆಯಾಗಿದೆ. ಇನ್ನು ಮುಧೋಳದ ನದಿ ದಂಡೆಗಳಲ್ಲಂತೂ ಲೆಕ್ಕವಿಲ್ಲದಷ್ಟು ಅಕ್ರಮ ಪಾಯಿಂಟ್‌ಗಳಿವೆ. ಇದು ಕೇವಲ ವ್ಯಾಪಾರವಲ್ಲ, ಒಂದು ಗೂಂಡಾ ಸಾಮ್ರಾಜ್ಯ. ಈ ಪ್ರದೇಶಗಳಲ್ಲಿ ಅಪರಿಚಿತರು ಅಥವಾ ಮಾಧ್ಯಮದವರು ಕಾಣಿಸಿಕೊಂಡರೆ ಸಾಕು, ಮಾರಕಾಸ್ತ್ರ ಹಿಡಿದು ಬೆದರಿಸುವ ಗ್ಯಾಂಗ್‌ಗಳೇ ಸದಾ ಸನ್ನದ್ಧವಾಗಿರುತ್ತವೆ.
ಅಸಲಿ ಸುದ್ದಿ ಇಂಪ್ಯಾಕ್ಟ್: ನಮ್ಮ ಪ್ರತಿನಿಧಿ ಈ ಕರಾಳ ಜಾಲದ ಚಿತ್ರೀಕರಣಕ್ಕೆ ಹೋದಾಗ ಎದುರಿಸಿದ ಪರಿಸ್ಥಿತಿ ಭೀಕರವಾಗಿತ್ತು. ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು, ರಹಸ್ಯವಾಗಿ ದೃಶ್ಯಗಳನ್ನು ಸೆರೆಹಿಡಿಯಬೇಕಾಯಿತು. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭಕ್ಕೆ ಪ್ರವೇಶವಿಲ್ಲದ ಜಾಗದಲ್ಲಿ ಕಾನೂನು ವ್ಯವಸ್ಥೆ ಸತ್ತು ಹೋಗಿದೆ ಎಂಬುದು ಸ್ಪಷ್ಟ.
ಅಧಿಕಾರಿಗಳಿಗೇ ಅವಾಜ್ ಹಾಕುವ ದಂಧೆಕೋರರು!
ಒಂದು ವೇಳೆ ಪ್ರಾಮಾಣಿಕ ಅಧಿಕಾರಿಗಳು ಎಲ್ಲೋ ಧೈರ್ಯ ಮಾಡಿ ದಾಳಿ ನಡೆಸಿದರೆ, ಕ್ಷಣಾರ್ಧದಲ್ಲಿ ಅವರಿಗೆ ಉನ್ನತ ಮಟ್ಟದ ರಾಜಕಾರಣಿಗಳಿಂದ ಅಥವಾ ದಂಧೆಯ ಕಿಂಗ್‌ಪಿನ್‌ಗಳಿಂದ ಕರೆಗಳು ಹೋಗುತ್ತವೆ. “ಬೇಕಿದ್ದರೆ ದಂಡ ಡಬಲ್ ಕಟ್ಟುತ್ತೇವೆ, ಆದರೆ ವಾಹನ ಸೀಜ್ ಮಾಡುವಂತಿಲ್ಲ” ಎಂದು ಅಧಿಕಾರಿಗಳಿಗೇ ಅವಾಜ್ ಹಾಕುವ ಹಂತಕ್ಕೆ ದಂಧೆಕೋರರ ಸೊಕ್ಕು ಬೆಳೆದಿದೆ. ಕಾನೂನು ಪಾಲಿಸಬೇಕಾದವರೇ ಕಾನೂನು ಮುರಿಯುವವರಿಗೆ ಸಾಥ್ ನೀಡುತ್ತಿರುವುದು ಜಿಲ್ಲೆಯ ದುರಂತ.
ನದಿಯ ಒಡಲು ದಂಧೆಕೋರರ ‘ಅಕ್ಷಯ ಪಾತ್ರೆ’
ಇದು ಇಂದು ನಿನ್ನೆಯ ಕತೆಯಲ್ಲ. ನದಿಗಳು ಮರಳು ಹೊತ್ತು ತರುತ್ತವೆ, ದಂಧೆಕೋರರು ಅದನ್ನು ಬಗೆಯುತ್ತಾರೆ. ಬೇಸಿಗೆಯಲ್ಲಿ ಮರಳು ಅಗೆದು ಖಾಲಿ ಮಾಡಿದರೆ, ಮಳೆಗಾಲದ ಪ್ರವಾಹ ಮತ್ತೆ ಆ ಗುಂಡಿಗಳನ್ನು ಮರಳಿನಿಂದ ತುಂಬಿಸುತ್ತದೆ. ದಂಧೆಕೋರರಿಗೆ ಇದೊಂದು ‘ಅಕ್ಷಯ ಪಾತ್ರೆ’ಯಾಗಿದೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿದ್ದರೂ ದೊಡ್ಡ ದೊಡ್ಡ ಮೆಷಿನ್ ಹಾಕಿ ಮರಳು ಎತ್ತುವ ಸಾಹಸಕ್ಕೂ ಇವರು ಕೈ ಹಾಕುತ್ತಾರೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ಸಾವಿರಾರು ಕೋಟಿ ರೂಪಾಯಿ ರಾಜಸ್ವ (Royalty) ಮಣ್ಣು ಪಾಲಾಗುತ್ತಿದೆ, ಅತ್ತ ದಂಧೆಕೋರರ ಬ್ಯಾಂಕ್ ಬ್ಯಾಲೆನ್ಸ್ ದಿನೇ ದಿನೇ ಏರುತ್ತಿದೆ.
ಇದನ್ನೂ ಓದಿ: Media Masala: KPCC ಗೆ ಅಬಕಾರಿ ಮಿನಿಸ್ಟರ್ ದೋಖಾ? ಆಪ್ತ ಪತ್ರಕರ್ತ ಶಾಮೀಲು!
ಮಾಜಿ ಸಚಿವರಿಗೇ ಮಂಕುಬೂದಿ ಎರಚಿದ್ದ ಇನ್ಫಾರ್ಮರ್ ಜಾಲ!
ಮರಳು ಮಾಫಿಯಾದ ನೆಟ್‌ವರ್ಕ್ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಈ ಒಂದು ಉದಾಹರಣೆ ಸಾಕು. ಹಿಂದೆ ಮಾಜಿ ಸಚಿವ ಎಸ್.ಆರ್. ಪಾಟೀಲ್ ಅವರು ಬಾದಾಮಿ ತಾಲೂಕಿನ ಜಾಲಿಹಾಳದಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಯನ್ನು ‘ರೆಡ್ ಹ್ಯಾಂಡ್’ ಆಗಿ ಹಿಡಿಯಲು ಪ್ಲಾನ್ ಮಾಡಿದ್ದರು. ಅವರು ಐಬಿ (IB) ಇಂದ ಹೊರಟು ನದಿ ದಂಡೆ ತಲುಪುವಷ್ಟರಲ್ಲಿ ಅಲ್ಲಿ ಕೇವಲ ನೀರಿತ್ತು ಹೊರತು ಮರಳು ದಂಧೆಯ ಒಂದು ಗುರುತು ಇರಲಿಲ್ಲ! ಅಧಿಕಾರಿಗಳ ತಂಡ ಬರುವ ಮೊದಲೇ ದಂಧೆಕೋರರಿಗೆ ಮಾಹಿತಿ ತಲುಪಿಸುವ ‘ಇನ್ಫಾರ್ಮರ್’ಗಳು ಸಚಿವರ ಕಚೇರಿಯಿಂದ ಹಿಡಿದು ಪೊಲೀಸ್ ಠಾಣೆಯವರೆಗೂ ಇದ್ದಾರೆ ಎಂದರೆ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ.
ಬಾಗಲಕೋಟೆಯ ಜೀವ ನದಿಗಳು ಇಂದು ದಂಧೆಕೋರರ ಪಾಲಿಗೆ ಹಣ ಕದಿಯುವ ದಾರಿಗಳಾಗಿವೆ. ನಿಸರ್ಗದತ್ತವಾದ ಈ ಸಂಪನ್ಮೂಲವನ್ನು ರಾಜಕಾರಣಿಗಳೇ ಸೇರಿ ಲೂಟಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಪರಿಸರ ನಾಶವಾಗುತ್ತಿದೆ, ಜಲಚರಗಳು ಸಾಯುತ್ತಿವೆ, ಸರ್ಕಾರದ ಬೊಕ್ಕಸಕ್ಕೆ ಕನ್ನ ಬೀಳುತ್ತಿದೆ. ಆದರೆ ಅಧಿಕಾರದ ಅಮಲಿನಲ್ಲಿರುವ ಸಚಿವರು ಮತ್ತು ಶಾಸಕರಿಗೆ ಇದ್ಯಾವುದೂ ಕಾಣುತ್ತಿಲ್ಲ. ಈಗಲಾದರೂ ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಬಾಗಲಕೋಟೆಯ ನದಿಗಳನ್ನು ಈ ‘ನರಭಕ್ಷಕ’ ದಂಧೆಕೋರರಿಂದ ರಕ್ಷಿಸಬೇಕಿದೆ.


