ಫಲಿತಾಂಶ ಹೊರಬರುವ ಮುಂಚೆಯೇ ದಾವಣಗೆರೆ ಉಪಚುನಾವಣೆಯು (Davanagere By-Election) ಕಾಂಗ್ರೆಸ್ ಪಕ್ಷದಲ್ಲಿ ಒಂದಿಷ್ಟು ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ಪ್ರಶ್ನೆ ಉದ್ಭವಿಸಿದ್ದಾಗ ಆರಂಭಗೊಂಡಿದ್ದ ಚರ್ಚೆಗಳು, ಸಮುದಾಯದ ನಾಯಕತ್ವದಲ್ಲಿ ಒಡಕು ಮೂಡಲು ವೇದಿಕೆ ಒದಗಿಸಿರುವುದು ಈಗ ಓಪನ್ ಸೀಕ್ರೆಟ್!
ಉಪ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ಶಾಮನೂರು ಕುಟುಂಬಕ್ಕೆ ಇದ್ದ ಮಾನದಂಡಗಳು ಒಂದೆಡೆ ಕಾಂಗ್ರೆಸ್ ಪಕ್ಷದ ನಡು ಬಗ್ಗಿಸಿದ್ದರೆ, ಮತ್ತೊಂದೆಡೆ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಸಮುದಾಯದ ನಾಯಕತ್ವದ ಒಳಗಿನ ಬೇಗುದಿಗಳು ಟಿಕೆಟ್ ಪಡೆಯುವಲ್ಲಿ ವಿಫಲತೆ ಕಾಣುವಂತಾಗಲು ಕೆಲವು ಘಟನೆಗಳು ಸಾಕ್ಷೀಕರಿಸುತ್ತವೆ! ಅದರಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಪಾತ್ರ ಬಹುಮುಖ್ಯ ಭೂಮಿಕೆಯನ್ನು ನಿರ್ವಹಿಸಿದೆ ಎಂದು ಕಾಂಗ್ರೆಸ್ಸಿನ ಆಂತರಿಕ ವರದಿ ಅಧಿಕೃತ ರಾಜಮುದ್ರೆ ಒತ್ತಿರುವುದು ಕಾಕತಾಳೀಯವೇನಲ್ಲ!
ಚಾಮರಾಜಪೇಟೆ ಶಾಸಕನ ‘ಲೋಕ ಸಂಚಾರ’
ಜಮೀರ್ ಅಹ್ಮದ್ ಖಾನ್ ಕನ್ನಡ ನಾಡು ಕಂಡ ಅತಿ ರಂಜಿತ ವ್ಯಕ್ತಿತ್ವದ ಶಾಸಕ ಎಂಬುದರಲ್ಲಿ ಯಾರಿಗೂ ಅನುಮಾನ ಬೇಡ. ಮಾತು ಮತ್ತು ಕೃತಿಯಲ್ಲಿಯೂ ಕೂಡ ಅನಗತ್ಯ ಅತಿರೇಕ ಎಸಗುವುದರಲ್ಲಿ ಜಮೀರ್ ಅಹ್ಮದ್ ಖಾನ್ ಎತ್ತಿದ ಕೈ ಎಂಬುದು ಕೂಡ ಹೊಸ ವಿಚಾರವಲ್ಲ. ನಲವತ್ತೆರಡು ಕೊಳಗೇರಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಚಾಮರಾಜಪೇಟೆಯನ್ನು ಸಿಂಗಪೂರಿನಂತೆ ಝಗಮಗಿಸುತ್ತೇನೆ ಎಂದು ಕಳೆದ ಮೂರು ಅವಧಿಗಳಿಂದಲೂ ರೈಲು ಬಿಡುತ್ತಿರುವ ಜಮೀರ್ ಅಹ್ಮದ್ ಖಾನ್, ಇದುವರೆಗೂ ಅದರತ್ತ ಚಿತ್ತ ನೆಟ್ಟಿಲ್ಲ. ಚುನಾವಣೆ ಗೆದ್ದ ತಕ್ಷಣ ಚಾಮರಾಜಪೇಟೆ ಮರೆತು ಲೋಕ ಸಂಚಾರ ಮಾಡುವ ಜಮೀರ್ ಅಹ್ಮದ್ ಖಾನ್, ಕ್ಷೇತ್ರದ ಜನರ ಅಭಿವೃದ್ಧಿಯ ಕುರಿತು ಇದುವರೆಗೂ ಯಾವ ಸರ್ಕಾರಿ ಕಚೇರಿಯ ಮೇಜನ್ನೂ ಕುಟ್ಟಿಲ್ಲ!
ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಬಶೀರ್ ಅಹ್ಮದ್ ಖಾನ್ ಕುಟುಂಬದ ಮೂರನೇ ತಲೆಮಾರಿಗೆ ಸೇರಿರುವ ಜಮೀರ್ ಅಹ್ಮದ್ ಖಾನ್, ಬೆಂಗಳೂರಿನ ಹೃದಯ ಅಂತಲೇ ಕರೆಯಲ್ಪಡುವ ಚಾಮರಾಜಪೇಟೆ ಶಾಸಕನಾಗಿದ್ದೇ ಒಂದು ದೊಡ್ಡ ಪವಾಡ. ಕರ್ನಾಟಕದ ರಾಜಕೀಯ ಭೀಷ್ಮ ದೇವೇಗೌಡರು 2004 ರಿಂದ ಆರಂಭಿಸಿದ್ದ ಕೊಳಗೇರಿ ನಿವಾಸಿಗಳ ನೇತೃತ್ವದ ‘ದರಿದ್ರ ನಾರಾಯಣ’ ಸಮಾವೇಶದಿಂದ ಎದ್ದುಬಂದ ಜಮೀರ್ ಅಹ್ಮದ್ ಖಾನ್, ಅಷ್ಟೊತ್ತಿಗೆಲ್ಲ ಜಯನಗರದಲ್ಲಿ ರಾಮಲಿಂಗಾ ರೆಡ್ಡಿ ವಿರುದ್ಧ ಸ್ಪರ್ಧಿಸಿ ಮುಗ್ಗರಿಸಿ ಬಿದ್ದಿದ್ದರು. ಅತ್ತ ಸೋಲಿನ ಸೂತಕದಲ್ಲಿದ್ದ ಎಸ್.ಎಂ. ಕೃಷ್ಣ ಸ್ವಕ್ಷೇತ್ರ ಮದ್ದೂರು ತ್ಯಜಿಸಿ ಬಂದು ಚಾಮರಾಜಪೇಟೆಯಲ್ಲಿ ಗೆಲುವು ಕಂಡಿದ್ದರು. ನಿರೀಕ್ಷಿತ ಸಂಖ್ಯಾಬಲ ತರಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಎಸ್.ಎಂ. ಕೃಷ್ಣ ಕೈಗೆ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಹುದ್ದೆಯ ಚೀಟಿ ಕೊಟ್ಟು ಕಳಿಸಿತ್ತು!
ಹೀಗಾಗಿ 2005 ರಲ್ಲಿ ಎಸ್.ಎಂ. ಕೃಷ್ಣ ರಾಜೀನಾಮೆಯಿಂದ ತೆರವಾದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ದೇವೇಗೌಡರು, ಜಮೀರ್ ಅಹ್ಮದ್ ಖಾನ್ ಹೆಸರಿಗೆ ಟಿಕೆಟು ಬರೆದು ಕೊಟ್ಟರು. ಜಮೀರ್ ಅಹ್ಮದನ ಚಾಕಚಕ್ಯತೆಯೋ ಅಥವಾ ದೇವೇಗೌಡರ ಪಾದಯಾತ್ರೆಯ ಬೆವರಿನ ಫಲವೋ ಎಂಬಂತೆ ಚಾಮರಾಜಪೇಟೆಯ ನಲವತ್ತೆರಡು ಕೊಳಗೇರಿಗಳ ನಿವಾಸಿಗಳು ಜಾತಿ-ಧರ್ಮ ಮರೆತು ಜಮೀರ್ ಅಹ್ಮದ್ ಖಾನ್ ವಿಧಾನಸಭೆ ಮೆಟ್ಟಿಲು ಹತ್ತಲು ಸಹಕರಿಸಿದರು. ಅಲ್ಲಿಂದ ವಿಧಾನಸೌಧದತ್ತ ಮುಖ ಮಾಡಿ ನಿಂತ ಜಮೀರ್ ಅಹ್ಮದ್ ಖಾನ್ ಇದುವರೆಗೂ ಚಾಮರಾಜಪೇಟೆಯನ್ನು ಹಿಂದಿರುಗಿ ನೋಡಿಲ್ಲ!
ಹಂತ ಹಂತದ ರಾಜಕೀಯ ಬೆಳವಣಿಗೆ
ಇದುವರೆಗೂ ಚಾಮರಾಜಪೇಟೆಯಿಂದ ಉಪಚುನಾವಣೆ ಸೇರಿ ನಾಲ್ಕು ಬಾರಿ ಗೆದ್ದಿರುವ ಜಮೀರ್ ಅಹ್ಮದ್ ಖಾನ್ ವಿರುದ್ಧ ಸರಿಯಾಗಿ ಟಕ್ಕರ್ ಕೊಡುವ ಕ್ಯಾಂಡಿಡೇಟುಗಳನ್ನು ವಿರೋಧ ಪಕ್ಷದವರೂ ಹಾಕಿ ಚುನಾವಣೆ ಎದುರಿಸಿರುವ ಉದಾಹರಣೆಗಳಿಲ್ಲ. ಕುಮಾರಣ್ಣನ ತೆಕ್ಕೆಯಲ್ಲಿ ಇದ್ದಷ್ಟು ದಿನ ಇಡೀ ಬೆಂಗಳೂರಿನಲ್ಲಿ ಜಮೀರ್ ಅಹ್ಮದ್ ಚಾಮರಾಜಪೇಟೆಯತ್ತ ತಿರುಗಿ ನೋಡಲು ಯಾವ ರಾಜಕಾರಣಿಯೂ ಮನಸ್ಸು ಮಾಡುತ್ತಿರಲಿಲ್ಲ. ಈಗ ಸಿದ್ದರಾಮಯ್ಯನವರ ಗರಡಿಯ ಪೈಲ್ವಾನರ ಸಾಲಿನಲ್ಲಿ ಗುರುತಿಸಿಕೊಂಡ ಬಳಿಕವಂತೂ ಜಮೀರ್ ಅಹ್ಮದ್ ಕಡೆ ಬೊಟ್ಟು ಮಾಡಿ ತೋರಿಸಲು ಕೂಡ ಯಾವ ಪಕ್ಷದವರಿಗೂ ಧೈರ್ಯವಿಲ್ಲ! ಅಷ್ಟರ ಮಟ್ಟಿಗೆ ಜಮೀರ್ ಅಹ್ಮದನ ರಾಜಕೀಯ ಭವಿಷ್ಯ ನಾಗಾಲೋಟದ ವೇಗ ಪಡೆದುಕೊಂಡಿದೆ.
ಇನ್ನು ಧರ್ಮಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತೋ, ಜಮೀರ್ ಅಹ್ಮದ್ ಖಾನ್ ಮಂತ್ರಿಯೂ ಆದರು. ಮುಂದೆ ಕಾಂಗ್ರೆಸ್ ಮೈತ್ರಿಕೂಟ ತ್ಯಜಿಸಿ ಭಾರತೀಯ ಜನತಾ ಪಾರ್ಟಿಯೊಟ್ಟಿಗೆ ಕುಮಾರಣ್ಣ ಸರ್ಕಾರ ರಚಿಸಿದಾಗಲೂ ಜಮೀರ್ ಅಹ್ಮದ್ ಖಾನ್ ಮಂತ್ರಿ ಸ್ಥಾನಕ್ಕೆ ಯಾವ ಚ್ಯುತಿಯೂ ಬರಲಿಲ್ಲ. ಕಾಲ ಕಳೆದಂತೆ ದೇವೇಗೌಡರ ಕುಟುಂಬದಿಂದ ತನಗೆ ಒದಗಿ ಬಂದ ರಾಜಕೀಯ ಬಳುವಳಿಯನ್ನು ಜಮೀರ್ ಅಹ್ಮದ್ ಖಾನ್ ಮರೆತು ಕಾಂಗ್ರೆಸ್ ಪಕ್ಷ ಸೇರಲು ತೆರೆಮರೆಯಲ್ಲಿ ಎಲ್ಲ ರೀತಿಯ ತಯಾರಿ ಕೂಡ ಮಾಡಿಕೊಂಡರು. ಅದೇ ಕಾಲಕ್ಕೆ ಕುಮಾರಣ್ಣನ ಕಷ್ಟ ಕಾಲಕ್ಕೆ ನೆರವಾಗಿದ್ದನ್ನೇ ದೊಡ್ಡದು ಮಾಡಿ ಪ್ರಚಾರ ಮಾಡುತ್ತಲೇ ಜಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ ಪಾಳೆಯದ ನಂಬಿಕೆಯನ್ನೂ ಗಳಿಸಿಕೊಂಡರು. ಇದು ದೇವೇಗೌಡರ ಗಮನಕ್ಕೆ ಬರಲು ಬಹಳ ಹೊತ್ತು ಹಿಡಿಯಲಿಲ್ಲ.
ಹೀಗೆ ದೇವೇಗೌಡರ ಕುಟುಂಬದಿಂದ, ಕುಮಾರಣ್ಣನ ಸಖ್ಯದಿಂದ ಹೊರಬಿದ್ದ ಜಮೀರ್ ಅಹ್ಮದ್ ಖಾನ್, ರಾಜಕೀಯ ಅಸ್ತಿತ್ವಕ್ಕಾಗಿ ಸಹಜವಾಗಿ ಸಿದ್ದರಾಮಯ್ಯನವರ ಮೊರೆಹೋದರು. ಹಾಗೆ ಕುಮಾರಣ್ಣನ ಸಂಗ ತ್ಯಜಿಸುತ್ತಲೇ ತನ್ನೊಟ್ಟಿಗೆ ಮಾಗಡಿ ಬಾಲಕೃಷ್ಣ, ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯನ್ನೂ ಜೆಡಿಎಸ್ ಪಕ್ಷದಿಂದ ಹೊರತರುವ ಜಮೀರ್ ಅಹ್ಮದ್ ಖಾನ್, ಅವರೊಡನೆಯೇ ಕಾಂಗ್ರೆಸ್ ಪಕ್ಷ ಸೇರಿಕೊಳ್ಳುತ್ತಾರೆ. ದೇವೇಗೌಡರ ಸಾಂಪ್ರದಾಯಿಕ ವೈರಿಯಂತಿರುವ ಸಿದ್ದರಾಮಯ್ಯನವರು ಇವರೆಲ್ಲರನ್ನೂ ಪೋಷಿಸಿ ಇಂದು ಕಾಂಗ್ರೆಸ್ ಪಕ್ಷದ ಆಸ್ತಿಯನ್ನಾಗಿ ಮಾಡಿದ್ದರ ಜೊತೆಗೆ ಅವರವರ ಸಮುದಾಯಗಳ ನಾಯಕತ್ವವೂ ಅವರ ಜತೆಗೂಡುವಂತೆ ಪರಿವರ್ತಿಸಲು ಕಾರಣೀಭೂತರಾಗಿದ್ದಾರೆ!
ಹೀಗೆ ನಾಡಿನ ಬಹುದೊಡ್ಡ ‘ಅಹಿಂದ’ ನಾಯಕರಾಗಿರುವ ಸಿದ್ದರಾಮಯ್ಯನವರ ನೆರಳಿನಡಿ ಹೊಸ ರಾಜಕೀಯ ಸಮೀಕರಣದ ಫಲಾನುಭವಿಯಾದ ಜಮೀರ್ ಅಹ್ಮದ್ ಖಾನ್; ಹಳೇ ಮೈಸೂರು ಭಾಗದ ರೋಷನ್ ಬೇಗ್, ಹೈದರಾಬಾದ್ ಕರ್ನಾಟಕದ ದಿ.ಖಮರುಲ್ ಇಸ್ಲಾಂ, ಮುಂಬೈ ಕರ್ನಾಟಕದ ಎ.ಎಂ. ಹಿಂಡಸಗೇರಿ, ಕರಾವಳಿ ಪ್ರದೇಶದ ಯು.ಟಿ. ಖಾದರ್, ಮಲೆನಾಡಿನ ಸಗೀರ್ ಅಹ್ಮದ್ ಅವರನ್ನು ಹಿಂದಿಕ್ಕಿ, ಬಹು ಬೇಗನೇ ಅಲ್ಪಸಂಖ್ಯಾತ ಸಮುದಾಯದ ನಾಯಕತ್ವವನ್ನು ದಯಪಾಲಿಸಿಕೊಂಡರು ಎಂಬುದು ಈಗ ಇತಿಹಾಸ!
ಅತ್ತ ಐಎಂಎ ಹಗರಣ ತಾರಕಕ್ಕೆ ಏರಿ ರೋಷನ್ ಬೇಗ್ ರಾಜಕಾರಣದಿಂದ ವಿಮುಖವಾದರೆ, ಯು.ಟಿ. ಖಾದರ್ ಉಳ್ಳಾಲ ಕ್ಷೇತ್ರಕ್ಕೆ ಸೀಮಿತರಾದರು. ಎ.ಎಂ. ಹಿಂಡಸಗೇರಿ ಮತ್ತು ಸಗೀರ್ ಅಹ್ಮದ್ ಕ್ಷೇತ್ರವಿಲ್ಲದೇ ಖಾಲಿಯಾದರು. ಈ ಸಂದರ್ಭವನ್ನು ಜಮೀರ್ ಅಹ್ಮದ್ ಖಾನ್ ಸರಿಯಾಗಿಯೇ ಬಳಸಿಕೊಂಡರು. ಇದಕ್ಕಾಗಿ ಅಪರಿಮಿತ ಹಣ ಕೂಡ ಖರ್ಚು ಮಾಡಿದರು! ಅದರ ಲೆಕ್ಕವನ್ನು ಕುಮಾರಣ್ಣ ತಮ್ಮ ಪೆನ್ ಡ್ರೈವಿನಲ್ಲಿ ಭದ್ರವಾಗಿಟ್ಟಿದ್ದಾರೆ!
ರಿಜ್ವಾನ್ ಅರ್ಷದ್ ಮತ್ತು ಜಮೀರ್ ನಡುವಿನ ಸಂಘರ್ಷ
ಇದೇ ಹೊತ್ತಿಗೆ ಸರಿಯಾಗಿ ಯುವ ಕಾಂಗ್ರೆಸ್ ಮೂಲಕ ರಾಜ್ಯದ ಗಮನ ಸೆಳೆದ ರಿಜ್ವಾನ್ ಅರ್ಷದ್ ಹೆಸರು ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಹಂತ ಹಂತವಾಗಿ ಪ್ರವರ್ಧಮಾನಕ್ಕೆ ಬರಲು ಆರಂಭವಾಯಿತು. ದೆಹಲಿ ರಾಜಕಾರಣ ಮತ್ತು ಸಿದ್ದರಾಮಯ್ಯನವರ ಅಚಲ ಬೆಂಬಲ ಒಂದು ಕಡೆಯಾದರೆ, ಡಿ.ಕೆ. ಶಿವಕುಮಾರ್ ತಲೆಯೊಳಗಿದ್ದ ಬೆಂಗಳೂರು ಕೇಂದ್ರಿತ ರಾಜಕಾರಣದ ಲೆಕ್ಕಾಚಾರಗಳ ಕಾರಣಕ್ಕೆ ರಿಜ್ವಾನ್ ಅರ್ಷದ್ 2016 ರಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದು ಪರಿಷತ್ ಪ್ರವೇಶಿಸಲು ತಡವೇನು ಆಗಲಿಲ್ಲ!
ಅಷ್ಟರಲ್ಲಿ ಐಎಂಎ ಹಗರಣ ತಾರಕಕ್ಕೆ ಏರಿ ಶಿವಾಜಿನಗರ ಶಾಸಕ ಸ್ಥಾನಕ್ಕೆ ರೋಷನ್ ಬೇಗ್ ರಾಜಿನಾಮೆ ಕೊಟ್ಟರು. ರಿಜ್ವಾನ್ ಅರ್ಷದ್ ಶಿವಾಜಿನಗರಕ್ಕೆ ಎಂಟ್ರಿ ಆಗಲು ಕಾಂಗ್ರೆಸ್ ಪಕ್ಷ ರತ್ನಗಂಬಳಿ ಹಾಸಿತು! ಆಗಲೂ ರಿಜ್ವಾನ್ ಅರ್ಷದ್ ಶಿವಾಜಿನಗರ ಪ್ರವೇಶಕ್ಕೆ ಜಮೀರ್ ಅಹ್ಮದ್ ಖಾನ್ ಮಾನಸಿಕವಾಗಿ ತೃಪ್ತರಾಗಿರಲಿಲ್ಲ. ಆದರೆ ಸಿದ್ದರಾಮಯ್ಯನವರ ಇಶಾರೆ, ಡಿ.ಕೆ. ಶಿವಕುಮಾರ್ ಇಚ್ಛೆಯ ಮೇರೆಗೆ ಅಂದು ಜಮೀರ್ ಅಹ್ಮದ್ ಖಾನ್ ಅಷ್ಟೇನು ಜಾಸ್ತಿ ಬಾಲ ಆಡಿಸಲಿಲ್ಲ. ಆದರೆ ತನ್ನ ಚಾಮರಾಜಪೇಟೆಯ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಶಿವಾಜಿನಗರಕ್ಕೆ ಸೇರಿದ ಪ್ರದೇಶಗಳಲ್ಲಿ ರಿಜ್ವಾನ್ ಅರ್ಷದ್ ವಿರುದ್ಧವಾಗಿಯೇ ಜಮೀರ್ ಅಹ್ಮದ್ ಖಾನ್ ಪರದೆಯ ಹಿಂದೆ ನಿಂತುಕೊಂಡೇ ಎಲ್ಲವನ್ನೂ ನಿಭಾಯಿಸಿದ್ದರು. ಇದರ ಅರಿವಿದ್ದ ರಿಜ್ವಾನ್ ಅರ್ಷದ್, ಅದರ ಎದುರು ಈಜಿಕೊಂಡೇ ಶಿವಾಜಿನಗರದಿಂದ ವಿಧಾನಸೌಧದ ಮೆಟ್ಟಿಲು ಏರಿದರು. ಇದುವರೆಗೂ ಜರುಗಿರುವ ಮೂರು ಚುನಾವಣೆಗಳಲ್ಲಿಯೂ ರಿಜ್ವಾನ್ ಅರ್ಷದ್ ವಿರುದ್ಧ ಜಮೀರ್ ಅಹ್ಮದ್ ಖಾನ್ ಬಳಸಿದ ಅಸ್ತ್ರಗಳು ಒಂದೆರಡಲ್ಲ. ಆದರೆ ಅವುಗಳನ್ನು ತುಕ್ಕು ಹಿಡಿಸಿ ಮೂಲೆ ಸೇರಿಸುವಲ್ಲಿ ರಿಜ್ವಾನ್ ಅರ್ಷದ್ ಯಶಸ್ವಿಯಾಗಿದ್ದಾರೆ!
ಹೀಗೆ ತನ್ನ ನಾಯಕತ್ವಕ್ಕೆ ಭವಿಷ್ಯದಲ್ಲಿ ಕುಂದು ಬರದಂತೆ, ಕೆಳಹಂತದಲ್ಲಿಯೇ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಪ್ರಖರ ವ್ಯಕ್ತಿತ್ವಗಳನ್ನು ಚಿವುಟುವ ಚಾಳಿಯನ್ನು ಬಹುಶಃ ಜಮೀರ್ ಅಹ್ಮದ್ ಖಾನ್ ದೇವೇಗೌಡರಿಂದ ಬಳುವಳಿಯಾಗಿ ಪಡೆದುಕೊಂಡಿರಬಹುದು ಎಂಬ ಗುಮಾನಿ ಸಹಜವಾಗಿ ಸಮುದಾಯದಲ್ಲಿ ಈಗಷ್ಟೇ ಒಡಮೂಡಿದೆ! ಶಿಗ್ಗಾವಿ ಉಪಚುನಾವಣೆಯಲ್ಲಿಯೂ ಯಾಸಿರ್ ಖಾನ್ ಪಠಾಣ್ ಗೆಲ್ಲಬೇಕು ಎಂದು ಜಮೀರ್ ಅಹ್ಮದ್ ಖಾನ್ ಬಯಸಿರಲಿಲ್ಲ. ಆದರೆ ಸಾಹುಕಾರ ಸತೀಶ್ ಜಾರಕಿಹೊಳಿ ಶಿಗ್ಗಾವಿ ಕ್ಷೇತ್ರದಲ್ಲಿ ಹೆಣೆದಿದ್ದ ಸಾಮಾಜಿಕ ನ್ಯಾಯದ ಸೋಶಿಯಲ್ ಇಂಜಿನಿಯರಿಂಗ್ ಪ್ರಖರತೆ ಕಂಡು ಜಮೀರ್ ಅಹ್ಮದ್ ತೆಪ್ಪಗಾಗಿದ್ದರು! ಹೀಗಾಗಿ ಯಾಸಿರ್ ಖಾನ್ ಪಠಾಣ್ ಕೈಗೊಂದಿಷ್ಟು ಫಂಡು ಕೊಟ್ಟು ತಬ್ಬಿ ಮುದ್ದಾಡಿ ಜಮೀರ್ ಅಹ್ಮದ್ ಖಾನ್ ಬೆಂಗಳೂರು ಸೇರಿಕೊಳ್ಳಬೇಕಾಯಿತು!
ಇದಿಷ್ಟೇ ಅಲ್ಲದೆ ಸಿದ್ದರಾಮಯ್ಯನವರ ನಂಬಿಕೆಯ ಸಾಂಗತ್ಯದಲ್ಲಿ ಅವರಿಗೆ ಗೊತ್ತಾಗದಂತೆಯೇ 2013 ರಿಂದ ಜಮೀರ್ ಅಹ್ಮದ್ ಖಾನ್ ವಿರೋಧ ಪಕ್ಷಗಳಲ್ಲಿನ ಗೆಳೆಯರಿಗೂ ಬಿರಿಯಾನಿ ತಿನ್ನಿಸಿರುವ ವಿವರಗಳನ್ನು ದಾಖಲಿಸುತ್ತಾ ಹೊರಟರೆ, ಬಹುಶಃ ಮತ್ತೊಂದು ಮಹಾಭಾರತದಂತಹ ದಿವ್ಯ ಮಹಾಕಾವ್ಯ ಬರೆದುಬಿಡುವಷ್ಟು ಸರಕು ಲಭ್ಯವಿದೆ! ಅದನ್ನು ಸ್ವಲ್ಪ ತಡವಾದರೂ ಮುಂದೊಂದು ದಿನ ದಾಖಲಿಸುವ ಕೆಲಸ ಮಾಡುತ್ತೇನೆ. ನನಗೆ ಸಮಯ ಕೂಡ ಬಹಳಷ್ಟಿದೆ.
ಇದನ್ನೂ ಓದಿ: Davanagere By-Election: ಸಮರ್ಥ್ ಶಾಮನೂರು ಸೋಲು ಖಚಿತವೇ? ಕಾಂಗ್ರೆಸ್‌ನಲ್ಲಿ ಆಂತರಿಕ ಅಸಮಾಧಾನ ಸ್ಫೋಟ!
ದಾವಣಗೆರೆ ದಕ್ಷಿಣದ ಉಪಚುನಾವಣೆ ರಾಜಕೀಯ
ಅದನ್ನು ಬದಿಗಿಟ್ಟು ಈಗ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ (Davanagere By-Election) ವಿಚಾರಕ್ಕೆ ಬರೋಣ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಾಬಲ್ಯ ಜಾಸ್ತಿಯೇ ಇದೆ. ದಿ. ಶಾಮನೂರು ಶಿವಶಂಕರಪ್ಪನವರು ಇಲ್ಲಿ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಬಾರಿ ಶಾಸಕರಾಗಿದ್ದರು. ಆದರೆ ವಯೋಸಹಜ ಕಾರಣಗಳಿಂದ ಶಾಮನೂರು ಶಿವಶಂಕರಪ್ಪನವರು ವಿಧಿವಶರಾದರು. ಅವರ ಅಗಲಿಕೆಯ ನಂತರ ಉಪ ಚುನಾವಣೆಯ ಕಸರತ್ತುಗಳು ಗರಿಗೆದರಿದವು. ಕಳೆದ ಚುನಾವಣೆಯಲ್ಲಿ ಮುಂದಿನ ಬಾರಿ ಅಲ್ಪಸಂಖ್ಯಾತ ಸಮುದಾಯಕ್ಕೆ ದಕ್ಷಿಣದಲ್ಲಿ ಅವಕಾಶ ನೀಡುತ್ತೇನೆ ಎಂದು ಶಾಮನೂರು ಶಿವಶಂಕರಪ್ಪನವರು ಮಾತು ಕೊಟ್ಟಿದ್ದರು ಎಂಬ ಮಾತುಗಳು ಈಗಿನ ಉಪ ಚುನಾವಣೆಯಲ್ಲಿ ಅತಿ ಹೆಚ್ಚಾಗಿ ಕೇಳಿಬಂದವು.
ಇದನ್ನೇ ಮಾನದಂಡವಾಗಿಸಿಕೊಂಡು ಅಲ್ಪಸಂಖ್ಯಾತ ಸಮುದಾಯ ತನ್ನ ರಾಜಕೀಯ ಪ್ರಾತಿನಿಧ್ಯತೆಯ ಪ್ರಶ್ನೆಯನ್ನು ಕಾಂಗ್ರೆಸ್ ಪಕ್ಷದ ಮುಂದಿಟ್ಟಿತ್ತು. ಸಹಜವಾಗಿಯೇ ಕಾಂಗ್ರೆಸ್ ಪಕ್ಷ ಇದರತ್ತ ಜಾಸ್ತಿ ಒಲವು ತೋರಿ, ಕ್ಷೇತ್ರದ ಕುರಿತಾಗಿನ ಜನಾಭಿಪ್ರಾಯಕ್ಕೆ ಒತ್ತು ನೀಡಿತು. ಖಚಿತ ಮೂಲವೊಂದರ ಪ್ರಕಾರ ಶಾಮನೂರು ಕುಟುಂಬದ ಕುಡಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕೂಡ ಉಪ ಚುನಾವಣೆಯ ವಿಚಾರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಹೇಗೋ ಮುಂದಿನ ಚುನಾವಣೆಯ ಹೊತ್ತಿಗೆ ಕ್ಷೇತ್ರ ಮರುವಿಂಗಡಣೆ ಆಗುವ ಸಾಧ್ಯತೆಗಳು ಹೆಚ್ಚಿರುವ ಹಿನ್ನೆಲೆಯ ಜೊತೆಗೆ, ಭವಿಷ್ಯದ ಅಧಿಕಾರ ರಾಜಕಾರಣದ ಮಟ್ಟಿಗೆ ತಲೆದೋರಬಹುದಾದ ಅಲ್ಪಸಂಖ್ಯಾತ ರಾಜಕಾರಣದ ಗಂಡಾಂತರದಿಂದ ಪಾರಾಗಲು ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟು ಅಖಾಡದಿಂದ ಹಿಂದೆ ಸರಿಯಲು ಶಾಮನೂರು ಮಲ್ಲಿಕಾರ್ಜುನ ಮಾನಸಿಕವಾಗಿ ಸಿದ್ಧರಿದ್ದರು!
ಅದರ ಭಾಗವಾಗಿ ಅವರ ಕುಟುಂಬದ ಬಹುಕಾಲದ ಒಡನಾಡಿಯಾಗಿರುವ ದಾದು ಸೇಠ್ ಅವರ ಹೆಸರನ್ನು ಕೂಡ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿವಿಯಲ್ಲಿ ಉಸುರಿದ್ದರು ಎಂಬುದನ್ನು ಕಾಂಗ್ರೆಸ್ ಮೂಲಗಳು ದೃಢೀಕರಿಸುತ್ತವೆ! ಆದರೆ ದಾದು ಸೇಠ್ ಈ ವಿಚಾರದಲ್ಲಿ ಅಷ್ಟೇನು ಆಸಕ್ತಿ ತೋರದ ಕಾರಣಕ್ಕೆ ಮತ್ತೊಬ್ಬ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಹುಡುಕುವಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿರತರಾಗಿದ್ದಾಗಲೇ, ಸಚಿವ ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಹೆಸರು ಕಾಂಗ್ರೆಸ್ ಪಾಳೆಯದಲ್ಲಿ ತೇಲಿಬಿಡುತ್ತಾರೆ. ಇದು ಗೊತ್ತಾಗಿದ್ದೇ ತಡ ಸಚಿವ ಶಾಮನೂರು ಮಲ್ಲಿಕಾರ್ಜುನ ಆ ಹೆಸರಿನ ಹೊರತಾಗಿ ಬೇರೆಯವರನ್ನು ಸೂಚಿಸಿ ಅಂತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆಗಲೂ ಸುಮ್ಮನಿರದ ಜಮೀರ್ ಅಹ್ಮದ್ ಖಾನ್, ವಕ್ಫ್ ಬೋರ್ಡ್ ಮಾಜಿ ಚೇರ್ಮನ್ ಚಿತ್ರದುರ್ಗ ಮೂಲದ ಅನ್ವರ್ ಬಾಷ ಹೆಸರನ್ನು ಮಾರ್ಕೆಟ್ಟಿಗೆ ಬಿಡುತ್ತಾರೆ. ಇದನ್ನು ದಾವಣಗೆರೆಯ ಅಲ್ಪಸಂಖ್ಯಾತ ಸಮುದಾಯ ಒಪ್ಪುವುದಿಲ್ಲ ಎಂದು ಸ್ವತಃ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸುತ್ತಾರೆ. ಇದಕ್ಕೆ ಶಾಮನೂರು ಮಲ್ಲಣ್ಣ ಕೂಡ ಧ್ವನಿಗೂಡಿಸುತ್ತಾರೆ. ಸಮುದಾಯದ ಜನಪ್ರತಿನಿಧಿಗಳಾದ ನಾಸೀರ್ ಹುಸೇನ್, ಸಲೀಮ್ ಅಹ್ಮದ್, ರಿಜ್ವಾನ್ ಅರ್ಷದ್, ರಹೀಂ ಖಾನ್, ಯಾಸಿರ್ ಖಾನ್ ಪಠಾಣ್ ಕೂಡ ಅನುಮೋದಿಸುತ್ತಾರೆ! ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದೇ ಅಭಿಪ್ರಾಯಕ್ಕೆ ಮನ್ನಣೆ ನೀಡಿದಾಕ್ಷಣ ಜಮೀರ್ ಅಹ್ಮದ್ ಖಾನ್ ತನ್ನ ಹುಚ್ಚಾಟಗಳಿಗೆ ಜೀವ ತುಂಬುತ್ತಾನೆ!
ಇದನ್ನೂ ಓದಿ: BJP Politics: ಬಿಜೆಪಿಯ ‘ದ್ವಿಮುಖ’ ರಾಜಕಾರಣ – ದಾವಣಗೆರೆಯಲ್ಲಿ ಮಂಡಿಯೂರಿ ಶರಣು, ಬಾಗಲಕೋಟೆಯಲ್ಲಿ ದ್ವೇಷದ ಹೂರಣ!
ಅನ್ವರ್ ಬಾಷ ಮತ್ತು ವಕ್ಫ್ ವಿವಾದ
ಹಾಗೆ ನೋಡಿದರೆ ಚಿತ್ರದುರ್ಗ ಮೂಲದ ಅನ್ವರ್ ಬಾಷ ‘ವಕ್ಫ್’ ಆಸ್ತಿ ವಿಚಾರದಲ್ಲಿ ಕಳಂಕಿತರಾದವರು ಎಂಬ ವಿಚಾರ ಸಮುದಾಯದ ಬಹುತೇಕರಿಗೆ ಗೊತ್ತು! ಇವರ ಹೆಸರಲ್ಲಿ ಜಮೀರ್ ಅಹ್ಮದ್ ಖಾನ್ ಹಲವಾರು ಕಡೆ ‘ಇನ್ವೆಸ್ಟ್’ ಕೂಡ ಮಾಡಿದ್ದಾರೆ ಎಂಬ ಮಾಹಿತಿ ಜನಜನಿತವಾಗಿದೆ. ಬಳ್ಳಾರಿ ಹಾಗೂ ಹೊಸಪೇಟೆಯಲ್ಲಿ ನಡೆಯುತ್ತಿರುವ ಹಲವಾರು ಬೃಹತ್ ಕಾಮಗಾರಿಗಳು ಅನ್ವರ್ ಬಾಷ ಅವರಿಗೆ ಸೇರಿದ, ಅವರ ಪಾಲುದಾರಿಕೆಯುಳ್ಳ ಜನರಿಂದ ನಿರ್ವಹಿಸಲ್ಪಡುತ್ತಿವೆ ಎಂಬುದರ ಗುಟ್ಟು ಕಾಂಗ್ರೆಸ್ ಅಂಗಳದಲ್ಲಿ ಕಳೆದ ಎರಡು ವರ್ಷಗಳಿಂದ ಚರ್ಚೆಯಲ್ಲಿದೆ!
ಸಾಲದ್ದಕ್ಕೆ ಮೊನ್ನೆಯ 2025 ರ ‘ವಕ್ಫ್’ ಚುನಾವಣೆಯಲ್ಲಿ ರಾಜ್ಯದ ಇಡೀ ಅಲ್ಪಸಂಖ್ಯಾತ ಸಮುದಾಯವು ಅಖಾಡದಲ್ಲಿದ್ದ ಇದೇ ಅನ್ವರ್ ಬಾಷ ವಿರುದ್ಧವಾಗಿ, ಸೂಫಿ ಪರಂಪರೆಯ ಕಲಬುರ್ಗಿಯ ಖಾಜಾ ಬಂದೇ ನವಾಜ್ ದರ್ಗಾದ ಸಜ್ಜಾದೆ ನಶೀನ್ ಸೈಯದ್ ಮುಹಮ್ಮದ್ ಅಲಿ ಅಲ್-ಹುಸೈನಿ ಪರವಾಗಿ ತನ್ನ ಒಲವು ತೋರಿಸಿ ಅವರನ್ನು ‘ವಕ್ಫ್’ ಅಧ್ಯಕ್ಷ ಗಾದಿಗೆ ಕೂರಿಸುವಂತೆ ಮತ ಚಲಾಯಿಸಿದ್ದಾರೆ! ಈ ಹಂತದಲ್ಲಿ ಅನ್ವರ್ ಬಾಷ ಹೆಸರನ್ನು ಜಮೀರ್ ಅಹ್ಮದ್ ಖಾನ್ ತೇಲಿಬಿಟ್ಟಿದ್ದು ಅವರಲ್ಲಿನ ರಾಜಕೀಯ ಅಂಧಕಾರದ ಶವ ಪೆಟ್ಟಿಗೆಗೆ ಕೊನೆಯ ಮೊಳೆಯನ್ನೇ ಜಡಿದುಬಿಟ್ಟಿತು! ಜಮೀರ್ ಅಹ್ಮದ್ ಖಾನ್ ತುಳಿದ ಈ ಹಾದಿಯು, ಸಮುದಾಯದ ರಾಜಕೀಯ ಪ್ರಾತಿನಿಧ್ಯದ ಪ್ರಶ್ನೆ ಕೇವಲ ಪ್ರಶ್ನೆಯಾಗಿಯೇ ಉಳಿಯುವಂತೆ ಮಾಡಿತು ಎಂಬುದರಲ್ಲಿ ಈಗ ಯಾವ ಸಂದೇಹಗಳೂ ಇಲ್ಲ!
ಇಷ್ಟಾದ ಬಳಿಕ ದಾವಣಗೆರೆ ಉಪ ಚುನಾವಣೆಗೆ ‘ಅಲ್ಪಸಂಖ್ಯಾತ ಅಭ್ಯರ್ಥಿ’ ಆಯ್ಕೆ ಪ್ರಕ್ರಿಯೆಯಲ್ಲಿ ಒಮ್ಮತ ಮೂಡದ ಕಾರಣ ಕಾಂಗ್ರೆಸ್ ಪಕ್ಷ ತನ್ನ ನಿರ್ಧಾರ ಪ್ರಕಟಿಸುವಲ್ಲಿ ಸ್ವಲ್ಪ ತಡ ಮಾಡಿತು. ಜಮೀರ್ ಅಹ್ಮದ್ ಖಾನ್ ಸಣ್ಣ ಮಕ್ಕಳಂತೆ ಹಠ ಹಿಡಿದು ಕುಳಿತರು. ಸಾಲದ್ದಕ್ಕೆ “ನಾನು ಅಲ್ಪಸಂಖ್ಯಾತರ ನಾಯಕ, ನನ್ನ ನಿರ್ಧಾರಕ್ಕೆ ಮನ್ನಣೆ ಕೊಡಿ” ಎಂದು ಎಮೋಷನಲ್ ಅತ್ಯಾಚಾರದ ಪ್ರಯೋಗಗಳನ್ನು ಜಮೀರ್ ಅಹ್ಮದ್ ಎಗ್ಗಿಲ್ಲದೆ ಮಾಡಹತ್ತಿದರು. ಮಾಧ್ಯಮಗಳಲ್ಲಿ ‘ಪೇಯ್ಡ್ ನ್ಯೂಸ್’ ಕೂಡ ಬರುವಂತೆ ನೋಡಿಕೊಂಡರು.
ಆಗಲೇ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಮ್ಮ ಹಳೆಯ ನಿರ್ಧಾರದಿಂದ ಹಿಂದೆ ಸರಿದು ಬೆಳಗಾಗುವಷ್ಟರಲ್ಲಿ ತಮ್ಮ ಸುಪುತ್ರ ‘ಸಮರ್ಥ್’ ಸ್ಪರ್ಧೆಗೆ ಅನುವು ಮಾಡಿಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜಮೀರ್ ಅಹ್ಮದ್ ಖಾನ್ ವಿರುದ್ಧ “ಅವನ್ಯಾರು ನಮ್ಮ ಕ್ಷೇತ್ರದ ಅಭ್ಯರ್ಥಿ ನಿರ್ಧರಿಸಲು” ಎಂದು ಖಾರವಾಗಿ ಹೈಕಮಾಂಡಿಗೆ ಸಂದೇಶ ರವಾನಿಸಿದರು! ಅದು ಮಾಧ್ಯಮಗಳಲ್ಲಿಯೂ ದೊಡ್ಡ ಅಲ್ಲೋಲ ಕಲ್ಲೋಲ ಸುದ್ದಿಯಾಗಿ ಕೊನೆಗೆ ಲದ್ದಿಯಾಗಿ ಹೊರಹೊಮ್ಮಿತು! ಬೆಳಗ್ಗೆ ಎದ್ದು ‘ಸಮರ್ಥ್’ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಕೂಡ ಸಲ್ಲಿಸಿಯಾಯಿತು! ಅಲ್ಲಿಗೆ ಸಾಮುದಾಯಿಕ ಪ್ರಜ್ಞೆ ಇಲ್ಲದ ಜಮೀರ್ ಅಹ್ಮದ್ ಖಾನ್ ಎಂಬ ಹುಚ್ಚು ಕುದುರೆಯ ದಿಸೆಯಿಂದ ಸಮುದಾಯದ ಸ್ಥಳೀಯ ಮಟ್ಟದ ಯಾರಿಗಾದರೂ ಅನಾಯಾಸವಾಗಿ ದಕ್ಕಬೇಕಿದ್ದ ಅಧಿಕಾರ ರಾಜಕಾರಣದ ಸ್ಥಾನವೊಂದು ನಿಜವಾಗಿಯೂ ಬಲಿಯಾಯಿತು!
ಕೊನೆಯದಾಗಿ ಹೇಳುವುದಾದರೆ, ಶಾಮನೂರು ಶಿವಶಂಕರಪ್ಪನವರು ತೀರಿದ ಬಳಿಕ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತವರ ಇಡೀ ಕುಟುಂಬ ಉಪ ಚುನಾವಣೆಯಲ್ಲಿ ‘ಅಲ್ಪಸಂಖ್ಯಾತ’ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ಪರವಾಗಿ ಸ್ಪಷ್ಟ ನಿಲುವು ಪ್ರದರ್ಶಿಸಿದ್ದ ನಿರ್ಧಾರಕ್ಕೆ ದೆಹಲಿ ಹೈಕಮಾಂಡ್ ಕೂಡ ನಿರಾತಂಕವಾಗಿತ್ತು! ಎಲ್ಲರಿಗಿಂತ ಹೆಚ್ಚಾಗಿ ಮಲ್ಲಿಕಾರ್ಜುನ ಖರ್ಗೆ ತುಂಬಾ ಖುಷಿ ಪಟ್ಟಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಮತ್ತೊಂದು ‘ಸಿದ್ರಾಮೋತ್ಸವ’ ನಡೆದಷ್ಟು ಪ್ರಫುಲ್ಲರಾಗಿದ್ದರು! ಆದರೆ ಅವೆಲ್ಲದಕ್ಕೂ ಸಚಿವ ಜಮೀರ್ ಅಹ್ಮದ್ ಖಾನ್ ಬೆಂಕಿ ಇಟ್ಟುಬಿಟ್ಟರು!
ಚರಿತ್ರೆಯಲ್ಲಿ ಶತಮಾನಗಳಿಂದ ಅಚ್ಚಳಿಯದೆ ಉಳಿದಿರುವ ‘ಅರ್ಥ’ ಅಹಂಕಾರ, ‘ಮದ’ ಅಹಂಕಾರ, ‘ಮತ’ ಅಹಂಕಾರ ಹಾಗೂ ‘ಬಹುಮತ’ ಎಂಬ ದುರಹಂಕಾರಗಳಿಗೆ ಈಗ ಜಮೀರ್ ಅಹ್ಮದ್ ಖಾನ್ ಹೊಸ ಬಳುವಳಿ ಎಂಬುದನ್ನು ನಾನಂತೂ ಒಪ್ಪುತ್ತೇನೆ! ಸಮುದಾಯದ ಅಭಿಪ್ರಾಯ ಅದರ ವಿವೇಚನೆಯನ್ನು ಅವಲಂಬಿಸಿದೆ!
-ಇರ್ಫಾನ್ ಮುದಗಲ್
(ಇದು ಲೇಖಕರ ಸ್ವತಂತ್ರ ವಿಶ್ಲೇಷಣೆಯಾಗಿದ್ದು, ಇಲ್ಲಿನ ಮಾಹಿತಿಗೆ ಲೇಖಕರೇ ಹೊಣೆಗಾರರಾಗಿರುತ್ತಾರೆ. ನಮ್ಮ ವೆಬ್‌ಸೈಟ್ ಈ ಅಭಿಪ್ರಾಯಗಳಿಗೆ ಜವಾಬ್ದಾರಿಯಾಗಿರುವುದಿಲ್ಲ.)

