Homeವಿಶ್ಲೇಷಣೆBagalkot By-Election: 50:50 ಇದ್ದ ಫೈಟ್ ಈಗ 57:43! ಬಾಗಲಕೋಟೆ 'ಬೇವರಿನ' ಫಲಿತಾಂಶ- ಯಾರಿಗೆ ಜಯ?...

Bagalkot By-Election: 50:50 ಇದ್ದ ಫೈಟ್ ಈಗ 57:43! ಬಾಗಲಕೋಟೆ ‘ಬೇವರಿನ’ ಫಲಿತಾಂಶ- ಯಾರಿಗೆ ಜಯ? ಯಾರಿಗೆ ರಾಜಕೀಯ ವನವಾಸ?

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ (Bagalkot By-Election) ಉಪಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ, ಈಗ ಎಲ್ಲರ ಕಣ್ಣು ಮೇ 4ರ ಫಲಿತಾಂಶದ ಮೇಲೆ ನೆಟ್ಟಿದೆ. ಕೇವಲ ಒಬ್ಬ ಶಾಸಕನ ಆಯ್ಕೆಗಾಗಿ ನಡೆದ ಚುನಾವಣೆಯಿದು ಎಂದು ಭಾವಿಸಿದರೆ ಅದು ರಾಜಕೀಯ ಮುಗ್ಧತೆ ಎನಿಸಿಕೊಳ್ಳಬಹುದು. ಯಾಕಂದರೆ, ಈ ಬಾರಿಯ ಬಾಗಲಕೋಟೆ ಕದನ ರಾಜ್ಯದ ಇಬ್ಬರು ಪ್ರಬಲ ನಾಯಕರ ಅಸ್ತಿತ್ವದ ಹೋರಾಟ ಮತ್ತು ಬಿಜೆಪಿಯ ಒಳಗಿನ ಅಸಮಾಧಾನದ ಸ್ಫೋಟಕ್ಕೆ ಸಾಕ್ಷಿಯಾಗಿದೆ.

ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ರಾಜಕೀಯ ಧೂಳು ಈಗ ಮತಯಂತ್ರಗಳೊಳಗೆ ಭದ್ರವಾಗಿದೆ. ಆದರೆ ಹಳ್ಳಿ-ಹಳ್ಳಿಗಳಲ್ಲಿ ನಡೆಯುತ್ತಿರುವ ಲೆಕ್ಕಾಚಾರಗಳು ಮಾತ್ರ ಹೊಸ ಸಂಚಲನ ಮೂಡಿಸಿವೆ.

ಬಾಗಲಕೋಟೆ ಕದನ: ಯಾರ ಪಾಲಿಗೆ ಇದು ಪ್ರತಿಷ್ಠೆಯ ಪ್ರಶ್ನೆ?

ಈ ಉಪಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಂತ ನಿರ್ಣಾಯಕ. ಸ್ವತಃ ವಾರಗಟ್ಟಲೆ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದ ಸಿಎಂ, ಹಳ್ಳಿ-ಹಳ್ಳಿಗಳನ್ನು ಅಲೆದು ಮತಯಾಚನೆ ಮಾಡಿದ್ದಾರೆ. ಇದು ಕೇವಲ ಉಮೇಶ ಮೇಟಿ ಅವರ ಗೆಲುವಿಗಾಗಿ ಮಾಡಿದ ಕಸರತ್ತಲ್ಲ; ಬದಲಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯ ಕೇಳಿಬರುತ್ತಿರುವ ‘ನಾಯಕತ್ವ ಬದಲಾವಣೆ’ಯ ಕೂಗಿಗೆ ಬ್ರೇಕ್ ಹಾಕಲು ಸಿದ್ದರಾಮಯ್ಯ ಅವರಿಗೆ ಈ ಗೆಲುವು ಅನಿವಾರ್ಯವಾಗಿದೆ.

ಇನ್ನೊಂದೆಡೆ, ಸಚಿವ ಸತೀಶ್ ಜಾರಕಿಹೊಳಿ ಪಾಲಿಗೆ ಇದು ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಿರುವ ದಾರಿಯಾಗಿದೆ. ಸತೀಶ್ ಅವರ ಮೈಕ್ರೋ-ಲೆವೆಲ್ ಮ್ಯಾನೇಜ್‌ಮೆಂಟ್ ಹಾಗೂ ಸಣ್ಣಪುಟ್ಟ ಸಮುದಾಯಗಳನ್ನು ಒಗ್ಗೂಡಿಸಿದ ರೀತಿ ಕಾಂಗ್ರೆಸ್ ಪಾಳಯದಲ್ಲಿ ಹೊಸ ಭರವಸೆ ಮೂಡಿಸಿದೆ.

ಜಾತಿ ಸಮೀಕರಣ: ಕೈ ಹಿಡಿದ ‘ಮಾಸ್ಟರ್ ಸ್ಟ್ರೋಕ್’

ಚುನಾವಣೆಯ ಆರಂಭದ ದಿನಗಳಲ್ಲಿ ಪೈಪೋಟಿ 50:50 ಇತ್ತು ಎನ್ನುವುದು ಸುಳ್ಳಲ್ಲ. ಆದರೆ ಮತದಾನಕ್ಕೆ ಎರಡು ದಿನ ಬಾಕಿ ಇರುವಾಗ ನಡೆದ ರಾಜಕೀಯ ತಂತ್ರಗಾರಿಕೆಗಳು ಚಿತ್ರಣವನ್ನೇ ಬದಲಿಸಿವೆ.

  •  ಲಿಂಗಾಯತ ಮತಗಳ ವಿಭಜನೆ: ಬಿಜೆಪಿಯ ಭದ್ರಕೋಟೆಯಾಗಿದ್ದ ಲಿಂಗಾಯತ ಮತಬ್ಯಾಂಕ್‌ಗೆ ಸಿದ್ದರಾಮಯ್ಯ ನೀಡಿದ ಏಟು ಬಿಜೆಪಿಯನ್ನು ಕಂಗೆಡಿಸಿದೆ. ಅಂತಿಮ ಕ್ಷಣದಲ್ಲಿ ಲಿಂಗಾಯತ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಮಾಡಿದ ‘ಮಾಸ್ಟರ್ ಪ್ಲ್ಯಾನ್’ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎನ್ನುವುದು ಮತದಾನದ ಪ್ರಮಾಣದಲ್ಲಿ ಕಂಡುಬರುತ್ತಿದೆ.
  • ರೆಡ್ಡಿ ಸಮುದಾಯದ ಒಗ್ಗಟ್ಟು: ಕಳೆದ ಎರಡು ಚುನಾವಣೆಗಳಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲರಿಗೆ ಆದ ಅನ್ಯಾಯದ ಸೇಡನ್ನು ತೀರಿಸಿಕೊಳ್ಳಲು ಬಿಜೆಪಿ ಕಡೆ ವಾಲಿರುತ್ತಿದ್ದ ರೆಡ್ಡಿ ಸಮುದಾಯ, ಈ ಬಾರಿ ಚಿತ್ರಣ ಬದಲಿಸಿದೆ. ಸ್ವತಃ ಎಸ್.ಆರ್. ಪಾಟೀಲ್ ಅವರೇ ಮನೆಮನೆಗೆ ತೆರಳಿ “ನಾನೇ ಅಭ್ಯರ್ಥಿ ಎಂದು ತಿಳಿದು ಮತ ಹಾಕಿ” ಎಂದು ನೀಡಿದ ಕರೆ, ಸಮುದಾಯದ ಮತಗಳನ್ನು ಕಾಂಗ್ರೆಸ್ ಕಡೆಗೆ ‘ಸಾಲಿಡ್’ ಆಗಿ ವರ್ಗಾವಣೆ ಮಾಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Bagalkot By-Election: ಬಿಜೆಪಿಗೆ ಮುಸ್ಲಿಮರು ಬೇಡ, ಈಗ ಕುರುಬರ ಮತಗಳೂ ಬೇಡ್ವಾ? ನಾಯಕರ ಉದ್ಧಟತನಕ್ಕೆ ಮತದಾರರೇ ಕಲಿಸ್ತಾರಾ ಪಾಠ?

ಬಿಜೆಪಿಯ ಒಳಗೇ ಕುದಿಯುತ್ತಿರುವ ಅಸಮಾಧಾನ

ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ನಗರ ಪ್ರದೇಶದಲ್ಲಿ ಹಿಡಿತವಿರುವುದು ನಿಜ. ಆದರೆ ಅವರ ವೈಯಕ್ತಿಕ ನಡೆ ಮತ್ತು ಕಾರ್ಯಕರ್ತರ ನಡುವಿನ ಅಸಮಾಧಾನ ಅವರಿಗೆ ಮುಳುವಾಗುವ ಸಾಧ್ಯತೆ ದಟ್ಟವಾಗಿದೆ.

ವಿಶೇಷವಾಗಿ ಸಂಘಪರಿವಾರದ ಕಾರ್ಯಕರ್ತರಲ್ಲೇ ಒಂದು ವರ್ಗ “ಚರಂತಿಮಠ ಈ ಬಾರಿ ಸೋತರೆ 2028ಕ್ಕೆ ಹೊಸ ನಾಯಕತ್ವಕ್ಕೆ ದಾರಿ ಸಿಗಬಹುದು” ಎನ್ನುವ ಲೆಕ್ಕಾಚಾರದಲ್ಲಿ ತಟಸ್ಥ ನಿಲುವು ತಳೆದಿದ್ದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರ ಹಿಂದುತ್ವದ ಭಾಷಣಗಳು ಕೇಸರಿ ಪಡೆಯನ್ನು ಹುರಿದುಂಬಿಸಿದರೂ, ಸ್ವಪಕ್ಷೀಯ ನಾಯಕರ ನಾಲಿಗೆ ಜಾರಿರುವುದು ದೊಡ್ಡ ಪೆಟ್ಟು ನೀಡಿದೆ.

ನಾಲಿಗೆ ಹರಿತ: ಬಿಜೆಪಿಗೆ ಶಾಪವಾದ ಸಿಸಿ ಪಾಟೀಲ್, ನಿರಾಣಿ ಹೇಳಿಕೆಗಳು

ಚುನಾವಣಾ ಪ್ರಚಾರದ ವೇಳೆ ಮಾಜಿ ಸಚಿವರಾದ ಮುರುಗೇಶ್ ನಿರಾಣಿ ಮತ್ತು ಸಿಸಿ ಪಾಟೀಲ್ ನೀಡಿದ ಹೇಳಿಕೆಗಳು ಬಿಜೆಪಿಯ ಪಾಲಿಗೆ ಸ್ವಯಂ-ಕೃತ ಅಪರಾಧದಂತೆ ಕಂಡಿವೆ.

  • ಜಾತಿ ಅಹಂಕಾರ: “ಗ್ರಾಮ ಪಂಚಾಯತಿಯಿಂದ ಲೋಕಸಭೆಯವರೆಗೆ ನಮ್ಮ ಸಮುದಾಯದವರೇ ಇರಬೇಕು” ಎನ್ನುವ ನಿರಾಣಿಯವರ ಹೇಳಿಕೆ ಇತರ ಹಿಂದುಳಿದ ವರ್ಗಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
  • ಕುರುಬ ಸಮುದಾಯದ ಆಕ್ರೋಶ: ಸಿಸಿ ಪಾಟೀಲ್ ಅವರು ‘ಗಡ್ಡದಾರಿಗಳು’ ಮತ್ತು ‘ಟೂರ್’ ಎನ್ನುವ ಪದಗಳನ್ನು ಬಳಸಿ ಮುಸ್ಲಿಂ ಸಮುದಾಯ ಹಾಗೂ ಕುರುಬ ಸಮುದಾಯವನ್ನು ಟೀಕಿಸಿದ್ದು, ಇಡೀ ಸಮುದಾಯ ಕಾಂಗ್ರೆಸ್ ಪರವಾಗಿ ಒಗ್ಗೂಡುವಂತೆ ಮಾಡಿದೆ. ಕುರುಬ ಸಮುದಾಯದ ನಾಲ್ಕರಿಂದ ಐದು ಅಂಕಿಗಳಷ್ಟು ತಟಸ್ಥ  ಮತದಾರರು ಬಿಜೆಪಿಗೆ ಮತ ಹಾಕುತ್ತಿದ್ದರು. ಆದರೆ ಈಗ ಆ ಮತಗಳು ಬಿಜೆಪಿಗೆ ಮರೀಚಿಕೆಯಾಗಿವೆ.

ಚುನಾವಣೋತ್ತರ ಸಮೀಕ್ಷೆಯ ಅಂದಾಜು: 57:43?

ಕ್ಷೇತ್ರದ ಪ್ರತಿ ವಾರ್ಡ್ ಮತ್ತು ಹಳ್ಳಿಗಳಿಂದ ಲಭ್ಯವಾಗುತ್ತಿರುವ ಮಾಹಿತಿಗಳನ್ನು ವಿಶ್ಲೇಷಿಸಿದರೆ, ಆರಂಭದಲ್ಲಿ ಸಮಬಲದಲ್ಲಿದ್ದ ಹೋರಾಟ ಈಗ ಕಾಂಗ್ರೆಸ್ ಪರವಾಗಿ ವಾಲಿದಂತೆ ಕಾಣುತ್ತಿದೆ.

  • ಕಾಂಗ್ರೆಸ್ ಶಕ್ತಿ: ಅಹಿಂದ ವರ್ಗದ ಭರ್ಜರಿ ಮತದಾನ, ಸತೀಶ್ ಜಾರಕಿಹೊಳಿ ಅವರ ತಂತ್ರಗಾರಿಕೆ ಮತ್ತು ಎಸ್.ಆರ್. ಪಾಟೀಲ್ ಸೇರಿದಂತೆ ಸ್ಥಳೀಯ ನಾಯಕರ ಶ್ರಮ.
  • ಬಿಜೆಪಿ ದೌರ್ಬಲ್ಯ: ನಗರ ಪ್ರದೇಶದ ಮತದಾನದ ಕುಸಿತ, ನಾಯಕರ ಬೇಜವಾಬ್ದಾರಿ ಹೇಳಿಕೆಗಳು ಮತ್ತು ಕಾರ್ಯಕರ್ತರ ಆಂತರಿಕ ಅಸಮಾಧಾನ.

ಈ ಎಲ್ಲ ಲೆಕ್ಕಾಚಾರಗಳನ್ನು ಗಮನಿಸಿದರೆ, ಮತದಾನದ ಪ್ರಮಾಣ ಮತ್ತು ಜನರ ನಾಡಿಮಿಡಿತ 57:43 ರ ಅನುಪಾತದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುವ ಸಾಧ್ಯತೆಯನ್ನು ತೋರುತ್ತಿದೆ. ಕುರುಡು ಕಾಂಚಾಣದ ಹರಿವು ಎಲ್ಲವನ್ನೂ ಬುಡಮೇಲು ಮಾಡಬಹುದು ಎಂಬ ಆತಂಕವಿದ್ದರೂ, ಸಮುದಾಯಗಳ ಶಿಫ್ಟಿಂಗ್ ಮಾತ್ರ ಸ್ಪಷ್ಟವಾಗಿ ಕಾಂಗ್ರೆಸ್ ನಾಯಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಇದನ್ನೂ ಓದಿ: Bagalkot By-Election: ಚರಂತಿಮಠಗೆ ಬ್ಯಾಕ್ ಫೈರ್ ಆಯ್ತಾ ‘ಯತ್ನಾಳ-ಸಿಂಹ’ ಅಸ್ತ್ರ? ಜಂಗಮನ ಜೋಳಿಗೆಗೆ ಬೀಳಬೇಕಿದ್ದ ಮತಗಳಿಗೆ ಬ್ರೇಕ್ ಬಿದ್ದಿದ್ದೆಲ್ಲಿ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

ರಾಜಕೀಯ ಭವಿಷ್ಯದ ದಿಕ್ಸೂಚಿ

ಬಾಗಲಕೋಟೆಯ ಈ ಫಲಿತಾಂಶ ಕೇವಲ ಒಬ್ಬ ಶಾಸಕನನ್ನು ವಿಧಾನಸೌಧಕ್ಕೆ ಕಳುಹಿಸುವುದಿಲ್ಲ. ಬದಲಾಗಿ, ಇದು ವಿಜಯೇಂದ್ರ ಅವರ ನಾಯಕತ್ವಕ್ಕೆ ಸವಾಲೋ ಅಥವಾ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಸಿಕ್ಕ ಜಯವೋ ಎಂಬುವುದನ್ನು ನಿರ್ಧರಿಸಲಿದೆ. ಒಂದು ವೇಳೆ ಇಲ್ಲಿ ಬಿಜೆಪಿ ಸೋತರೆ, ಅದು ವೀರಣ್ಣ ಚರಂತಿಮಠ ಅವರ ರಾಜಕೀಯ ನಿವೃತ್ತಿಯ ನಾಂದಿಯಾಗಬಹುದು. ಅದೇ ರೀತಿ ಕಾಂಗ್ರೆಸ್ ಗೆದ್ದರೆ, ಸತೀಶ್ ಜಾರಕಿಹೊಳಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಪ್ರಭಾವಿ ಶಕ್ತಿಯಾಗಿ ಹೊರಹೊಮ್ಮಲಿದ್ದಾರೆ.

ಮೇ 4ರಂದು ಮತಯಂತ್ರಗಳು ತೆರೆದಾಗ, ಯಾರ ತಂತ್ರ ಫಲಿಸಿದೆ ಮತ್ತು ಯಾರ ಅಹಂಕಾರಕ್ಕೆ ಜನ ಏಟು ನೀಡಿದ್ದಾರೆ ಎಂಬುದು ಜಗಜ್ಜಾಹೀರಾಗಲಿದೆ. ಅಂದಿನವರೆಗೂ ಬಾಗಲಕೋಟೆಯ ಹಳ್ಳಿ-ಕಟ್ಟೆಗಳ ಮೇಲೆ ಲೆಕ್ಕಾಚಾರದ ಈ ‘ಖಾರ’ದ ಚರ್ಚೆ ಮುಂದುವರಿಯಲಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments