Homeವಿಶ್ಲೇಷಣೆBagalkot By-Election: ಡಬಲ್ ವೋಟರ್ಸ್‌ಗೆ ಢವಢವ! ಆ ವಿದ್ಯಾರ್ಥಿಗಳಿಗೆ ಜೈಲು ಫಿಕ್ಸ್? ಕೈ-ಪಡೆಯ ಮಾಸ್ಟರ್ ಪ್ಲಾನ್;...

Bagalkot By-Election: ಡಬಲ್ ವೋಟರ್ಸ್‌ಗೆ ಢವಢವ! ಆ ವಿದ್ಯಾರ್ಥಿಗಳಿಗೆ ಜೈಲು ಫಿಕ್ಸ್? ಕೈ-ಪಡೆಯ ಮಾಸ್ಟರ್ ಪ್ಲಾನ್; ಬಿಜೆಪಿಯಿಂದ ಓಪನ್ ಚಾಲೆಂಜ್!

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ (Bagalkot By-Election) ರಾಜಕೀಯ ಕಣ ಈಗ ಕೇವಲ ಮತಬೇಟೆಯ ಅಖಾಡವಾಗಿ ಉಳಿದಿಲ್ಲ; ಅದು ಸಂಘರ್ಷದ ಹುತ್ತಕ್ಕೆ ಕೈಹಾಕಿದಂತಾಗಿದೆ. ಅಭಿವೃದ್ಧಿ, ನೀರಾವರಿ, ನಿರುದ್ಯೋಗದಂತಹ ಚರ್ಚೆಗಳಿಗಿಂತಲೂ ಇಂದು ಜಿಲ್ಲೆಯಲ್ಲಿ ದಟ್ಟವಾಗಿ ಕೇಳಿಬರುತ್ತಿರುವುದು ‘ವಿದ್ಯಾರ್ಥಿ ಮತದಾನದ ವಿವಾದ’. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಈ ಜಿದ್ದಾಜಿದ್ದಿ ಈಗ ‘ತಾಕತ್ತು-ಸವಾಲು’ಗಳ ಹಂತಕ್ಕೆ ತಲುಪಿದ್ದು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವು ಆರೋಪ-ಪ್ರತ್ಯಾರೋಪಗಳ ಕೆಸರೆರಚಾಟಕ್ಕೆ ಸಾಕ್ಷಿಯಾಗುತ್ತಿದೆ.

ಬಾಗಲಕೋಟೆಯ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಬಸವೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ವೋಟ್ ಬ್ಯಾಂಕ್‌ ಆಗಿ ಬಳಸಿಕೊಳ್ಳುತ್ತಾರೆ ಎನ್ನುವ ಆರೋಪ ನಿನ್ನೆ ಮೊನ್ನೆಯದಲ್ಲ 2004ರಿಂದಲೂ ಈ ವಿವಾದ ಇದ್ದೇ ಇದೆ. ಆದರೆ ಈ ಬಾರಿಷ್ಟು ಆಕ್ರೋಶದ ವಾತಾವರಣ ನಿರ್ಮಾಣವಾಗಿರಲಿಲ್ಲ. ಇದಕ್ಕೆ ಮುಖ್ಯ ಕಾರಣ, ಹೊರಗಡೆಯಿಂದ ಬಂದಿರುವ ವಿದ್ಯಾರ್ಥಿಗಳ ಮತದಾನದ ಹಕ್ಕು ಮತ್ತು ಅವರ ಹೆಸರಿನಲ್ಲಿ ನಡೆಯುತ್ತಿದೆ ಎನ್ನಲಾದ ಕಪಟ ನಾಟಕ ನಡೆಯುತ್ತಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರೇ ಧ್ವನಿ ಎತ್ತಿದ್ದಾರೆ.

ಡಿಕೆಶಿ ಎತ್ತಿದ ‘ಡಬಲ್ ವೋಟಿಂಗ್’ ಅಸ್ತ್ರ: ಹತ್ತಿಕೊಂಡ ಕಿಚ್ಚು

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಸೆದ ಒಂದು ಕಿಡಿ ಈಗ ಬಾಗಲಕೋಟೆಯಾದ್ಯಂತ ಬೆಂಕಿಯಾಗಿ ಹರಡಿದೆ. ಹೊರಗಿನ ಊರುಗಳಿಂದ ಶಿಕ್ಷಣಕ್ಕಾಗಿ ಬಾಗಲಕೋಟೆಗೆ ಬಂದಿರುವ ವಿದ್ಯಾರ್ಥಿಗಳನ್ನು ರಾಜಕೀಯ ಲಾಭಕ್ಕಾಗಿ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದು ಅವರ ನೇರ ಆರೋಪ. “ವಿದ್ಯಾರ್ಥಿಗಳಿಗೆ ಅವರ ಸ್ವಗ್ರಾಮಗಳಲ್ಲೂ ಮತದಾನದ ಹಕ್ಕಿದೆ, ಇಲ್ಲೂ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಕಾನೂನುಬಾಹಿರ” ಎನ್ನುವ ಮೂಲಕ ಅವರು ಬಿಜೆಪಿಯ ಮತಬ್ಯಾಂಕ್ ತಂತ್ರಗಾರಿಕೆಯ ಮೇಲೆ ನೇರ ದಾಳಿ ನಡೆಸಿದ್ದಾರೆ.

ಕೇವಲ ದೂರು ನೀಡುವುದಕ್ಕೆ ಸೀಮಿತವಾಗದ ಡಿಕೆಶಿ, ಇಂತಹವರನ್ನು ಪತ್ತೆಹಚ್ಚಲು ಪ್ರತ್ಯೇಕ ತಂಡವನ್ನೇ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ. “ಅಕ್ರಮ ಮತದಾರರನ್ನು ಬಂಧಿಸಲು ಅವಕಾಶವಿದೆಯೇ ಎಂದು ಪರಿಶೀಲಿಸುತ್ತಿದ್ದೇವೆ, ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು” ಎಂದು ಹೇಳುವ ಮೂಲಕ ಬಿಜೆಪಿಯ ಪಾಳಯದಲ್ಲಿ ನಡುಕ ಹುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಇದು ಕೇವಲ ರಾಜಕೀಯ ಹೇಳಿಕೆಯಲ್ಲ, ಬದಲಿಗೆ ಆಡಳಿತಾರೂಢ ಪಕ್ಷವು ಅಕ್ರಮಗಳನ್ನು ಮಟ್ಟಹಾಕಲು ನಡೆಸುತ್ತಿರುವ ‘ಸರ್ಜಿಕಲ್ ಸ್ಟ್ರೈಕ್’ ಎಂಬಂತೆ ಬಿಂಬಿತವಾಗಿದೆ.

ಇದನ್ನೂ ಓದಿ: Raghav Chadha: ಚಡ್ಡಾಗೆ ಖೆಡ್ಡಾ ತೋಡಿದ ಕೇಜ್ರಿವಾಲ್!‌ ಬಿಜೆಪಿಯತ್ತ ಮುಖ ಮಾಡಿದ ಆಪ್‌ ಸಂಸದ?

ಬಿಜೆಪಿಯ ತಿರುಗೇಟು: ‘ಧಮ್ ಇದ್ರೆ ಅರೆಸ್ಟ್ ಮಾಡಿ’

ಕಾಂಗ್ರೆಸ್‌ನ ಈ ಆಕ್ರಮಣಕ್ಕೆ ಬಿಜೆಪಿ ಅಷ್ಟೇ ಉಗ್ರವಾಗಿ ಪ್ರತಿಕ್ರಿಯಿಸಿದೆ. ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಅವರ ಮಾತುಗಳಲ್ಲಿ ಸೌಮ್ಯತೆಯ ಬದಲಿಗೆ ಸವಾಲಿನ ಕೆಂಡವಿತ್ತು. “ಸರಕಾರ ನಿಮ್ಮದೇ ಇದೆ, ತಾಕತ್ತಿದ್ದರೆ ವಿದ್ಯಾರ್ಥಿಗಳನ್ನು ಇವತ್ತೇ ಬಂಧಿಸಿ ತೋರಿಸಿ” ಎಂದು ಕಾರಜೋಳ ಅವರು ಗುಡುಗಿದ್ದು, ಈ ಹೋರಾಟವನ್ನು ಪ್ರತಿಷ್ಠೆಯ ಕಣವನ್ನಾಗಿ ಬದಲಿಸಿದೆ.

ಬಿಜೆಪಿ ನಾಯಕರ ವಾದವೇನೆಂದರೆ, ವಿದ್ಯಾರ್ಥಿಗಳು ದೇಶದ ಪ್ರಜೆಗಳು, ಅವರಿಗೆ ಮತದಾನ ಮಾಡುವ ಹಕ್ಕಿದೆ. ಆದರೆ, ಕಾಂಗ್ರೆಸ್ ಈ ಹಕ್ಕನ್ನು ಕಸಿದುಕೊಳ್ಳಲು ‘ಭಯ’ದ ವಾತಾವರಣ ಸೃಷ್ಟಿಸುತ್ತಿದೆ ಎಂಬುದು ಅವರ ಪ್ರತಿರೋಧ. ಅದರಲ್ಲೂ ನಾರಾಯಣಸಾ ಬಾಂಡಗೆ ಅವರ “ಯಾವನಿಗೆ ಧಮ್ ಇದೆಯೋ ತಾಕತ್ ಇದೆಯೋ ತಡೆಯಿರಿ ನೋಡೋಣ” ಎನ್ನುವ ಹೇಳಿಕೆಯು ಚುನಾವಣಾ ಅಖಾಡದ ಬಿಸಿಯನ್ನು ಸಾರುತ್ತಿದೆ.

ಅಸಲಿ ಸುದ್ದಿ ಸಂಸ್ಥೆಯೊಂದಿಗೆ ನಾಗರಾಜ್ ಹದ್ಲಿ ಅಸಮಾಧಾನ: ಬಯಲಾಯ್ತು ಅಕ್ರಮದ ಜಾಲ!

Bagalkot By-Election: ಡಬಲ್ ವೋಟರ್ಸ್‌ಗೆ ಢವಢವ! ಆ ವಿದ್ಯಾರ್ಥಿಗಳಿಗೆ ಜೈಲು ಫಿಕ್ಸ್? ಕೈ-ಪಡೆಯ ಮಾಸ್ಟರ್ ಪ್ಲಾನ್; ಬಿಜೆಪಿಯಿಂದ ಓಪನ್ ಚಾಲೆಂಜ್!
ಕಾಂಗ್ರೆಸ್ ಮುಖಂಡ ನಾಗರಾಜ್ ಹದ್ಲಿ

ಈ ಇಡೀ ವಿವಾದದ ಕುರಿತು ಕಾಂಗ್ರೆಸ್ ಮುಖಂಡ ನಾಗರಾಜ್ ಹದ್ಲಿ ಅವರು ‘ಅಸಲಿ ಸುದ್ದಿ’ ಸಂಸ್ಥೆಯೊಂದಿಗೆ ಮಾತನಾಡುತ್ತಾ ಅತ್ಯಂತ ಗಂಭೀರ ಹಾಗೂ ಸ್ಫೋಟಕ ಮಾಹಿತಿಗಳನ್ನ ಬಿಚ್ಚಿಟ್ಟಿದ್ದಾರೆ. ಅವರ ಮಾತುಗಳಲ್ಲಿ ವ್ಯವಸ್ಥೆಯ ವಿರುದ್ಧದ ಆಕ್ರೋಶ ಮತ್ತು ಬಿಜೆಪಿಯ ತಂತ್ರಗಾರಿಕೆಯ ವಿರುದ್ಧದ ಎಚ್ಚರಿಕೆ ಎದ್ದು ಕಾಣುತ್ತಿತ್ತು.

“ನೋಡಿ, ವೋಟ್ ಮಾಡುವುದನ್ನ ನಾವು ತಡೆಯಲ್ಲ. ಅದು ಪ್ರತಿಯೊಬ್ಬರ ಹಕ್ಕು. ಆದರೆ ಡಬಲ್ ವೋಟಿಂಗ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳನ್ನ ವೋಟ್ ಮಾಡದಂತೆ ತಡೆಯುವುದು ನಮಗೂ ಗೊತ್ತಿದೆ. ಅವರು ಕರ್ಕೊಂಡ ಬರ್ಲಿ, ಆಗ ಯಾರಿಗೆ ಧಮ್ ಇದೆ ಅಂತ ಗೊತ್ತಾಗುತ್ತೆ” ಎಂದು ಬಿಜೆಪಿ ನಾಯಕರಿಗೆ ಪ್ರತಿ ಸವಾಲು ಹಾಕಿದ್ದಾರೆ.

ನಾಗರಾಜ್ ಹದ್ಲಿ ಅವರ ಆರೋಪದ ಪ್ರಕಾರ, ಬಾಗಲಕೋಟೆಯಲ್ಲಿ ಈ ‘ವಿದ್ಯಾರ್ಥಿ ವೋಟ್ ಬ್ಯಾಂಕ್’ ರಾಜಕಾರಣ ಇಂದಿನದಲ್ಲ. 2004 ರಿಂದಲೂ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಹೊರಗಿನ ಊರು ಮತ್ತು ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳನ್ನು ಅಕ್ರಮ ಮತದಾರರನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಬಾರಿ ಅಂತಹ ಆಟಗಳಿಗೆ ಬ್ರೇಕ್ ಬೀಳಲಿದೆ ಎಂಬುದು ಹದ್ಲಿ ಅವರ ಖಡಕ್ ವಾರ್ನಿಂಗ್.

ಇದನ್ನೂ ಓದಿ: Bagalkot By-Election: “ಸ್ವಲ್ಪ ಹಲ್ಲು ಕಿಸದು ನಗೋದ ಕಲಿ ಮುತ್ಯಾ..!” ಚರಂತಿಮಠ ನಡವಳಿಕೆಗೆ ಯತ್ನಾಳ್ ಜವಾರಿ ಬ್ರೇಕ್; ಆಪ್ತನಿಂದಲೇ ‘ದೀಪದ ಕೆಳಗಿನ ಕತ್ತಲೆ’ ದರ್ಶನ!

ಹಾಸ್ಟೆಲ್ ರೂಮಿನಲ್ಲಿ ಮತದಾರರ ಸಂತೆ!

ಹದ್ಲಿ ಅವರು ಎತ್ತಿರುವ ಪ್ರಶ್ನೆಗಳು ಕೇವಲ ರಾಜಕೀಯ ಪ್ರೇರಿತವಾಗಿ ಕಾಣುತ್ತಿಲ್ಲ, ಬದಲಿಗೆ ದಾಖಲೆಗಳ ಲೋಪದೋಷಗಳನ್ನು ಎತ್ತಿ ತೋರಿಸುತ್ತಿವೆ:

  • ಒಂದೇ ವಿಳಾಸದಲ್ಲಿ ಹತ್ತಾರು ವಿದ್ಯಾರ್ಥಿಗಳು: ಒಂದು ಸಣ್ಣ ಹಾಸ್ಟೆಲ್ ಕೊಠಡಿಯಲ್ಲಿ ಗರಿಷ್ಠ ಅಂದ್ರೆ ಮೂರರಿಂದ ನಾಲ್ಕು ಜನರು ವಾಸ ಮಾಡಲು ಸಾಧ್ಯ. ಆದರೆ ವೋಟಿಂಗ್ ಕಾರ್ಡ್ ಅಡ್ರೆಸ್‌ನಲ್ಲಿ ಒಂದೇ ರೂಮ್ ಸಂಖ್ಯೆಯಲ್ಲಿ 8-10 ವಿದ್ಯಾರ್ಥಿಗಳ ಹೆಸರಿದೆ. ಇದು ಅಕ್ರಮ ಅಲ್ಲದೇ ಇನ್ನೇನು?
  • ಸಾವಿರಾರು ವಿದ್ಯಾರ್ಥಿಗಳಿಗೆ ಒಬ್ಬನೇ ಗಾರ್ಡಿಯನ್: ಸಾವಿರಾರು ವಿದ್ಯಾರ್ಥಿಗಳಿಗೆ ಒಬ್ಬನೇ ವ್ಯಕ್ತಿ ಗಾರ್ಡಿಯನ್ ಆಗಿರುವುದು ಅಸಾಧ್ಯದ ಮಾತು. ಇದು ಮತದಾರರ ಪಟ್ಟಿಯಲ್ಲಿ ವ್ಯವಸ್ಥಿತವಾಗಿ ನುಸುಳಿರುವ ವಂಚನೆಯ ಜಾಲ ಎಂದು ಅವರು ಬಣ್ಣಿಸಿದ್ದಾರೆ.
  • ಶಿಕ್ಷಣ ಸಂಸ್ಥೆಗಳ ದುರ್ಬಳಕೆ: ಕಾಲೇಜು ಪ್ರಾಂಶುಪಾಲರ ಮೂಲಕ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. “ಮತ ಹಾಕದಿದ್ದರೆ ಫೇಲ್ ಮಾಡುತ್ತೇವೆ” ಎಂಬ ಬೆದರಿಕೆ ಹಾಕಲಾಗುತ್ತಿದೆ ಎಂಬ ಗಂಭೀರ ಆರೋಪವು ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆಯನ್ನೇ ಪ್ರಶ್ನಿಸುವಂತಿದೆ.

ಹದ್ಲಿ ಅವರ ಮಾಹಿತಿ ಪ್ರಕಾರ, ಈಗಾಗಲೇ ಆಯೋಗಕ್ಕೆ ದೂರು ನೀಡಿದ ಪರಿಣಾಮ ಕೇವಲ 180 ಜನರನ್ನ ಕೈಬಿಡಲಾಗಿದೆ. ಆದರೆ ಇನ್ನೂ ಸುಮಾರು 4000-5000ದಷ್ಟು ಡಬಲ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳಿದ್ದಾರೆ ಎಂಬುದು ಆತಂಕಕಾರಿ ಸಂಗತಿ.

ಪ್ರಜಾಪ್ರಭುತ್ವದ ಕಗ್ಗೊಲೆಯೋ ಅಥವಾ ಹಕ್ಕಿನ ರಕ್ಷಣೆಯೋ?

ಈ ಇಡೀ ವಿವಾದದಲ್ಲಿ ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ. ಶಿಕ್ಷಣ ಪಡೆಯಲು ಬಂದ ಯುವಜನತೆಯನ್ನು ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ. ಒಂದು ವೇಳೆ ವಿದ್ಯಾರ್ಥಿಗಳು ಎರಡು ಕಡೆ ಮತದಾನದ ಹಕ್ಕು ಹೊಂದಿದ್ದರೆ ಅದು ಪ್ರಜಾಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ಅಪರಾಧ. ಆದರೆ, ಅವರನ್ನು ರಾಜಕೀಯ ಲಾಭಕ್ಕಾಗಿ ಬಳಸುವುದು ಅದಕ್ಕಿಂತ ದೊಡ್ಡ ಅಪರಾಧ.

ಬಿಜೆಪಿಯು ತನ್ನ ಶಿಕ್ಷಣ ಸಂಸ್ಥೆಗಳ ಮೂಲಕ ಮತಗಳನ್ನು ಕ್ರೋಢೀಕರಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಸತ್ಯಾಂಶವಿದ್ದರೆ, ಅದು ಚುನಾವಣಾ ಆಯೋಗದ ಮತ್ತು ಜಿಲ್ಲಾಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಮತದಾರರ ಪಟ್ಟಿ ತಯಾರಿಸುವಾಗ ಇಂತಹ ಲೋಪದೋಷಗಳು ಅಧಿಕಾರಿಗಳ ಕಣ್ಣಿಗೆ ಏಕೆ ಬಿದ್ದಿಲ್ಲ? ಒಂದೇ ರೂಮ್‌ನಲ್ಲಿ ಹತ್ತಾರು ಮತದಾರರಿದ್ದಾಗ ಅಧಿಕಾರಿಗಳು ಮೌನ ವಹಿಸಿದ್ದೇಕೆ?

ಇದನ್ನೂ ಓದಿ: Bagalkot By-Election: ಸೋಮಣ್ಣ ಕೆಲಸವಿಲ್ಲದ ಮಂತ್ರಿ, ನಮ್ಮ ಹೈಕಮಾಂಡ್ ಅಲ್ಲ- ಸಿದ್ದರಾಮಯ್ಯ ವಾಗ್ದಾಳಿ

ಚುನಾವಣಾ ಆಯೋಗದ ಮೌನ ಅಪಾಯಕಾರಿ

ಈ ವಿವಾದದ ನಡುವೆ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗವು ಮೌನವಾಗಿರುವುದು ಅಕ್ರಮಗಳಿಗೆ ದಾರಿದೀಪವಾಗಬಾರದು. ಕೇವಲ 180 ಮತದಾರರನ್ನ ಕೈಬಿಟ್ಟು ಕೈತೊಳೆದುಕೊಂಡರೆ ಸಾಲದು. ನಾಗರಾಜ್ ಹದ್ಲಿ ಅವರು ಹೇಳುವಂತೆ 5000 ಅಕ್ರಮ ಮತಗಳಿದ್ದರೆ, ಅದು ಇಡೀ ಚುನಾವಣೆಯ ಫಲಿತಾಂಶವನ್ನೇ ಬುಡಮೇಲು ಮಾಡಬಲ್ಲದು. ಅಭ್ಯರ್ಥಿಗಳ ಗೆಲುವಿನ ಅಂತರ ಸಾವಿರಗಳಲ್ಲಿ ಇರುವಾಗ, ಇಂತಹ ‘ನಕಲಿ’ ಮತಗಳು ಪ್ರಜಾಪ್ರಭುತ್ವದ ಆಶಯವನ್ನೇ ಮಣ್ಣುಪಾಲು ಮಾಡುತ್ತವೆ.

ಬಾಗಲಕೋಟೆಯ ನಾಗರಿಕರು ಇಂದು ಜಾಗೃತರಾಗಿದ್ದಾರೆ. “ಈ ಅಕ್ರಮಕ್ಕೆ ಈ ಬಾರಿ ಬ್ರೇಕ್ ಹಾಕೇ ಹಾಕ್ತೀವಿ” ಎಂಬ ನಾಗರಾಜ್ ಹದ್ಲಿ ಅವರ ಮಾತುಗಳು ಕೇವಲ ಕಾಂಗ್ರೆಸ್‌ನ ದನಿಯಲ್ಲ, ಅದು ನ್ಯಾಯಸಮ್ಮತ ಚುನಾವಣೆಯನ್ನು ಬಯಸುವ ಪ್ರತಿಯೊಬ್ಬ ಮತದಾರನ ಆಶಯವಾಗಿದೆ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಈ ವಿದ್ಯಾರ್ಥಿ ಮತದಾನದ ವಿವಾದವು ಇಂದು ರಾಜ್ಯಮಟ್ಟದ ಸುದ್ದಿಯಾಗಿದೆ. ಒಬ್ಬ ವ್ಯಕ್ತಿ, ಒಂದು ಮತ ಎಂಬ ಸಂವಿಧಾನದ ಮೂಲಭೂತ ತತ್ವಕ್ಕೆ ಇಲ್ಲಿ ಸವಾಲು ಎದುರಾಗಿದೆ. ರಾಜಕೀಯ ನಾಯಕರು ತಮ್ಮ ಅಸ್ತಿತ್ವಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಬಾರದು.

ಕೊನೆಯದಾಗಿ, ಬಾಗಲಕೋಟೆಯ ಜನತೆ ಈಗ ‘ಸತ್ಯ’ ಮತ್ತು ‘ಅಕ್ರಮ’ಗಳ ನಡುವಿನ ವ್ಯತ್ಯಾಸವನ್ನು ಗಮನಿಸುತ್ತಿದ್ದಾರೆ. ಧಮ್-ತಾಕತ್ತುಗಳ ಪ್ರದರ್ಶನವು ಕೇವಲ ಭಾಷಣಕ್ಕೆ ಸೀಮಿತವಾಗದೆ, ಚುನಾವಣಾ ಆಯೋಗವು ಈ ಕೂಡಲೇ ಮಧ್ಯಪ್ರವೇಶಿಸಿ ಪಾರದರ್ಶಕ ತನಿಖೆ ನಡೆಸಬೇಕಿದೆ. ಇಲ್ಲದಿದ್ದರೆ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪವಿತ್ರ ಪ್ರಕ್ರಿಯೆಯು ಕೇವಲ ‘ಅಕ್ರಮಗಳ ಕಾರ್ಖಾನೆ’ಯಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ.

ಬಾಗಲಕೋಟೆಯ ಮತದಾರ ಈಗ ನಿರ್ಣಾಯಕ ಹಂತದಲ್ಲಿದ್ದಾನೆ; ಯಾರ ಸವಾಲಿನಲ್ಲಿ ಪ್ರಾಮಾಣಿಕತೆ ಇದೆ ಮತ್ತು ಯಾರ ಆಕ್ರೋಶದಲ್ಲಿ ಅಕ್ರಮದ ಭಯವಿದೆ ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ. ಬಾಗಲಕೋಟೆಯ ಈ ‘ಮತ-ಯುದ್ಧ’ದ ಅಂತ್ಯ ಏನಾಗಲಿದೆ ಎಂಬುದು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments