Bagalkot BJP: ಕೋಟೆ ನಾಡಿನ ಉಪಚುನಾವಣೆಯ ಕಣ ಈಗ ಕೇವಲ ಮತಗಳ ಬೇಟೆಯಾಗಿ ಉಳಿದಿಲ್ಲ; ಬದಲಿಗೆ ಇದು ಪ್ರತಿಷ್ಠೆ, ದ್ವೇಷ ಮತ್ತು ರಾಜಕೀಯ ಅಸ್ತಿತ್ವದ ಹೋರಾಟವಾಗಿ ಮಾರ್ಪಟ್ಟಿದೆ. ನಾಮಪತ್ರ ಸಲ್ಲಿಕೆಯ ದಿನ ಕೇಸರಿ ಪಡೆ ಪ್ರದರ್ಶಿಸಿದ ಆ ದೈತ್ಯ ‘ಶಕ್ತಿಪ್ರದರ್ಶನ’ ಕೇವಲ ಕ್ಯಾಮೆರಾ ಕಣ್ಣುಗಳಿಗೆ ಸೀಮಿತವಾಗಿತ್ತೇ? ಹಿರಿಯ ನಾಯಕರು ಅನಿವಾರ್ಯವಾಗಿ ಬಂದು ಕೈಬೀಸಿ ಹೋದರೇ ವಿನಃ ಚರಂತಿಮಠರ ಗೆಲುವಿಗೆ ಮನಸ್ಸಿನಿಂದ ಕೈಜೋಡಿಸಿದ್ದಾರೆಯೇ? ಈ ಪ್ರಶ್ನೆಗಳು ಈಗ ಬಾಗಲಕೋಟೆಯ ಗಲ್ಲಿಗಲ್ಲಿಯಲ್ಲೂ ಸದ್ದು ಮಾಡುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಒರಟು ಸ್ವಭಾವ ಮತ್ತು ‘ನಾನೇ ಎಂಬ ಅಹಂ’ ಅವರನ್ನೇ ಇಂದು ರಾಜಕೀಯವಾಗಿ ಒಂಟಿಯಾಗಿಸುತ್ತಿದೆಯೇ ಎನ್ನುವ ಅನುಮಾನ ದಟ್ಟವಾಗಿದೆ.
ಮುನಿಸು ಮರೆಯದ ‘ಮಠ’: ಸೌಜನ್ಯಕ್ಕಿಲ್ಲದ ಜಾಗ
ರಾಜಕಾರಣದಲ್ಲಿ ಗೆಲ್ಲುವ ಕುದುರೆಗೆ ಇರಬೇಕಾದ ಮೊದಲ ಅರ್ಹತೆ ಸೌಜನ್ಯ ಮತ್ತು ಎಲ್ಲರನ್ನೂ ಅಪ್ಪಿಕೊಳ್ಳುವ ಗುಣ. ಆದರೆ, ವೀರಣ್ಣ ಚರಂತಿಮಠ ಅವರ ವಿಚಾರಕ್ಕೆ ಬಂದರೆ ಪರಿಸ್ಥಿತಿ ತದ್ವಿರುದ್ಧವಾಗಿದೆ. ಇತ್ತೀಚೆಗೆ ಮಾಧ್ಯಮದವರು ಪಿ.ಎಚ್. ಪೂಜಾರ್ ಪ್ರಚಾರಕ್ಕೆ ಬರುವ ಬಗ್ಗೆ ಕೇಳಿದ ಪ್ರಶ್ನೆಗೆ ಚರಂತಿಮಠ ನೀಡಿದ ಉತ್ತರ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿತ್ತು. “ಅವರು ಬಂದಿದ್ರಲ್ಲಾ ನೋಡಿಲ್ಲೇನು ನೀವು?” ಎಂಬ ಅವರ ಒರಟು ದಾಟಿಯ ಉತ್ತರದಲ್ಲಿ ಸೌಜನ್ಯಕ್ಕಿಂತ ಹೆಚ್ಚಾಗಿ ಅಸಹನೆ ಎದ್ದು ಕಾಣುತ್ತಿತ್ತು. “ಹೌದು, ನಮ್ಮ ಹಳೆಯ ಮುನಿಸು ಮರೆತು ನಾವೆಲ್ಲಾ ಒಂದಾಗಿದ್ದೇವೆ, ಅವರು ನನ್ನ ಜೊತೆಗಿರುತ್ತಾರೆ” ಎಂದು ಗೌರವಯುತವಾಗಿ ಹೇಳುವ ಕನಿಷ್ಠ ಸಜ್ಜನಿಕೆಯನ್ನೂ ಅವರು ತೋರಲಿಲ್ಲ. ಈ ‘ಬಾಡಿ ಲಾಂಗ್ವೇಜ್’ ಮತ್ತು ಒರಟು ಮಾತುಗಳೇ ಇಂದು ಜಿಲ್ಲಾ ಬಿಜೆಪಿಯ ಘಟಾನುಘಟಿ ನಾಯಕರು ಅವರಿಂದ ಅಂತರ ಕಾಯ್ದುಕೊಳ್ಳಲು ಮುಖ್ಯ ಕಾರಣ ಎನ್ನಲಾಗುತ್ತಿದೆ. ರಾಜಕೀಯದಲ್ಲಿ ಮಾತೇ ಮುತ್ತು, ಮಾತೇ ಮೃತ್ಯು ಎಂಬುದು ಮಠದವರಿಗೆ ಮರೆತುಹೋದಂತಿದೆ.
ಪೂಜಾರ್-ನಿರಾಣಿ: ಜೊತೆಗಿದ್ದೂ ದೂರವಾದವರು
ಕ್ಷೇತ್ರದ ಪ್ರಬಲ ನಾಯಕ ಪಿ.ಎಚ್. ಪೂಜಾರ್ ಅವರನ್ನು ಮೂಲೆಗುಂಪು ಮಾಡಿದ ಕೀರ್ತಿ ಚರಂತಿಮಠ ಅವರಿಗೆ ಸಲ್ಲುತ್ತದೆ ಎಂಬುದು ಪೂಜಾರ್ ಬೆಂಬಲಿಗರ ಬಹಿರಂಗ ಆರೋಪ. ಇದೇ ಬೇಸರದಿಂದ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದ ಪೂಜಾರ್, ಈಗ ಮತ್ತೆ ಬಿಜೆಪಿ ಸೇರಿ ಎಂಎಲ್ ಸಿ ಕೂಡ ಆಗಿದ್ದಾರೆ. ಈ ಬಾರಿ ಅವರು ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ಆದರೆ ಟಿಕೆಟ್ ಕೈತಪ್ಪಿ ಮತ್ತೆ ಚರಂತಿಮಠ ಪಾಲಾದಾಗ ಪೂಜಾರ್ ಅಭಿಮಾನಿಗಳಲ್ಲಿ ಹುಟ್ಟಿದ ಆಕ್ರೋಶ ಇನ್ನೂ ಆರಿಲ್ಲ. ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಪೂಜಾರ್ ಭಾಗಿಯಾಗಿದ್ದರೂ, ಪ್ರಚಾರ ಸಮಿತಿಯ ಪಟ್ಟಿಯಲ್ಲಿ ಅವರ ಹೆಸರನ್ನೇ ಕೈಬಿಟ್ಟಿರುವುದು ಉರಿಯುವ ಕೆಂಡಕ್ಕೆ ತುಪ್ಪ ಸುರಿದಂತಾಗಿದೆ. ಇದು ಕೇವಲ ತಾಂತ್ರಿಕ ಅಚಾತುರ್ಯವೋ ಅಥವಾ ಚರಂತಿಮಠ ಅವರ ಉದ್ದೇಶಪೂರ್ವಕ ‘ಅವಮಾನವೋ’ ಎಂಬ ಚರ್ಚೆ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಇನ್ನೊಂದೆಡೆ ಮಾಜಿ ಸಚಿವ ಮುರಗೇಶ್ ನಿರಾಣಿ ಅವರ ಕಥೆಯೂ ಭಿನ್ನವಾಗಿಲ್ಲ. ನಿರಾಣಿ ಮತ್ತು ಚರಂತಿಮಠ ನಡುವಿನ ಶೀತಲ ಸಮರ ಇಡೀ ಜಿಲ್ಲೆಗೆ ತಿಳಿದ ವಿಚಾರ. ಶಕ್ತಿಪ್ರದರ್ಶನದ ದಿನ ಮಾಧ್ಯಮದ ಮುಂದೆ ಮಾತನಾಡಿದ ನಿರಾಣಿ, “ಬಿಜೆಪಿ ಗೆಲ್ಲಬೇಕು” ಎಂದರೇ ಹೊರತು “ವೀರಣ್ಣ ಚರಂತಿಮಠ” ಎಂಬ ಹೆಸರು ಹೇಳಲು ಇಷ್ಟಪಡಲಿಲ್ಲ. ಅಭ್ಯರ್ಥಿಯ ಹೆಸರನ್ನೇ ಹೇಳಲು ಹಿಂಜರಿಯುವ ನಾಯಕರು ಪ್ರಚಾರದಲ್ಲಿ ಎಷ್ಟು ಪ್ರಾಮಾಣಿಕವಾಗಿ ತೊಡಗಿಕೊಳ್ಳಬಹುದು? ನಿರಾಣಿ ಮತ್ತು ಪೂಜಾರ್ ಇಬ್ಬರೂ ರಾಜ್ಯ ನಾಯಕರ ಒತ್ತಡಕ್ಕೆ ಮಣಿದು ಮೆರವಣಿಗೆಯಲ್ಲಿ ಮುಖ ತೋರಿಸಿ ಹೋದರೇ ಹೊರತು, ಮಠದವರ ಗೆಲುವಿಗಾಗಿ ಬೆವರು ಸುರಿಸಲು ಸಿದ್ಧರಿಲ್ಲ ಎಂಬುದು ಇದೀಗ ಕಟು ಸತ್ಯದಂತೆ ತೋರುತ್ತಿದೆ.
ಇದನ್ನೂ ಓದಿ: Bagalkot Medical college: ಬೂಟ್ ಪಾಲಿಶ್ ಚಳವಳಿಯಿಂದ ಶಂಕುಸ್ಥಾಪನೆಯವರೆಗೆ; ಜಿಲ್ಲಾ ನಾಯಕರ ಪಿತೂರಿ ಬಯಲು ಮಾಡಿದ ಬದ್ನೂರ್!
ಯತ್ನಾಳ್ ಸ್ನೇಹ ಮತ್ತು ಹಳಿ ತಪ್ಪಿದ ಸಂಬಂಧಗಳು
ಚರಂತಿಮಠ ಅವರ ಇತ್ತೀಚಿನ ನಡೆಗಳು ಪಕ್ಷದ ಅಧಿಕೃತ ನಾಯಕತ್ವಕ್ಕಿಂತಲೂ ಹೆಚ್ಚಾಗಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರೊಂದಿಗೆ ಹೆಚ್ಚು ಆಪ್ತವಾಗಿವೆ. ರಾಜ್ಯ ಬಿಜೆಪಿ ನಾಯಕರೊಂದಿಗೆ ಮೊದಲಿನಂತಿಲ್ಲದ ಸಂಬಂಧ ಮತ್ತು ಜಿಲ್ಲಾ ನಾಯಕರೊಂದಿಗಿನ ಹಳಸಿದ ಒಡನಾಟ ಚರಂತಿಮಠರಿಗೆ ಮುಳುವಾಗುವ ಲಕ್ಷಣಗಳಿವೆ. ಬಿ.ವೈ. ವಿಜಯೇಂದ್ರ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಅಂತಹ ನಾಯಕರು ಮೆರವಣಿಗೆಗೆ ಬಂದು ಹೋದ ನಂತರ, ಸ್ಥಳೀಯ ಪ್ರಭಾವಿ ನಾಯಕರು ಪ್ರಚಾರ ಕಣದಿಂದ ಸಂಪೂರ್ಣ ನಾಪತ್ತೆಯಾಗಿದ್ದಾರೆ. ಜಿಲ್ಲೆಯ ಮತ್ತೋರ್ವ ಹಿರಿಯ ನಾಯಕ, ಸದ್ಯ ಚಿತ್ರದುರ್ಗದ ಸಂಸದರಾಗಿರುವ ಗೋವಿಂದ್ ಕಾರಜೋಳ ಅವರಿಗೆ ಚುನಾವಣಾ ಉಸ್ತುವಾರಿ ನೀಡಲಾಗಿದ್ದರೂ, ಅವರ ಪ್ರಚಾರ ಸಭೆಗಳಿಗೆ ಜನರೇ ಸೇರುತ್ತಿಲ್ಲ. ಕಾರಜೋಳ ಅವರಿಗೆ ಕ್ಷೇತ್ರದಲ್ಲಿ ಮೊದಲಿನಂತಹ ಹಿಡಿತವಿಲ್ಲದಿರುವುದು ಒಂದು ಕಡೆಯಾದರೆ, ಅಭ್ಯರ್ಥಿಯ ಮೇಲಿರುವ ಅತೀವ ಅಸಮಾಧಾನ ಪ್ರಚಾರದ ಮೇಲೆ ತಣ್ಣೀರು ಎರಚುತ್ತಿದೆ.
ಅಪ್ರೋಚ್ ಇಲ್ಲದ ಅಭ್ಯರ್ಥಿ, ಏಕಾಂಗಿ ಹೋರಾಟ
ಡಾ. ದೇವರಾಜ್ ಪಾಟೀಲ್ ಅಂತಹ ಬೆರಳೆಣಿಕೆಯಷ್ಟು ಮುಖಂಡರನ್ನು ಹೊರತುಪಡಿಸಿದರೆ, ಬಿಜೆಪಿಯ ಸಕ್ರಿಯ ಕಾರ್ಯಕರ್ತರು ಇಂದಿಗೂ ಮನೆಯಲ್ಲೇ ಉಳಿದಿದ್ದಾರೆ. ಇದಕ್ಕೆ ಪ್ರಮುಖ ಕಾರಣ “ಅಭ್ಯರ್ಥಿಯ ಅಪ್ರೋಚ್ ಇಲ್ಲದಿರುವುದು”. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿರುವ ಚರಂತಿಮಠ, ನಾಯಕರನ್ನು ಮತ್ತು ಕಾರ್ಯಕರ್ತರನ್ನು ಭೇಟಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡುತ್ತಿಲ್ಲ. ತಮ್ಮದೇ ಆದ ‘ಐಲೆಂಡ್’ನಲ್ಲಿ ಬದುಕುತ್ತಿರುವ ಅವರು, “ನಾನೊಬ್ಬನೇ ಸಾಕು” ಎಂಬ ಅಹಂನಲ್ಲಿ ತೇಲುತ್ತಿದ್ದಾರೆ. ಈ “ಏಕಚಕ್ರಾಧಿಪತಿ” ವರ್ತನೆಯು ನಿಷ್ಠಾವಂತ ಕೇಸರಿ ಕಾರ್ಯಕರ್ತರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ. ಚುನಾವಣೆಯ ಸಮಯದಲ್ಲಿ ಮನೆಮನೆಗೆ ಹೋಗಿ ಮತ ಕೇಳುವ ಮುನ್ನ, ಸ್ವಪಕ್ಷದವರ ಮನ ಗೆಲ್ಲುವಲ್ಲಿ ಚರಂತಿಮಠ ವಿಫಲರಾಗಿದ್ದಾರೆ.
ಭಯದ ಭಕ್ತಿಯೇ? ಅಥವಾ ಮೌನ ಸಮ್ಮತಿಯೇ?
ರಾಜಕೀಯದಲ್ಲಿ ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಮನುಷ್ಯನ ಮಾತು ಮತ್ತು ವರ್ತನೆ ಇತಿಹಾಸದಲ್ಲಿ ಉಳಿಯುತ್ತದೆ. ಚರಂತಿಮಠ ಅವರ ಒರಟು ಮಾತುಗಳು ಮತ್ತು ಸಂವೇದನಾಶೂನ್ಯ ನಡವಳಿಕೆ ಬಾಗಲಕೋಟೆ ಬಿಜೆಪಿಯಲ್ಲಿ ಅಳಿಸಲಾಗದ ಕಂದಕ ಸೃಷ್ಟಿಸಿದೆ. ಪ್ರಚಾರದಲ್ಲಿ ಇಂದು ಭಾಗಿಯಾಗುತ್ತಿರುವ ಕೆಲವರೂ ಕೂಡ ಚರಂತಿಮಠರ ಮೇಲಿರುವ ಗೌರವದಿಂದಲ್ಲ, ಬದಲಿಗೆ ಅವರ “ಮಠದ ಪ್ರಭಾವ” ಮತ್ತು “ಅಧಿಕಾರದ ಭಯ”ದಿಂದ ಮುಖ ತೋರಿಸುತ್ತಿದ್ದಾರೆ ಎಂಬುದು ಸಣ್ಣಧನಿಯಲ್ಲಿ ಕೇಳಿಬರುತ್ತಿರುವ ಮಾತು. ಈ ಭಯದ ಭಕ್ತಿ ಮತವಾಗಿ ಪರಿವರ್ತನೆಯಾಗುತ್ತದೆಯೇ ಎಂಬುದು ಈಗಿರುವ ದೊಡ್ಡ ಯಕ್ಷಪ್ರಶ್ನೆ.
ಇದನ್ನೂ ಓದಿ: Bagalkot: ಮಾಜಿ ಶಾಸಕನ ಅಬ್ಬರಕ್ಕೆ ಸೈಲೆಂಟ್ ಆದರೇ ಎಸ್ಪಿ? ‘ಧಮ್ಮು ತಾಕತ್’ ಮಾತಿಗೆ ಪೊಲೀಸರು ಕಕ್ಕಾಬಿಕ್ಕಿ!
ಫಲಿತಾಂಶ ಯಾರ ಪರ?
ಶಕ್ತಿಪ್ರದರ್ಶನದ ದಿನದ ಆ ದೈತ್ಯ ಮೆರವಣಿಗೆ ಕೇವಲ ಒಂದು “ಫೋಟೋ ಆಪ್” (Photo Op) ಮಾತ್ರವಾಗಿತ್ತು ಎಂಬುದು ಈಗ ಹಗಲಿನಷ್ಟೇ ಸತ್ಯ. ರಾಜ್ಯ ನಾಯಕರು ಹೋದ ನಂತರ ಕ್ಷೇತ್ರದಲ್ಲಿ ಉಳಿದಿರುವುದು ಕೇವಲ ಚರಂತಿಮಠ ಮತ್ತು ಅವರ ಬೆರಳೆಣಿಕೆಯ ಬೆಂಬಲಿಗರು ಮಾತ್ರ. ಪ್ರಬಲ ಲಿಂಗಾಯತ ನಾಯಕರು ಒಬ್ಬೊಬ್ಬರಾಗಿ ಪ್ರಚಾರದಿಂದ ದೂರ ಉಳಿಯುತ್ತಿರುವುದು ಚುನಾವಣಾ ಫಲಿತಾಂಶದ ಮೇಲೆ ಭೀಕರ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೊನೆಯದಾಗಿ ಕೇಳಿ ಬರುತ್ತಿರುವ ಪ್ರಶ್ನೆಯೊಂದೇ: ಬಾಗಲಕೋಟೆಯ ಮತದಾರ ಚರಂತಿಮಠರ ಈ ಅಹಂಕಾರ ಮತ್ತು ಒರಟುತನವನ್ನು ಸಹಿಸಿಕೊಳ್ಳುತ್ತಾನಾ? ಅಥವಾ ನಾಯಕರು ದೂರ ಸರಿದಂತೆ ಮತದಾರನೂ ದೂರ ಸರಿಯಲಿದ್ದಾನಾ? ಶಕ್ತಿಪ್ರದರ್ಶನ ಮುಗಿದಿದೆ, ಈಗ ನಡೆಯುತ್ತಿರುವುದು ಅಸಲಿ ಆಟ. ಅಲ್ಲಿ ವೀರೇಂದ್ರ ಚರಂತಿಮಠ ಮಾತ್ರ ಸದ್ಯಕ್ಕೆ ಒಬ್ಬಂಟಿಯಾದಂತೆ ಕಾಣುತ್ತಿದ್ದಾರೆ. ಈ “ಒಬ್ಬಂಟಿ ಪಯಣ” ಗೆಲುವಿನ ದಡ ಮುಟ್ಟಿಸುತ್ತದೆಯೇ ಅಥವಾ ರಾಜಕೀಯ ಅಸ್ತಮಯಕ್ಕೆ ನಾಂದಿ ಹಾಡಲಿದೆಯೇ ಎಂಬುದು ಕಾದು ನೋಡಬೇಕಿದೆ.

