ಬೆಂಗಳೂರು (Bengaluru): ಸಿಲಿಕಾನ್ ಸಿಟಿಯ ಮಂಜುನಾಥನಗರದಲ್ಲಿ ನಡೆದಿದ್ದ ಭೀಕರ ಹತ್ಯೆ ಪ್ರಕರಣವೊಂದು ಈಗ ಸ್ಯಾಂಡಲ್ವುಡ್ ಅಂಗಳದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಫೆಬ್ರವರಿ 18ರಂದು ನಡೆದಿದ್ದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಗುಂಟೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಕನ್ನಡ ಚಿತ್ರರಂಗದ ಸಹನಟಿ ಬಿಂದು ಅಲಿಯಾಸ್ ಊರ್ಮಿಳಾ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತ ಮೋಹನ್ ರಾವ್ (40) ಅವರ ಸಾವಿನ ಸುತ್ತ ಅಡಗಿದ್ದ ಮರ್ಡರ್ ಮಿಸ್ಟರಿ ಈಗ ಪೊಲೀಸ್ ವಿಚಾರಣೆಯಲ್ಲಿ ಬಯಲಾಗಿದೆ.
ವಿಂಗ್ ರಿಲೇಷನ್ಶಿಪ್ ಮತ್ತು ಕೌಟುಂಬಿಕ ಹಿನ್ನೆಲೆ
ಮೃತ ಮೋಹನ್ ರಾವ್ ಸಣ್ಣ ಪ್ರಮಾಣದ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅವರು ತಮ್ಮ ಪತ್ನಿಯನ್ನು ಬಿಟ್ಟು ದೂರವಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸಿನಿಮಾ ಮತ್ತು ಕಿರುತೆರೆ ನಟಿ ಬಿಂದುವಿನ ಪರಿಚಯವಾಗಿತ್ತು. ಬಿಂದು ಕೂಡ ತನ್ನ ಪತಿಯಿಂದ ದೂರವಾಗಿ ಒಂಟಿಯಾಗಿ ವಾಸವಿದ್ದಳು ಎನ್ನಲಾಗಿದೆ. ಕಳೆದ ಕೆಲವು ಸಮಯದಿಂದ ಮೋಹನ್ ರಾವ್ ಮತ್ತು ಬಿಂದು ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ಆದರೆ, ಈ ಸಂಬಂಧದ ನಡುವೆ ಬಿಂದು ಬೇರೆ ಯುವಕರೊಂದಿಗೂ ಸ್ನೇಹ ಬೆಳೆಸಿದ್ದು ಗಲಾಟೆಗೆ ನಾಂದಿ ಹಾಡಿತ್ತು.
ಅಂದು ರಾತ್ರಿ ನಡೆದಿದ್ದೇನು?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಫೆಬ್ರವರಿ 18ರಂದು ಬೆಂಗಳೂರಿನ (Bengaluru) ಬಿಂದು ಮನೆಯಲ್ಲಿ ಒಂದು ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಮೋಹನ್ ರಾವ್ ಜೊತೆಗೆ ಬಿಂದುವಿನ ಹೊಸ ಸ್ನೇಹಿತರಾದ ವಿನಯ್ ಹಾಗೂ ಮತ್ತೊಬ್ಬ ಯುವಕ ಪಾಲ್ಗೊಂಡಿದ್ದರು. ಪಾರ್ಟಿಯ ವೇಳೆ ಮದ್ಯದ ಅಮಲಿನಲ್ಲಿದ್ದ ಮೋಹನ್ ರಾವ್, ವಯಾಗ್ರಾ ಮಾತ್ರೆ ಸೇವಿಸಿ ಬಿಂದುವಿನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದರು ಎನ್ನಲಾಗಿದೆ. ಅಲ್ಲದೆ ಇತರ ಯುವಕರ ಮುಂದೆಯೇ ಬಿಂದುವಿನ ಬಟ್ಟೆ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ವೇಳೆ ಬಿಂದುವಿನ ರಕ್ಷಣೆಗೆ ಬಂದ ವಿನಯ್ ಮತ್ತು ಮೋಹನ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ವಿನಯ್, ಚಾಕುವಿನಿಂದ ಮೋಹನ್ಗೆ ಮನಬಂದಂತೆ ಇರಿದಿದ್ದಾನೆ. ಮೋಹನ್ ನೋವಿನಿಂದ ಕಿರುಚಾಡಲು ಶುರು ಮಾಡಿದಾಗ ಆತನ ಕೈಕಾಲುಗಳನ್ನು ಕಟ್ಟಿ ಹಾಕಲಾಗಿದೆ. ಅಷ್ಟಕ್ಕೇ ನಿಲ್ಲದ ಆರೋಪಿಗಳು, ಮೋಹನ್ ಅವರ ಬಾಯಿ ಮತ್ತು ಮೂಗಿಗೆ ಸೆಲ್ಲೋ ಟೇಪ್ ಸುತ್ತಿದ್ದಾರೆ. ಪರಿಣಾಮ ಉಸಿರುಗಟ್ಟಿ ಮೋಹನ್ ರಾವ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ: Darshan: ಜೈಲಿನಲ್ಲಿರುವ ದರ್ಶನ್ ಭವಿಷ್ಯ? ಕೋಡಿಶ್ರೀ ಅಚ್ಚರಿಯ ಹೇಳಿಕೆ ವೈರಲ್!
ಸಿನಿಮಾ ನಟಿಯ ರಂಗಿನಾಟಕ್ಕೆ ಪೊಲೀಸರ ಬ್ರೇಕ್
ಘಟನೆಯ ನಂತರ ಗಾಬರಿಗೊಂಡ ನಟಿ ಬಿಂದು ಹಾಗೂ ಆಕೆಯ ಸಂಗಡಿಗರು ಸ್ಥಳದಿಂದ ಪರಾರಿಯಾಗಿದ್ದರು. ಆದರೆ ಮೊಬೈಲ್ ಲೊಕೇಶನ್ ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಬಾಗಲಗುಂಟೆ ಪೊಲೀಸರು, ಕೊನೆಗೂ ಆರೋಪಿಗಳನ್ನು ಪತ್ತೆಹಚ್ಚಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ನಟಿ ಬಿಂದು ಕನ್ನಡದ ಖ್ಯಾತ ಚಿತ್ರಗಳಾದ ‘ಭಜರಂಗಿ’, ‘ಪೊಲೀಸ್ ಕ್ವಾರ್ಟರ್ಸ್’ ಹಾಗೂ ‘ಕಾಲಭೈರವ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕೆಲವು ಜನಪ್ರಿಯ ಧಾರಾವಾಹಿಗಳಲ್ಲೂ ನಟಿಸಿ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿದ್ದರು. ಕಲಾ ಲೋಕದಲ್ಲಿ ಉತ್ತಮ ಭವಿಷ್ಯ ಹೊಂದಿದ್ದ ನಟಿ ಈಗ ಕೊಲೆ ಪ್ರಕರಣದಂತಹ ಗಂಭೀರ ಆರೋಪ ಹೊತ್ತು ಜೈಲು ಪಾಲಾಗಿರುವುದು ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ.
ಸದ್ಯ ಪೊಲೀಸರು ಬಿಂದು ಮತ್ತು ಆಕೆಯ ಸಹಚರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹತ್ಯೆಯಲ್ಲಿ ನಟಿಯ ನೇರ ಪಾತ್ರ ಎಷ್ಟು? ಮತ್ತು ಈ ಕೃತ್ಯದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಸ್ಯಾಂಡಲ್ವುಡ್ನ ಸಹನಟಿಯೊಬ್ಬಳು ಇಂತಹ ಪ್ರಕರಣದಲ್ಲಿ ಭಾಗಿಯಾಗಿರುವುದು ಚಿತ್ರರಂಗಕ್ಕೆ ಕಪ್ಪು ಚುಕ್ಕೆಯಂತಾಗಿದೆ.
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






