ಬೆಂಗಳೂರಿನ ಪ್ರತಿಷ್ಠಿತ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ (Azim Premji University) ಈಗ ವಿವಾದದ ಕೇಂದ್ರಬಿಂದುವಾಗಿದೆ. ಕ್ಯಾಂಪಸ್ ಆವರಣದಲ್ಲಿ ದೇಶವಿರೋಧಿ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿ ಎಬಿವಿಪಿ (ABVP) ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದು, ವಿಷಯ ಈಗ ಕೇಂದ್ರ ಗೃಹ ಸಚಿವಾಲಯದ ಮೆಟ್ಟಿಲೇರಿದೆ.
ವಿವಾದದ ಕಿಡಿ ಹೊತ್ತಿಸಿದ್ದು ಯಾವುದು?
ವಿಶ್ವವಿದ್ಯಾಲಯದಲ್ಲಿ (Azim Premji University) ಸಕ್ರಿಯವಾಗಿರುವ ‘ಸ್ಪಾರ್ಕ್’ (SPARK) ಮತ್ತು ‘ಎಐಎಸ್ಎ’ (AISA) ಸಂಘಟನೆಗಳು ಫೆಬ್ರವರಿ 26 ರಿಂದ 28ರ ವರೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿವೆ. ಆದರೆ, ಈ ಕಾರ್ಯಕ್ರಮಗಳ ಹೆಸರಿನಲ್ಲಿ ಕಾಶ್ಮೀರ ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡಲಾಗುತ್ತಿದೆ ಮತ್ತು ಭಾರತೀಯ ಸೇನೆಯನ್ನು ಅವಮಾನಿಸುವ ಕೆಲಸ ನಡೆಯುತ್ತಿದೆ ಎಂಬುದು ಎಬಿವಿಪಿ ಸಂಘಟನೆಯ ಗಂಭೀರ ಆರೋಪ.
ಎಬಿವಿಪಿ ಮಾಡಿರುವ ಪ್ರಮುಖ ಆರೋಪಗಳಿವು:
- ಸೇನೆಯ ಅವಮಾನ: ಭಾರತೀಯ ಸೈನಿಕರನ್ನು ‘ಅತ್ಯಾಚಾರಿಗಳು’ ಮತ್ತು ‘ಹಿಂಸಾಚಾರಿಗಳು’ ಎಂದು ಬಿಂಬಿಸುವ ಪ್ರಯತ್ನ ಈ ಸಂಘಟನೆಗಳಿಂದ ನಡೆಯುತ್ತಿದೆ.
- ಪ್ರತ್ಯೇಕತಾವಾದದ ಪ್ರೋತ್ಸಾಹ: ‘ಕಾಶ್ಮೀರ ಭಾರತದ ಭಾಗವಲ್ಲ, ಅದನ್ನು ಸ್ವತಂತ್ರಗೊಳಿಸಿ’ ಎನ್ನುವ ದೇಶವಿರೋಧಿ ಚಿಂತನೆಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತಲಾಗುತ್ತಿದೆ.
- ನಕ್ಸಲ್ ಬೆಂಬಲ: ಮಾವೋವಾದಿ ಮತ್ತು ನಕ್ಸಲ್ ಸಿದ್ಧಾಂತಗಳನ್ನು ಬೆಂಬಲಿಸುವ ಕಾರ್ಯಕ್ರಮಗಳ ಮೂಲಕ ಯುವಜನತೆಯನ್ನು ದಾರಿ ತಪ್ಪಿಸಲಾಗುತ್ತಿದೆ.
- ಕಾರ್ಯಾಚರಣೆಗಳ ಟೀಕೆ: ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ’ದಂತಹ ಕಾರ್ಯಾಚರಣೆಗಳನ್ನು ಖಂಡಿಸುವ ಮೂಲಕ ದೇಶದ ಸಮಗ್ರತೆಗೆ ಧಕ್ಕೆ ತರಲಾಗುತ್ತಿದೆ.
ಇದನ್ನೂ ಓದಿ: Bagalkot: ಕೇಸರಿ ಪಡೆಯ ‘ಡೆಡ್ಲೈನ್’ಗೆ ಡೋಂಟ್ ಕೇರ್! ಎಸ್ಪಿ ಸಿದ್ದಾರ್ಥ ಗೋಯಲ್ ಖಡಕ್ ‘ದಂಡಯಾತ್ರೆ’
ಕ್ಯಾಂಪಸ್ ಎದುರು ನಡೆದಿದ್ದೇನು?
ಮಂಗಳವಾರ ರಾತ್ರಿ ಸರ್ಜಾಪುರದಲ್ಲಿರುವ Azim Premji University ಕ್ಯಾಂಪಸ್ ಎದುರು ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ವಿವಿಯ ನಾಮಫಲಕಕ್ಕೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ 21 ಮಂದಿ ಪ್ರತಿಭಟನಾಕಾರರನ್ನು ಬಂಧಿಸಿ, ಎಫ್ಐಆರ್ ದಾಖಲಿಸಿದ ನಂತರ ಬಿಡುಗಡೆ ಮಾಡಿದ್ದಾರೆ.
“ವಿದ್ಯಾಸಂಸ್ಥೆಗಳು ಜ್ಞಾನದ ಕೇಂದ್ರವಾಗಬೇಕೇ ಹೊರತು ದೇಶವಿರೋಧಿ ಚಟುವಟಿಕೆಗಳ ತಾಣವಾಗಬಾರದು. ಸೈನಿಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಸಂಘಟನೆಗಳನ್ನು ತಕ್ಷಣ ನಿಷೇಧಿಸಬೇಕು.”
-ಮಣಿಕಂಠ ಕಳಸ, ಎಬಿವಿಪಿ ಮುಖಂಡ
ಅಮಿತ್ ಶಾಗೆ ಪತ್ರ: ವಿವಿ ಮಾನ್ಯತೆ ರದ್ದತಿಗೆ ಆಗ್ರಹ
ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಬಿವಿಪಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದೆ. ದೇಶದ ಐಕ್ಯತೆಗೆ ಧಕ್ಕೆ ತರುವ ಇಂತಹ ಚಟುವಟಿಕೆಗಳಿಗೆ ವೇದಿಕೆ ಒದಗಿಸುತ್ತಿರುವ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ (Azim Premji University) ಮಾನ್ಯತೆಯನ್ನು ರದ್ದುಗೊಳಿಸಬೇಕು ಮತ್ತು ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಸದ್ಯ ಕ್ಯಾಂಪಸ್ನಲ್ಲಿ ಬಿಗುವಿನ ವಾತಾವರಣವಿದ್ದು, ಆಯೋಜಿತ ಕಾರ್ಯಕ್ರಮಗಳಿಗೆ ವಿವಿ ಆಡಳಿತ ಮಂಡಳಿ ಅವಕಾಶ ನೀಡುತ್ತದೆಯೇ ಅಥವಾ ಎಬಿವಿಪಿ ಆಗ್ರಹದಂತೆ ಕ್ರಮ ಕೈಗೊಳ್ಳುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

