Homeಸುದ್ದಿಗಳುBagalkot: "ಸೋತಾಗ ಅಪ್ಪ ನೆನಪಾದ್ನಾ?" ಚರಂತಿಮಠ ವಿರುದ್ಧ ಸಿದ್ದಲಿಂಗ ಶ್ರೀ ಕಿಡಿ; ಶೋಭಾಯಾತ್ರೆಗೆ ಕಲ್ಲು...

Bagalkot: “ಸೋತಾಗ ಅಪ್ಪ ನೆನಪಾದ್ನಾ?” ಚರಂತಿಮಠ ವಿರುದ್ಧ ಸಿದ್ದಲಿಂಗ ಶ್ರೀ ಕಿಡಿ; ಶೋಭಾಯಾತ್ರೆಗೆ ಕಲ್ಲು ತುಂಬಿದ ಟ್ರ್ಯಾಕ್ಟರ್ ತನ್ನಿ ಎಂದಿದ್ದೇಕೆ?

ಬಾಗಲಕೋಟೆ (Bagalkot): ಇತ್ತೀಚೆಗೆ ಬಾಗಲಕೋಟೆಯಲ್ಲಿ ನಡೆದ ಕೋಮು ಸಂಘರ್ಷದ ಕಿಡಿ ಇನ್ನೂ ಆರಿಲ್ಲ. ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವಾಗಲೇ ಶಿವಸೇನಾ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಂದೋಲ ಅವರು ನಡೆಸಿದ ಪತ್ರಿಕಾಗೋಷ್ಠಿ ಈಗ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ದ್ವಂದ್ವ ನಿಲುವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸ್ವಾಮೀಜಿಯವರು, ಹಿಂದೂ ಕಾರ್ಯಕರ್ತರಿಗೆ ನೀಡಿದ ಪ್ರಚೋದನಾಕಾರಿ ಕರೆ ಈಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಚರಂತಿಮಠ ವಿರುದ್ಧ ವಾಗ್ದಾಳಿ:

“ಗೆದ್ದಾಗ ಶಾಂತಿಧೂತರು, ಸೋತಾಗ ಶತ್ರುಗಳೇ?”

ಪತ್ರಿಕಾಗೋಷ್ಠಿಯ ಆರಂಭದಲ್ಲೇ ಬಾಗಲಕೋಟೆಯ (Bagalkot) ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ವಿರುದ್ಧ ಹರಿಹಾಯ್ದ ಸಿದ್ದಲಿಂಗ ಸ್ವಾಮೀಜಿ, ಚರಂತಿಮಠ ಅವರ ಹಳೆಯ ವಿಡಿಯೋ ಒಂದನ್ನು ಪ್ರದರ್ಶಿಸಿ ಸಾರ್ವಜನಿಕವಾಗಿ ಮುಖಭಂಗ ಮಾಡಿದರು. ಆ ವಿಡಿಯೋದಲ್ಲಿ ಚರಂತಿಮಠ ಅವರು “ಮುಸ್ಲಿಮರು ಅತ್ಯಂತ ಶಾಂತಪ್ರಿಯರು”  ಎನ್ನುವಂತಹ ಮಾತುಗಳನ್ನಾಡಿದ್ದಾರೆ. ಇದನ್ನು ಉಲ್ಲೇಖಿಸಿದ ಸ್ವಾಮೀಜಿ, “ನೀವು ಅಧಿಕಾರದಲ್ಲಿದ್ದಾಗ, ಶಾಸಕರಾಗಿ ಗೆದ್ದಾಗ ಮುಸ್ಲಿಮರು ನಿಮಗೆ ಶಾಂತಿಧೂತರಾಗಿ ಕಾಣುತ್ತಿದ್ದರು. ಆದರೆ ಈಗ ಚುನಾವಣೆ ಸೋತ ಮೇಲೆ ನಿಮಗೆ ಅವರ ಅಪ್ಪ ನೆನಪಾದ್ನಾ?” ಎಂದು ಕಟುವಾಗಿ ಪ್ರಶ್ನಿಸಿದರು.

ಇತ್ತೀಚೆಗೆ ಪೊಲೀಸರ ಮುಂದೆ ನೂರಾರು ಯುವಕರೊಟ್ಟಿಗೆ ನಿಂತು “ಈ ರಸ್ತೆ ಏನು ಅವರ ಅಪ್ಪಂದಾ?” ಎಂದು ಚರಂತಿಮಠ ಕೇಳಿದ್ದನ್ನು ವ್ಯಂಗ್ಯವಾಡಿದ ಸ್ವಾಮೀಜಿ, “ಅಧಿಕಾರ ಹೋದ ಮೇಲೆ ಹಿಂದೂತ್ವದ ನೆನಪಾಗುವ ಇಂತಹ ರಾಜಕಾರಣಿಗಳಿಂದಲೇ ಸಮಾಜಕ್ಕೆ ಕಂಟಕ” ಎಂದು ಗುಡುಗಿದರು. ರಾಜಕೀಯ ಲಾಭಕ್ಕಾಗಿ ಒಮ್ಮೆ ಮುಸ್ಲಿಮರನ್ನು ಓಲೈಸುವುದು, ಮತ್ತೊಮ್ಮೆ ಅವರ ವಿರುದ್ಧ ಮಾತನಾಡುವುದು ಚರಂತಿಮಠ ಅವರ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: Bagalkot: ಮಾಜಿ ಶಾಸಕನ ಅಬ್ಬರಕ್ಕೆ ಸೈಲೆಂಟ್ ಆದರೇ ಎಸ್‌ಪಿ? ‘ಧಮ್ಮು ತಾಕತ್‌’ ಮಾತಿಗೆ ಪೊಲೀಸರು ಕಕ್ಕಾಬಿಕ್ಕಿ!

ಪ್ರಚೋದನಕಾರಿ ಕರೆ:

“ಕಲ್ಲು ತುಂಬಿದ ಟ್ರಕ್ ತನ್ನಿ”

ಈ ಪತ್ರಿಕಾಗೋಷ್ಠಿಯ ಅತ್ಯಂತ ಸ್ಪೋಟಕ ಅಂಶವೆಂದರೆ ಸ್ವಾಮೀಜಿಯವರು ಹಿಂದೂ ಕಾರ್ಯಕರ್ತರಿಗೆ ನೀಡಿದ ಪ್ರಚೋದನಕಾರಿ ಕರೆ. “ಹಿಂದೂಗಳು ಇನ್ಮುಂದೆ ಶೋಭಾಯಾತ್ರೆ ಅಥವಾ ಯಾವುದೇ ಮೆರವಣಿಗೆ ಮಾಡುವಾಗ ಬರಿಗೈಲಿ ಹೋಗಬಾರದು. ‌ಟ್ರಕ್‌ನಲ್ಲಿ ಕಲ್ಲುಗಳನ್ನು ತುಂಬಿಕೊಂಡು ಹೋಗಬೇಕು,” ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದರು. ಮುಸ್ಲಿಮರು ಮಸೀದಿಯ ಒಳಗಿನಿಂದ ಕಲ್ಲು ಎಸೆಯುತ್ತಾರೆ ಎಂದರೆ, ನಾವೂ ಕೂಡ ಸಿದ್ಧವಾಗಿರಬೇಕು ಎಂಬ ಧಾಟಿಯಲ್ಲಿ ಅವರು ಮಾತನಾಡಿದ್ದು, ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಇದು ಕೇವಲ ರಕ್ಷಣೆಯಲ್ಲ, ಎದುರಾಳಿಗಳಿಗೆ ಪಾಠ ಕಲಿಸುವ ದಾರಿ ಎಂದು ಅವರು ಪ್ರತಿಪಾದಿಸಿದರು.

ಶಿವಸೇನಾ ಸಂಘಟನೆಯಿಂದ ಪತ್ರಿಕಾಗೋಷ್ಠಿ

ಬಿಜೆಪಿ ಅಸಮರ್ಥತೆ:

“ತುಕ್ಕು ಹಿಡಿಯುತ್ತಿರುವ ಬಸವಣ್ಣ-ಶಿವಾಜಿ ಮೂರ್ತಿಗಳು”

ಬಾಗಲಕೋಟೆಯಲ್ಲಿ (Bagalkot) ಸಿದ್ಧವಾಗಿರುವ ಬಸವಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳ ಪ್ರತಿಷ್ಠಾಪನೆ ವಿಳಂಬವಾಗುತ್ತಿರುವ ಬಗ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. “ಮೂರ್ತಿಗಳು ಸಿದ್ಧವಾಗಿ ಎಷ್ಟೋ ದಿನಗಳಾಗಿವೆ. ಅವುಗಳನ್ನು ಪ್ರತಿಷ್ಠಾಪನೆ ಮಾಡಲಾಗದಷ್ಟು ಅಸಮರ್ಥರು ಇಲ್ಲಿನ ಬಿಜೆಪಿಯಲ್ಲಿದ್ದಾರೆ. ಆ ಮೂರ್ತಿಗಳು ಈಗ ಮಳೆ-ಗಾಳಿಗೆ ಸಿಲುಕಿ ತುಕ್ಕು ಹಿಡಿಯುತ್ತಿವೆ. ಇವರನ್ನು ನಾವು ಹಿಂದೂ ನಾಯಕರು ಎಂದು ನಂಬಬೇಕೆ?” ಎಂದು ಪ್ರಶ್ನಿಸಿದರು. ಧಾರ್ಮಿಕ ಮತ್ತು ರಾಷ್ಟ್ರೀಯ ನಾಯಕರ ಬಗ್ಗೆ ಬಿಜೆಪಿಗೆ ನಿಜವಾದ ಭಕ್ತಿ ಇದ್ದರೆ ತಕ್ಷಣ ಮೂರ್ತಿ ಪ್ರತಿಷ್ಠಾಪನೆ ಮಾಡಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: Bagalkot: ಕೇಸರಿ ಪಡೆಯ ‘ಡೆಡ್‌ಲೈನ್’ಗೆ ಡೋಂಟ್‌ ಕೇರ್! ಎಸ್‌ಪಿ ಸಿದ್ದಾರ್ಥ ಗೋಯಲ್ ಖಡಕ್ ‘ದಂಡಯಾತ್ರೆ’

ತಾರತಮ್ಯದ ಆರೋಪ:

“ಮುತಾಲಿಕ್‌ಗೆ ಬ್ರೇಕ್, ಯತ್ನಾಳ್‌ಗೆ ವೆಲ್‌ಕಮ್?”

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ತಾರತಮ್ಯದ ಬಗ್ಗೆ ಮಾತನಾಡುತ್ತಾ, “ಹಿಂದೂ ಹೋರಾಟಗಾರರಾದ ಪ್ರಮೋದ್ ಮುತಾಲಿಕ್ ಮತ್ತು ಪುನೀತ್ ಕೆರೆಹಳ್ಳಿ ಅವರಿಗೆ ಜಿಲ್ಲೆ ಪ್ರವೇಶಿಸಲು ನಿಷೇಧ ಹೇರುತ್ತೀರಿ. ಆದರೆ, ರಾಜಕೀಯ ವ್ಯಕ್ತಿ (ಬಸನಗೌಡ ಪಾಟೀಲ್ ಯತ್ನಾಳ್) ಎಂಬ ಕಾರಣಕ್ಕೆ ಕೆಲವರಿಗೆ ಪ್ರವೇಶ ನೀಡುತ್ತೀರಿ. ಇದ್ಯಾವ ನ್ಯಾಯ? ಹೋರಾಟಗಾರರಿಗೊಂದು ಕಾನೂನು, ರಾಜಕಾರಣಿಗಳಿಗೊಂದು ಕಾನೂನೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಭಾವಿ ರಾಜಕಾರಣಿಗಳ ಎದುರು ಜಿಲ್ಲಾಡಳಿತ ಮಂಡಿಯೂರುತ್ತಿದೆ ಎಂಬುದು ಸ್ವಾಮೀಜಿಯವರ ನೇರ ಆರೋಪವಾಗಿತ್ತು.

ಪೊಲೀಸ್ ಇಲಾಖೆ ಹಾಗೂ ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ

ಗಲಭೆಯ ನಂತರದ ಪೊಲೀಸ್ ಕ್ರಮಗಳ ಬಗ್ಗೆ ಮಾತನಾಡಿದ ಅವರು, “ಮುಸ್ಲಿಮರು ಮಸೀದಿಯೊಳಗೆ ಕಲ್ಲು ಸಂಗ್ರಹಿಸಿ ಎಸೆದರೆ ಅವರ ಮೇಲೆ ಸಾಧಾರಣ ಎಫ್‌ಐಆರ್ ದಾಖಲಿಸುತ್ತೀರಿ. ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತದೆ. ಆನಂತರ ಸಚಿವ ಜಮೀರ್ ಅಹ್ಮದ್ ಅಂತಹವರು ಅವರ ಮನೆಗೆ ಹೋಗಿ ರೇಷನ್ ಕಿಟ್ ಕೊಟ್ಟು ಬರುತ್ತಾರೆ. ಆದರೆ, ಹಿಂದೂ ಕಾರ್ಯಕರ್ತರನ್ನು ಮಾತ್ರ ಅನ್ಯಾಯವಾಗಿ ಜೈಲಿಗೆ ತಳ್ಳುತ್ತೀರಿ, ಅವರ ಕುಟುಂಬಗಳನ್ನು ಬೀದಿಗೆ ತರುತ್ತೀರಿ,” ಎಂದು ದೂರಿದರು.

ಅಲ್ಲದೆ, “ಮಸೀದಿ ಮೇಲಿನ ಮೈಕ್ ಬೊಬ್ಬೆ ಇವತ್ತಿಗೂ ನಿಂತಿಲ್ಲ. ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೂ ಇದನ್ನು ಇಳಿಸಲು ಸಾಧ್ಯವಾಗಲಿಲ್ಲ. ನಮಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿ ಬೇಕು. ಮಸೀದಿ ಮೇಲಿನ ಮೈಕ್‌ಗಳನ್ನು ಕೂಡಲೇ ಬಂದ್ ಮಾಡಬೇಕು,” ಎಂದು ಆಗ್ರಹಿಸಿದರು.

ಇದನ್ನೂ ಓದಿ: Yatnal: ಉಚ್ಛಾಟಿತ ಲೀಡರ್‌ಗೆ ಜಿಲ್ಲಾ ನಾಯಕರೇ ಬಾಡಿಗಾರ್ಡ್ಸ್! ಬಾಗಲಕೋಟೆಯೇ ಬಂಡಾಯದ ಹೆಡ್ ಆಫೀಸ್?

ಬಾಗಲಕೋಟೆ ರಾಜಕೀಯಕ್ಕೆ ಹೊಸ ತಿರುವು

ಸಿದ್ದಲಿಂಗ ಸ್ವಾಮೀಜಿ ಅಂದೋಲ ಅವರ ಈ ಪತ್ರಿಕಾಗೋಷ್ಠಿಯು ಬಾಗಲಕೋಟೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಮುಖ್ಯವಾಗಿ ವೀರಣ್ಣ ಚರಂತಿಮಠ ಅವರ ಹಳೆಯ ವಿಡಿಯೋಗಳನ್ನು ಪ್ರದರ್ಶಿಸಿ ಅವರನ್ನು ಮುಜುಗರಕ್ಕೆ ಈಡುಮಾಡಿರುವುದು ಬಿಜೆಪಿಯೊಳಗೆ ದೊಡ್ಡ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಒಂದೆಡೆ ಪ್ರಚೋದನಕಾರಿ ಹೇಳಿಕೆಗಳು ಸಮಾಜದಲ್ಲಿ ಆತಂಕ ಮೂಡಿಸಿದರೆ, ಮತ್ತೊಂದೆಡೆ ಅಪ್ಪಟ ಹಿಂದೂತ್ವದ ಹೆಸರಲ್ಲಿ ನಡೆಯುತ್ತಿರುವ ರಾಜಕೀಯದ ಮುಖವಾಡವನ್ನು ಸ್ವಾಮೀಜಿ ಕಳಚಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಯಾವ ರೀತಿಯ ಪರಿಣಾಮ ಬೀರಲಿವೆ ಎಂಬುದನ್ನು ಕಾದು ನೋಡಬೇಕಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments