ಬೆಂಗಳೂರು: KSRTC ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮತ್ತೆ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಈ ಹಿಂದೆ ನಾಯಕ ಅನಂತ್ ಸುಬ್ಬರಾವ್ ಅವರ ನಿಧನದ ಕಾರಣಕ್ಕೆ ‘ಬೆಂಗಳೂರು ಚಲೋ’ ಚಳುವಳಿ ಮುಂದೂಡಲಾಗಿತ್ತು. ಆದರೆ ಇದೀಗ ಮತ್ತೆ ಚಳುವಳು ಮುನ್ನಲೆಗೆ ಬಂದಿದೆ. ರಾಜ್ಯಾದ್ಯಂತ ಫೆಬ್ರವರಿ 19 ಮತ್ತು 20 ರಂದು ಸಾರಿಗೆ ಸಂಚಾರ ಬಂದ್ ಆಗಲಿದೆಯಾ? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ..
ಪ್ರತಿಭಟನೆಯ ವೇಳಾಪಟ್ಟಿ ಹೀಗಿದೆ:
- ಫೆಬ್ರವರಿ 19 (ಬೆಂಗಳೂರು ಚಲೋ): ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು KSRTC ಸಾರಿಗೆ ನೌಕರರು ಅಂದು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಸಂಘದ ಮುಖಂಡರು ಮುಂದಿನ ಹೋರಾಟದ ಬಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.
- ಫೆಬ್ರವರಿ 20 (ಮುಷ್ಕರದ ಸಾಧ್ಯತೆ): ಜಂಟಿ ಕ್ರಿಯಾ ಸಮಿತಿಯ ನಿರ್ಧಾರದಂತೆ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಅಂದು ಕೆಲಸಕ್ಕೆ ಗೈರುಹಾಜರಾಗಿ ಪ್ರತಿಭಟನೆಗೆ ಬೆಂಬಲ ನೀಡುವ ಸಾಧ್ಯತೆಯಿದೆ.
KSRTC ನೌಕರರ ಪ್ರಮುಖ ಬೇಡಿಕೆಗಳೇನು?
ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಸರ್ಕಾರದ ಮುಂದೆ ಪ್ರಮುಖವಾಗಿ ನಾಲ್ಕು ಬೇಡಿಕೆಗಳನ್ನು ಇಟ್ಟಿದೆ:
1. ಬಾಕಿ ವೇತನ: ಕಳೆದ 38 ತಿಂಗಳಿನಿಂದ ಬರಬೇಕಿರುವ ವೇತನದ ಹಿಂಬಾಕಿ (Arrears) ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು.
2. ವೇತನ ಪರಿಷ್ಕರಣೆ: 2024ರ ಜನವರಿ 1ರಿಂದ ಅನ್ವಯವಾಗುವಂತೆ ಹೊಸ ವೇತನ ಶ್ರೇಣಿಯನ್ನು ಜಾರಿಗೊಳಿಸಬೇಕು.
3. ಸಮಾನ ವೇತನ: ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಿಗೆ ನೀಡುವಷ್ಟೇ ಸಮಾನ ವೇತನ ನೀಡಬೇಕು.
4. ಕಿರುಕುಳ ಮುಕ್ತಿ: ನಿಗಮಗಳಲ್ಲಿ ಕಾರ್ಮಿಕರಿಗೆ ನೀಡಲಾಗುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು.
ಇದನ್ನೂ ಓದಿ: ತಾಪ್ಸಿ ಪನ್ನು ‘ಒಂದೇ ಏಟಿಗೆ’ ಬಯಲಾಯ್ತು ಸಿಸ್ಟಮ್ ಅಸಲಿ ಮುಖ!
ಬಸ್‌ಗಳ ಸಂಚಾರ ಇರುತ್ತಾ? ಇಲ್ವಾ?
ಸಾರ್ವಜನಿಕರಲ್ಲಿ ಮೂಡಿರುವ ದೊಡ್ಡ ಪ್ರಶ್ನೆಯೆಂದರೆ ಬಸ್‌ಗಳ ಓಡಾಟ ಸ್ಥಗಿತಗೊಳ್ಳುತ್ತದೆಯೇ? ಎಂಬುದು.
- ಸದ್ಯದ ಮಾಹಿತಿ: ಸರ್ಕಾರವಾಗಲಿ ಅಥವಾ ಸಾರಿಗೆ ಇಲಾಖೆಯಾಗಲಿ ಬಸ್ ಸಂಚಾರ ಬಂದ್ ಮಾಡುವ ಅಧಿಕೃತ ಆದೇಶ ನೀಡಿಲ್ಲ. ಅಂದರೆ, ಬಸ್‌ಗಳು ಎಂದಿನಂತೆ ರಸ್ತೆಗಿಳಿಯಲಿವೆ.
- ವ್ಯತ್ಯಯದ ಆತಂಕ: ಒಂದು ವೇಳೆ ಹೆಚ್ಚಿನ ಸಂಖ್ಯೆಯ ಚಾಲಕರು ಮತ್ತು ನಿರ್ವಾಹಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಕೆಲಸಕ್ಕೆ ಹಾಜರಾಗದಿದ್ದರೆ, ಬಸ್‌ಗಳ ಸಂಚಾರದಲ್ಲಿ ಗಣನೀಯವಾಗಿ ವ್ಯತ್ಯಯ ಉಂಟಾಗಬಹುದು.
- ಸರ್ಕಾರದ ಕ್ರಮ: ಪ್ರತಿಭಟನೆಯನ್ನು ತಡೆಯಲು ಸರ್ಕಾರ ‘ಎಸ್ಮಾ’ (ESMA) ಜಾರಿಗೊಳಿಸುವ ಅಥವಾ ವೇತನ ಕಡಿತದಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ.
ಗಮನಿಸಿ: ಫೆಬ್ರವರಿ 19 ಮತ್ತು 20 ರಂದು ಪ್ರಯಾಣ ಬೆಳೆಸುವವರು ಪರ್ಯಾಯ ವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ.

