ನಟ ರವಿಚಂದ್ರನ್ ಅವರ ಎವರ್‌ಗ್ರೀನ್ ಸಿನಿಮಾ ‘ಯಾರೇ ನೀನು ಚೆಲುವೆ’ (Yaare Neenu Cheluve) ನೆನಪಿದೆಯೇ? ಆ ಸಿನಿಮಾದಲ್ಲಿ ತನ್ನ ಮುಗ್ಧ ನಟನೆಯಿಂದ ಕನ್ನಡಿಗರ ಮನಗೆದ್ದಿದ್ದ ನಾಯಕಿ ಸಂಗೀತಾ ಮಾಧವನ್ ಈಗ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಸುದೀರ್ಘ ವಿರಾಮದ ನಂತರ ಕನ್ನಡ ತೆರೆಗೆ ಬರುತ್ತಿರುವ ಇವರನ್ನು ಕರೆತಂದಿದ್ದು ಮತ್ತೊಬ್ಬ ಸ್ಟಾರ್ ನಟನ ಶಿಷ್ಯ ಅನ್ನೋದು ವಿಶೇಷ!
ರವಿಚಂದ್ರನ್, ಶಿವಣ್ಣನ ನಾಯಕಿ ಈಗ ‘ತಾಯಿ’!
1998ರಲ್ಲಿ ‘ಯಾರೇ ನೀನು ಚೆಲುವೆ’ (Yaare Neenu Cheluve) ಮೂಲಕ ದೊಡ್ಡ ಸದ್ದು ಮಾಡಿದ್ದ ಸಂಗೀತಾ, ನಂತರ ಶಿವರಾಜ್‌ಕುಮಾರ್ ಜೊತೆ ‘ಯಾರೇ ನೀ ಅಭಿಮಾನಿ’ ಸಿನಿಮಾದಲ್ಲೂ ನಟಿಸಿದ್ದರು. ಆಮೇಲೆ ತೆಲುಗು, ತಮಿಳು ಚಿತ್ರಗಳಲ್ಲಿ ಬ್ಯುಸಿಯಾದ ಈ ನಟಿ ಕನ್ನಡದಿಂದ ದೂರವೇ ಉಳಿದಿದ್ದರು. ಆದರೆ ಈಗ ಕಾಲ ಬದಲಾಗಿದೆ. ಅಂದು ನಾಯಕಿಯಾಗಿದ್ದ ಸಂಗೀತಾ ಈಗ ಕ್ಯಾರೆಕ್ಟರ್ ರೋಲ್ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕಿಚ್ಚ ಸುದೀಪ್ ಅವರ ಗರಡಿಯಲ್ಲಿ ಪಳಗಿದ ಕಿರಣ್ ವಿಶ್ವನಾಥ್ ನಿರ್ದೇಶನದ ಹೊಸ ಚಿತ್ರದಲ್ಲಿ ಇವರು ನಾಯಕನ ತಾಯಿಯಾಗಿ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: Gilli: ಬಿಗ್ ಬಾಸ್ ಪಳಾರ್‌ಗೆ ಸಂಕಷ್ಟ! ಅವಕಾಶ ಕೊಟ್ಟ ನಿರ್ಮಾಪಕರನ್ನೇ ಮರೆತರಾ ಗಿಲ್ಲಿ?
ಭಾಗ್ಯವಾಗಿ ಬಂದ ಸಂಗೀತಾ: ಪೋಸ್ಟರ್ ರಿಲೀಸ್!
ಇನ್ನು ಹೆಸರಿಡದ ಈ ಹೊಸ ಸಿನಿಮಾದಲ್ಲಿ ಸಂಗೀತಾ ಅವರ ಪಾತ್ರದ ಹೆಸರು ‘ಭಾಗ್ಯ’. ಇತ್ತೀಚೆಗಷ್ಟೇ ಚಿತ್ರತಂಡ ಇವರ ಪಾತ್ರದ ಲುಕ್ ಮತ್ತು ಒಂದು ಸಣ್ಣ ಟೀಸರ್ ವಿಡಿಯೋ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಯುವಕರ ಗುಂಪು ಯಾರಿಗೋ ಕಾಯುತ್ತಿರುವಾಗ ಸಂಗೀತಾ ಮಾಧವನ್ ಎಂಟ್ರಿ ಕೊಡುತ್ತಾರೆ. ಈ ದೃಶ್ಯ ನೋಡಿದರೆ ಇವರು ಸುಮ್ಮನೆ ಸಾಫ್ಟ್ ಆಗಿರೋ ತಾಯಿಯಲ್ಲ, ಏನೋ ಒಂದು ಗತ್ತು ಇರೋ ಪಾತ್ರ ಎನ್ನುವುದು ಮೇಲ್ನೋಟಕ್ಕೆ ಪಕ್ಕಾ ಆಗ್ತಿದೆ.
ಯಾರು ಈ ಸುದೀಪ್ ಶಿಷ್ಯ?
ಈ ಸಿನಿಮಾವನ್ನು ಡೈರೆಕ್ಷನ್ ಮಾಡುತ್ತಿರುವ ಕಿರಣ್ ವಿಶ್ವನಾಥ್ ಅವರು ಸುದೀಪ್ ಅವರ ‘ರನ್ನ’ ಮತ್ತು ಶರಣ್ ನಟನೆಯ ‘ವಿಕ್ಟರಿ’ ಚಿತ್ರಗಳಲ್ಲಿ ಕೋ-ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈಗ ಸ್ವತಂತ್ರ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ‘ಮಹಾನಟಿ’ ಸೀಸನ್ 1 ವಿನ್ನರ್ ಪ್ರಿಯಾಂಕಾ ಆಚಾರ್ ಈ ಚಿತ್ರದ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಆದರೆ ಚಿತ್ರದ ಹೀರೋ ಯಾರು ಅನ್ನೋದನ್ನ ಮಾತ್ರ ಚಿತ್ರತಂಡ ಈಗಲೂ ಸಸ್ಪೆನ್ಸ್ ಆಗಿ ಇಟ್ಟಿದೆ.
ಒಟ್ಟಿನಲ್ಲಿ ಬಹಳ ವರ್ಷಗಳ ನಂತರ ಸಂಗೀತಾ ಮಾಧವನ್ ಅವರನ್ನು ಕನ್ನಡ ಪರದೆಯ ಮೇಲೆ ನೋಡುವುದೇ ಒಂದು ಖುಷಿ. ಗೌರಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಸಂಗೀತಾಗೆ ಒಳ್ಳೆ ಬ್ರೇಕ್ ಕೊಡುತ್ತಾ ಅನ್ನೋದನ್ನ ಕಾದು ನೋಡಬೇಕು.

